ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆ
ರಾಜ್ಯ ಸರ್ಕಾರ ಜಾತಿ ಗಣತಿ ಸಮೀಕ್ಷೆಯನ್ನು ಸಂಪುಟದಲ್ಲಿ ಮಂಡಿಸಿರುವುದನ್ನು ನಾನು ಸ್ವಾಗತಿಸುವೆ. ಆರು ತಿಂಗಳ ಹಿಂದೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮಗೆ ಮಾತು ಕೊಟ್ಟಿದ್ದರು ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿಯಿಂದ ಯಾರಿಗೂ ಅನ್ಯಾಯ ಆಗುವುದಿಲ್ಲ. ಆಯಾ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಆಗಲಿದೆ. ಒಬಿಸಿಯವರಿಗೆ ಮೀಸಲಾತಿ ಹೆಚ್ಚಳ ಆಗುವ ಸಾಧ್ಯತೆ ಇದೆ. ಇದು ಸ್ವಾಗತಾರ್ಹ ನಿರ್ಣಯ ಆಗಿದೆ ಎಂದರು.
ಶಾಸಕ ಶಾಮನೂರು ಶಿವಶಂಕರಪ್ಪ ಅವರು ನಮ್ಮ ಪಕ್ಷದ ಹಿರಿಯ ನಾಯಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅವರನ್ನು ವಿಶ್ವಾಸಕ್ಕೆ ಪಡೆದುಕೊಂಡೇ ಜಾತಿ ಗಣತಿ ವಿಷಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.ನಾಗೇನಹಳ್ಳಿ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ-ಶಾಸಕ ಗವಿಯಪ್ಪ:ಈ ಭಾಗದಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯುತ್ತಾರೆ. ಹಾಗಾಗಿ ಹೊಸಪೇಟೆಯಲ್ಲಿ ಹತ್ತು ಸಕ್ಕರೆ ಕಾರ್ಖಾನೆ ಸ್ಥಾಪನೆಯಾದರೂ ಸ್ವಾಗತಿಸುವೆ. ಆದರೆ, ನನ್ನ ಅವಧಿಯಲ್ಲೇ ನಾಗೇನಹಳ್ಳಿ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಲಾಗುವುದು ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಅನುಕೂಲಕ್ಕಾಗಿ ನಾಗೇನಹಳ್ಳಿ, ಕಾಳಗಟ್ಟ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಲಾಗುವುದು. ಈಗಾಗಲೇ 77 ಎಕರೆ ಸರ್ಕಾರಿ ಜಾಗ ಗುರುತಿಸಲಾಗಿದೆ. ಖಾಸಗಿ ಜಾಗ ಕೂಡ ಪಕ್ಕದಲ್ಲೇ ಇದೆ. ಈ ಜಾಗದ ಬಗ್ಗೆ ನಾಗೇನಹಳ್ಳಿ ಗ್ರಾಪಂನಲ್ಲೂ ನಿರ್ಣಯಿಸಲಾಗಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಪರ್ಯಾಯ ಜಾಗ ಗುರುತಿಸಲಾಗುವುದು. ಶಾಲೆ ಕಟ್ಟಡ ನಿರ್ಮಾಣಕ್ಕೆ ₹30 ಕೋಟಿ ಮಂಜೂರಾಗಿದೆ. ರೈತರ ಹಿತದೃಷ್ಟಿ ಹಾಗೂ ಎತ್ತಿನ ಬಂಡಿಗಳಲ್ಲಿ ಕಬ್ಬು ಸಾಗಾಟ ಮಾಡಲು ಅನುಕೂಲ ಆಗುವಂತೇ ನಾಗೇನಹಳ್ಳಿ ಭಾಗದಲ್ಲೇ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.ಗೇಟ್‌ಗಳ ಬದಲಾವಣೆ:ಜಲಾಶಯದ ಗೇಟ್‌ಗಳ ಬದಲಾವಣೆಗಾಗಿ ಈಗಾಗಲೇ ತುಂಗಭದ್ರಾ ಮಂಡಳಿ ಪರಿಣತ ತಜ್ಞರ ಸಮಿತಿಯಿಂದ ವರದಿ ಪಡೆದಿದೆ. ಈ ವರ್ಷ ಎಂಟು ಗೇಟ್‌ಗಳನ್ನು ಬದಲಿಸುವ ಸಾಧ್ಯತೆ ಇದೆ. ಎಲ್ಲವನ್ನು ಕ್ರಮಬದ್ಧವಾಗಿ ಮಾಡಲಿದೆ. ತರಾತುರಿಯಲ್ಲಿ ಗೇಟ್ ಬದಲಿಸಲು ಆಗುವುದಿಲ್ಲ. ಇನ್ನೂ ಈ ಬಾರಿ ಜಲಾಶಯದಲ್ಲಿ ನೀರಿನ ಸಂಗ್ರಹವನ್ನು ವೈಜ್ಞಾನಿಕ ರೀತಿಯಲ್ಲಿ ಸಂಗ್ರಹ ಮಾಡಲಿದೆ. ನೀರಾವರಿ ಇಲಾಖೆ ತಜ್ಞರು ಈ ಬಗ್ಗೆ ಕಾಳಜಿ ವಹಿಸಲಿದ್ದಾರೆ ಎಂದರು.ಕಮಲಾಪುರದಲ್ಲಿ ಮಾರಾಟ ಮಳಿಗೆಗಳ ಸ್ಥಾಪನೆಗೆ ₹10 ಕೋಟಿ ಮಂಜೂರಾಗಿದೆ. ಇನ್ನೂ ಕಮಲಾಪುರದ ಪಟ್ಟಣದ ಅಭಿವೃದ್ಧಿಗೆ ₹10 ಕೋಟಿಯನ್ನು ಸರ್ಕಾರ ಮಂಜೂರು ಮಾಡಿದೆ. ಹಂಪಿ ಗ್ರಾಪಂಗೆ ಕಟ್ಟಡ ನಿರ್ಮಾಣಕ್ಕಾಗಿ ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಚರ್ಚಿಸುವೆ ಎಂದರು.
ಹೊಸಪೇಟೆ ನಗರದಲ್ಲಿ ಶುದ್ಧ ಕುಡಿಯುವ ನೀರು ಒದಗಿಸಲು ಎಲ್ಲಾ ರೀತಿಯಿಂದ ಕ್ರಮವಹಿಸಲಾಗಿದೆ. ಈಗಾಗಲೇ ಪರಿಶೀಲನೆ ಕೂಡ ನಡೆಸಲಾಗುವುದು. ಜಲಾಶಯದ ನೀರು ಹಸಿರಾಗಿದ್ದರೆ, ಖುದ್ದು ಭೇಟಿ ನೀಡಿ ಪರಿಶೀಲಿಸುವೆ ಎಂದರು.