ತಾಯಿಯ ಋಣ ಯಾರಿಂದಲೂ ತೀರಿಸಲು ಸಾಧ್ಯವಿಲ್ಲ

| Published : Apr 24 2024, 02:16 AM IST

ಸಾರಾಂಶ

ತಾಯಿ ದೇವರಾಗಬಹುದು, ಆದರೆ ದೇವರು ತಾಯಿಯಾಗಲು ಸಾಧ್ಯವಿಲ್ಲ

ಮುಂಡರಗಿ: ಈ ಜಗತ್ತಿನಲ್ಲಿ ಯಾರ ಋಣ ಬೇಕಾದರೂ ತೀರಿಸಬಹುದು, ಆದರೆ ಹೆತ್ತ ತಾಯಿಯ ಋಣ ಯಾರಿಂದಲೂ ತೀರಿಸಲು ಸಾಧ್ಯವಿಲ್ಲ. ತಾಯಿಗೆ ತಾಯಿಯೇ ಸಾಟಿಯೇ ಹೊರತು ಇನ್ನೊಬ್ಬರಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಅವರು ಮಂಗಳವಾರ ಮುಂಡರಗಿ ಅನ್ನದಾನೀಶ್ವರ ಮಠದಲ್ಲಿ ಅಕ್ಕಮಹಾದೇವಿ ಹಾಗೂ ಅಲ್ಲಮಪ್ರಭು ಜಯಂತಿ ಹಾಗೂ ಶ್ರೀಮಠದ 9ನೇ ಪೀಠಾಧಿಪತಿ ವೆಂಕಟಾಪೂರ ಅಜ್ಜನವರ 57ನೇ ಪುಣ್ಯ ಸ್ಮರಣೋತ್ಸವ ಹಾಗೂ ಅವ್ವ ಸೇವಾಟ್ರಸ್ಟ್‌ ವತಿಯಿಂದ ವಿಶೇಷ ಶಿವಾನುಭವ ಕಾರ್ಯಕ್ರಮದ ಪಾಲ್ಗೊಂಡು ಮಾತನಾಡಿದರು.

ತಾಯಿ ದೇವರಾಗಬಹುದು, ಆದರೆ ದೇವರು ತಾಯಿಯಾಗಲು ಸಾಧ್ಯವಿಲ್ಲ.ಈ ಸ್ಥಾನಕ್ಕೆ ಯಾರೂ ಸಮವಲ್ಲ. ನಮ್ಮನ್ನು ಹೊತ್ತ, ಹೆತ್ತು,ಸಾಕಿ, ಸಲುಹಿ, ದೊಡ್ಡವರನ್ನಾಗಿ ಮಾಡಿದ ನಮ್ಮ ತಂದೆ ತಾಯೆಂದಿರನ್ನು ಅವರ ಕೊನೆಗಾಲದಲ್ಲಿ ಪ್ರೀತಿ, ವಿಶ್ವಾಸ, ಗೌರವ, ಆದರಾತಿತ್ಯದಿಂದ ನೋಡಿಕೊಳ್ಳಬೇಕು. ಹರಪನಹಳ್ಳಿ ಶಾಸಕಿ ಲತಾ ಮತ್ತು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸೌಭಾಗ್ಯ ಇತರ ಮಹಿಳೆಯರಿಗೆ ಮಾದರಿಯಾಗಲಿ. ಸಂಸ್ಕಾರ ದೊರೆತ ಮಕ್ಕಳು ಜೀವನದಲ್ಲಿ ಒಳ್ಳೆಯವರಾಗಿ ಬಾಳುವುದರ ಜತೆಗೆ ಇತರರನ್ನು ಒಳ್ಳೆಯ ನಾಗರಿಕರನ್ನಾಗಿ ಮಾಡುತ್ತಾರೆ.ಒಬ್ಬ ಒಳ್ಳೆಯ ತಾಯಿ 100 ಜನ ಶಿಕ್ಷಕರಿಗೆ ಸಮಾನವಾಗಬಲ್ಲಳು. ಅನ್ನದಾನೀಶ್ವರ ವಿದ್ಯಾಸಮಿತಿ ಶತಮಾನೋತ್ಸವ ಹೊಸ್ತಿಲಲ್ಲಿದ್ದು, ಅದಕ್ಕೆ ಬೇಕಾಗುವ ಸಹಾಯ,ಸೌಲಭ್ಯ ನೀಡುವುದಾಗಿ ತಿಳಿಸಿದರು.

ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ ಮಾತನಾಡಿ, ಮಹಿಳೆಯರು ಮನಸ್ಸು ಮಾಡಿದರೆ ಪ್ರಾಮಾಣಿಕವಾಗಿ ಸಮಾಜಮುಖಿ ಕಾಳಜಿ ಹೊಂದಿದರೆ ಏನಾದರೂ ಸಾಧಿಸಬಹುದು ಎನ್ನುವುದಕ್ಕೆ ಹರಪನಹಳ್ಳಿ ಜನತೆ ತಮ್ಮನ್ನು ಜಾತಿ, ಹಣ, ಬೇಧ ಇಲ್ಲದೆ ಆಯ್ಕೆಗೊಳಿಸಿದ್ದೇ ಒಂದು ಉದಾಹರಣೆ. ಶ್ರೀಮಠ ಅಧ್ಯಾತ್ಮಿಕವಾಗಿ, ಶೈಕ್ಷಣಿಕವಾಗಿ ಬಡ ಮಕ್ಕಳಿಗೆ ಸಹಾಯವಾಗಿದೆ. ಉತ್ತರ ಕರ್ನಾಟಕದ ಬಹುತೇಕ ಮಠಗಳು ಇಂತಹ ಸೇವೆಯಲ್ಲಿ ತೊಡಗಿವೆ ಎಂದರು.

ಅವ್ವ ಸೇವಾ ಟ್ರಸ್ಟ್ ಕಾರ್ಯದರ್ಶಿ ಶಶಿ ಸಾಲಿ ಮಾತನಾಡಿದರು. ನಿರಂಜನ ದೇವರು ಅಲ್ಲಮಪ್ರಭು ಕುರಿತು ಮತ್ತು ವಿಶ್ರಾಂತ ಪ್ರಾಚಾರ್ಯ ಎಸ್.ಬಿ. ಕರಿಭರಮಗೌಡರ ವೆಂಕಟಾಪೂರ ಅಜ್ಜನವರ ಕುರಿತು ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ರಾಜ್ಯಕ್ಕೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದ ಸೌಭಾಗ್ಯ ಬೀಳಗಿಮಠ ಮತ್ತು ಅಕ್ಕನಬಳಗದ ಹಿರಿಯ ಸದಸ್ಯರಿಗೆ ಸನ್ಮಾನಿಸಲಾಯಿತು.

ಸಾನ್ನಿಧ್ಯ ವಹಿಸಿದ್ದ ಜ. ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ಮುಂಡರಗಿ ಅನ್ನದಾನೀಶ್ವರ ಮಠ ಅನೇಕ ಶರಣರ,ದಾರ್ಶನಿಕರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು, ಇಂದು ಅಕ್ಕಮಹಾದೇವಿ ಹಾಗೂ ಅಲ್ಲಮಪ್ರಭು ಜಯಂತಿ ಹಾಗೂ ಶ್ರೀಮಠದ 9ನೇ ಪೀಠಾಧಿಪತಿಯಾಗಿ ಮಠದ ಏಳ್ಗೆಗಾಗಿ ಭದ್ರ ಬುನಾದಿ ಹಾಕಿರುವ ವೆಂಕಟಾಪೂರ ಅಜ್ಜನವರ ಸ್ಮರಣೋತ್ಸವ ಆಚರಿಸುವುದರ ಜೊತೆಗೆ ಮಾತೋಶ್ರೀ ಗುರಮ್ಮತಾಯಿ ಹೊರಟ್ಟಿಯವರ ಹೆಸರಿನಲ್ಲಿ ವಿಶೇಷ ಶಿವಾನುಭವ ಆಚರಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಅಳವಂಡಿ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮಹಾಲಿಂಗಸ್ವಾಮೀಜಿ, ಡಾ. ಬಸವರಾಜ ಧಾರವಾಡ, ಕರಬಸಪ್ಪ ಹಂಚಿನಾಳ, ಆರ್.ಬಿ.ಡಂಬಳಮಠ, ವೀರನಗೌಡ ಗುಡದಪ್ಪನವರ, ಆರ್.ಎಲ್.ಪೋಲಿಸಪಾಟೀಲ, ಎಸ್.ಎಂ. ಅಗಡಿ, ಎಸ್.ಎಸ್. ಗಡ್ಡದ, ಎಸ್.ಬಿ. ಗಿಂಡಿಮಠ, ಚೇತನ ಹಿರೇಮಠ, ಡಿ.ಜಿ. ಪೂಜಾರ, ಎಂ.ಎಸ್. ಪೂಜಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಡಾ.ಬಿ.ಜಿ. ಜವಳಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಎಸ್.ಎಸ್.ಇನಾಮತಿ ನಿರೂಪಿಸಿದರು.