ಕಲಬುರಗಿ ಕ್ಯಾಬಿನೆಟ್‌ನಲ್ಲಿ ಹೊಸ ವಿಚಾರ ಇಲ್ಲ: ಬಿ.ವೈ.ವಿಜಯೇಂದ್ರ ಲೇವಡಿ

| Published : Sep 19 2024, 01:53 AM IST

ಕಲಬುರಗಿ ಕ್ಯಾಬಿನೆಟ್‌ನಲ್ಲಿ ಹೊಸ ವಿಚಾರ ಇಲ್ಲ: ಬಿ.ವೈ.ವಿಜಯೇಂದ್ರ ಲೇವಡಿ
Share this Article
  • FB
  • TW
  • Linkdin
  • Email

ಸಾರಾಂಶ

ಯಡಿಯೂರಪ್ಪ, ಬೊಮ್ಮಾಯಿ ಕಾಲದ ಯೋಜನೆಗಳನ್ನೆ ಚರ್ಚಿಸಿದ್ದಾರೆ. ಬೆಂಗಳೂರು, ಮೈಸೂರು ಮುಖ್ಯಮಂತ್ರಿ ಅಂತಾ ಸಿದ್ರಾಮಯ್ಯಗೆ ಜನ ಹೇಳ್ತಿದ್ದಾರೆ. ನಿನ್ನೆಯ ಸಚಿವ ಸಂಪುಟದ ಸಭೆಯಿಂದ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ. ಮುಖ್ಯಮಂತ್ರಿ ಕುರ್ಚಿ ಅಲುಗಾಡ್ತಿದೆ, ಹಾಗಾಗಿ ಎಐಸಿಸಿ ಅಧ್ಯಕ್ಷರ ಒಲೈಕೆ ಮಾಡೋದಕ್ಕೆ ಇಲ್ಲಿ ಸಚಿವ ಸಂಪುಟ ಸಭೆ ಮಾಡಿದ್ದಾರೆಂದು ಕುಟುಕಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿಯಲ್ಲಿ ಸಿಎಂ ಸಿದ್ದರಾಮಯ್ಯ ನಡೆಸಿರುವ ಸಂಪುಟ ಸಭೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗೇಲಿ ಮಾಡಿದ್ದಾರೆ. ಅಚಾನಾಕ್ ಆಗಿ ಸಿಎಂ ಸಾಹೇಬರಿಗೆ ಕಲಬುರಗಿ ನೆನಪಾಗಿದೆ. ಸರ್ಕಾರ ಬಂದು ಒಂದು ವರ್ಷ ಆದ್ರೂ ನೆನಪಾಗಿರಲಿಲ್ಲ. ನಿನ್ನೆ ಸಚಿವ ಸಂಪುಟದಲ್ಲಿ ಯಾವುದೆ ಹೊಸ ವಿಚಾರ ಹೇಳಿಲ್ಲ. ಯಡಿಯೂರಪ್ಪ, ಬೊಮ್ಮಾಯಿ ಕಾಲದ ಯೋಜನೆಗಳೆ ಇವೆ ಎಂದು ವಿಜಯೇಂದ್ರ ಲೇವಡಿ ಮಾಡಿದ್ದಾರೆ.

ನಗರದಲ್ಲಿ ಸದಸ್ಯತ್ವ ಅಭಿಯಾನದ ಅಂಗವಾಗಿ ಕರಬುರಗಿ ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ಮುಖಂಡರ ಮಹತ್ವದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಂಗಳೂರು, ಮೈಸೂರು ಮುಖ್ಯಮಂತ್ರಿ ಅಂತಾ ಸಿದ್ರಾಮಯ್ಯಗೆ ಜನ ಹೇಳ್ತಿದ್ದಾರೆ. ನಿನ್ನೆಯ ಸಚಿವ ಸಂಪುಟದ ಸಭೆಯಿಂದ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ. ಮುಖ್ಯಮಂತ್ರಿ ಕುರ್ಚಿ ಅಲುಗಾಡ್ತಿದೆ, ಹಾಗಾಗಿ ಎಐಸಿಸಿ ಅಧ್ಯಕ್ಷರ ಒಲೈಕೆ ಮಾಡೋದಕ್ಕೆ ಇಲ್ಲಿ ಸಚಿವ ಸಂಪುಟ ಸಭೆ ಮಾಡಿದ್ದಾರೆಂದು ಕುಟುಕಿದರು.

ಕಾಂಗ್ರೆಸ್‌ ಪಕ್ಷದಲ್ಲಿ ಸಿಎಂ ಬದಲಾವಣೆ ವಿಚಾರ ಭಾರಿ ಸದ್ದು ಮಾಡುತ್ತಿದೆ. ಡಿಕೆಶಿ , ಆರ್.ವಿ ದೇಶಪಾಂಡೆ, ಮುಖ್ಯಮಂತ್ರಿ ಆಕಾಂಕ್ಷಿ ಎಂದು ಹೇಳುತ್ತಿದ್ದಾರೆ. ಅವರಿಗೆ ಈ ಪ್ರಶ್ನೆ ಕೇಳಬೇಕು ಎಂದರು.

ನಮ್ಮಲ್ಲೂ ಮನೆ ಮೂರ್ಖರಿದ್ದಾರೆ ಎನ್ನುವ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಸ್ಪಂದಿಸಿದ ವಿಜಯೇಂದ್ರ, ಈ ವಿಚಾರವಾಗಿ ನೀವು ಯಾರಿಗೂ ಹೇಳಬೇಡಿ ಡಿಕೆಶಿ ಅವರಿಗೆ ಹೇಳಿರೋದು ಸಿದ್ದರಾಮಯ್ಯ ಎಂದು ಛೇಡಿಸಿದರು.

ಶಿವಮೊಗ್ಗದಲ್ಲಿ ಪ್ಯಾಲೆಸ್ಟೈನ್ ಧ್ವಜ ಹಾರಿಸಿರೋದು ಅಷ್ಟೆ ಅಲ್ಲ, ಮೊನ್ನೆ ನಾಗಮಂಗಲ ಘಟನೆ, ಇವತ್ತು ದೇಶದ್ರೋಹಿಗಳ ಅಟ್ಟಹಾಸ, ಆರ್‌ಎಸ್‌ಎಸ್ ಕಚೇರಿಗೆ ಪೊಲೀಸರು ನುಗ್ಗಿರೋದು, ದಾವಣಗೆರೆ ಘಟನೆ , ರಾಮೇಶ್ವರಂ ಬಾಂಬ್ ಬ್ಲಾಸ್ಟ್ ಘಟನೆ ಇ‍ವನ್ನೆಲ್ಲ ಅವಲೋಕಿಸಿದರೆ, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ದೇಶದ್ರೋಹಿ ಚಟುವಟಿಕೆಗಳಿಗೆ ಹೆಚ್ಚು ಶಕ್ತಿ ಸಿಗ್ತಿದೆ ಎಂದು ಆರೋಪಿಸಿದರು.

ಬೆಂಕಿ ಹಚ್ಚುವ ಕೆಲಸ ಹಚ್ಚಿಸಿಕೊಳ್ಳುವ ಕೆಲಸ ಮಾಡೋದು ಕಾಂಗ್ರೆಸ್ ಪಕ್ಷದವರು. ನಾಗಮಂಗಲದಲ್ಲಿ ಅಲ್ಪಸಂಖ್ಯಾತ ಗುಂಡಾಗಳು ಹಿಂದುಗಳ ಅಂಗಡಿಗೆ ನುಗ್ಗಿ ಬೆಂಕಿ ಹಚ್ಚಿರುವ ಸಂಧರ್ಭದಲ್ಲಿ ಪೊಲೀಸರು ಕೈ ಕಟ್ಟಿ ಕೂತಿರೋದು ನೋಡಿದ್ರೆ ಎಲ್ಲರಿಗೂ ಕಾಂಗ್ರೆಸ್‌ನ ಅಲ್ಪಸಂಖ್ಯಾತರ ಓಲೈಕೆ ಗೊತ್ತಾಗುತ್ತದೆ ಎಂದರು.

ನಾಗಮಂಗಲ ಘಟನೆಯನ್ನ ಗೃಹ ಸಚಿವರು ಸಣ್ಣ ಘಟನೆ ಅಂತಾ ಹೇಳುತ್ತಾರೆ. ಸರ್ಕಾರದ ನಡುವಳಿಕೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವ ಹುನ್ನಾರ ಇದರಲ್ಲಿ ಅಡಗಿದೆ ಎಂದರು.

ವಾಲ್ಮೀಕಿ ಹಗರಣ ಸಂಬಂಧ ಪಾದಯಾತ್ರೆ ಚರ್ಚೆಯ ಹಂತದಲ್ಲಿದೆ. ಅವರು ರಮೇಶ್ ಜಾರಕಿಹೊಳ್ಳಿ ತಮ್ಮ ಮೇಲೆ ಮುನಿಸಿದ್ದಾರೆಂಬ ವಿಚಾರವಾಗಿ ಸ್ಪಂದಿಸುತ್ತ, ರಮೇಶ್ ಜಾರಕಿಹೊಳಿ ವಿಜಯೇಂದ್ರ ನಾಯಕನಾಗಿ ಒಪ್ಪಿಕೊಳ್ಳೊದಿಲ್ಲ ಅನ್ನೋದು ಸ್ವಾಗತ ಮಾಡ್ತೇನೆ, ನಾನು ನಾಯಕನಾಗಲು ಹೊರಟಿಲ್ಲ. ನಮ್ಮ ಪಕ್ಷದ ವರಿಷ್ಠರು, ಹಿರಿಯರು, ರಾಜ್ಯದ ಅಧ್ಯಕ್ಷನಾಗಿ ನೇಮಕ ಮಾಡಿದ್ದಾರೆ. ಭ್ರಷ್ಟ ಸರ್ಕಾರವನ್ನ ಒಂಟಿ ಕಾಲಿನಲ್ಲಿ ನಿಲ್ಲಿಸುವ ಕೆಲಸ ಮಾಡಿದ್ದೇವೆ ಎಂದರು.

ಸಂತೋಷದ ವಿಷಯವೆಂದರೆ ರಮೇಶ್ ಜಾರಕಿಹೊಳಿ ಬಾಯಲ್ಲೂ ಪಕ್ಷದ ಸಿದ್ಧಾಂತ ಬಂದಿರೋದು ಒಳ್ಳೆಯ ಬೆಳವಣಿಗೆ ಎಂದರು.

ಯಡಿಯೂರಪ್ಪನವರು ನನಗೆ ಮಾತಾಡೋದೇ ಸಾಧನೆಯಾಗಬಾರದು ಎಂದು ಹೇಳಿದ್ದಾರೆ. ಹೀಗಾಗಿ ಶಿಕಾರಿಪುರ ಗೆಲುವಿನ ವಿಚಾರದಲ್ಲಿ ಮಾತನಾಡೋದಿಲ್ಲ. ಮಾತಾಡೋದೆ ಸಾಧನೆ ಆಗಬಾರದು. ಸಾಧನೆ ಮಾತಾಗಬೇಕೇ ವಿನಾ ಮಾತೇ ಸಾಧನೆಯಾಗಬಾರದು, ನಾನು ಕೂಡ ಕೆಲಸ ಮಾಡಿ ತೋರಿಸುವೆ ಎಂದರು.