ಸಾರಾಂಶ
ಕನ್ನಡಪ್ರಭವಾರ್ತೆ ತಿಪಟೂರು
ಪ್ರತಿಯೊಬ್ಬ ಮನುಷ್ಯ ನಿಸ್ವಾರ್ಥ, ತ್ಯಾಗ ಜೀವನ ರೂಢಿಸಿಕೊಳ್ಳಬೇಕೆಂದರೆ ಸ್ಮಶಾನದಲ್ಲಿ ಒಂದು ಬಾರಿ ತಿರುಗಾಡಿ ಅದರ ಅನುಭವ ಪಡೆಯಬೇಕು ಹಾಗೂ ನಾವು ಎಷ್ಟೇ ಹಣ ಐಶ್ವರ್ಯ ಸಂಪಾದಿಸಿದರೂ ಕೊನೆಗೊಂದು ದಿನ ಎಲ್ಲವನ್ನೂ ಬಿಟ್ಟು ಸ್ಮಶಾನಕ್ಕೆ ಹೋಗಲೇಬೇಕು ಎನ್ನುವ ಸತ್ಯ ಅರಿವಾಗುತ್ತದೆ ಎಂದು ತಿಪಟೂರು ಹೋರಾಟ ಸಮಿತಿ ಅಧ್ಯಕ್ಷ ಲೋಕೇಶ್ವರ ತಿಳಿಸಿದರು.ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಹುಟ್ಟುಹಬ್ಬದ ಪ್ರಯುಕ್ತ ನಗರದ ಈಡೇನಹಳ್ಳಿ ಗೇಟ್ ಬಳಿಯಿರುವ ಹಿಂದೂ ರುದ್ರಭೂಮಿಯಲ್ಲಿ ತಿಪಟೂರು ಹೋರಾಟ ಸಮಿತಿ ಹಾಗೂ ರೋಟರಿ ಸಂಸ್ಥೆ, ನಗರಸಭೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಚ್ಛತೆ ಅರಿವು ಪ್ರತಿ ಪ್ರಾಣಿ ಪಕ್ಷಿಗಳಲ್ಲಿಯೂ ಇದೆ. ಬುದ್ದಿವಂತನಾದ ಮನುಷ್ಯ ಸ್ವಚ್ಛತೆ ಬಗ್ಗೆ ಹೆಚ್ಚು ಅರಿವು ಇಟ್ಟುಕೊಳ್ಳಬೇಕು. ನಮ್ಮ ಸುತ್ತಮುತ್ತ ವಾತಾವರಣದ ಜೊತೆಗೆ ನಮ್ಮ ಊರು, ದೇವಾಲಯ, ಶಾಲೆ, ಬೀದಿ ಹಾಗೀ ಇದೇ ರೀತಿ ನಗರ, ಪಟ್ಟಣದಲ್ಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಬದುಕಿದ್ದಾಗ ಮನುಷ್ಯ ನೆಮ್ಮದಿಯಾಗಿ ಇರುತ್ತಾನೋ ಇಲ್ಲವೂ, ಸತ್ತ ಮೇಲೆ ನೆಮ್ಮದಿಯಾಗಿ ಸಂಸ್ಕಾರ ಮಾಡುವ ಸ್ಥಳ ಸ್ವಚ್ಛವಾಗಿರಬೇಕು ಎನ್ನುವ ದೃಷ್ಠಿಯಿಂದ ಕಳೆದ ಹದಿನಾಲ್ಕು ವರ್ಷಗಳಿಂದ ನಾನು ಅನೇಕ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಿಂದೂ ರುದ್ರಭೂಮಿಯ ಸ್ವಚ್ಛತಾ ಕಾರ್ಯ ಮಾಡುತ್ತಾ ಬಂದಿದ್ದು ಎಲ್ಲರೂ ಸ್ವಚ್ಛತಾ ಸೇವಾ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದರು.ದೇಶ ಹಾಗೂ ಧರ್ಮದ ರಕ್ಷಣೆಗಾಗಿ ನೂರಾರು ವರ್ಷಗಳ ಹಿಂದೆ ಬಲಿರಾಮ್ ಹೆಗಡೆವಾರ್ ಸ್ಥಾಪನೆ ಮಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೂರು ವರ್ಷ ಪೂರೈಸಿದ್ದು, ಪ್ರತಿಗ್ರಾಮಗಳಲ್ಲಿಯೂ ಸಂಘದ ಕಾರ್ಯಕರ್ತರು ಸ್ವಚ್ಛತಾ ಕಾರ್ಯಕೈಗೊಂಡಿದ್ದಾರೆ. ಅ.೧೨ರಂದು ತಿಪಟೂರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನ ಆಯೋಜಿಸಿದ್ದು ಹೆಚ್ಚಿನ ನಾಗರೀಕರು ಗಣವೇಶದೊಂದಿಗೆ ಭಾಗವಹಿಸಬೇಕು ಎಂದರು. ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷೆ ವನೀತಾ ಪ್ರಸನ್ನ, ನಗರಸಭಾ ಮಾಜಿ ಉಪಾಧ್ಯಕ್ಷ ಸೊಪ್ಪುಗಣೇಶ್, ಸದಸ್ಯರಾದ ಭಾರತೀ ಮಂಜುನಾಥ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜು, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗುರುಸ್ವಾಮಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳವರು, ಪೌರಕಾರ್ಮಿಕರು ಭಾಗವಹಿಸಿದ್ದರು.