3 ತಿಂಗಳಿಂದ ಅನ್ನಭಾಗ್ಯ ಹಣ ಸ್ಥಗಿತ

| Published : May 26 2024, 01:32 AM IST / Updated: May 26 2024, 05:28 AM IST

ಸಾರಾಂಶ

ರಾಜ್ಯ ಸರ್ಕಾರ ‘ಅನ್ನಭಾಗ್ಯ’ ಯೋಜನೆಯಡಿ ಹೆಚ್ಚುವರಿ 5 ಕೆ.ಜಿ. ಅಕ್ಕಿ ಬದಲಿಗೆ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ಸಂದಾಯ ಮಾಡುತ್ತಿದ್ದ ಹಣ ಕಳೆದ ಮೂರು ತಿಂಗಳಿನಿಂದ ಜಮೆಯಾಗಿಲ್ಲ!

ಸಂಪತ್ ತರೀಕೆರೆ

 ಬೆಂಗಳೂರು :  ರಾಜ್ಯ ಸರ್ಕಾರ ‘ಅನ್ನಭಾಗ್ಯ’ ಯೋಜನೆಯಡಿ ಹೆಚ್ಚುವರಿ 5 ಕೆ.ಜಿ. ಅಕ್ಕಿ ಬದಲಿಗೆ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ಸಂದಾಯ ಮಾಡುತ್ತಿದ್ದ ಹಣ ಕಳೆದ ಮೂರು ತಿಂಗಳಿನಿಂದ ಜಮೆಯಾಗಿಲ್ಲ!

ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಮತ್ತು ಬಿಪಿಎಲ್‌ ಕುಟುಂಬಗಳ 1.13 ಕೋಟಿ ಪಡಿತರ ಚೀಟಿದಾರರ ಕುಟುಂಬಗಳ 4 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಪ್ರತಿ ತಿಂಗಳು 5 ಕೆ.ಜಿ. ಹೆಚ್ಚುವರಿ ಅಕ್ಕಿಗೆ 660 ಕೋಟಿ ರು.ಜಮೆ ಮಾಡಲಾಗುತ್ತಿದೆ. ಆದರೆ, ಮಾರ್ಚ್‌, ಏಪ್ರಿಲ್‌ ಮತ್ತು ಮೇ ತಿಂಗಳಿನ ಹಣದಲ್ಲಿ ನಯಾಪೈಸೆಯನ್ನೂ ಈವರೆಗೆ ಜಮೆ ಮಾಡಿಲ್ಲ ಎಂದು ಗ್ರಾಹಕರು ದೂರಿದ್ದಾರೆ.

ಹೆಚ್ಚುವರಿ 5 ಕೆ.ಜಿ. ಅಕ್ಕಿಯ ಬದಲಿಗೆ ಡಿಬಿಟಿ ಮೂಲಕ ರಾಜ್ಯ ಸರ್ಕಾರ ತಲಾ ಫಲಾನುಭವಿಗಳಿಗೆ ಕೊಡುತ್ತಿರುವ 170 ರು.ಗಳನ್ನು ಬ್ಯಾಂಕ್‌ ಖಾತೆಗೆ ಜಮೆ ಮಾಡದಿರಲು ತಾಂತ್ರಿಕ ದೋಷವೇ ಕಾರಣವೆಂದು ಆಹಾರ ಇಲಾಖೆ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಆದರೆ, ಗೃಹಲಕ್ಷ್ಮೀ ಯೋಜನೆಗೆ ಈ ತಾಂತ್ರಿಕ ದೋಷ ಅಡ್ಡಿಯುಂಟು ಮಾಡಿಲ್ಲ. ಪ್ರತಿ ತಿಂಗಳು ಗೃಹ ಲಕ್ಷ್ಮೀಯರ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಸಂದಾಯವಾಗುತ್ತಿದೆ. ಅನ್ನಭಾಗ್ಯ ಯೋಜನೆಯ ಹಣ ನೇರ ಪಾವತಿಗೆ ನಿಜವಾಗಿಯೂ ತಾಂತ್ರಿಕ ದೋಷ ಕಾರಣವೇ ಎಂಬುದು ಹಲವರ ಪ್ರಶ್ನೆ.

ಶೀಘ್ರವೇ ಸಮಸ್ಯೆ ಇತ್ಯರ್ಥ:

ಡಿಬಿಟಿ ಮೂಲಕ ಕಾರ್ಡ್‌ದಾರರ ಖಾತೆಗೆ ಹಣ ವರ್ಗಾವಣೆ ಮಾಡಲು ದೀರ್ಘ ಪ್ರಕ್ರಿಯೆ ನಡೆಯುತ್ತದೆ. ಮೊದಲು ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್‌ಐಸಿ) ವೆಬ್‌ಸೈಟ್‌ನಲ್ಲಿ ಕಾರ್ಡ್‌ಗಳನ್ನು ನಮೂದಿಸಬೇಕು. ಬಳಿಕ ಇ-ಆಡಳಿತ ಇಲಾಖೆ ಅಭಿವೃದ್ಧಿಪಡಿಸಿರುವ ಡಿಬಿಟಿ ಪೋರ್ಟಲ್, ಖಜಾನೆ ಇಲಾಖೆಯ ಕೆ2 ಪೋರ್ಟಲ್‌ನಲ್ಲಿ ದತ್ತಾಂಶ ನಮೂದಿಸಬೇಕು. ಆದರೆ ಈಗ ಖಜಾನೆ ಕೆ2 ಪೋರ್ಟಲ್‌ನಲ್ಲಿ ಕೆಲ ಬದಲಾವಣೆಯಾಗಿದೆ. ಹೀಗಾಗಿ ಮತ್ತೊಮ್ಮೆ ಅರ್ಹತೆ ಇರುವ ಕಾರ್ಡ್‌ಗಳಿಗೆ ಅನುಮೋದನೆ ಪಡೆಯಬೇಕು.

ನಂತರ, ಆರ್‌ಬಿಐ ಅನುಮತಿ ಸೇರಿ ಬೇರೆ ಬೇರೆ ಪ್ರಕ್ರಿಯೆಗಳು ಮುಗಿದ ಬಳಿಕ ಕಾರ್ಡ್‌ದಾರರ ಖಾತೆಗೆ ನೇರವಾಗಿ ನಗದು ವರ್ಗಾವಣೆ ಮಾಡಬೇಕು. ಈ ಪ್ರಕ್ರಿಯೆಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಆದ್ದರಿಂದ ಹಣ ವರ್ಗಾವಣೆ ಮಾಡಲು ತಡವಾಗಿದ್ದು ಶೀಘ್ರವೇ ಸಮಸ್ಯೆ ಇತ್ಯರ್ಥವಾಗಲಿದೆ ಎನ್ನುತ್ತಾರೆ ಆಹಾರ ಇಲಾಖೆ ಅಧಿಕಾರಿಗಳು.