ಸಾರಾಂಶ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರೈತಪರವಾಗಿದ್ದು ಕೃಷಿ ಮಾಡುತ್ತಿರುವ ಸಿ ಆ್ಯಂಡ್ ಡಿ ಭೂಮಿ ಯ ಬಗ್ಗೆ ಅನ್ನದಾತರಿಗೆ ಆತಂಕ ಬೇಡ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ರೈತರಿಗೆ ಭರವಸೆ ನೀಡಿದ್ದಾರೆ.ಸೋಮವಾರಪೇಟೆ ತಾಲೂಕಿನ ಬೆಂಗಳೂರು-ಜಾಲ್ಸೂರು ರಾಜ್ಯ ಹೆದ್ದಾರಿಯ ತೋಳೂರುಶೆಟ್ಟಳ್ಳಿ ಮಾರ್ಗದಲ್ಲಿ 10 ಕಿ.ಮೀ. ದೂರದ 20 ಕೋಟಿ ರು.ಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ತೋಳರುಶೆಟ್ಟಳ್ಳಿ ಜಂಕ್ಷನ್‍ನಲ್ಲಿ ಭೂಮಿ ಪೂಜೆ ನೆರವೇರಿಸಿ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದಿನ ದಶಕಗಳಲ್ಲಿ ಹೆಚ್ಚುವರಿ ಭೂಮಿಯನ್ನು ಸಿ ಆ್ಯಂಡ್ ಡಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿರುವ ಹಿನ್ನೆಲೆಯಲ್ಲಿ ಸಮಸ್ಯೆ ಎದುರಾಗಿದೆ. ಬೆಳಗಾವಿಯಲ್ಲೂ ಇಂತಹ ಸಮಸ್ಯೆಯಿದ್ದು, ಪ್ರಕರಣ ಸುಪ್ರೀಂ ಕೋರ್ಟ್‍ನಲ್ಲಿರುವುದರಿಂದ ಒಂದಷ್ಟು ವಿಳಂಬವಾಗುತ್ತಿದೆ. ಸಿ ಆ್ಯಂಡ್ ಡಿ ರೈತರ ಆಸ್ತಿಯಾಗಿರುವುದರಿಂದ ಅಂತಹ ಜಾಗದ ಹಕ್ಕುಪತ್ರಗಳನ್ನು ರೈತರಿಗೆ ಕೊಡಿಸಲು ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.ಕಸ್ತೂರಿ ರಂಗನ್ ವರದಿ ಅನುಷ್ಠಾನವಾದರೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ಮನವರಿಕೆಯಾಗಿರುವುದರಿಂದ, ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನವನ್ನು ಸಚಿವ ಸಂಪುಟ ಸಭೆಯಲ್ಲಿ ತಿರಸ್ಕರಿಸಲಾಗಿದೆ. ಇದಕ್ಕಿಂತ ಮೊದಲು ಕಾಂಗ್ರೆಸ್ ಸರ್ಕಾರ ಇದೇ ವರದಿ ಅನುಷ್ಠಾನಕ್ಕೆ ಅವಕಾಶ ನೀಡಿರಲಿಲ್ಲ ಎಂದು ನೆನಪಿಸಿದರು.
ಸರ್ಕಾರ 5 ಗ್ಯಾರೆಂಟಿಗಳಿಗೆ 58 ಸಾವಿರ ಕೋಟಿ ರು.ಹಣ ಮೀಸಲಿಟ್ಟಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಪ್ರತ್ಯೇಕ ಅನುದಾನ ಕಲ್ಪಿಸಲಾಗಿದೆ. ನೀರಾವರಿ ಮತ್ತು ರಸ್ತೆ ಅಭಿವೃದ್ಧಿಗೆ ಸರ್ಕಾರ ಹಣವನ್ನು ಬಿಡುಗಡೆ ಮಾಡಿದೆ. ಆಸ್ಪತ್ರೆ, ಶಾಲೆಗಳ ನಿರ್ಮಾಣವಾಗುತ್ತಿವೆ. ಉದ್ಯೋಗವನ್ನು ಕಲ್ಪಿಸಲಾಗುತ್ತಿದೆ ಎಂದು ವಿವರಿಸಿದರು.ಗ್ಯಾರಂಟಿ ಯೋಜನೆಗಳಿಗೆ ಹಣ ನೀಡುತ್ತಿರುವುದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಹಣವಿಲ್ಲ ಎಂದು ಬಿಜೆಪಿಯವರು ಅರಚುತ್ತಿದ್ದಾರೆ. ಜನರು ಕೂಡ ಬಿಜೆಪಿಯವರ ಆರೋಪಕ್ಕೆ ಮಣೆ ಹಾಕಬಾರದು. ಗ್ಯಾರೆಂಟಿಗಳಿಂದ ಜನರು ನೆಮ್ಮದಿ ಕಾಣುತ್ತಿರುವುದು ಸರ್ಕಾರಕ್ಕೆ ಗೊತ್ತಿದೆ ಎಂದು ಹೇಳಿದರು.
ಹೆಚ್ಚುವರಿ ಅನುದಾನ ಭರವಸೆ:ತೋಳೂರುಶೆಟ್ಟಳ್ಳಿಯಿಂದ ಕೂತಿ ಗ್ರಾಮದ ಗಡಿಕಲ್ಲಿನ ವರೆಗೂ ರಸ್ತೆ ಮುಂದುವರಿದ ಕಾಮಗಾರಿಗೆ ಹೆಚ್ಚುವರಿ 10 ಕೋಟಿ ರು.ಗಳ ಅನುದಾನ ನೀಡಲಾಗುವುದು. ಮುಂದಿನ ಮೂರು ವರ್ಷಗಳಲ್ಲಿ ರಸ್ತೆ ಮತ್ತು ಸೇತುವೆ ನಿರ್ಮಾಣದ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಚುನಾವಣೆಯ ಸಂದರ್ಭದಲ್ಲೇ ಕಲ್ಕಂದೂರು, ತೋಳೂರುಶೆಟ್ಟಳ್ಳಿ, ಕೂತಿ ಗ್ರಾಮದ ರಸ್ತೆ ಅಭಿವೃದ್ಧಿ ಮಾಡವ ಭರವಸೆ ನೀಡಿದ್ದೆ. ರೈತರ ಹಲವು ದಶಕಗಳ ರಸ್ತೆ ಕನಸ್ಸು ನನಸಾಗಿದೆ ಎಂದು ಹೇಳಿದರು.ಹೆಗ್ಗಡಮನೆ, ಸುಬ್ರಮಣ್ಯ ರಸ್ತೆ ಅಭಿವೃದ್ಧಿ ಕಾಮಗಾರಿ ತಾಂತ್ರಿಕ ಕಾರಣಗಳಿಂದ ನಿಂತು ಹೋಗಿದೆ. ಅಲ್ಲಿನ ರಸ್ತೆಗೂ ಅನುದಾನ ಕಲ್ಪಿಸುವಂತೆ ಮನವಿ ಮಾಡಿದರು. ಕಕ್ಕೆಹೊಳೆ, ಐಗೂರು ಸೇತುವೆ ನಿರ್ಮಾಣಕ್ಕೆ 20 ಕೋಟಿ ರು. ಅನುದಾನ ತರಲಾಗಿದೆ. ಸಿ ಆ್ಯಂಡ್ ಡಿ ಭೂಮಿಯ ಹಕ್ಕು ರೈತರಿಗೆ ಸಿಗಬೇಕು. ಅದಕ್ಕಾಗಿ ನಿರಂತರ ಹೋರಾಟಕ್ಕೆ ರೈತರೊಂದಿಗೆ ಭಾಗಿಯಾಗುವುದು ನನ್ನ ಗುರಿ ಎಂದರು.
ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ, ಹಾನಗಲ್ಲು ಗ್ರಾ.ಪಂ. ಅಧ್ಯಕ್ಷ ಯಶಾಂತ್ ಕುಮಾರ್, ಗ್ಯಾರೆಂಟಿ ಯೋಜನಾ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷ ಮೆಹರೋಝ್ ಖಾನ್, ಡಿಸಿಸಿ ಉಪಾಧ್ಯಕ್ಷ ಕೆ.ಎಂ.ಲೋಕೇಶ್, ಮುಖಂಡರಾದ ಚಂದ್ರಮೌಳಿ, ನಂದಕುಮಾರ್, ಕೆ.ಎ.ಯಾಕೂಬ್, ಚೌಡ್ಲು ಸಹಕಾರ ಸಂಘದ ಅಧ್ಯಕ್ಷ ಕೆ.ಟಿ.ಪರಮೇಶ್, ಲೋಕೋಪಯೋಗಿ ಇಲಾಖೆಯ ಹಾಸನ ವಿಭಾಗದ ಅಧೀಕ್ಷಕ ಇಂಜಿನಿಯರ್ ಕೆ.ಎನ್.ನಳಿನಿ ಇದ್ದರು.