ಸಾರಾಂಶ
ಬಿಎಸ್‌ಪಿಎಲ್ ಕಾರ್ಖಾನೆ ವಿಯಷಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಎಂ ಸಿದ್ದರಾಮಯ್ಯ, ಸ್ವಾಮೀಜಿ ಮತ್ತು ಜನರ ಅಭಿಪ್ರಾಯದ ಪರವಾಗಿ ಇದ್ದೇವೆಂದು ಹೇಳಿದ್ದಾರೆ. ಹೀಗಾಗಿ, ಜನಪ್ರತಿನಿಧಿಗಳು ಸಹ ಕೊಪ್ಪಳ ಬಳಿ ಹೊಸ ಕಾರ್ಖಾನೆ ಸ್ಥಾಪಿಸುವುದಕ್ಕೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಕೊಪ್ಪಳ:
ಕೊಪ್ಪಳ ಬಳಿ ಈಗಾಗಲೇ ಇರುವ ಕಾರ್ಖಾನೆಗಳೇ ಸಾಕಾಗಿವೆ. ಇನ್ನಷ್ಟು ಕಾರ್ಖಾನೆಗಳು ಬೇಕಾಗಿಲ್ಲ. ಬಿಎಸ್‌ಪಿಎಲ್ ಸೇರಿದಂತೆ ಯಾವುದೇ ಕಾರ್ಖಾನೆಗಳು ಬೇಡವೆಂದು ಖಡಕ್ ಆಗಿಯೇ ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಹೇಳಿದ್ದೇವೆ. ಇದರಲ್ಲಿ ರಾಜೀಯ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಸ್‌ಪಿಎಲ್ ಕಾರ್ಖಾನೆ ವಿಯಷಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಎಂ ಸಿದ್ದರಾಮಯ್ಯ, ಸ್ವಾಮೀಜಿ ಮತ್ತು ಜನರ ಅಭಿಪ್ರಾಯದ ಪರವಾಗಿ ಇದ್ದೇವೆಂದು ಹೇಳಿದ್ದಾರೆ. ಹೀಗಾಗಿ, ಜನಪ್ರತಿನಿಧಿಗಳು ಸಹ ಕೊಪ್ಪಳ ಬಳಿ ಹೊಸ ಕಾರ್ಖಾನೆ ಸ್ಥಾಪಿಸುವುದಕ್ಕೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂದರು.
ಸಚಿವ ಎಂ.ಬಿ. ಪಾಟೀಲ ಅವರನ್ನು ಭೇಟಿಯಾದಾಗ ಕೇಂದ್ರ ಪರಿಸರ ಇಲಾಖೆ ಬಿಎಸ್‌ಪಿಎಲ್ ಕಾರ್ಖಾನೆಗೆ ಅನುಮತಿ ನೀಡಿದೆ ಎಂದು ಹೇಳಿದ್ದರು. ಆಗ, ನಾವು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಜಿಲ್ಲೆಯ ಪ್ರತಿನಿಧಿಗಳ ನಿಯೋಗ ಭೇಟಿ ಮಾಡಿ ಹೇಳಿದ್ದಾರೆ. ಕಾರ್ಖಾನೆಗಳ ವಿಷಯದಲ್ಲಿ ನಾವು ಒಗ್ಗಟ್ಟಿನಿಂದ ಇದ್ದೇವೆ. ಈಗ ಪುನಃ ಮತ್ತೊಂದು ಬಾರಿ ಶಾಸಕರು ಹಾಗೂ ಹಿರಿಯ ನಾಯಕರನ್ನೊಳಗೊಂಡು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಬಿಎಸ್‌ಪಿಎಲ್ ಸೇರಿದಂತೆ ಮತ್ತೊಂದು ಕಾರ್ಖಾನೆ ಕೊಪ್ಪಳ ಬಳಿ ಸ್ಥಾಪಿಸಲು ಅವಕಾಶ ನೀಡಬಾರದು ಎಂದು ಮನವರಿಕೆ ಮಾಡುತ್ತೇವೆ ಎಂದರು.ಸಚಿವರ ಮಾತಿಗೆ ಶಾಸಕ ರಾಘವೇಂದ್ರ ಹಿಟ್ನಾಳ ಸಹ ಧ್ವನಿಗೂಡಿಸಿದರು. ಸ್ವತಃ ಸಿಎಂ ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪನೆ ಸ್ಥಗಿತಗೊಳಿಸಿದ್ದಾರೆ. ನಾವೆಲ್ಲರೂ ಸೇರಿ ಮತ್ತೊಮ್ಮೆ ಈ ಕುರಿತು ಮನವರಿಕೆ ಮಾಡುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಸಹ ಇದ್ದರು.ವೀಡಿಯೋ ವೈರಲ್
ಗವಿಸಿದ್ಧೇಶ್ವರ ಸ್ವಾಮೀಜಿ ಬಿಎಸ್‌ಪಿಎಲ್ ಕಾರ್ಖಾನೆ ವಿರುದ್ಧ ಫೆ. 24ರಂದು ಕೊಪ್ಪಳದಲ್ಲಿ ನಡೆದ ಹೋರಾಟದಲ್ಲಿ ಪಾಲ್ಗೊಂಡ ನಂತರದಿಂದ ಅವರಲ್ಲಿದ್ದ ಉತ್ಸಾಹ ಸ್ವಲ್ಪ ಕಡಿಮೆಯಾಗಿರುವಂತೆ ಕಾಣುತ್ತಿದೆ. ಆ ಹೋರಾಟದ ಬಳಿಕವೂ ಸರ್ಕಾರ ನಿರ್ಧಾರ ಕೈಗೊಳ್ಳದೆ ಇರುವುದರಿಂದ ದೀರ್ಘಕಾಲದ ಪ್ರವಾಸ ಮಾಡುತ್ತಿದ್ದಾರೆ. ಪದೇಪದೆ ದೀರ್ಘಕಾಲದ ಮೌನಾನುಷ್ಠಾನ ಮಾಡುತ್ತಿರುವುದನ್ನು ನೋಡಿದರೆ ಕಾರ್ಖಾನೆ ಬಂದರೆ ಕೊಪ್ಪಳದಲ್ಲಿ ಇರುವುದಿಲ್ಲ ಎನ್ನುವ ಅವರ ಮಾತು ನೆನಪಾಗುತ್ತದೆ. ನಿಜವಾಗಿಯೂ ಅವರು ಹೀಗೆ ನಿರ್ಧಾರಿಸಿದ್ದಾರೋ ಎನ್ನುವ ಭಯ ಮತ್ತು ದುಃಖ ನನ್ನ ಮನಸ್ಸನ್ನು ಕಾಡುತ್ತಿದೆ ಎನ್ನುವ ವೀಡಿಯೋವನ್ನು ಡಾ. ಮಂಜುನಾಥ ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ. ಈ ಕುರಿತು ಭಕ್ತರು ಸಹ ತಮ್ಮ ಆತಂಕ ವ್ಯಕ್ತಪಡಿಸುತ್ತಿದ್ದಾರೆ.