ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಿದರೆ ಯಾರಿಗೂ ಸೋಲಿಲ್ಲ

| Published : Aug 26 2024, 01:44 AM IST / Updated: Aug 26 2024, 07:17 AM IST

ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಿದರೆ ಯಾರಿಗೂ ಸೋಲಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಅತಿ ಹೆಚ್ಚು ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸುವ ಮೂಲಕ ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಗೊಳಿಸುವ ಉದ್ದೇಶದಿಂದ ತಾಲೂಕು ಆಡಳಿತ, ಪೊಲೀಸ್ ಇಲಾಖೆ, ವಕೀಲರ ಸಂಘ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಿ ಅಗತ್ಯ ಮಾಹಿತಿ ನೀಡಲಾಗುತ್ತಿದೆ.

 ನಾಗಮಂಗಲ :  ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಎರಡೂ ಕಡೆಯ ಕಕ್ಷಿದಾರರು ಪರಸ್ಪರ ರಾಜೀಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳುವುದರಿಂದ ಯಾರಿಗೂ ಸೋಲಾಗದೆ ಇಬ್ಬರಿಗೂ ಜಯಸಿಕ್ಕಂತಾಗುತ್ತದೆ ಎಂದು ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ಯೋಗೇಶ್ ತಿಳಿಸಿದರು.

ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಸಭಾಂಗಣದಲ್ಲಿ ಸೆ.14ರಂದು ನಡೆಯುವ 3ನೇ ರಾಷ್ಟ್ರೀಯ ಲೋಕ್ ಅದಾಲತ್ ಕುರಿತು ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಅತಿ ಹೆಚ್ಚು ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸುವ ಮೂಲಕ ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಗೊಳಿಸುವ ಉದ್ದೇಶದಿಂದ ತಾಲೂಕು ಆಡಳಿತ, ಪೊಲೀಸ್ ಇಲಾಖೆ, ವಕೀಲರ ಸಂಘ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಸಿ ಅಗತ್ಯ ಮಾಹಿತಿ ನೀಡಲಾಗುತ್ತಿದೆ ಎಂದರು.

ರಾಜೀಯಾಗಬಹುದಾದ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಂಡಲ್ಲಿ ಎರಡೂ ಕಡೆಯ ಕಕ್ಷಿದಾರರಿಗೆ ಬಹಳಷ್ಟು ಅನುಕೂಲವಾಗುವ ಜೊತೆಗೆ, ಕಕ್ಷಿದಾರರು ಪಾವತಿಸಿರುವ ನ್ಯಾಯಾಲಯದ ಪೂರ್ತಿ ಶುಲ್ಕವನ್ನು ಹಿಂದಿರುಗಿಸಲಾಗುವುದು ಎಂದರು.

ಚೆಕ್‌ ಬೌನ್ಸ್ ಪ್ರಕರಣ, ಅಪಘಾತ ಪ್ರಕರಣಗಳಲ್ಲಿ ಪರಿಹಾರ ಕೋರಿ ಸಲ್ಲಿಸಿರುವ ಪ್ರಕರಣಗಳು ಸೇರಿದಂತೆ ಹಲವು ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ. ಈ ಕಾರ್ಯಕ್ರಮವನ್ನು ಕಕ್ಷಿದಾರರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಅದಾಲತ್‌ನಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳುವ ಪ್ರಕರಣಗಳನ್ನು ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ. ಎರಡೂ ಕಡೆಯ ಕಕ್ಷಿದಾರರು ಪರಸ್ಪರ ರಾಜೀಮಾಡಿಕೊಳ್ಳವುದರಿಂದ ಒಬ್ಬರಿಗೆ ಸೋಲು ಮತ್ತೊಬ್ಬರಿಗೆ ಗೆಲುವು ಎಂಬ ಪ್ರಶ್ನೆ ಉದ್ಭವಿಸಿದೆ ಇಬ್ಬರಿಗೂ ಜಯಸಿಕ್ಕಂತಾಗುತ್ತದೆ ಎಂದರು.

ಇಬ್ಬರು ಕಕ್ಷಿದಾರರು ಗೆಲುವು ಸಾಧಿಸಬೇಕೆಂದರೆ ಲೋಕ್‌ ಅದಾಲತ್‌ನ ರಾಜೀ ಸಂಧಾನದಿಂದ ಮಾತ್ರ ಸಾಧ್ಯ. ಕಾನೂನು ಬದ್ಧವಾಗಿ ನ್ಯಾಯಾಲಯದಲ್ಲಿಯೇ ರಾಜೀ ಸಂಧಾನವನ್ನು ನಡೆಸಿ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲಾಗುವುದು. ಲೋಕ್ ಅದಾಲತ್‌ನಿಂದ ದ್ವೇಷ, ಅಸೂಯೆ, ಕ್ರಿಮಿನಲ್ ಪ್ರಕರಣಗಳು ಹೆಚ್ಚಾಗುವುದನ್ನು ತಡೆಗಟ್ಟಬಹುದು ಎಂದರು.

ನಾಲ್ಕೂ ನ್ಯಾಯಾಲಯಗಳಿಂದ ಒಟ್ಟು 8861 ಪ್ರಕರಣಗಳಿವೆ. ಅವುಗಳಲ್ಲಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 2448 ಪ್ರಕರಣಗಳು, ಅಪರ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 1511 ಪ್ರಕರಣಗಳು, ಸಿವಿಲ್ ನ್ಯಾಯಾಲಯದಲ್ಲಿ 3097 ಪ್ರಕರಣಗಳು ಮತ್ತು ಅಪರ ಸಿವಿಲ್ ನ್ಯಾಯಾಲಯದಲ್ಲಿ 1804 ಪ್ರಕರಣಗಳಿವೆ ಎಂದರು.

ವಕೀಲರ ಸಂಘದ ಎಲ್ಲ ಸದಸ್ಯರು ರಾಜೀಯಾಗಬೇಕಾದ ಪ್ರಕರಣಗಳನ್ನು ಗುರುತಿಸಿ 4 ವಿಭಾಗದ ನ್ಯಾಯಾಲಯಗಳಲ್ಲಿಯೂ ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳಬೇಕಿದೆ. ಬಿಂಡಿಗನವಿಲೆ, ನಾಗಮಂಗಲ ಪಟ್ಟಣ, ಬೆಳ್ಳೂರು ಹಾಗೂ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರುದಾರರು ಹಾಗೂ ಎದುರುದಾರರಿಗೆ ಲೋಕ್‌ ಅದಾಲತ್‌ನ ಅರಿವು ಮೂಡಿಸುವ ಮೂಲಕ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಲು ಪೂರ್ಣ ಪ್ರಮಾಣದಲ್ಲಿ ಸಹಕರಿಸುವಂತೆ ಮನವಿ ಮಾಡಿದರು.

ಈ ವೇಳೆ ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ನರಸಿಂಹಮೂರ್ತಿ, ಸಿವಿಲ್ ನ್ಯಾಯಾಧೀಶ ಎಚ್.ಎಸ್.ಶಿವರಾಜು, ಸಹಾಯಕ ಸರ್ಕಾರಿ ಅಭಿಯೋಜಕಿ ಅರುಣಾಬಾಯಿ, ವಕೀಲರ ಸಂಘದ ಅಧ್ಯಕ್ಷ ಮಹದೇವ ಸೇರಿದಂತೆ ಪೊಲೀಸ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.