ದ್ವೇಷ ಹರಡುವವರು ಯಾರೇ ಆದರೂ ಬಿಡುವುದಿಲ್ಲ: ಸುಧೀರ್‌ ರೆಡ್ಡಿ

| Published : Jun 25 2025, 01:17 AM IST

ದ್ವೇಷ ಹರಡುವವರು ಯಾರೇ ಆದರೂ ಬಿಡುವುದಿಲ್ಲ: ಸುಧೀರ್‌ ರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ನಡೆದ ಕೊಲೆಗಳು, ಅಹಿತಕರ ಘಟನೆಗಳ ಕುರಿತು ವೈಜ್ಞಾನಿಕ ಸಾಕ್ಷ್ಯಗಳು, ಪಾರದರ್ಶಕತೆಯಿಂದ ಪ್ರತಿ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದೇವೆ. ಯಾವುದೇ ಆರೋಪಿ ತಪ್ಪಿಸಿಕೊಳ್ಳಲು ಬಿಡಲ್ಲ. ಅಮಾಯಕರಿಗೆ ಅನ್ಯಾಯವಾಗಲೂ ಬಿಡಲ್ಲ. ಈ ಕುರಿತು ಯಾರಿಗಾದರೂ ಅಸಮಾಧಾನ ಇದ್ದರೆ ನೇರವಾಗಿ ಇಲಾಖೆಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ. ಆದರೆ ಇಂಥದ್ದೇ ವಿಚಾರಗಳನ್ನಿಟ್ಟುಕೊಂಡು ಅನಗತ್ಯವಾಗಿ ದ್ವೇಷ ಹರಡುವುದಕ್ಕೆ ಅವಕಾಶ ಕೊಡಲ್ಲ. ದ್ವೇಷ ಹರಡುವವರಿಗೆ ನೋಟಿಸ್‌ ಕೊಡುವುದೋ, ಬಂಧನ ಮಾಡುವುದೋ- ಕಾನೂನಿನಲ್ಲಿ ಸ್ಪಷ್ಟವಾಗಿದೆ. ಅದರ ಪ್ರಕಾರ ಕ್ರಮ ಆಗಲಿದೆ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಸುಧೀರ್‌ ರೆಡ್ಡಿ ಅವರ ಖಡಕ್‌ ವಾರ್ನಿಂಗ್‌ ನೀಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದ್ವೇಷ ಭಾಷಣ, ದ್ವೇಷಭರಿತ ಪೋಸ್ಟ್‌ ಮಾಡಲು ಯಾರಿಗೂ ಅವಕಾಶವಿಲ್ಲ. ಈ ರೀತಿ ಮಾಡುವವರು ಎಷ್ಟೇ ದೊಡ್ಡ ವ್ಯಕ್ತಿಯಾಗಿರಲಿ, ಕಾನೂನಿನ ಎದುರು ಎಲ್ಲರೂ ಒಂದೇ. ವಾಕ್‌ ಸ್ವಾತಂತ್ರ್ಯ ಇದೆ ಅಂತ ದ್ವೇಷ ಹರಡುವ ಕೆಲಸ ಮಾಡಿದರೆ ಕಾನೂನು ತನ್ನದೇ ಕ್ರಮ ಕೈಗೊಳ್ಳಲಿದೆ. ತಪ್ಪು ಮಾಡಿದ ಯಾರನ್ನೂ ಬಿಡಲ್ಲ...

ಇದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಸುಧೀರ್‌ ರೆಡ್ಡಿ ಅವರ ಖಡಕ್‌ ವಾರ್ನಿಂಗ್‌. ಈಗಾಗಲೇ ದ್ವೇಷ ಭಾಷಣ, ದ್ವೇಷದ ಪೋಸ್ಟ್‌ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿರುವ ಅವರು ಇತ್ತೀಚಿನ ವಿಚಾರಗಳ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಜಿಲ್ಲೆಯಲ್ಲಿ ನಡೆದ ಕೊಲೆಗಳು, ಅಹಿತಕರ ಘಟನೆಗಳ ಕುರಿತು ವೈಜ್ಞಾನಿಕ ಸಾಕ್ಷ್ಯಗಳು, ಪಾರದರ್ಶಕತೆಯಿಂದ ಪ್ರತಿ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದೇವೆ. ಯಾವುದೇ ಆರೋಪಿ ತಪ್ಪಿಸಿಕೊಳ್ಳಲು ಬಿಡಲ್ಲ. ಅಮಾಯಕರಿಗೆ ಅನ್ಯಾಯವಾಗಲೂ ಬಿಡಲ್ಲ. ಈ ಕುರಿತು ಯಾರಿಗಾದರೂ ಅಸಮಾಧಾನ ಇದ್ದರೆ ನೇರವಾಗಿ ಇಲಾಖೆಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ. ಆದರೆ ಇಂಥದ್ದೇ ವಿಚಾರಗಳನ್ನಿಟ್ಟುಕೊಂಡು ಅನಗತ್ಯವಾಗಿ ದ್ವೇಷ ಹರಡುವುದಕ್ಕೆ ಅವಕಾಶ ಕೊಡಲ್ಲ. ದ್ವೇಷ ಹರಡುವವರಿಗೆ ನೋಟಿಸ್‌ ಕೊಡುವುದೋ, ಬಂಧನ ಮಾಡುವುದೋ- ಕಾನೂನಿನಲ್ಲಿ ಸ್ಪಷ್ಟವಾಗಿದೆ. ಅದರ ಪ್ರಕಾರ ಕ್ರಮ ಆಗಲಿದೆ ಎಂದರು.

ತಪ್ಪು ಮಾಹಿತಿ ಸಲ್ಲದು: ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಸಂಪೂರ್ಣ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಎಲ್ಲವೂ ವೈಜ್ಞಾನಿಕ ಸಾಕ್ಷ್ಯಗಳ ಪ್ರಕಾರವೇ ನಡೆದಿದೆ. ಈ ಪ್ರಕರಣ ಎನ್‌ಐಎಗೆ ವಹಿಸಲಾಗಿದ್ದು, ಮುಂದಿನ ತನಿಖೆಯನ್ನು ಅವರು ನಡೆಸುತ್ತಾರೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜಕ್ಕೆ ಯಾರೂ ತಪ್ಪು ಮಾಹಿತಿ ನೀಡುವುದು ಸಲ್ಲದು. ಸರಿಯಾದ ಸಾಕ್ಷ್ಯಾಧಾರಗಳಿದ್ದರೆ ಇಲಾಖೆಗೆ ತಂದು ಕೊಡಿ. ಅದು ಬಿಟ್ಟು ವದಂತಿ ಹರಡುವುದಕ್ಕೆ ಅವಕಾಶವಿಲ್ಲ ಎಂದು ಎಚ್ಚರಿಸಿದರು.ಕುಡುಪುವಿನಲ್ಲಿ ಅಶ್ರಫ್‌ ಗುಂಪು ಹತ್ಯೆ ಪ್ರಕರಣದಲ್ಲೂ ಫೋಟೊಗಳು, ಮೊಬೈಲ್‌ ಸಂಭಾಷಣೆ ಇತ್ಯಾದಿ ಅನೇಕ ವೈಜ್ಞಾನಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ಆರೋಪಿಗಳ ಬಂಧನವಾಗಿದೆ. ಶಿಕ್ಷೆಯಾಗುವಂತಹ ಪ್ರಬಲ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದೇವೆ. ಆದರೆ ಕೆಲವರು ಪ್ರಮುಖ ಆರೋಪಿಯ ಬಂಧನವಾಗಿಲ್ಲ ಎನ್ನುತ್ತಾರೆ. ಅಂಥವರನ್ನು ಕರೆತಂದು ಸಾಕ್ಷ್ಯ ಕೊಡಿ ಎಂದರೆ ಇಲ್ಲ ಎನ್ನುತ್ತಾರೆ. ಈ ರೀತಿ ಇಲ್ಲಸಲ್ಲದ ಆರೋಪ ಮಾಡುವ ಮೊದಲು ಎಚ್ಚರ ವಹಿಸಿ ಎಂದರು.ಅಶ್ರಫ್‌ ಕೊಲೆ ಪ್ರಕರಣದಲ್ಲಿ ಮಾಜಿ ಕಾರ್ಪೊರೇಟರ್‌ ಪತಿ ಹಲ್ಲೆ ನಡೆಸಿರುವುದಕ್ಕೆ ಹಾಗೂ ಪ್ರಚೋದನೆ ನೀಡಿರುವುದಕ್ಕೆ ಸಾಕ್ಷ್ಯಗಳು ಇದುವರೆಗೆ ದೊರೆತಿಲ್ಲ. ಪ್ರಕರಣದ ತನಿಖೆ ದಿನಂಪ್ರತಿ ನಡೆಯುತ್ತಿದೆ. ಮುಂದೆ ಸಾಕ್ಷ್ಯ ದೊರೆತರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಕಮಿಷನರ್‌ ಸುಧೀರ್‌ ರೆಡ್ಡಿ ಸ್ಪಷ್ಟಪಡಿಸಿದರು.

ಡಿಸಿಪಿಗಳಾದ ಸಿದ್ಧಾರ್ಥ್‌ ಗೋಯಲ್‌ ಹಾಗೂ ರವಿಶಂಕರ್‌ ಇದ್ದರು.

-------------ಕೋಮು ಪ್ರಕರಣಗಳ ನಿರ್ವಹಣೆಗೆ ಕಾನೂನು ಅಧಿಕಾರಿಗಳ ನೇಮಕ

ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿನ ಕೋಮು ಸಂಬಂಧಿ ಪ್ರಕರಣಗಳನ್ನು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ನಾಲ್ವರು ಕಾನೂನು ಅಧಿಕಾರಿಗಳನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ. ರಾಜ್ಯ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಬಿ.ಎ. ಬೆಳ್ಳಿಯಪ್ಪ, ರಾಜ್ಯ ಪಬ್ಲಿಕ್‌ ಪ್ರಾಸಿಕ್ಯೂಟರ್‌-2 ವಿಜಯಕುಮಾರ್‌ ಮಜಗೆ, ಅಡಿಶನ್‌ ಅಡ್ವೊಕೇಟ್‌ ಜನರಲ್‌ಗಳಾದ ಪ್ರದೀಪ್‌ ಸಿ.ಎಸ್‌. ಹಾಗೂ ಎಸ್‌. ಇಸ್ಮಾಯಿಲ್‌ ಝಬಿಉಲ್ಲಾ ಅವರನ್ನು ನೇಮಕ ಮಾಡಲಾಗಿದೆ ಎಂದು ಪೊಲೀಸ್‌ ಆಯುಕ್ತ ಸುಧೀರ್‌ ರೆಡ್ಡಿ ತಿಳಿಸಿದರು.