ತಾಯಿ ಋಣ ತೀರಿಸಲು ಯಾರಿಗೂ ಸಾಧ್ಯವಿಲ್ಲ: ಕಾಶಿ ಶ್ರೀ

| Published : Sep 01 2025, 01:04 AM IST

ತಾಯಿ ಋಣ ತೀರಿಸಲು ಯಾರಿಗೂ ಸಾಧ್ಯವಿಲ್ಲ: ಕಾಶಿ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಭಕ್ತರು ಮಠಕ್ಕೆ ಹಲವು ರೀತಿಯ ದಾನ ಮಾಡುತ್ತಾರೆ, ಆದರೆ ಮಠಕ್ಕೆ ಮಕ್ಕಳನ್ನು ದಾನ ಮಾಡುವ ಪರಂಪರೆ ಬಹಳ ವಿರಳ.

ಕಾಶಿ ಪೀಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಕನ್ನಡಪ್ರಭ ವಾರ್ತೆ ಸಿರುಗುಪ್ಪ

ಭಕ್ತರು ಮಠಕ್ಕೆ ಹಲವು ರೀತಿಯ ದಾನ ಮಾಡುತ್ತಾರೆ, ಆದರೆ ಮಠಕ್ಕೆ ಮಕ್ಕಳನ್ನು ದಾನ ಮಾಡುವ ಪರಂಪರೆ ಬಹಳ ವಿರಳ. ಪ್ರಭುದೇವರನ್ನು ಮಠಕ್ಕೆ ನೀಡಿದ ತಾಯಿಋಣ ತೀರಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಕಾಶಿ ಪೀಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಶ್ರೀಸದ್ಧರ್ಮ ಜ್ಞಾನ ಚೇತನ ಆವರಣದ ಹೊಸಮಠದಲ್ಲಿ ಭಾನುವಾರ ನಡೆದ ಲಿಂಗೈಕ್ಯ ಕಂಬಾಳಿಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳ ಪಂಚಮ ದಿನದ ಗಣಾರಾಧನೆ ಕಾರ್ಯಕ್ರಮದಲ್ಲಿ ಧರ್ಮ ಸಂದೇಶ ನೀಡಿದರು.ಬಾಳೆಗೊನೆ ತಾನು ಬೆಳೆದು ಹೂ, ಹಣ್ಣು, ಕಾಯಿ ಬಿಟ್ಟು ಸಮಾಜಕ್ಕೆ ಕೊಡುತ್ತದೆ. ಅಲ್ಲದೆ ಸಾಯುವ ಮುನ್ನ ತನ್ನ ಮರಿಯನ್ನು ಬಿಟ್ಟು ಹೋಗುತ್ತದೆ. ಅದೇ ರೀತಿ ಗುರುಗಳು ತಮ್ಮ ಪರಂಪರೆ ಮುಂದುವರೆಸಲು ಶಿಷ್ಯ ಎಂಬ ಮರಿಯನ್ನು ಬಿಟ್ಟು ಹೋಗುತ್ತಾರೆ ಎಂದರು.ಆಸೆ-ಆಮಿಷಗಳಿಗೆ ಧರ್ಮ ಒಡೆಯುವವರಿಗೆ ಇಂದಲ್ಲ ನಾಳೆ ತಕ್ಕಶಾಸ್ತಿ ಇದೆ ಎಂದು ಎಮ್ಮಿಗನೂರು ಹಂಪಿ ಸಾವಿರಮಠ ವಾಮದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಕಂಬಾಳಿಮಠ ಪುತ್ರವರ್ಗ ಮಠ ಆಗಿರುವುದರಿಂದ ಉತ್ತರಾಧಿಕಾರಿಗಳು ಗೃಹಸ್ಥ ಜೀವನಕ್ಕೆ ಸೇರಿ ಜೀವನ ಸಾರ ಅರಿಯಬೇಕು ಎಂದರು.ಮಠ ಪರಂಪರೆ ಹಾಗೂ ಗುರು ಪರಂಪರೆ ಎರಡೂ ಒಂದೇ, ಶರೀರ ಸಮಾಜಕ್ಕೆ ಅರ್ಪಿಸುವ ಗುರುಗಳು ಸಮಾಜಕ್ಕಾಗಿ ಸಕಲವನ್ನು ತ್ಯಾಗ ಮಾಡಿ ಮಾರ್ಗದರ್ಶನ ಮಾಡುತ್ತಾರೆ ಎಂದು ಹೇಳಿದರು.ಹೊಸಮಠಕ್ಕೆ ಉತ್ತರಾಧಿಕಾರಿಯಾಗಿ ಪ್ರಭುದೇವರು ಕಂಬಾಳಿಮಠ ಇವರನ್ನು ಘೋಷಿಸಿ ಸಮಾಜಕ್ಕೆ ಅರ್ಪಿಸಿದರು.ರೌಡಕುಂದಿ ಸಂಸ್ಥಾನ ಮಠದ ಶಿವಯೋಗಿ ಶಿವಾಚಾರ್ಯ, ಸಿರುಗುಪ್ಪ ಬಸವ ಪೀಠದ ಬಸವಭೂಷಣ ಸ್ವಾಮೀಜಿ, ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದು ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟು ಆಶೀರ್ವಚನ ನೀಡಿದರು.ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ, ಅಧ್ಯಕ್ಷ ಚೊಕ್ಕ ಬಸವನಗೌಡ, ಕೊಪ್ಪಳ ಮಾಜಿ ಸಂಸದ ಶಿವರಾಮೇಗೌಡ, ಮಾಜಿ ಶಾಸಕ ಚಂದ್ರಶೇಖರ ಸ್ವಾಮಿ, ಮುಖಂಡರಾದ ಜ್ಞಾನಾನಂದ ಸ್ವಾಮಿ, ರಾಜಾ ಪಂಪನಗೌಡ, ಮೋಕ ಬಸವರಾಜ ಸ್ವಾಮಿ, ವಕೀಲ ಮಲ್ಲಿಕಾರ್ಜುನ ಸ್ವಾಮಿ ಅಲ್ಲದೆ ವಿವಿಧ ಗ್ರಾಮಗಳ ಅಪಾರ ಭಕ್ತರು ಭಾಗವಹಿಸಿದ್ದರು.

ಪುಣ್ಯಸ್ಮರಣೆ ಅಂಗವಾಗಿ ಶ್ರೀಗಳ ಕರ್ತೃ ಗದ್ದಿಗೆಗೆ ವಿಶೇಷ ಪೂಜೆ, ರುದ್ರಾಭಿಷೇಕ ಹಾಗೂ ವಿವಿಧ ವಿಧಿ ವಿಧಾನದ ಪೂಜಾ ಕಾರ್ಯಕ್ರಮಗಳು ಜರುಗಿದವು.