ಸಾರಾಂಶ
ದೇವದುರ್ಗ : ಸಿಎಂ ಸಿದ್ದರಾಮಯ್ಯ ಅವರನ್ನು ಯಾರೂ ಏನು ಮಾಡಲು ಆಗುವುದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಸುರೇಶ ಭೈರತಿ ತಿಳಿಸಿದರು.ತಾಲೂಕಿನ ತಿಂಥಣಿ ಬ್ರಿಜ್ ಬಳಿರುವ ಕನಕಗುರುಪೀಠದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಸಂಕ್ರಾಂತಿ ಜಾತ್ರಾ ಮಹೋತ್ಸವ (ಹಾಲುಮತ ಸಂಸ್ಕೃತಿ ವೈಭವ)ದಲ್ಲಿ ಪೂಜಾರಿಗಳ ಸಮಾವೇಶ ಮತ್ತು ಶಿವಸಿದ್ಧಯೋಗ ವಿದ್ಯಾಮಂದಿರ ಶಿಲಾನ್ಯಾಸ ನೆರವೇರಿಸಿ ರವಿವಾರ ಅವರು ಮಾತನಾಡಿದರು.
ಕಾಂಗ್ರೆಸ್ ಹೈಕಮಾಂಡ್, ಸೋನಿಯಾ ಗಾಂಧಿ,ರಾಹುಲ್ ಗಾಂಧಿ, ಸುರ್ಜೆವಾಲಾ ಸೇರಿದಂತೆ ಎಲ್ಲರೂ ಸಿದ್ದರಾಮಯ್ಯ ಪರವಾಗಿದ್ದಾರೆ. ರಾಜ್ಯದ ಜನ ಆಶೀರ್ವಾದ ಇರುವ ತನಕ ಅವರನ್ನು ಯಾರೂ ಏನು ಮಾಡಲು ಆಗಲ್ಲ, ಬಿಜೆಪಿ-ಜೆಡಿಎಸ್ ನವರು ಇಲ್ಲಸಲ್ಲದ ಆರೋಪಗಳನ್ನ ಮಾಡುತ್ತಿದ್ದು, ಅವರ ಆರೋಪಗಳಲ್ಲಿ ಹುರುಳಿಲ್ಲವೆಂದು ಸ್ಪಷ್ಟಪಡಿಸಿದರು.
ಕನಕದಾಸ, ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಸಂದೇಶ, ವಿಚಾರಗಳನ್ನು ಅರ್ಥಪೂರ್ಣವಾಗಿ ಜೀವನದಲ್ಲಿ ಅಳವಡಿಸಿಕೊಂಡು ಬಡವರ, ತಳ ಸಮುದಾಯಗಳ ಕಲ್ಯಾಣಕ್ಕೋಸ್ಕರ ರಾಜ್ಯದ ಸಮಗ್ರ ಸಮೃದ್ಧಿ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸುತ್ತಿರುವ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರು ಆದರ್ಶಪ್ರಾಯರಾಗಿದ್ದಾರೆ.ಸಮಾಜದಲ್ಲಿ ತುಳಿತಕ್ಕೊಳಗಾದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಸಿದ್ದರಾಮಯ್ಯ ನೇತೃತ್ವದ ಸರಕಾರ ಬದ್ಧವಾಗಿದೆ. ರಾಜ್ಯದಲ್ಲಿರುವ ದೇವಸ್ಥಾನಗಳು, ಮಸೀದಿಗಳು, ಚರ್ಚಗಳ ಆಸ್ತಿಗಳನ್ನು ಆಯಾ ಸಮಿತಿಗಳಿಗೆ ಸ್ವಾಧೀನಕ್ಕೆ ಕೊಡುವಲ್ಲಿ ಸರಕಾರ ಐತಿಹಾಸಿಕ ನಿರ್ಣಯ ತೆಗೆದುಕೊಂಡಿದೆ.
ಪೂಜಾರಿಗಳು, ಅರ್ಚಕರಿಗೆ ಮಾಶಾಸನ ಕೊಡಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ.ರಾಜ್ಯದಲ್ಲಿ ಶೇ.99 ರಷ್ಟು ಕುರುಬ ಜನಾಂಗ ಸಿದ್ದರಾಮಯ್ಯನವರ ನಾಯಕತ್ವಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಜೊತೆಗೆ ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ, ದಲಿತರ ಹಾಗೂ ಮೇಲ್ವರ್ಗದ ಬಡವರ ಅಭೂತ ಬೆಂಬಲವಿದ್ದು, ಕಲ್ಯಾಣಕ್ಕಾಗಿ ಆಶಾಕಿರಣದಂತೆ ಕಂಗೊಳಿಸುತ್ತಿದ್ದಾರೆ. ಐತಿಹಾಸಿಕ ಹಿನ್ನೆಲೆಯುಳ್ಳ ಕುರುಬ ಸಮುದಾಯಕ್ಕೆ ಸಿದ್ದರಾಮಯ್ಯ ನಾಯಕತ್ವ, ಜನಪರ ಕಾಳಜಿ, ಸದೃಢ ಆಡಳಿತದಿಂದಾಗಿ ಹೆಮ್ಮೆಯ ಪ್ರತೀಕವಾಗಿದ್ದಾರೆ.
ರಾಜ್ಯ ದಲ್ಲಿ ಸರ್ವ ಸಮುದಾಯಗಳ ಬೆಂಬಲ ಪಡೆದು ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಮಾಡುವಲ್ಲಿ ಸಿದ್ದರಾಮಯ್ಯನವರ ಕಟು ನಿರ್ಧಾರ ಪರಿಣಾಮಕಾರಿಯಾಗಿ ಜಾರಿಯಾಗಿದೆ.ಕುರುಬ ಸಮಾಜದ ಜೊತೆಗೆ ಸಹೋದರ ಸಮುದಾಯಗಳು ಶಿಕ್ಷಣ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿ, ನಾಗರಿಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಸೂಚಿಸಿದರು.
ವೇದಿಕೆಯಲ್ಲಿ ಸಿದ್ದರಾಮಾನಂದಪೂರಿ ಸ್ವಾಮೀಜಿ, ಈಶ್ವರಾನಾಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕೊಪ್ಪಳ ಸಂಸದ ಬಸವರಾಜ ಹಿಟ್ನಾಳ್, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ಚೆನ್ನರೆಡ್ಡಿ ತನ್ನೂರು, ಬಸನಗೌಡ ತುರ್ವಿಹಾಳ, ಮಾನಪ್ಪ ವಜ್ಜಲ್, ರಾಜಾವೇಣುಗೋಪಾಲ ನಾಯಕ, ಮಾಜಿ ಶಾಸಕ ರಾಜೂಗೌಡ ಮುಖಂಡರಾದ ದೇವೀಂದ್ರಪ್ಪ, ರಾಮಚಂದ್ರಪ್ಪ, ಸಿದ್ದಯ್ಯ ತಾತಾ ಗುರುವಿನ, ಚಿಂಚೋಡಿ ಗ್ರಾ.ಪಂ ಅಧ್ಯಕ್ಷೆ ಯಲ್ಲಮ್ಮ ಮಲ್ಲಪ್ಪ ಗಣಜಲಿ ಹಾಗೂ ಇತರರು ಉಪಸ್ಥಿತರಿದ್ದರು.
ದೇಶದಲ್ಲಿ ಮನು ಸಂಸ್ಕೃತಿ ಹೇರುವ ಹುನ್ನಾರ: ಚಿಂತಕ ಕೆ.ಎಸ್.ಭಗವಾನ್
ದೇವದುರ್ಗ: ದೇಶದಲ್ಲಿ ಸಂವಿಧಾನ ತಿದ್ದುಪಡಿ, ಬದಲಾವಣೆ ಎಂಬ ಹೇಳಿಕೆಗಳು ಕೇಳಿಬರುತ್ತಿದ್ದು ಇದು ಮನುವಾದಿಗಳ ಹುನ್ನಾರವಾಗಿದ್ದು, ಜನರು ಜಾಗೃತಗೊಳ್ಳಬೇಕೆಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ ಕರೆ ನೀಡಿದರು.ತಾಲೂಕಿನ ತಿಂಥಣಿ ಬ್ರಿಜ್ ಬಳಿರುವ ಕನಕಗುರುಪೀಠದಲ್ಲಿ ಸಂಕ್ರಾಂತಿ ಜಾತ್ರಾ ಮಹೋತ್ಸವ (ಹಾಲುಮತ ಸಂಸ್ಕೃತಿ ವೈಭವ)ದಲ್ಲಿ ಭಾನುವಾರ ಜರುಗಿದ ಸಂಕ್ರಾಂತಿ ಜಾತ್ರೆ ಕುಮುಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ರವಿವಾರ ಮಾತನಾಡಿದರು.
ಸಮಾನತೆ, ಸಮಬಾಳು, ಸಹಬಾಳ್ವೆ, ಸಾಮಾಜಿಕ ನ್ಯಾಯದಡಿಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿರುವ ಪ್ರಜಾಪ್ರಭುತ್ವ ದೇಶಕ್ಕೆ ಕಳಶಪ್ರಾಯ ವಾಗಿರುವ ಭಾರತ ಸಂವಿಧಾನ ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ.ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮನು ಸಂಸ್ಕೃತಿ ಸಂವಿಧಾನ ಹೇರಲು ತೆರೆ ಮರೆಯ ಪ್ರಯತ್ನಕ್ಕೆ ಮುಂದಾಗಿದೆ.
ಬುದ್ಧ, ಬಸವ, ಕನಕದಾಸ, ಬಸವಣ್ಣನವರು ಒಳಗೊಂಡಂತೆ ಅನೇಕ ಸಂತರು, ಶರಣರು ಮೇಲು-ಕೀಳು ಎಂಬ ಬೇಧಭಾವವಿಲ್ಲದೇ ಸಮಸಮಾಜ ನಿರ್ಮಾಣಕ್ಕೆ ಸಂದೇಶ ಸಾರಿರುವ ದೇಶದಲ್ಲಿ ಅಶಾಂತಿ ಮೂಡಿಸುವ ಹೇಳಿಕೆಗಳು, ಚಟುವಟಿಕೆಗಳು ನಡೆದಿರುವುದು ಅಘಾತಕಾರಿ ಸಂಗತಿಯಾಗಿದೆ. ಹಿಂದುತ್ವದ ಘೋಷಣೆಯ ಹಿಂದೆ ತಂತ್ರಗಾರಿಕೆ ಅಡಗಿದೆ. ಜಾತಿ ವೈಷಮ್ಯ ಬೀರುವ ಉದ್ದೇಶ ಅಡಗಿದೆ. ಸಂವಿಧಾನ ವಿರೋಧಿಗಳಿಗೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ವ್ಯಾಪಕ ಜನಜಾಗೃತಿಯ ಅವಶ್ಯಕತೆ ಇದೆ ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ತಿಳಿಸಿದರು.ಈ ಸಂದರ್ಭದಲ್ಲಿ ಶ್ರೀ ಸಿದ್ದರಾಮಾನಂದಪೂರಿ ಸ್ವಾಮೀಜಿ,ಚನ್ನಪ್ಪ ಕಟ್ಟೀಮನಿ, ದಯಾನಂದ ಹಾಗೂ ಇತರರು ಪಾಲ್ಗೊಂಡಿದ್ದರು.
ಕನಕಗುರುಪೀಠದ ವಿದ್ಯಾಮಂದಿರಕ್ಕೆ ₹2 ಕೋಟಿ ಅನುದಾನ: ಯತೀಂದ್ರರಾಯಚೂರು: ಕನಕಗುರು ಪೀಠದ ಶಿವಸಿದ್ಧ ಯೋಗ ವಿದ್ಯಾಮಂದಿರಕ್ಕೆ 2 ಕೋಟಿ ರು. ಅನುದಾನ ಒದಗಿಸಿಕೊಡುವುದಾಗಿ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಭರವಸೆ ನೀಡಿದರು.
ಜಿಲ್ಲೆ ದೇವದುರ್ಗ ತಾಲೂಕಿನ ತಿಂಥಣಿ ಬ್ರಿಜ್ ಸಮೀಪದ ಕಾಗಿನೆಲೆ ಮಹಾಸಂಸ್ಥಾನದ ಕಲಬುರಗಿ ವಿಭಾಗದ ಕನಕಗುರು ಪೀಠದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಸಂಕ್ರಾಂತಿ ಜಾತ್ರಾ ಮಹೋತ್ಸವ (ಹಾಲುಮತ ಸಂಸ್ಕೃತಿ ವೈಭವ)ದಲ್ಲಿ ಪೂಜಾರಿಗಳ ಸಮಾವೇಶ ಮತ್ತು ಶಿವಸಿದ್ಧಯೋಗ ವಿದ್ಯಾ ಮಂದಿರ ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸಿ ರವಿವಾರ ಮಾತನಾಡಿದ ಅವರು, ವಿದ್ಯಾಮಂದಿರಕ್ಕೆ ಅಗತ್ಯವಾದ ಅನುದಾನವನ್ನು ಸರ್ಕಾರದಿಂದ ನಾನು ಒದಗಿಸಿಕೊಡುವ ಪ್ರಯತ್ನವನ್ನು ಮಾಡುವುದಾಗಿ ತಿಳಿಸಿದರು.
ನಮ್ಮ ಸಂಸ್ಕೃತಿ,ಪರಂಪರೆ ಹಾಗೂ ಸಂಪ್ರದಾಯವನ್ನು ಉಳಿಸುವ ಪ್ರಯತ್ನವನ್ನು ಪೀಠದ ಸ್ವಾಮೀಜಿ ಮಾಡುತ್ತಿದ್ದು, ಪೂಜಾರಿಗಳ ಸಮಾವೇಶ ಮಾಡು ವುದರ ಮುಖಾಂತರ ಅವರಿಗೆ ಉತ್ತೇಜನ ನೀಡುವ ಕಾರ್ಯವನ್ನು ಮಾಡಲಾಗುತ್ತಿದೆ. ಪೂಜಾರಿಗಳ ಸಮಸ್ಯೆಗಳಿಗೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಈ ನಿಟ್ಟಿನಲ್ಲಿ ಸಿಎಂ ಜೊತೆ ಸಮಾಲೋಚನೆ ಮಾಡಲಾಗುವುದು ಎಂದರು.
ಸಿದ್ದರಾಮಯ್ಯ ಅವರು ಎರಡನೇ ಸಲ ಸಿಎಂ ಆಗಿದ್ದಾಗಿನಿಂದ ಹಲವಾರು ಸವಾಲುಗಳು ಎದುರಾಗುತ್ತಲೇಯಿದ್ದು, ಹಗರಣ, ವಿವಾದಗಳಿಂದಾಗಿ ಪೂಜಾರಿಗಳ ಸಮಸ್ಯೆ ಬಗೆಹರಿಸುವ ಕೆಲಸವು ಸಾಧ್ಯವಾಗಿಲ್ಲ, ಸಿಎಂ ಅವರ ಸಮಯ ಪಡೆದು ಸಮಸ್ಯೆಗಳಿಗೆ ಪರಿಹಾರಕ್ಕೆ ಕ್ರಮ ವಹಿಸಲಾಗುವುದು. ದೇವಸ್ಥಾನಗಳ ಆಸ್ತಿ ದೇವಾಲಯಕ್ಕೆ ನೋಂದಣಿಇ ಮಾಡಿಸುವ ಕೆಲಸ ವನ್ನು ಸರ್ಕಾರ ಮಾಡಿಸುತ್ತಿದೆ. ದೇವಸ್ಥಾನ, ಮಸೀದಿ, ಚರ್ಚ್ ಯಾವುದೇ ಇರಲಿ ಅವರ ಆಸ್ತಿ ಅವರಿಗೆ ಕೊಡಿಸುತ್ತೇವೆ ಇದಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.