ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಶಿಕ್ಷಣ ಇಲಾಖೆ ಸಿಬ್ಬಂದಿ ಬೇಡ

| Published : Jul 26 2025, 12:30 AM IST

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಶಿಕ್ಷಣ ಇಲಾಖೆ ಸಿಬ್ಬಂದಿ ಬೇಡ
Share this Article
  • FB
  • TW
  • Linkdin
  • Email

ಸಾರಾಂಶ

ಸಿಬ್ಬಂದಿ ಈಗಾಗಲೇ ಮಕ್ಕಳ ಗಣತಿ, ಜಾತಿ ಗಣತಿಯಲ್ಲಿ, ಪ್ರವಾಹ ಪೀಡಿತ ಪ್ರದೇಶ ಅವಲೋಕನ ಮತ್ತು ಮತಗಟ್ಟೆ ಅಧಿಕಾರಿ ಸೇರಿದಂತೆ ಬಿಡುವಿಲ್ಲದೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹುಬ್ಬಳ್ಳಿ: ಸರ್ಕಾರ ಸೆ. ೨೨ರಿಂದ ಅ. ೭ರ ವರೆಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹಮ್ಮಿಕೊಳ್ಳುವುದಾಗಿ ಪ್ರಕಟಿಸಿದ್ದು, ಈ ಕಾರ್ಯಕ್ಕೆ ಶಿಕ್ಷಣ ಇಲಾಖೆ ಸಿಬ್ಬಂದಿ ಬದಲು ಬೇರೆ ಇಲಾಖೆ ಸಿಬ್ಬಂದಿ ನಿಯೋಜಿಸುವಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಆಗ್ರಹಿಸಿದ್ದಾರೆ.

ಈ ಕುರಿತಂತೆ ಸಿಎಂ ಸಿದ್ದರಾಮಯ್ಯ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಈಗಾಗಲೇ ಬೇರೆ ಬೇರೆ ಕಾರ್ಯಗಳಲ್ಲಿ ಶಿಕ್ಷಣ ಇಲಾಖೆ ಸಿಬ್ಬಂದಿ ತೊಡಗಿಸಿಕೊಂಡಿರುವುದರಿಂದ ಶೈಕ್ಷಣಿಕ ಮಟ್ಟ ತೀರಾ ಕುಸಿದಿದೆ. ಅಲ್ಲದೇ ಈ ಸಿಬ್ಬಂದಿ ಈಗಾಗಲೇ ಮಕ್ಕಳ ಗಣತಿ, ಜಾತಿ ಗಣತಿಯಲ್ಲಿ, ಪ್ರವಾಹ ಪೀಡಿತ ಪ್ರದೇಶ ಅವಲೋಕನ ಮತ್ತು ಮತಗಟ್ಟೆ ಅಧಿಕಾರಿ ಸೇರಿದಂತೆ ಬಿಡುವಿಲ್ಲದೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಎಲ್ಲ ಕಾರ್ಯಗಳ ಜತೆಗೆ ಪಠ್ಯಚಟುವಟಿಕೆ ಕೈಗೊಳ್ಳಲು ಸಮಯ ದೊರೆಯುವುದು ಯಾವಾಗ? ಇಷ್ಟೆಲ್ಲದರ ಜತೆಗೆ ಗುಣಾತ್ಮಕ ಕಲಿಕೆ ಮತ್ತು ಉತ್ತಮ ಫಲಿತಾಂಶ ನಿರೀಕ್ಷೀಸುವುದು ಯಾವಾಗ? ಈ ಪ್ರಶ್ನೆಗಳು ಕಾಡುತ್ತಿವೆ.

ರಾಜ್ಯದಲ್ಲಿ ಶಿಕ್ಷಣ ಇಲಾಖೆಯಂತೆ ಇನ್ನೂ ಹಲವಾರು ಪ್ರಮುಖ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರ ಕಾಲಕಾಲಕ್ಕೆ ಜಾರಿಗೆ ತರುವಂತಹ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಎಲ್ಲ ಇಲಾಖೆಗಳಿಂದಲೂ ಶೇ.೧೦ರಷ್ಟು ಸಿಬ್ಬಂದಿ ನಿಯೋಜಿಸುವುದರಿಂದ ಎಲ್ಲ ಇಲಾಖೆಗಳ ಕಾರ್ಯಗಳು ಯಥಾವತ್ತಾಗಿ ಯಾವುದೇ ತೊಂದರೆ ಇಲ್ಲದೇ ನಡೆಯುತ್ತವೆ. ಶಿಕ್ಷಣ ಇಲಾಖೆಯ ಸಿಬ್ಬಂದಿ ಇದರ ಉಪಯೋಗದೊಂದಿಗೆ ಪಾಠ ಪ್ರವಚನಗಳಲ್ಲಿ ಮಗ್ನರಾಗಿ ಗುಣಾತ್ಮಕ ಕಲಿಕೆಗೆ ಹಾಗೂ ಉತ್ತಮ ಫಲಿತಾಂಶ ನಿರೀಕ್ಷಿಸಲು ಸಹಾಯವಾಗುತ್ತದೆ ಎಂದಿದ್ದಾರೆ.

ಶಿಕ್ಷಕರನ್ನು ಅನ್ಯಕಾರ್ಯಗಳಿಗೆ ನಿಯೋಜಿಸುವುದನ್ನು ಕೈಬಿಟ್ಟು ಕಲಿಕಾ ಚಟುವಟಿಕೆಯಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗುವಂತೆ ಮಾಡಬೇಕು. ಅಂದಾಗ ಮಾತ್ರ ಗುಣಾತ್ಮಕ ಕಲಿಕೆ, ಉತ್ತಮ ಫಲಿತಾಂಶ ನಿರೀಕ್ಷಿಸಬಹುದು ಎಂದಿದ್ದಾರೆ.