ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಜಿಲ್ಲೆಗೆ ಕೈಗಾರಿಕೆ ತಂದು ಉದ್ಯೋಗ ಸೃಷ್ಟಿಸುವ ಪ್ರಯತ್ನ ನಡೆಸಿದ್ದಾರೆ. ಅದಕ್ಕೆ ಪೂರಕವಾಗಿ ಸರ್ಕಾರದಿಂದ ಸಹಕಾರ ದೊರಕುತ್ತಿಲ್ಲ. ಭೂಮಿ ಕೊಡುವುದಕ್ಕೆ ಹಿಂದೇಟು ಹಾಕುತ್ತಿರುವುದಲ್ಲದೆ, ಅಧಿಕೃತ ಕಂಪನಿ ಅರ್ಜಿ ಹಾಕಿದರಷ್ಟೇ ಜಮೀನು ಕೊಡುವುದಾಗಿ ಹೇಳುವುದು ಅರ್ಥವಿಲ್ಲದ್ದು.

ಕನ್ನಡಪ್ರಭ ವಾರ್ತೆ ಮಂಡ್ಯ

ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ರಾಜ್ಯ ರಾಜ್ಯಗಳ ನಡುವೆ ಪೈಪೋಟಿ ಹೆಚ್ಚಿದೆ. ಈ ವೇಳೆ ಕೈಗಾರಿಕೋದ್ಯಮಿಗಳು ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಅರ್ಜಿ ಹಾಕಿದರೆ ಭೂಮಿ ಕೊಡಲು ಸಿದ್ಧ ಎನ್ನುವುದು ಬಾಲಿಷ ಹೇಳಿಕೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಟೀಕಿಸಿದರು.

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಜಿಲ್ಲೆಗೆ ಕೈಗಾರಿಕೆ ತಂದು ಉದ್ಯೋಗ ಸೃಷ್ಟಿಸುವ ಪ್ರಯತ್ನ ನಡೆಸಿದ್ದಾರೆ. ಅದಕ್ಕೆ ಪೂರಕವಾಗಿ ಸರ್ಕಾರದಿಂದ ಸಹಕಾರ ದೊರಕುತ್ತಿಲ್ಲ. ಭೂಮಿ ಕೊಡುವುದಕ್ಕೆ ಹಿಂದೇಟು ಹಾಕುತ್ತಿರುವುದಲ್ಲದೆ, ಅಧಿಕೃತ ಕಂಪನಿ ಅರ್ಜಿ ಹಾಕಿದರಷ್ಟೇ ಜಮೀನು ಕೊಡುವುದಾಗಿ ಹೇಳುವುದು ಅರ್ಥವಿಲ್ಲದ್ದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಛೇಡಿಸಿದರು.

ಮಿಮ್ಸ್‌ಗೆ ಸಂಬಂಧಿಸಿದಂತೆ ಸ್ಥಳ ಒತ್ತುವರಿ ತೆರವಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕ್ಷೇತ್ರದ ಶಾಸಕರು ಇಚ್ಚಾಶಕ್ತಿ ತೋರುತ್ತಿಲ್ಲ. ಅವರಿಗೆ ಜಿಲ್ಲೆಯಲ್ಲಿ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಯಾಗುವುದು ಬೇಕಾಗಿಲ್ಲ. ಈ ಕಾರಣದಿಂದಾಗಿ ನಿರ್ಲಕ್ಷ್ಯತೋರುತ್ತಿದ್ದಾರೆ ಎಂದು ಟೀಕಿಸಿದರು.

ಕೈಗಾರಿಕೋದ್ಯಮಿಗಳು ಅರ್ಜಿ ಹಾಕಬೇಕೆ?

ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಮಾತನಾಡಿ, ರಾಷ್ಟ್ರದಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವಂತೆ ಸ್ವತಃ ಪ್ರಧಾನಿಯವರೇ ದೇಶ ದೇಶಗಳನ್ನು ಸುತ್ತುತ್ತಿದ್ದಾರೆ. ಜೊತೆಗೆ ರಾಜ್ಯದ ಕೈಗಾರಿಕಾ ಸಚಿವರೂ ಸಹ ತಮ್ಮ ಅಧಿಕಾರಿಗಳೊಂದಿಗೆ ವಿದೇಶಗಳಲ್ಲಿ ಸುತ್ತಾಡಿ ರಾಜ್ಯಕ್ಕೆ ಕೈಗಾರಿಕೋದ್ಯಮಿಗಳನ್ನು ಆಹ್ವಾನಿಸುತ್ತಿದ್ದಾರೆ. ಹೀಗಿರುವಾಗ ಉಸ್ತುವಾರಿ ಸಚಿವರು ಮತ್ತು ಶಾಸಕರು ಕೈಗಾರಿಕೋದ್ಯಮಿಗಳು ಅರ್ಜಿ ಹಾಕಬೇಕು ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಉಸ್ತುವಾರಿ ಸಚಿವರು ಕೇಂದ್ರದ ಬೃಹತ್ ಸಚಿವರನ್ನು ಭೇಟಿ ಮಾಡಿ ಉದ್ಯೋಗ ಸಮಸ್ಯೆ ಬಗೆಹರಿಸಲು ಏಕೆ ಕ್ರಮ ವಹಿಸುತ್ತಿಲ್ಲ. ಉಸ್ತುವಾರಿ ಸಚಿವರು ಕೇಂದ್ರ ಸಚಿವರ ಬಳಿಗೆ ತೆರಳಬೇಕೋ ಅಥವಾ ಕೇಂದ್ರ ಸಚಿವರೇ ಇವರ ಬಳಿಗೆ ಬರಬೇಕೋ, ಅವರು ಬಾರದೇ ಇದ್ದರೂ ಜಿಲ್ಲೆಯ ಅಭಿವೃದ್ಧಿ ದೃಷ್ಠಿಯಿಂದ ಕೈಗಾರಿಕೆ ಸ್ಥಾಪನೆ ಮಾಡಲಾಗುವುದು. ಆದರೆ ಜಿಲ್ಲಾ ಮಂತ್ರಿಗಳಾಗಿ ಬದ್ಧತೆ ಪ್ರದರ್ಶಿಸುವಂತೆ ಸಲಹೆ ನೀಡಿದರು.

೨೦೦೪ರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಮೇಲೆ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು, ಐಟಿ ಕಾಲೇಜುಗಳು, ವಿದ್ಯುತ್ ಉಪ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಜಿಲ್ಲೆಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ಏನು ಮಾಡಬೇಕು ಅದಕ್ಕೆ ರಾಜ್ಯಸರ್ಕಾರ ಏನು ಸವಲತ್ತು ನೀಡಬೇಕು ಎಂದು ಚರ್ಚಿಸಲು ಸಭೆ ಆಯೋಜಿಸುವಂತೆ ಸಲಹೆ ನೀಡಿದರು.

ಶಾಸಕ ಕೆ.ಸುರೇಶ್‌ಗೌಡ ಮಾತನಾಡಿ, ಜಿಲ್ಲೆಯಲ್ಲಿ ಆಡಳಿತಯಂತ್ರ ಸತ್ತಿದೆ. ಜಿಲ್ಲೆಯ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸರ್ಕಾರದಿಂದ ವೇತನ ದೊರೆಯುವುದೋ ಅಥವಾ ಸಚಿವರೇ ವೇತನ ನೀಡುತ್ತಿದ್ದಾರೋ ಗೊತ್ತಿಲ್ಲ. ನಾಗಮಂಗಲದಲ್ಲಿ ಸಾವಿರಾರು ಕೋಟಿ ರು. ಮೌಲ್ಯದ ಗಣಿ ಲೂಟಿ ಮಾಡಲಾಗುತ್ತಿದೆ. ಅರಣ್ಯದಲ್ಲಿ ಗಣಿಗಾರಿಕೆ ಮಾಡಲು ಜಿಲ್ಲೆಯ ಅಧಿಕಾರಿಗಳೇ ರಸ್ತೆ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ತುರವೇಕೆರೆಯಿಂದ ನಾಗಮಂಗಲ ರಸ್ತೆ ಆಧುನೀಕರಣ ಗುತ್ತಿಗೆಯನ್ನು ಸ್ಥಳಿಯ ಗುತ್ತಿಗೆದಾರರರಿಗೆ ನೀಡದೇ ಅನ್ಯರಿಗೆ ನೀಡಲಾಗುತ್ತಿದೆ. ಬೇನಾಮಿಯಾಗಿ ತಾವೇ ಗುತ್ತಿಗೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ನಾಗಮಂಗಲ ಕ್ಷೇತ್ರಕ್ಕೆ ತಾವು ವಿಪಕ್ಷದಲ್ಲಿದ್ದರೂ ಹೋರಾಡಿ ತಂದ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳ್ಳವಷ್ಟರಲ್ಲಿ ಚುನಾವಣೆ ನಡೆದು ಅಧಿಕಾರಕ್ಕೆ ಬಂದು ಸಚಿವರು ತಮ್ಮದೆನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಶಾಸಕ ಎಚ್.ಟಿ.ಮಂಜು ಮಾತನಾಡಿ, ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ಒದಗಿಸಲು ಸರ್ಕಾರಕ್ಕೆ ನಾನೇ ಪತ್ರ ಬರೆದಿದ್ದು, ಅದನ್ನು ಯಾರೋ ಶಾಸಕ ಎನ್ನಲಾಗುತ್ತಿದೆ. ಜಿಲ್ಲೆಗೆ ಕೈಗಾರಿಕೆಗಳು ಬಂದಲ್ಲಿ ದೇವೇಗೌಡರಿಗೆ, ಕುಮಾರಸ್ವಾಮಿ ಅವರಿಗೆ ಹೆಸರು ಬರಲಿದೆ ಎಂಬ ಕ್ಷುಲ್ಲಕ ಕಾರಣ ಮುಂದಿಟ್ಟುಕೊಂಡು ರಾಜ್ಯಸರ್ಕಾರ ಸಹಕರಿಸುತ್ತಿಲ್ಲ ಎಂದು ಆರೋಪಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮುಖಂಡ ಬಿ.ಆರ್.ರಾಮಚಂದ್ರು, ಬೀಮ್ ಆರ್ಮಿ ಸಂಘಟನೆಯ ಅಂದಾನಿ ಗೋಷ್ಠಿಯಲ್ಲಿದ್ದರು.