ಕಸ್ತೂರಿರಂಗನ್ ವರದಿ ವಿಚಾರದಲ್ಲಿ ಕೊಡಗಿನ ಜನತೆ ಆತಂಕಪಡಬೇಕಿಲ್ಲ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭರವಸೆ ನೀಡಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕಸ್ತೂರಿರಂಗನ್ ವರದಿ ವಿಚಾರದಲ್ಲಿ ಕೊಡಗಿನ ಜನತೆ ಆತಂಕಪಡಬೇಕಿಲ್ಲ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭರವಸೆ ನೀಡಿದರು.ನಗರದ ರಾಜ್ ದರ್ಶನ್ ಸಭಾಂಗಣದಲ್ಲಿ ಗುರುವಾರ ವಿವಿಧ ಸಂಘ-ಸಂಸ್ಥೆಗಳು, ರೈತ ಮುಖಂಡರು ಮತ್ತು ಜನಪ್ರತಿನಿಧಿಗಳೊಂದಿಗೆ ನಡೆದ 7ನೇ ಕರಡು ಅಧಿಸೂಚನೆ ಕುರಿತ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಮಾತನಾಡಿದರು.
ರಾಜ್ಯದಿಂದ ಸಮೀಕ್ಷೆ ನಡೆದಿಲ್ಲ: ಕೇರಳದಲ್ಲಿ ಸಮಸ್ಯೆ ಕುರಿತು ವೈಜ್ಞಾನಿಕ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಾಗಿದೆ. ಆದರೆ ಕರ್ನಾಟಕದಲ್ಲಿ ರಾಜ್ಯ ಸರ್ಕಾರದಿಂದ ಸಮೀಕ್ಷೆಯೇ ಆಗಿಲ್ಲ. ಕೊಡಗಿನಲ್ಲೂ ಕಡ್ಡಾಯವಾಗಿ ಭೌತಿಕ ಪರಿಶೀಲನೆ ಅಗತ್ಯವಿದೆ. ಕರಡು ಪ್ರತಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಕೇಂದ್ರ ಸರ್ಕಾರದೊಂದಿಗೆ ನಿರಂತರ ಚರ್ಚೆ ನಡೆಯುತ್ತಿದೆ ಎಂದರು. ಕೇರಳ ಮಾದರಿಯಲ್ಲಿ ಬಫರ್ ಝೋನ್ ಅನ್ನು 0 ಕಿ.ಮೀ. ಮಾಡಬೇಕು. ಜನವಸತಿ ಪ್ರದೇಶ ಮತ್ತು ಕೃಷಿ ಭೂಮಿಯನ್ನು ಅರಣ್ಯ ವ್ಯಾಪ್ತಿಗೆ ಸೇರಿಸಬಾರದು ಎಂದರು.ಸಭೆಯಲ್ಲಿ ಮಾತನಾಡಿದ ರೈತ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಚಕ್ರವರ್ತಿ, ಆರ್‌ಟಿಸಿಯಲ್ಲಿ ಅರಣ್ಯ ಎಂದು ನಮೂದಾದರೆ ರೈತರಿಗೆ ಸಂಕಷ್ಟ ಎದುರಾಗುತ್ತದೆ. ಕೂರ್ಗ್ ಪ್ಲಾಂಟರ್ಸ್ ಅಧ್ಯಕ್ಷ ನಂದಾ ಬೆಳ್ಯಪ್ಪ, ಜಿಲ್ಲೆಯ 53 ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯದಿಂದ ಕೈಬಿಡಬೇಕು ಎಂದರು.
ಜೆಡಿಎಸ್ ಮುಖಂಡ ಸಿ.ಎಲ್. ವಿಶ್ವ, ರೈತರ ಪರ ಜನಪ್ರತಿನಿಧಿಗಳು ನಿಲ್ಲಬೇಕಿತ್ತು. ವಿರೋಧ ಪ್ರಕಟಣೆಗೆ ಮಾತ್ರ ಸೀಮಿತವಾಗದೆ ಕಾನೂನು ಮರುಪರಿಶೀಲನೆಯಾಗಬೇಕು ಎಂದರು. ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ ಕಾರ್ಮಿಕರ ಕೂಲಿ ಏರಿಕೆಯ ನಡುವೆ ಈ ವರದಿ ಸುಟ್ಟ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.ಸೇವ್ ಕೊಡಗು ಸಂಘಟನೆಯ ಮಧು ಬೋಪಣ್ಣ, ಸಿ ಮತ್ತು ಡಿ ಜಮೀನು ಅರಣ್ಯವಾದರೆ ಕಂದಾಯಕ್ಕೆ ಸೇರುವುದಿಲ್ಲ. ಜಂಟಿ ಸರ್ವೆ ಆಗಬೇಕು ಎಂದರು. ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ದೊಡ್ಡ ರೆಸಾರ್ಟ್ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಜಂಟಿ ಸರ್ವೆ ಮತ್ತು ಕಾನೂನು ತಿದ್ದುಪಡಿ ಆಗಬೇಕು ಎಂದರು.
ಬಿಜೆಪಿ ವಕ್ತಾರ ರವಿ ಕುಶಾಲಪ್ಪ, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಗ್ರಾಮಸಭೆ ನಡೆಸುವಂತೆ ರಾಜ್ಯ ಸರ್ಕಾರ ಸೂಚಿಸಬೇಕು ಎಂದರು.ಮಾಜಿ ಶಾಸಕರು ಮತ್ತು ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಮಾತನಾಡಿ, ಕೇರಳ ರಾಜ್ಯದಲ್ಲಿ ಈಗಾಗಲೇ ಸರ್ವೆ ಮಾಡಿ ವರದಿ ಸಲ್ಲಿಸಿ ಅನುಷ್ಠಾನ ಮಾಡಿದೆ. ನಮ್ಮ ರಾಜ್ಯ ಸರ್ಕಾರ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಮತ್ತು ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಕೇರಳ ಮಾದರಿಯಲ್ಲಿ ವರದಿ ನೀಡಿದರೆ ಮಾತ್ರ ಸಮಸ್ಯೆ ಇತ್ಯಾರ್ಥವಾಗುವ ಸಾಧ್ಯತೆಯಿದೆ ಎಂದರು.ಅಂತಿಮವಾಗಿ ಪರಿಸರ ಸೂಕ್ಷ್ಮ ವಲಯವನ್ನು ೦ ಕಿ.ಮೀ.ಗೆ ಮಾಡಬೇಕು. ಕೇರಳ ಮಾದರಿಯಲ್ಲಿ ಭೌತಿಕ ಪರಿಶೀಲನೆ ನಡೆಸಬೇಕು. ರಾಜ್ಯ ಸರ್ಕಾರವು ಜಿಲ್ಲಾ ಪಂಚಾಯಿತಿ ಮೂಲಕ ಜಿ.ಪಂ. ಸಿಇಒಗಳಿಗೆ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಗ್ರಾಮಸಭೆ ನಡೆಸುವಂತೆ ಸೂಚನೆ ನೀಡಬೇಕು. ಕೃಷಿಕರಿಗೆ ಯಾವುದೇ ಸಮಸ್ಯೆಯಾಗದಂತೆ ಕಸ್ತೂರಿ ರಂಗನ್ ವರದಿಯಲ್ಲಿ ಕಾನೂನು ತಿದ್ದುಪಡಿ ಮಾಡಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನಾಪಂ ರವಿಕಾಳಪ್ಪ ತಿಳಿಸಿದರು.
ಸಭೆಯಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ ರಾಭಿನ್ ದೇವಯ್ಯ, ಮಾಜಿ ಎಂಎಲ್‌ಸಿ ಸುನಿಲ್ ಸುಬ್ರಮಣಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ರೈತರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.