ಸಾರಾಂಶ
ಹೊಳೆಹೊನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಶಿಬಿರ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅಥಿತಿ ಸಿ.ಹೆಚ್.ಹುಲಿಗೆಪ್ಪ ಅವರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಅಗ್ನಿ ಅವಘಡಗಳು ಸಂಭವಿಸಿದಾಗ ಭಯಪಡುವ ಅಗತ್ಯ ಇಲ್ಲ ಎಂದು ಮುಖ್ಯ ಅತಿಥಿ ಸಿ.ಹೆಚ್.ಹುಲಿಗೆಪ್ಪ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕುವೆಂಪು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಂಜಾಗ್ರತೆ ಮತ್ತು ಎಚ್ಚರಿಕೆ ವಹಿಸಿದರೆ ಬೇಗನೆ ಅಗ್ನಿಯನ್ನು ನಿಯಂತ್ರಣಕ್ಕೆ ತರಬಹುದು ಎಂದರು. ಎನ್ಎಸ್ಎಸ್ ಸ್ವಯಂಸೇವಕರು ಅಗ್ನಿ ಅವಘಡಗಳು ಹಾಗೂ ಸಮಾಜದಲ್ಲಿ ಅಗ್ನಿಗೆ ಸಂಬಂಧಪಟ್ಟಂತೆ ಯಾವುದೇ ತರಹದ ದುರಂತಗಳು ನಡೆದರೂ ಭಯಪಡದೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಬೆಂಕಿಯನ್ನು ನಿಯಂತ್ರಿಸಬಹುದು.
ನಾವು ದಿನನಿತ್ಯ ಮನೆಯಲ್ಲಿ ಬಳಕೆ ಮಾಡುವ ಸಿಲಿಂಡರ್‌ನಿಂದ ಹಿಡಿದು ಹವಾ ನಿಯಂತ್ರಿತ ಕೊಠಡಿಗಳಲ್ಲೂ ಬಳಸಬಹುದಾದ ಫೈರ್ ಕೇಸ್‌ಗಳನ್ನ ಬಳಕೆ ಮಾಡಿಕೊಂಡು ಅಗ್ನಿಯನ್ನು ನಿಯಂತ್ರಿಸಬಹುದು. ಕೆಲವೊಂದು ಅಪಾರ್ಟ್ಮೆಂಟ್ ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಅಗ್ನಿ ದುರಂತ ಸಂಭವಿಸಿದಾಗ ಗಾಳಿ ನಿಯಂತ್ರಿತ ಸಿಲಿಂಡರ್‌ಗಳನ್ನು ಬಳಸಿ ಆಕ್ಸಿಜನ್ ಪಡೆದು ಬೆಂಕಿ ಬಿದ್ದಿರುವ ಸ್ಥಳಕ್ಕೆ ಹತ್ತಿರ ಹೋಗಿ ಬೆಂಕಿಯನ್ನು ನಿಯಂತ್ರಿಸಬಹುದು. ಇತ್ತೀಚಿನ ತಂತ್ರಜ್ಞಾನದಿಂದ ಬೆಂಕಿಯ ಶಾಕ ತಟ್ಟದೇ ಇರಬಹುದಾದ ಜಾಕೆಟ್ಗಳು ಬಂದಿದ್ದು ಅವುಗಳನ್ನು ಬಳಸಿಕೊಂಡು ಅಗ್ನಿ ಅವಘಡ ಸಂಭವಿಸಿದ ಸ್ಥಳಕ್ಕೆ ಹತ್ತಿರ ಹೋಗಿ ಬೆಂಕಿಯನ್ನು ಆರಿಸಬಹುದು ಎಂದರು.ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಛಾಯಶ್ರೀ ಮಾತನಾಡಿ, ಎನ್ಎಸ್ಎಸ್ ಸ್ವಯಂ ಸೇವಕರು ಅತಿ ಹೆಚ್ಚು ಸಮಾಜ ಸೇವ ಕಾರ್ಯದಲ್ಲಿ ತೊಡಗಿರುತ್ತಾರೆ. ಹಾಗಾಗಿ ಈ ಕಾರ್ಯಕ್ರಮಗಳನ್ನು ಇಂತಹ ಒತ್ತಡದ ಸಮಯದಲ್ಲೂ ನಮ್ಮ ಕಾಲೇಜಿಗೆ ಬಂದು ಎನ್ಎಸ್ಎಸ್ ಸ್ವಯಂಸೇವಕರಿಗೆ ನೀವು ನೀಡಿದ ಮಾರ್ಗದರ್ಶನ ಉಪಯುಕ್ತವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಆಸ್ಮಾ ಮೇಲಿನ್ಮನಿ, ಆರ್.ರವಿ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳಾದ ರುದ್ರಮುನಿ, ರಾಜು ನಾಯ್ಕ್ ಸೇರಿದಂತೆ ಇತರರು ಇದ್ದರು.