ನನ್ನಿಂದ ಮೋದಿ ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ: ಕೆ.ಎಸ್.ಈಶ್ವರಪ್ಪ

| Published : May 03 2024, 01:05 AM IST / Updated: May 03 2024, 08:45 AM IST

KS Eshwarappa
ನನ್ನಿಂದ ಮೋದಿ ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ: ಕೆ.ಎಸ್.ಈಶ್ವರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ನರೇಂದ್ರ ಮೋದಿ ಅವರ ಪೋಟೋ ಅಷ್ಟೇ ಅಲ್ಲ. ಅವರನ್ನು ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೇನೆ. ವಿಶ್ವ ನಾಯಕ ಮೋದಿ ಪೋಟೋ ಬಳಕೆ ಮಾಡಿಕೊಳ್ಳುವ ಅಧಿಕಾರ ದೇಶದ ಎಲ್ಲರಿಗೂ ಇದೆ ಎಂದು ಈಶ್ವರಪ್ಪ ಹೇಳಿದರು.

 ಶಿವಮೊಗ್ಗ :  ಮೋದಿ ಪೋಟೋ ಬಳಕೆ ಮಾಡಬಾರದು ಎಂಬ ಬಿಜೆಪಿಯವರ ಚಿಂತನೆಗೆ ಹಿನ್ನಡೆಯಾಗಿದೆ. ನನ್ನಿಂದ ಮೋದಿಯನ್ನು ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಲೋಕಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನರೇಂದ್ರ ಮೋದಿ ಅವರ ಪೋಟೋ ಅಷ್ಟೇ ಅಲ್ಲ. ಅವರನ್ನು ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೇನೆ. ವಿಶ್ವ ನಾಯಕ ಮೋದಿ ಪೋಟೋ ಬಳಕೆ ಮಾಡಿಕೊಳ್ಳುವ ಅಧಿಕಾರ ಈಶ್ವರಪ್ಪರಿಗೆ ಮಾತ್ರ ಅಲ್ಲ, ಭಾರತ ದೇಶದ 140 ಕೋಟಿ ಜನಕ್ಕೂ ಮೋದಿ ಪೋಟೋ ಬಳಕೆ ಮಾಡಿಕೊಳ್ಳುವುದಕ್ಕೆ ಅವಕಾಶ ಇದೆ. ಇದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು. ಮೋದಿಗೆ ಈ ರೀತಿ ಅಪಮಾನ ಮಾಡಬಾರದು ಎಂದು ಹರಿಹಾಯ್ದರು.

ರಾಮಮಂದಿರ ನಿರ್ಮಾಣ ವಿಚಾರದಲ್ಲಿ ನ್ಯಾಯಾಲಯದಲ್ಲಿ ಮೊದಲು ದಿನಾಂಕ ಸಿಕ್ತು ನಂತರ ನ್ಯಾಯ ಸಿಕ್ತು. ಮೋದಿ ಪೋಟೋ ಬಳಸಲು ತೀರ್ಪು ಸಿಕ್ಕಿರುವುದು ನನ್ನ ಭಾಗ್ಯ. ನರೇಂದ್ರ ಮೋದಿ ಅವರ ಪೋಟೊ ಬಳಕೆ ಮಾಡಬಾರದು ಎಂಬ ಬಿಜೆಪಿ ಚಿಂತನೆಗೆ ಹಿನ್ನಡೆಯಾಗಿದೆ. ಚುನಾವಣೆಗೆ ನರೇಂದ್ರ ಮೋದಿಯವರ ಪೋಟೋವನ್ನು ಸಂಪೂರ್ಣ ವಾಗಿ ಬಳಸುತ್ತೇನೆ. ಈ ಚುನಾವಣೆಯಲ್ಲಿ ಗೆದ್ದ ಬಳಿಕ ನರೇಂದ್ರ ಮೋದಿ ಪ್ರಧಾನಿಯಾಗುವುದಕ್ಕೆ ಕೈ ಎತ್ತುತ್ತೇನೆ ಎಂದು ಹೇಳಿದರು.

ಶಿರಾಳಕೊಪ್ಪದಲ್ಲಿ ಸಭೆಗೆ ಅಡ್ಡಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶಿರಾಳಕೊಪ್ಪದಲ್ಲಿ ಪ್ರಜಾಪ್ರಭುತ್ವಕ್ಕೆ ಅಪಮಾನವಾಗುವ ರೀತಿಯಲ್ಲಿ ಬಿಜೆಪಿ ನಾಯಕರು ನಡೆದುಕೊಂಡಿ ದ್ದಾರೆ. ಪ್ರಜಾಭುತ್ವದಲ್ಲಿ ಯಾವುದೇ ವ್ಯಕ್ತಿ ಚುನಾವಣೆಗೆ ನಿಲ್ಲುವ ಅಧಿಕಾರ ಇರುತ್ತದೆ. ಚುನಾವಣೆಗೆ ಸ್ಪರ್ಧೆ ಮಾಡುವ ವ್ಯಕ್ತಿ ತನಗೆ ಯಾಕೆ ಮತ ಕೊಡಬೇಕು ಎಂದು ಹೇಳುವುದಕ್ಕೆ ಪೂರ್ಣ ಸ್ವತಂತ್ರವೂ ಇದೆ. ಆದರೆ, ಬೇರೆ ಯಾರು ಪ್ರಚಾರ ಮಾಡಬಾರದು ಎಂದು ಗೂಂಡಾ ರಾಜಕೀಯ ಮೂಲಕ ತಡೆಯುವ ಪ್ರಯತ್ನ ಮಾಡಿದ್ದಾರೆ ಎಂದು ದೂರಿದರು.

ನನ್ನ ಸ್ನೇಹಿತರು, ಹಿತೈಷಿಗಳು ಶಿರಾಳಕೊಪ್ಪದಲ್ಲಿ ಸಭೆ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಂಡು ಚುನಾವಣೆ ಆಯೋಗದ ಅಧಿಕಾರಿಗಳಿಂದ ಪರವಾನಿಗೆಯನ್ನೂ ಪಡೆದಿದ್ದರು. ಆದರೆ, ಸಭೆ ನಡೆಸುವ ಸಂದರ್ಭದಲ್ಲಿ ಕೆಲ ಗೂಂಡಾಗಳು ಹೋಗಿ ಇಲ್ಲಿ ಸಭೆ ಮಾಡೋಂಗಿಲ್ಲ, ಇಲ್ಲಿ ಕೂರಂಗಿಲ್ಲ ಎಂದು ಸಭೆಗೆ ಸೇರಿದ ಮಹಿಳೆಯರನ್ನು ಓಡಿಸುವ ಪ್ರಯತ್ನ ಮಾಡಿದ್ದಾರೆ. ಆದರೂ ಕೂಡ ದೊಡ್ಡ ರಸ್ತೆ ನಡುವೆ ನಿಂತು ಸಾರ್ವಜನಿಕವಾಗಿ ಮಾತನಾಡಲು ಅವಕಾಶ ಮಾಡಿಕೊಟ್ಟರು. ಈ ರೀತಿ ಗೂಂಡಾಗಳಿಗೆ ತಕ್ಕ ಪಾಠ ಕಲಿಸುತ್ತೇವೆ. ನಾನೆಲ್ಲ ನಿಮ್ಮನ್ನೆ ಬೆಂಬಲಿಸುತ್ತೇವೆ ಎಂದು ನೆರೆದಿದ್ದ ಸಾವಿರಾರು ಮಂದಿ ಹೇಳಿದ್ದು ನನ್ನ ಗೆಲುವಿನ ವಿಶ್ವಾಸ ಹೆಚ್ಚಿಸಿದೆ ಎಂದರು.

ದೇವಸ್ಥಾನ ಸಮಿತಿಯವರೂ ನಮಗೆ ಅವಕಾಶ ಕೊಟ್ಟಿದ್ದರು. ಇಲಾಖೆಯೂ ನಮಗೆ ಅನುವು ಮಾಡಿ ಕೊಟ್ಟಿತ್ತು. ಆದರೆ, ಕೆಲ ಕಿಡಿಗೇಡಿಗಳು ದೇವಸ್ಥಾನ ಸಮಿತಿಯವರ ಬಳಿ ಹೋಗಿ ನಿಮಗೆ ಒಂದು ಕೋಟಿ ಕೊಡಿಸುತ್ತೇವೆ ಎಂದು ಹೇಳಿ ಗೂಂಡಾಗಿರಿ ನಡೆಸಿದ್ದಾರೆ. ನನ್ನ 40 ವರ್ಷದಲ್ಲಿ ಈ ರೀತಿ ಯಾವ ಪಕ್ಷವೂ ಗೂಂಡಾಗಿರಿ ರಾಜಕೀಯ ಮಾಡಿದ್ದು ನಾನು ನೋಡಿಲ್ಲ. ಸೋಲುತ್ತೇನೆ ಎಂಬ ಭಯದಿಂದ ಈ ರೀತಿ ಕುತಂತ್ರ ರಾಜಕೀಯ ಮಾಡುತ್ತಿರುವುದು ಖಂಡಿನೀಯ. ಮುಂದೆ ಏನಾದರೂ ಇದೇ ರೀತಿ ಆದರೆ ನಾನು ಬೇರೆ ರೀತಿ ಉತ್ತರ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಆಕ್ಷೇಪಕ್ಕೆ ಕೋರ್ಟ್‌ ಸೊಪ್ಪಾಕಿಲ್ಲ!

ಈಶ್ವರಪ್ಪ ಮೋದಿ ಪೋಟೋವನ್ನು ಬಳಕೆ ಮಾಡುತ್ತಿದ್ದಾರೆ. ಇದನ್ನು ತಡೆಯಬೇಕು ಎಂದು ಬಿಜೆಪಿಯವರು ಕೋರ್ಟ್‌ಗೆ, ಚುನಾವಣೆ ಆಯೋಗಕ್ಕೆ ದೂರು ಕೊಟ್ಟಿದ್ದರು. ಆದರೆ, ಚುನಾವಣೆ ಆಯೋಗ, ಕೋರ್ಟ್‌ ಬಿಜೆಪಿಯವರ ಆಕ್ಷೇಪಕ್ಕೆ ಸೊಪ್ಪಾಕಿಲ್ಲ ಎಂದು ಕುಟುಕಿದರಲ್ಲದೆ, ಗಣಪತಿ ಹಿಂದೂ ಸಮಾಜದ ಆರಾಧ್ಯ ದೈವ. ಗಣಪತಿ, ಈಶ್ವರಪ್ಪ ಪೋಟೋ ಬಳಸಬೇಡಿ ಎಂದು ಕೋರ್ಟ್‌ ಹೋಗಲು ಸಾಧ್ಯವೇ? ಹಾಗೆ ಮೋದಿಯ ಪೋಟೋವೂ ಹೌದು. ಅವರನ್ನು ಪೋಟೋ ಬಳಕೆಗೆ ಪೂರ್ಣ ಅಧಿಕಾರ ಸಿಕ್ಕಿರುವುದು ಸಂತಸ ತಂದಿದೆ. ಬರುವ ದಿನದಲ್ಲಿ ಕೇವಲ ಮೋದಿ ಪೋಟೊ ಬಳಕೆ ಮಾಡುವುದಲ್ಲ. ಅವರ ಹೋರಾಟ, ಸಿದ್ಧಾಂತವನ್ನು ಮುಂದುವರೆಸಿಕೊಂಡು ಹೋಗುತ್ತೇನೆ ಎಂದರು.

ಶಿವಮೊಗ್ಗದಲ್ಲಿ ಕೆ.ಎಸ್‌.ಈಶ್ವರಪ್ಪ ಭರ್ಜರಿ ಪ್ರಚಾರ

ಶಿವಮೊಗ್ಗ: ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್‌.ಈಶ್ವರಪ್ಪ ಅವರು ಗುರುವಾರ ನಗರದ ಹಲವಡೆ ಭರ್ಜರಿ ಪ್ರಚಾರ ನಡೆಸಿದರು.

ಶಿವಮೊಗ್ಗ ನಗರದ ಶಾಹಿ ಗಾರ್ಮೆಂಟ್ಸ್, ಟೊಯೋಟಾ ಶೋರೂಮ್, ಸುಪ್ರೀಂ ಬಜಾಜ್ ಶೋರೂಮ್ ಹಾಗೂ ಸಾಗರ ರಸ್ತೆಯ ಇಂಡಸ್ಟ್ರಿಯಲ್ ಏರಿಯಾದ ಕಾರ್ಖಾನೆಗಳಿಗೆ ಭೇಟಿ ನೀಡಿ ಸಿಬ್ಬಂದಿ, ಕಾರ್ಮಿಕರಲ್ಲಿ ಮತ ಯಾಚನೆ ನಡೆಸಿದರು.

ಇನ್ನೊಬ್ಬ ಈಶ್ವರಪ್ಪ ಇದ್ದಾರೆ ಎಚ್ಚರ!: ಮಾಚೇನಹಳ್ಳಿ ಶಾಹಿ ಗಾರ್ಮೆಂಟ್ಸ್‌ನಲ್ಲಿ ಮತ ಯಾಚನೆ ವೇಳೆ ಮಾತನಾಡಿದ ಕೆ.ಎಸ್‌.ಈಶ್ವರಪ್ಪ, ನಾನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೇನೆ. ನನ್ನ ಸ್ಪರ್ಧೆಗೆ ಕಾರಣ ನೀವೆಲ್ಲಾ ಮಾಧ್ಯಮಗಳಲ್ಲಿ ನೋಡಿದ್ದೀರ. ಆದರೆ, ಚುನಾವಣೆಯಲ್ಲಿ ಸೋಲಿಸುವ ಸಲುವಾಗಿ ವಿರೋಧಿಗಳು ಮತ್ತೊಬ್ಬ ಡಿ.ಎಸ್‌. ಈಶ್ವರಪ್ಪ ಎನ್ನುವ ವ್ಯಕ್ತಿಯನ್ನು ನಿಲ್ಲಿಸಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ನೀವೆಲ್ಲಾ ನನಗೆ ಮತ ಹಾಕುವಾಗ ಎಚ್ಚರದಿಂದ ನನ್ನ ಗುರುತು ‘ಕಬ್ಬಿನ ಜೊತೆ ಇರುವ ರೈತ ಚಿಹ್ನೆ’ ಕ್ರಮ ಸಂಖ್ಯೆ 8 ಕೆ.ಎಸ್.ಈಶ್ವರಪ್ಪ ಹೆಸರಿಗೆ ಮತ ಹಾಕಿ ಎಂದು ಮನವಿ ಮಾಡಿದರು.

ಪ್ಲೀಸ್ ಒಂದು ದಿನ ರಜೆ ಕೊಡಿ: ಮತಯಾಚನೆ ವೇಳೆ ಶೋರೂಮ್, ಗಾರ್ಮೆಂಟ್ಸ್ ಹಾಗೂ ಕಾರ್ಖಾನೆಗಳ ಮಾಲೀಕರ ಬಳಿ ಕೆ.ಎಸ್.ಈಶ್ವರಪ್ಪ ನನ್ನ ಪರ ಪ್ರಚಾರ ಮಾಡಲು ಸಿಬ್ಬಂದಿಗೆ ಒಂದು ದಿನ ರಜೆ ಕೊಡುವಂತೆ ಮನವಿ ಮಾಡಿದರು. ಈಶ್ವರಪ್ಪ ಮನವಿ ಮೇರೆಗೆ ಮಾಲೀಕರು‌ ನಿಮ್ಮ ಪರ ಪ್ರಚಾರ ಮಾಡಲು ಸಿಬ್ಬಂದಿ ಹಾಗೂ ಕಾರ್ಮಿಕರಿಗೆ ರಜೆ ಕೊಡುವುದಾಗಿ ಭರವಸೆ ನೀಡಿದರು.

ಈಶ್ವರಪ್ಪ ಕಚೇರಿ ಎದುರು ವಾಮಾಚಾರ!

ಶಿಕಾರಿಪುರ: ಶಿಕಾರಿಪುರ ಪಟ್ಟಣದಲ್ಲಿರುವ ಕೆ.ಎಸ್.ಈಶ್ವರಪ್ಪ ಅವರ ಚುನಾವಣಾ ಕಚೇರಿಯ ಎದುರು ಬುಧವಾರ ರಾತ್ರಿ ವಾಮಾಚಾರ ಮಾಡಲಾಗಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರು ಕಳೆದ ವಾರ ಶಿಕಾರಿಪುರದಲ್ಲಿ ರಾಷ್ಟ್ರಭಕ್ತರ ಬಳಗದ ವತಿಯಿಂದ ಚುನಾವಣಾ ಕಚೇರಿ ಆರಂಭಿಸಿದ್ದರು. ಬುಧವಾರ ರಾತ್ರಿ ಕಚೇರಿಯ ಬಾಗಿಲ ಮುಂದೆ ಕುಂಕುಮ, ನಿಂಬೆಹಣ್ಣು, ಅರಿಶಿಣ ಸೇರಿದಂತೆ ಹಲವು ವಸ್ತುಗಳನ್ನು ಇರಿಸಲಾಗಿದೆ. ನಿಂಬೆಹಣ್ಣಿಗೆ ತ್ರಿಶೂಲ ಚುಚ್ಚಲಾಗಿದ್ದು, ಒಂದು ನಿಂಬೆ ಹಣ್ಣಿನ ಮೇಲೆ ಕೆಎಸ್ ಇ ಎಂದು ಬರೆಯಲಾಗಿದೆ. ಎರಡು ಮರದ ಗೊಂಬೆಯನ್ನು ದಾರದಿಂದ ಸುತ್ತಿ ಬಂಧ ಮಾಡಿಸಲಾಗಿದೆ. ಮೇಲ್ನೋಟಕ್ಕೆ ಇದು ವಾಮಾಚಾರದಂತೆ ಗೋಚರಿಸಿದೆ.ಬೆಳಗ್ಗೆ ಎಂದಿನಂತೆ ರಾಷ್ಟ್ರಭಕ್ತರ ಬಳಗದ ಕಾರ್ಯಕರ್ತರು ಬಾಗಿಲು ತೆರೆಯಲು ಆಗಮಿಸಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಮಾಹಿತಿಯನ್ನು ಈಶ್ವರಪ್ಪ ಅವರಿಗೆ ತಿಳಿಸಲಾಗಿದೆ. ಇದನ್ನು ತೆಗೆಸುವಂತೆ ಈಶ್ವರಪ್ಪನವರು ಸೂಚಿಸಿದ ಮೇರೆಗೆ ಕಾರ್ಯಕರ್ತರು ಎಲ್ಲವನ್ನೂ ತೆಗೆದಿದ್ದಾರೆ. ಇದನ್ನು ಯಾರು ಮಾಡಿಸಿದ್ದು ಎಂದು ಇನ್ನಷ್ಟೇ ಗೊತ್ತಾಗಬೇಕಿದೆ.ಬಿಜೆಪಿಗೆ ಸೋಲಿನ ಭೀತಿ: ಶಿಕಾರಿಪುರದ ತಮ್ಮ ಚುನಾವಣಾ ಕಚೇರಿ ಮುಂದೆ ಸೋಲಿನ ಭೀತಿಯಿಂದ ಬಿಜೆಪಿಯವರು ವಾಮಾಚಾರ ಮಾಡಿಸಿದ್ದಾರೆ ಎಂದು ಸ್ವತಂತ್ರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.

ವಾಮಾಚಾರ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಮುಖಂಡರು ಮತ್ತು ಈ ಕ್ಷೇತ್ರದ ನಾಯಕರು ಈ ಕೃತ್ಯದ ಹಿಂದೆ ಇದ್ದಾರೆ ಎಂಬ ಅನುಮಾನ ನನ್ನದು.ಶಿಕಾರಿಪುರ ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯಾದ್ಯಂತ ನನಗೆ ಸಿಗುತ್ತಿರುವ ಬೆಂಬಲ ಕಂಡು ಅವರು ಕಂಗಾಲಾಗಿದ್ದಾರೆ. ಅವರಿಗೆ ಜನ ಬೆಂಬಲ ಇಲ್ಲ ಎಂದು ಗೊತ್ತಾಗಿದೆ. ವಾಮಾಚಾರದ ಮೂಲಕವಾದರೂ ಗೆಲ್ಲಬೇಕೆಂದು ಈ ರೀತಿಯ ಹೀನಕೃತ್ಯ ನಡೆಸಿದ್ದಾರೆ ಎಂದು ದೂರಿದರು.ಆದರೆ ನ್ಯಾಯ, ನೀತಿ, ಧರ್ಮದ ಹಾದಿಯಲ್ಲಿ ನಡೆಯುವ ನನಗೆ ಇದೆಲ್ಲ ತಾಗುವುದಿಲ್ಲ. ನಾನು ಇಂತಹದ್ದಕ್ಕೆಲ್ಲ ಹೆದರುವುದಿಲ್ಲ. ಧರ್ಮ ಮತ್ತು ದೇವರು ನನ್ನ ಜೊತೆಯಿದ್ದು, ನನ್ನ ಗೆಲುವು ನಿಶ್ಚಿತ ಎಂದರು.