ಕಬ್ಬಿಗೆ ₹ 5500 ಬೆಂಬಲ ಸೇರಿದಂತೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಸೆ. 29ರಂದು ಹುಬ್ಬಳ್ಳಿಯಲ್ಲಿ ನಡೆದ ಬೃಹತ್ ಪ್ರತಿಭಟನೆ ವೇಳೆ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರು ರೈತ ಮುಖಂಡರನ್ನು ದೆಹಲಿಗೆ ಆಹ್ವಾನಿಸಿದ್ದು ಸ್ವಾಗತಾರ್ಹ. ಆದರೆ, ರಾಜಕಾರಣದ ಮೂಲಕ ರೈತರನ್ನು ದಾರಿ ತಪ್ಪಿಸುವ ಕೆಲಸ ಆಗಬಾರದು.
ಧಾರವಾಡ:
ರಾಜ್ಯದ ರೈತ ಮುಖಂಡರನ್ನು ದೆಹಲಿಗೆ ಕರೆಯಿಸಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಬರೀ ಮಾತುಕತೆ ಮಾಡುವುದು ಅಥವಾ ರಾಜ್ಯ ಸರ್ಕಾರದ ಕಡೆಗೆ ಬೊಟ್ಟು ಮಾಡದೇ ರೈತರ ಬೇಡಿಕೆಗಳನ್ನು ಈಡೇರಿಸುವುದಾಗಿ ಸ್ಪಷ್ಟ ಭರವಸೆ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ.ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ಜಿಲ್ಲಾಧ್ಯಕ್ಷ ಸುಭಾಸ ಮಾದಣ್ಣವರ ಹಾಗೂ ರೈತ ಮುಖಂಡ ಶ್ರೀಶೈಲಗೌಡ ಕಮತರ, ಕಬ್ಬಿಗೆ ₹ 5500 ಬೆಂಬಲ ಸೇರಿದಂತೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಸೆ. 29ರಂದು ಹುಬ್ಬಳ್ಳಿಯಲ್ಲಿ ನಡೆದ ಬೃಹತ್ ಪ್ರತಿಭಟನೆ ವೇಳೆ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರು ರೈತ ಮುಖಂಡರನ್ನು ದೆಹಲಿಗೆ ಆಹ್ವಾನಿಸಿದ್ದು ಸ್ವಾಗತಾರ್ಹ. ಆದರೆ, ರಾಜಕಾರಣದ ಮೂಲಕ ರೈತರನ್ನು ದಾರಿ ತಪ್ಪಿಸುವ ಕೆಲಸ ಆಗಬಾರದು ಎಂದರು.
ಕಬ್ಬಿಗೆ ಬೆಂಬಲ ಬೆಲೆ ಹಾಗೂ ಎಫ್‌ಆರ್‌ಪಿ ದರವನ್ನು ಹೆಚ್ಚಳ ಮಾಡುವುದು, ಕಾರ್ಖಾನೆಗಳಲ್ಲಿ ತೂಕದ ಯಂತ್ರಗಳನ್ನು ತಾಂತ್ರಿಕ ದೋಷಗಳು ಇಲ್ಲದಂತೆ ನೋಡಿಕೊಳ್ಳಬೇಕು, ಸ್ವಾಮಿನಾಥನ್ ವರದಿ ಜಾರಿಗೆ ತರುವುದು, ಬರಗಾಲದ ಈ ಸಂದರ್ಭದಲ್ಲಿ ರೈತರಿಗೆ ಗೌರವಯುತ ಪರಿಹಾರ ಧನ ಒದಗಿಸುವುದು ಸೇರಿದಂತೆ ಕಳಸಾ-ಬಂಡೂರಿ ಜಾರಿಯಾಗಬೇಕು. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಅ.12ರೊಳಗೆ ಸ್ಪಷ್ಟ ಭರವಸೆ ನೀಡಿಯೇ ರೈತ ಮುಖಂಡರನ್ನು ದೆಹಲಿಗೆ ಕರೆಯಬೇಕು. ಇಲ್ಲದೇ ಹೋದಲ್ಲಿ ಮತ್ತೇ ಪ್ರತಿಭಟನೆ ಮಾಡಬೇಕಾದೀತು ಎಂದು ಎಚ್ಚರಿಸಿದರು.ಸರ್ಕಾರದ ವಿರುದ್ಧ ವಾಗ್ದಾಳಿ:
ಸಂಘಟನೆ ಕಲಘಟಗಿ ತಾಲೂಕು ಅಧ್ಯಕ್ಷ ಜ್ಯೋತಿಬಾ ಹುಲಕೊಪ್ಪ ಮಾತನಾಡಿ, ಪ್ರತಿ ರೈತ ಕುಟುಂಬಕ್ಕೆ ರಾಜ್ಯ ಸರ್ಕಾರ ಬರಗಾಲದ ಪರಿಹಾರವಾಗಿ ಭಿಕ್ಷೆ ನೀಡಿದಂತೆ ₹ 2500 ನೀಡುತ್ತಿದೆ. ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಯ ದಿನಗಳಲ್ಲಿ ಈ ಹಣ ಯಾರಿಗೆ ಸಾಲುತ್ತದೆ. ಸರ್ಕಾರ ನೀಡಿದ ₹ 2500ಕ್ಕೆ ನಾವೇ ರೈತರು 500 ಸೇರಿಸಿ ₹ 3000 ಕೊಡುತ್ತೇವೆ. ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ರಾಜ್ಯ ಸರ್ಕಾರ ಸುಧಾರಿಸಿಕೊಳ್ಳಲಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.ಯಾವ ಸರ್ಕಾರ ರೈತರನ್ನು ನಿರ್ಲಕ್ಷ್ಯ ಮಾಡುತ್ತದೆಯೇ ಅದು ಯಾವತ್ತೂ ಉಳಿದಿರುವ ಉದಾಹರಣೆ ಇಲ್ಲ. ಈ ಹಿನ್ನಲೆಯಲ್ಲಿ ರಾಜ್ಯವಾಗಲಿ ಅಥವಾ ಕೇಂದ್ರವಾಗಲಿ ರೈತರೊಂದಿಗೆ ಎಚ್ಚರಿಕೆ ಹೆಜ್ಜೆಗಳನ್ನು ಇಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಅಮೃತ ಕಮ್ಮಾರ, ಅಶೋಕ ಕ್ಷತ್ರೀಯ, ಶಿವನಗೌಡ ಪಾಟೀ, ಚಿದಾನಂದ ಗುಡೆನ್ನವರ, ರಾಮು ಕರೆನ್ನವರ ಇದ್ದರು.