ಸಾರಾಂಶ
ಮಹಿಳೆ ಎಂದರೆ ಬೆಳಕು, ಬಳೆಗೆ ಇರುವ ಶಕ್ತಿ ಯಾರಿಗೂ ತಿಳಿಯದು ಎಂದು ದೇವದುರ್ಗ ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.
ಕನ್ನಡಪ್ರಭ ವಾರ್ತೆ ರಾಯಚೂರುಮಹಿಳೆ ಎಂದರೆ ಬೆಳಕು, ಬಳೆಗೆ ಇರುವ ಶಕ್ತಿ ಯಾರಿಗೂ ತಿಳಿಯದು ಎಂದು ದೇವದುರ್ಗ ಶಾಸಕಿ ಕರೆಮ್ಮ ಜಿ.ನಾಯಕ ಹೇಳಿದರು.ಇಲ್ಲಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಜಿಲ್ಲಾ, ತಾಲೂಕು ಸಮಿತಿಗಳ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ, ಕಾರ್ಯಾಗಾರ ಮತ್ತು ಸಾಧಕರಿಗೆ ಅನರ್ಘ್ಯರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಬಳೆ ಹಾಕಿಕೊಂಡಿದ್ದಾರೆ ಎಂದು ಸಹಜವಾಗಿ ಹೇಳುವವರು ಆ ಬಳೆಯನ್ನು ಧರಿಸುವ ಮಹಿಳೆಯರ ಶಕ್ತಿ ಎಂತದ್ದು ಎನ್ನುವುದು ತಿಳಿದಿಲ್ಲ. ಮಹಿಳೆ ಎಂದರೆ ಸಂಸ್ಕಾರ, ತಾಯಿ ಮಗುವಿಗೆ, ಸಮಾಜ ಹಾಗೂ ಕೆಲಸ ಮಾಡುವ ಸ್ಥಳದಲ್ಲಿ ಅದೇ ಸಂಸ್ಕಾರವನ್ನು ನೀಡುವ ಕೆಲಸವನ್ನು ಮಹಿಳೆ ಮಾಡುತ್ತಿದ್ದಾಳೆ ಎಂದರು.ಮಹಿಳೆಯಾದವಳು ಇಡೀ ತಮ್ಮ ಜೀವನದಲ್ಲಿ ಸಾಕಷ್ಟು ಹೇಳು ಬೀಳುಗಳನ್ನು ಎದುರಿಸುತ್ತಾಳೆ, ಶ್ರಮ ವಹಿಸುತ್ತಾಳೆ, ಅಚಮಾನ ಹಾಗೂ ಕಷ್ಟಗಳನ್ನು ಅನುಭವಿಸುತ್ತಾ ಬದುಕಟ್ಟು ಕಟ್ಟಿಕೊಳ್ಳುತ್ತಾಳೆ. ನನ್ನ ಊರು, ಕುಟುಂಬ ಹಾಗೂ ಸಮಾಜ ಎಂದು ಭಾವಿಸಿ ಕೆಲಸ ಮಾಡುತ್ತಾಳೆ ಅದೇ ರೀತಿ ಸರ್ಕಾರಿ ಸೇವೆಯನ್ನು ನಿಭಾಯಿಸುತ್ತಾಳೆ. ಅವರನ್ನು ಪ್ರೀತಿಯಿಂದ ಅರಿಸಬೇಕು, ಮಹಿಳೆಯರನ್ನು ಗೌರವಿಸಿ, ಪ್ರೀತಿಸಬೇಕು ಎಂದು ಹೇಳಿದರು.ಮನೆ ಹಾಗೂ ಕಚೇರಿಯಲ್ಲಿ ಕೆಲಸ ಮಾಡುವ ಮಹಿಳಾ ನೌಕರರು ವಿಶೇಷ ಸಾಧಕರಾಗಿದ್ದಾರೆ. ತಮ್ಮ ಬದುಕಿನ ಆರು ದಶಕಗಳ ಸುದೀರ್ಘ, ನಿಸ್ವಾರ್ಥದ ಜನ ಸೇವೆಯನ್ನು ಮಾಡುತ್ತಾಳೆ, ಈ ಮಹಿಳಾ ನೌಕರರಿಗೆ ಸಮಾನತೆ ಸ್ಥಾನ-ಮಾನ ನೀಡುವುದರ ಜೊತೆಗೆ ಅವರ ಹಕ್ಕುಗಳನ್ನು ಒದಗಿಸಿಕೊಡುವ ಕೆಲಸವನ್ನು ಸರ್ಕಾರಗಳ ಮಾಡಬೇಕು ಎಂದು ಒತ್ತಾಯಿಸಿದರು. ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷೆ ರೋಶನಿ ಗೌಡ ಮಾತನಾಡಿ, ನಮ್ಮ ಸಂಘಕ್ಕೆ ನೂರು ವರ್ಷಗಳ ಇತಿಹಾಸವಿದೆ. ಸರ್ಕಾರಿ ಸೇವೆಯಲ್ಲಿ ಪುರುಷರಂತೆಯೇ ಸಮಾನವಾಗಿ ಕೆಲಸ ಮಾಡುವ ಮಹಿಳಾ ನೌಕರರಿಗೆ ಸಮಾನ ಅವಕಾಶಗಳು, ಹಕ್ಕುಗಳು, ರಕ್ಷಣೆಯನ್ನು ಕಲ್ಪಿಸಿಕೊಡಬೇಕು. ಅವರ ಆತ್ಮಗೌರವನ್ನು ಹೆಚ್ಚಿಸುವ ಪ್ರಯತ್ನಗಳು ನಡೆಯಬೇಕು, ಮಹಿಳಾ ನಾಯಕತ್ವವನ್ನು ವೃದ್ಧಿಸುವುದು, ಆತ್ಮ ವಿಶ್ವಾಸದಿಂದ ಸ್ವಾಭಿಮಾನಿಯಾಗಿ ಜೀವಿಸುವಂತಹ ವಾತಾವರಣವನ್ನು ಸೃಷ್ಠಿಸುವ ಸದುದ್ದೇಶದಡಿ ಸಂಘ ಕೆಲಸ ಮಾಡುತ್ತಿದೆ ಎಂದರು.ಎಲ್ಲೆಡೆ ಮಹಿಳೆಯರಿಗೆ ಶೇ.50 ರಷ್ಟು ಮೀಸಲು, ತಿಂಗಳಲ್ಲಿ ಒಂದು ದಿನ ವಿಶೇಷ ರಜೆ, ಕೆಲಸ ಮಾಡುವ ಸ್ಥಳದಲ್ಲಿ ಶಿಶುಪಾಲನಾ ಕೇಂದ್ರ, ವಿಶ್ರಾಂತಿ ಕೊಠಡಿಗಳ ಸ್ಥಾಪನೆ, ಮಹಿಳಾ ಅಧಿಕಾರಿಗಳಿಗೆ ಮಹಿಳಾ ವಾಹನ ಚಾಲಕಿಯರ ನೇಮಕ, ಕಾಲಕಾಲಕ್ಕೆ ಆರೋಗ್ಯ ತಪಾಸಣೆ, ಒತ್ತಡದಲ್ಲಿ ಯಾವ ರೀತಿಯಾಗಿ ಕೆಲಸ ನಿಭಾಯಿಸಬೇಕು ಎನ್ನುವುದರ ಕುರಿತ ಸೂಕ್ತ ಮಾರ್ಗದರ್ಶನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಂಘವು ಕೆಲಸ ಮಾಡುತ್ತಿದೆ ಎಂದು ವಿವರಿಸಿದರು.ಸಮಾರಂಭದ ಸಾನಿಧ್ಯವನ್ನು ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿಗಳು ವಹಿಸಿ ಆಶೀರ್ವಚನ ನೀಡಿದರು. ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಸ್ಮಿತಾ ಅಕ್ಕನವರು ಮಾತನಾಡಿದರು.ಕಾಂಗ್ರೆಸ್ ನಾಯಕಿ ಶ್ರೀದೇವಿ ನಾಯಕ, ಸಂಘದ ಸಂಘದ ರಾಜ್ಯ ಗೌರವಾಧ್ಯಕ್ಷೆ ಗೀತಾಮಣಿ, ಜಿಲ್ಲಾಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ್, ಗೌರವ ಕಾರ್ಯದರ್ಶಿ ಗಂಗಮ್ಮ ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿ ವಾಣಿಶ್ರೀ, ಖಜಾಂಚಿ ಸಂಗಮ್ಮ ಪಾಟೀಲ್,ಉಪಾಧ್ಯಕ್ಷೆ ಪಾರ್ವತಿ ಹಿರೇಮಠ, ಈರಮ್ಮ, ತೋಟಮ್ಮ, ಪುಷ್ಪಾ, ಅರುಣಾ ಹಿರೇಮಠ, ಶೃತಿ, ಸುರೇಖಾ, ವಿಮಲಾ ಪಾಲ್ಗೊಂಡಿದ್ದರು.