ಅಭ್ಯರ್ಥಿ ಯಾರೇ ಆಗಲಿ, ಗೆಲುವೇ ಗುರಿಯಾಗಲಿ: ಎನ್‌. ರವಿಕುಮಾರ್

| Published : Feb 07 2024, 01:52 AM IST

ಸಾರಾಂಶ

ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಇಡೀ ರಾಜ್ಯದಲ್ಲಿಯೇ ಅತ್ಯಧಿಕ ಬಹುಮತದೊಂದಿಗೆ ಗೆಲುವು ಸಾಧಿಸಬೇಕು. ಈ ನಿಟ್ಟಿನಲ್ಲಿ ಪಕ್ಷದ ಎಲ್ಲ ಕಾರ್ಯಕರ್ತರು ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಎನ್. ರವಿಕುಮಾರ್ ಸೂಚಿಸಿದರು.

ಬಳ್ಳಾರಿ: ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಯಾರೇ ಆಗಲಿ; ಅವರನ್ನು ಗೆಲ್ಲಿಸುವುದಷ್ಟೇ ನಮ್ಮ ಗುರಿಯಾಗಬೇಕು. ಈ ನಿಟ್ಟಿನಲ್ಲಿ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಶ್ರಮಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಹಾಗೂ ಲೋಕಸಭಾ ಚುನಾವಣೆಯ ಜಿಲ್ಲಾ ಉಸ್ತುವಾರಿ ಎನ್. ರವಿಕುಮಾರ್ ತಿಳಿಸಿದರು.

ಇಲ್ಲಿನ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಜರುಗಿದ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಕಾಂಗ್ರೆಸ್ ಅದೆಷ್ಟೇ ಗ್ಯಾರಂಟಿಗಳನ್ನು ಘೋಷಣೆ ಮಾಡಲಿ, ನಮಗೆ ನರೇಂದ್ರ ಮೋದಿ ಅವರೇ ಗ್ಯಾರಂಟಿ. ರಾಜ್ಯ ಸರ್ಕಾರದ ಮೋಸಗಳು ಹಾಗೂ ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಕುರಿತು ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸಬೇಕು. ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಮಾಡುತ್ತಿರುವ ಮೋಸ ಹಾಗೂ ಅಪಾರ ತೆರಿಗೆ ಭಾರದ ಕುರಿತು ಮನವರಿಕೆ ಮಾಡಿಕೊಡಬೇಕು ಎಂದರು.

ನರೇಂದ್ರ ಮೋದಿ ಅವರು ಮತ್ತೆ ಅಧಿಕಾರಕ್ಕೆ ಬಂದರೆ ಇಡೀ ಪ್ರಪಂಚಕ್ಕೆ ಒಳಿತಾಗುತ್ತದೆ ಎಂದು ವಿವಿಧ ದೇಶಗಳ ನಾಯಕರು ಹೇಳುತ್ತಿದ್ದಾರೆ. ಮೋದಿ ಅವರು ಭಾರತದ ಅಭ್ಯುದಯಕ್ಕಾಗಿ ಮಹರ್ಷಿಯಂತೆ ಕೆಲಸ ಮಾಡುತ್ತಿದ್ದಾರೆ. ವಿದೇಶಿ ಕಂಪನಿಗಳು ಕಾಶ್ಮೀರದಲ್ಲಿ ಹಣ ಹೂಡಿಕೆ ಮಾಡಲು ಮುಂದಾಗಿವೆ ಎಂದರು.

ನರೇಂದ್ರ ಮೋದಿ ಅವರು ದೂರದೃಷ್ಟಿಯಿಂದಾಗಿ ಭಾರತ ಇಡೀ ಪ್ರಪಂಚದಲ್ಲಿ ಅತಿ ದೊಡ್ಡ ಆರ್ಥಿಕ ಶಕ್ತಿಯಾಗುತ್ತಿದೆ. ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕೇಂದ್ರದಿಂದ ಬಿಡುಗಡೆಯಾದ ₹100 ಗಳಲ್ಲಿ ಫಲಾನುಭವಿಗೆ ತಲುಪಿದಾಗ ಬರೀ ₹15 ಮಾತ್ರ ಎಂದು ಕಾಂಗ್ರೆಸ್ ಪಕ್ಷದ ರಾಜೀವ್‌ಗಾಂಧಿಯವರೇ ಹೇಳಿದ್ದರು.

ಆದರೆ, ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ಜನಧನ ಯೋಜನೆಯು ನೇರವಾಗಿ ಅರ್ಹ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗುವಂತೆ ಮಾಡಲಾಗಿದೆ ಎಂದರು.

ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಇಡೀ ರಾಜ್ಯದಲ್ಲಿಯೇ ಅತ್ಯಧಿಕ ಬಹುಮತದೊಂದಿಗೆ ಗೆಲುವು ಸಾಧಿಸಬೇಕು. ಈ ನಿಟ್ಟಿನಲ್ಲಿ ಪಕ್ಷದ ಎಲ್ಲ ಕಾರ್ಯಕರ್ತರು ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಪಕ್ಷದ ಹಿರಿಯ ಮುಖಂಡ ಗುತ್ತಿಗನೂರು ವಿರುಪಾಕ್ಷಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್, ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ, ಪಕ್ಷದ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ, ನಿಕಟಪೂರ್ವ ಅಧ್ಯಕ್ಷ ಮುರಹರಗೌಡ ಗೋನಾಳ್, ಇಬ್ರಾಹಿಂಬಾಬು, ಡಾ. ಮಹಿಪಾಲ್, ಎಸ್. ಗುರುಲಿಂಗನಗೌಡ, ಡಾ. ಬಸವರಾಜ್, ಎಚ್‌. ಹನುಮಂತಪ್ಪ, ನೂರ್ ಬಾಷಾ, ಮಾರುತಿ ಪ್ರಸಾದ್ ಸೇರಿದಂತೆ ಪಕ್ಷದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಶಂಕರ ರೆಡ್ಡಿ ಎಚ್. ವೀರಾಪುರ ಅವರು ಕಾರ್ಯಕ್ರಮ ನಿರ್ವಹಿಸಿದರು.