ಸಾರಾಂಶ
ಬೆಂಗಳೂರು: ರಾಜ್ಯದಲ್ಲಿ ಮಿತಿಮೀರಿರುವ ಮಾನವ-ಅರಣ್ಯ ಸಂಘರ್ಷ ತಡೆಗೆ ಮಹತ್ವದ ಯಾವುದೇ ಯೋಜನೆಗಳನ್ನೂ ಘೋಷಿಸದ ಸಿದ್ದರಾಮಯ್ಯ, ಕಾಡಂಚಿನ ಗ್ರಾಮಗಳಲ್ಲಿ ರೈಲ್ವೆ ಬ್ಯಾರಿಕೇಡ್‌ಗಳ ಅಳವಡಿಕೆ, ಬಂಡೀಪುರದಲ್ಲಿ ಹೊಸ ಕಾರ್ಯಪಡೆ ರಚನೆಗಷ್ಟೇ ಅರಣ್ಯ ಇಲಾಖೆಯನ್ನು ಸೀಮಿತಗೊಳಿಸಿದ್ದಾರೆ.ಪ್ರತಿ ಬಾರಿಯಂತೆ ಈ ಬಾರಿಯೂ ಅರಣ್ಯ ಇಲಾಖೆ ಕುರಿತಂತೆ ರಾಜ್ಯ ಬಜೆಟ್‌ನಲ್ಲಿ ಅಷ್ಟಾಗಿ ಗಮನಹರಿಸಿಲ್ಲ. ರಾಜ್ಯದಲ್ಲಿ ಈಗಾಗಲೇ 7 ಆನೆ ಕಾರ್ಯಪಡೆ ಹಾಗೂ 2 ಚಿರತೆ ಕಾರ್ಯಪಡೆಗಳನ್ನು ರಚಿಸಲಾಗಿದ್ದು, ಈ ಕಾರ್ಯಪಡೆಗಳನ್ನು ಬಲಪಡಿಸಲು 40 ಕೋಟಿ ರು. ಒದಗಿಸಲಾಗಿದೆ. ಅದೇ ಮಾದರಿಯಲ್ಲಿ 2024-25ನೇ ಸಾಲಿನಲ್ಲಿ ಬಂಡೀಪುರದಲ್ಲಿ ಹೊಸದಾಗಿ ಒಂದು ಕಾರ್ಯಪಡೆ ರಚಿಸಲಾಗುವುದು ಮತ್ತು ಹಳೇ, ಹೊಸ ಕಾರ್ಯಪಡೆಗಳಿಗೆ ಹೆಚ್ಚುವರಿ ಸಿಬ್ಬಂದಿ ನೇಮಕ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಬಲಪಡಿಸಲು 10 ಕೋಟಿ ರು. ನೀಡಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.
ಬ್ಯಾರಿಕೇಡ್‌ಗೆ ಸೀಮಿತ:ಮಾನವ-ವನ್ಯಜೀವಿ ಸಂಘರ್ಷ ತಡೆಯಲು ರೈಲ್ವೆ ಬ್ಯಾರಿಕೇಡ್‌ಗಳ ಅಳವಡಿಕೆಗಾಗಿ ಕಳೆದ ಬಜೆಟ್‌ನಲ್ಲಿ 100 ಕೋಟಿ ರು. ನೀಡಲಾಗಿತ್ತು ಮತ್ತು ಅದರಲ್ಲಿ 78 ಕಿಮೀ ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿತ್ತು. ಈ ವರ್ಷವೂ ಅದೇ ಮಾದರಿಯಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಪ್ರಾಮುಖ್ಯತೆ ನೀಡಲಾಗುವುದು ಎಂದು ಭರವಸೆ ನೀಡಲಾಗಿದೆ.ಬೀದರ್ ಜಿಲ್ಲೆಯ ಹೊನ್ನಿಕೇರಿ ಮೀಸಲು ಅರಣ್ಯ ಮತ್ತು ಇತರ ಜೀವವೈವಿಧ್ಯ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮ ಮತ್ತು ಸಂರಕ್ಷಣಾತ್ಮಕ ಕಾರ್ಯಕ್ರಮಗಳಿಗೆ 15 ಕೋಟಿ ರು. ನೀಡುವುದಾಗಿ ಹೇಳಲಾಗಿದೆ.ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಈಸ್ ಆಫ್ ಡೂಯಿಂಗ್‌ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರ್ಯವೈಖರಿಯಲ್ಲಿ ಸುಧಾರಣೆ ತರುವ ಕ್ರಮಗಳನ್ನು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದ್ದು, ಜಲ, ವಾಯು ಮತ್ತು ಪರಿಸರ ಸಂರಕ್ಷಣಾ ಕಾಯ್ದೆ ಅನ್ವಯ ಮಂಡಳಿಯು ನೀಡುವ ಸಮ್ಮತಿ ಪತ್ರಗಳನ್ನು ಒಗ್ಗೂಡಿಸಿ ಸರಳೀಕರಣಗೊಳಿಸಲು ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ವ್ಯವಸ್ಥೆ ಜಾರಿ ಕುರಿತು ಘೋಷಿಸಲಾಗಿದೆ. ಜತೆಗೆ ಮಂಡಳಿಯ ಕಾರ್ಯವಿಧಾನವನ್ನು ಬಲಪಡಿಸಲು ವಿವಿಧ ಅನುಮತಿಗಳು ಮತ್ತು ಪ್ರಮಾಣಪತ್ರಗಳನ್ನು ನೀಡಲು ಏಕಗವಾಕ್ಷಿ ಪದ್ಧತಿ ಅನುಷ್ಠಾನ ಮಾಡುವುದಾಗಿ ತಿಳಿಸಲಾಗಿದೆ.ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ 17 ನದಿ ನೀರಿನ ಗುಣಮಟ್ಟ ಮಾಪನ ಕೇಂದ್ರ ಹಾಗೂ ಎರಡು ಪರಿಸರ ಪ್ರಯೋಗಾಲಯ ಸ್ಥಾಪನೆ ಹಾಗೂ ಪ್ರಸ್ತುತ ಇರುವ 9 ಪರಿಸರ ಪ್ರಯೋಗಾಲಯಗಳ ಉನ್ನತೀಕರಿಸುವುದಾಗಿ ಬಜೆಟ್‌ನಲ್ಲಿ ಹೇಳಲಾಗಿದೆ.