ನಮ್ಮ ಸಮಸ್ಯೆಗಳನ್ನು ಕೇಳುವವರೇ ಇಲ್ಲ: ದಲಿತರ ಆಕ್ರೋಶ

| Published : Dec 30 2023, 01:15 AM IST

ಸಾರಾಂಶ

ದಲಿತರ ಸಮಸ್ಯೆ ಕೇಳುವವರೇ ಇಲ್ಲ ಎಂದು ತಿಪಟೂರಿನಲ್ಲಿ ನಡೆದ ಎಸ್ಸಿ, ಎಸ್ಟಿ ಕುಂದುಕೊರತೆ ಸಭೆಯಲ್ಲಿ ದಲಿತರು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ದಲಿತರ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದ್ದು ದಲಿತರ ಮೇಲೆ ದೌರ್ಜನ್ಯ, ದಬ್ಬಾಳಿಕೆ, ನಡೆಯುತ್ತಿದ್ದರೂ ನಮಗೆ ನ್ಯಾಯ ಕೊಡಿಸುವವರು ಯಾರು ಇಲ್ಲ. ಅಧಿಕಾರಿಗಳು ಸಭೆಯಲ್ಲಿ ಮಾತ್ರ ನಮ್ಮ ಕುಂದುಕೊರತೆ ವಿಚಾರಿಸುತ್ತಾರೆಯೇ ವಿನಃ ಅದಕ್ಕೆ ಪೂರಕವಾದ ಕೆಲಸಕಾರ್ಯಗಳು ಆಗುತ್ತಿಲ್ಲ ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕಲ್ಪತರು ಸಭಾಂಗಣದಲ್ಲಿ ಶುಕ್ರವಾರ ಉಪವಿಭಾಗಾಧಿಕಾರಿ ಸಪ್ತಾಶ್ರೀ ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರ ಕುಂದುಕೊರತೆಗಳ ಸಭೆಯಲ್ಲಿ ದಲಿತ ಮುಖಂಡರು ಅಧಿಕಾರಿಗಳನ್ನು ಪ್ರಶ್ನಿಸುತ್ತಾ ದಲಿತರ ಸಮಸ್ಯೆಗಳನ್ನು ಬಗೆಹರಿಸಲು ಸಭೆಯನ್ನು ಕರೆಯುತ್ತೀರಾ ಆದರೆ ಸಮಸ್ಯೆಗಳು ಮಾತ್ರ ಬಗೆಹರಿಯುವುದಿಲ್ಲ. ನೂರಾರು ಸಂಖ್ಯೆಯಲ್ಲಿ ತಿಪಟೂರು, ಚಿ.ನಾ.ಹಳ್ಳಿ, ತುರುವೇಕೆರೆ ತಾಲೂಕುಗಳಿಂದ ಸಮಸ್ಯೆ ಒತ್ತು ಜನರು ಬಂದಿದ್ದಾರೆ. ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ದ.ಸಂ.ಸ ಜಿಲ್ಲಾ ಸಂಘಟನಾ ಸಂಚಾಲಕ ನಾಗತೀಹಳ್ಳಿ ಕೃಷ್ಣಮೂರ್ತಿ ಮಾತನಾಡಿ, ನಾಗತೀಹಳ್ಳಿ ಗ್ರಾಮದಲ್ಲಿ ಎರಡು ಎಕರೆ ಸ್ಮಶಾನದ ಜಮೀನು ಎತ್ತಿನಹೊಳೆ ಯೋಜನೆಗೆ ಹೋಗಿದ್ದು ಪರ್ಯಾಯವಾಗಿ ಸ್ಮಶಾನಕ್ಕೆ ಮಂಜೂರು ಮಾಡಿಸಿಕೊಡಬೇಕು. ತಾಲೂಕಿನ ಎಲ್ಲಾ ಗ್ರಾಮಗಳಿಗೂ ಸ್ಮಶಾನ ಮಂಜೂರು ಮಾಡಬೇಕು. ಬಗರ್‌ಹುಕುಂ ಜಮೀನು ಉಳುಮೆ ಮಾಡುತ್ತಿರುವವರಿಗೆ ಮಂಜೂರು ಮಾಡಿಸಿಕೊಡಬೇಕು.

ಆದಿ ಜಾಂಬವ ಸಂಘದ ಪೆದ್ದಿಹಳ್ಳಿ ನರಸಿಂಹಯ್ಯ ಮಾತನಾಡಿ, ದೇವರಹಳ್ಳಿ ಗ್ರಾಮದ ಹಿರಿಯ ನಾಗರೀಕರಾದ ನಂಜಮ್ಮ ಎಂಬುವವರ ಜಮೀನು ತಕರಾರಿದ್ದು ಸರ್ವೆ ಮಾಡಿಸಿ ಪೊಲೀಸ್ ಬಂದೋ ಬಸ್ತ್ ಮಾಡಿಸುವಂತೆ ಮನವಿ ನೀಡಿದ್ದರೂ ತಹಸೀಲ್ದಾರ್‌ ಅವರು ವಿಳಂಬ ಮಾಡುತ್ತಿದ್ದಾರೆಂದು ಉಪವಿಭಾಗಾಧಿಕಾರಿಗಳು ದೂರು ನೀಡಿದರು.

ದಲಿತ ಸಂಘರ್ಷ ಸಮಿತಿ ಮುಖಂಡ ರಘು ಯಗಚೀಕಟ್ಟೆ ಮಾತನಾಡಿ, ಹಲವಾರು ವರ್ಷಗಳಿಂದಲೂ ಪಿಟಿಸಿಎಲ್ ಪ್ರಕರಣಗಳು ಇತ್ಯರ್ಥವಾಗುತ್ತಿಲ್ಲ, ಬಗರ್‌ಹುಕುಂ ಕಮಿಟಿ ಮಾಡದ ಕಾರಣ ಬಗರ್‌ಹುಕುಂ ರೈತರಿಗೆ ತೊಂದರೆಯಾಗುತ್ತಿದ್ದ ಮತ್ತು ಪೋಡಿ ಮುಕ್ತ ಗ್ರಾಮ ಮಾಡಬೇಕೆಂದು ಒತ್ತಾಯಿಸಿದರು.

ಚಿ.ನಾ.ಹಳ್ಳಿ ತಾಲೂಕಿನ ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ದಲಿತ ವಿಕಲಾಂಗಚೇತನ ಮಹಿಳೆ ದೇವಿರಮ್ಮ ಎಂಬುವವರು ನಮ್ಮ ಜಮೀನನ್ನು ಸವರ್ಣಿಯರು ಕಬಳಿಸಿಕೊಂಡಿದ್ದು ಜಮೀನಿನ ಬಗ್ಗೆ ಎಲ್ಲಾ ದಾಖಲಾತಿಗಳಿದ್ದರೂ ನಮಗೆ ಜಮೀನು ಅನುಭವಿಸುವುದಕ್ಕೆ ಆಗುತ್ತಿಲ್ಲ. ತಹಸೀಲ್ದಾರ್, ಪೊಲೀಸ್ ಠಾಣೆ ಹೀಗೆ ಎಲ್ಲಾ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ನಮ್ಮ ತಂದೆಗೆ ವಯಸ್ಸಾಗಿದ್ದು, ನನ್ನ ಮಗ ಬುದ್ದಿಮಾಂದ್ಯನಾಗಿದ್ದು ಬಡ ಕುಟುಂಬವಾಗಿರುವ ನಮಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ನಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿಕೊಂಡರು.

ಅದಕ್ಕೆ ಉಪವಿಭಾಗಾಧಿಕಾರಿ ಚಿ.ನಾಹಳ್ಳಿ ತಹಸೀಲ್ದಾರ್ ಗಮನಕ್ಕೆ ತಂದು ಸ್ಥಳ ಪರಿಶೀಲನೆ ಮಾಡಿ ಆದಷ್ಟು ಬೇಗ ಸಮಸ್ಯೆ ಬಗೆಹರಿಸಿಕೊಡಿ ಎಂದರು.

ಒಟ್ಟಾರೆ ಉಪವಿಭಾಗದ ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ತಾಲೂಕುಗಳಿಂದ ನೂರಾರು ಸಂಖ್ಯೆಯಲ್ಲಿ ದಲಿತ ಮುಖಂಡರು ಭಾಗವಹಿಸಿ ತಮ್ಮ ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಟ್ಟರು. ಕೆಲವರು ಸಾರ್ವಜನಿಕ ಸಮಸ್ಯೆ ಹೇಳಿಕೊಂಡರೆ ಇನ್ನೂ ಕೆಲವರು ತಮ್ಮ ಜಮೀನುಗಳಿಗೆ ಸಂಬಂಧಪಟ್ಟಂತಹ ಸಮಸ್ಯೆಗಳನ್ನು ತೋಡಿಕೊಂಡರು.

ಸಭೆಯಲ್ಲಿ ತಹಸೀಲ್ದಾರ್ ಪವನ್‌ಕುಮಾರ್ ತಾ.ಪಂ. ಇಒ ಸುದರ್ಶನ್, ಗ್ರೇಡ್-೨ ತಹಸೀಲ್ದಾರ್ ಜಗನ್ನಾಥ್, ಸಮಾಜದ ಕಲ್ಯಾಣಾಧಿಕಾರಿ ತ್ರಿವೇಣಿ, ಸೇರಿದಂತೆ ಚಿಕ್ಕನಾಯಕನಹಳ್ಳಿ, ತುರುವೇಕೆರೆ ತಹಶೀಲ್ದಾರ್, ಪೊಲೀಸ್ ಇಲಾಖೆ, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.