ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬೇಸೂರು ಅಣು ವಿದ್ಯುತ್ ಸ್ಥಾವರ ಕೈಬಿಡುವ ಬಗ್ಗೆ ರಾಜ್ಯ ಸರ್ಕಾರದಿಂದ ಅಧಿಕೃತ ಘೋಷಣೆಯಾಗಿಲ್ಲ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಬೇಳೂರು ಗೋಪಾಲಕೃಷ್ಣ ಈ ಬಗ್ಗೆ ಹೇಳಿಕೆ ನೀಡಿ ಬೇಸೂರು ಅಣು ವಿದ್ಯುತ್ ಸ್ಥಾವರ ಆಗಲ್ಲ. ಸರ್ಕಾರ ಆದೇಶ ನೀಡಿದೆ ಎಂದಿದ್ದಾರೆ. ಆಗದೇ ಇದ್ದರೆ ಸಂತೋಷ. ಆದರೆ ಶಾಸಕರು ತಪ್ಪು ಮಾಹಿತಿ ನೀಡಿದ್ದಾರೆ. ರಾಜ್ಯ ಸರ್ಕಾರದಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ನಮ್ಮ ದುರಾದೃಷ್ಟ ಜಿಲ್ಲೆಗೆ ಇನ್ನೂ ಉಸ್ತುವಾರಿ ಸಚಿವರ ನೇಮಕವಾಗಿಲ್ಲ. ರಾಜ್ಯದ ಜನ ಗೊಂದಲದಲ್ಲಿದ್ದಾರೆ. ಬೇಸೂರು ಅಣು ವಿದ್ಯುತ್ ಸ್ಥಾವರ ಆಗಲು ಸಾಗರ ತಾಲೂಕಿನ ಜನ ಬಿಡುವುದಿಲ್ಲ ಎಂದರು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ನಮ್ಮ ವಿರೋಧವಿದೆ. 78 ರಿಂದ 100 ಎಕರೆ ಭೂಮಿ ಮಾತ್ರ ಹೋಗುತ್ತದೆ ಎನ್ನುವ ಶಾಸಕರ ಹೇಳಿಕೆ ಶುದ್ಧ ಸುಳ್ಳು. ಅದು ಅಭಯಾರಣ್ಯವಾಗಿದೆ. ಆ ಯೋಜನೆಯ ಮುಗಿಯುವ ಹೊತ್ತಿಗೆ 21,100 ಕೋಟಿಗಿಂತಲೂ ಹೆಚ್ಚಿನ ಹಣ ಖರ್ಚಾಗುತ್ತದೆ. ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಆ ಪ್ರದೇಶವೇ ಮುಚ್ಚಿ ಹೋಗಬಹುದು. ಎರಡು ಸಾವಿರ ಮೆಗಾವ್ಯಾಟ್ ವಿದ್ಯುತ್ ಟ್ರಾನ್ಸ್‌ಫರ್ ಮಾಡಲು 8000 ಸಾವಿರಕ್ಕೂ ಹೆಚ್ಚು ಮರ ಹೋಗುತ್ತದೆ ಎದು ತಿಳಿಸಿದರು.ಶಾಸಕರ ಅಸಂಬದ್ಧ ಹೇಳಿಕೆಯಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಹೈವೇಗೆ ಮರ ಹೋಗುವುದಿಲ್ಲವಾ ಎಂದಿದ್ದಾರೆ. ಆದರೆ ಹೈವೇಗೂ ಇದಕ್ಕೂ ವ್ಯತ್ಯಾಸವಿದೆ. ಈ ಯೋಜನೆಗೆ ಪರ್ಯಾಯವಾಗಿ ವಿದ್ಯುತ್ ಉತ್ಪಾದನೆ ಮಾಡಲು ಅನೇಕ ಮಾರ್ಗಗಳಿವೆ. ಶಾಸಕರಿಗೆ ಅದರ ಅರಿವಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕೂಡ ಈ ಯೋಜನೆಯನ್ನು ವಿರೋಧಿಸಿದ್ದಾರೆ ಮತ್ತು ಕೇಂದ್ರದ ಗಮನ ಸೆಳೆಯುವುದಾಗಿ ಹೇಳಿದ್ದಾರೆ ಎಂದು ಹೇಳಿದರು.
ಮಲೆನಾಡಿನಲ್ಲಿ ಬರಗಾಲ ಬಂದಿದೆ. ಅನೇಕ ಕಡೆ ಗುಡ್ಡ ಕುಸಿಯುತ್ತಿದೆ. ಪರಿಸರ ನಾಶವಾಗಿದೆ. ಇದು ವನ್ಯಜೀವಿ ಸಿಂಘಳೀಕ ಅಭಯಾರಣ್ಯವಾಗಿದ್ದು, ಈ ಯೋಜನೆಗೆ ಅನುಮತಿ ನೀಡಲು ಸಾಧ್ಯವೇ ಇಲ್ಲ. ಮಲೆನಾಡಲ್ಲಿ ಈಗಾಗಲೇ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳು ನಿಂತಿದೆ. ರಾಜ್ಯದಲ್ಲಿ ಕೃಷಿ ಸಚಿವರೇ ಇಲ್ಲ. ಸರ್ಕಾರ ಅತಿವೃಷ್ಟಿಗೆ ಇನ್ನೂ ಪರಿಹಾರ ನೀಡಿಲ್ಲ ಎಂದು ದೂರಿದರು.
ಅನಾವೃಷ್ಟಿಕ್ಕೆ ಸಮರೋಪಾದಿಯಲ್ಲಿ ಕಾರ್ಯಕ್ರಮ ಹಾಕಿಕೊಂಡು ರೈತರ ಬೆನ್ನೆಲುಬಾಗಿ ನಿಲ್ಲಬೇಕು. ಮಧುಸೂದನ್ ನಾಯಕ್ ವರದಿ ಬಗ್ಗೆ ಸರ್ಕಾರ ಈಗ ಮೌನವಹಿಸಿದೆ. ಈ ವರದಿಯ ಅಧ್ಯಯನ ಮಾಡಿ, ರಾಜ್ಯದ ಜನತೆಗೆ ತಿಳಿಸಲು ಬಿಜೆಪಿ ವಿಶೇಷ ಸಮಿತಿ ಮಾಡಲಿದೆ. ಈ ಸಮಿತಿಯ ಮೂಲಕ ವಾಸ್ತವಾಂಶವನ್ನು ಜನರಿಗೆ ತಿಳಿಸಲಾಗುವುದು. ಕೋಟ್ಯಂತರ ರು. ಹಣ ಖರ್ಚುಮಾಡಿ, ಈ ವರದಿ ಮುಚ್ಚಿಡುವುದೇಕೆ ಇದರಿಂದ ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಿದಂತೆ ಆಗಿದೆ ಎಂದರು.
--------------ಪೊಟೋ: 13ಎಸ್‌ಎಂಜಿಕೆಪಿ02