ಜಾತಿ ಗಣತಿಗೆ ವಿರೋಧವಿಲ್ಲ, ಸಮೀಕ್ಷೆಗೆ ವಿರೋಧ

| Published : Oct 16 2024, 12:53 AM IST

ಸಾರಾಂಶ

ಮನೆ-ಮನೆಗೂ ಭೇಟಿ ನೀಡಿ, ನಿಖರ ದತ್ತಾಂಶಗಳನ್ನು ಸಂಗ್ರಹಿಸಿ ಜಾತಿ ಗಣತಿ ಮಾಡಿದರೆ ಅದನ್ನು ಸ್ವಾಗತಿಸುತ್ತೇವೆ. ಮೇಲಾಗಿ ಹಿಂದೆ ಮಾಡಲಾದ ಸಮೀಕ್ಷೆಯಲ್ಲಿ ಲಿಂಗಾಯತ ಸಮುದಾಯದವರ ಸಂಖ್ಯೆ ಕಡಿಮೆ ಇದೆ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿದೆ.

ಹುಬ್ಬಳ್ಳಿ:

ಸರ್ಕಾರವು ಜಾತಿ ಗಣತಿ ವರದಿಗೆ ಮುಂದಾಗಿದೆ. ಇದಕ್ಕೆ ನಮ್ಮ ಯಾವುದೇ ವಿರೋಧವಿಲ್ಲ. ಆದರೆ, ಈ ಹಿಂದೆ ಮಾಡಲಾದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನೇ ಜಾತಿ ಗಣತಿ ಎಂದು ಪರಿಗಣಿಸುತ್ತಿರುವುದಕ್ಕೆ ವಿರೋಧವಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆಯೇ ಲಿಂಗಾಯತ ಸಮಾಜದ ಹಿರಿಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸಂವಿಧಾನ ಬದ್ಧವಾಗಿ, ಮನೆ-ಮನೆಗೂ ಭೇಟಿ ನೀಡಿ, ನಿಖರ ದತ್ತಾಂಶಗಳನ್ನು ಸಂಗ್ರಹಿಸಿ ಜಾತಿ ಗಣತಿ ಮಾಡಿದರೆ ಅದನ್ನು ಸ್ವಾಗತಿಸುತ್ತೇವೆ. ಮೇಲಾಗಿ ಹಿಂದೆ ಮಾಡಲಾದ ಸಮೀಕ್ಷೆಯಲ್ಲಿ ಲಿಂಗಾಯತ ಸಮುದಾಯದವರ ಸಂಖ್ಯೆ ಕಡಿಮೆ ಇದೆ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿದೆ. ಹೀಗಾಗಿ ಸರ್ಕಾರ ಹೊಸದಾಗಿ ಮತ್ತು ಕಾನೂನು ಬದ್ಧವಾಗಿ ಜಾತಿ ಗಣತಿ ಮಾಡಿಸಬೇಕು ಎಂದು ಒತ್ತಾಯಿಸಿದರು.

18ಕ್ಕೆ ಸಿಎಂ ಸಭೆ:

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರವಾಗಿ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅ. 18 ರಂದು ಸಭೆ ಕರೆದಿದ್ದಾರೆ. ನಮ್ಮ ಬೇಡಿಕೆಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಮುಂಬರುವ ವಿಧಾನಸಭೆ ಅಧಿವೇಶನದ ವೇಳೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಹಾರಾಷ್ಟ್ರದಲ್ಲಿ ಮರಾಠಿಗರಿಗೆ ಶೇ. 10ರಷ್ಟು ಮೀಸಲಾತಿ ದೊರೆತ ಬಳಿಕ ನಮ್ಮ ಬೇಡಿಕೆಯೂ ಈಡೇರಬಹುದು ಎಂಬ ವಿಶ್ವಾಸ ನಮ್ಮಲ್ಲಿ ಮೂಡಿದೆ. ಈಗಾಗಲೇ 6 ಹಂತಗಳ ಹೋರಾಟದ ಫಲದಿಂದಾಗಿ ಮುಖ್ಯಮಂತ್ರಿಗಳು ಈಗ ಚರ್ಚೆಗೆ ದಿನಾಂಕ ನಿಗದಿಗೊಳಿಸಿದ್ದಾರೆ. ಅವರೊಂದಿಗೆ ಚರ್ಚಿಸಲು ವಿವಿಧ ಜಿಲ್ಲೆಯ 11 ಹಿರಿಯ ನ್ಯಾಯವಾದಿಗಳ ತಂಡ ರಚಿಸಲಾಗಿದೆ ಎಂದರು.

ಭೇಟಿಯ ನಂತರ ನಿರ್ಧಾರ:

ಈ ಹಿಂದೆಯೂ ಮುಖ್ಯಮಂತ್ರಿಗಳು ಜ. 23ರಂದು ದಿನಾಂಕ ನಿಗದಿಗೊಳಿಸಿದ್ದರು. ಆದರೆ, ಅನಿವಾರ್ಯ ಕಾರಣಗಳಿಂದ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಬಳಿಕ ಅ. 15ರಂದು ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ, ಮುಖ್ಯಮಂತ್ರಿಗಳ ಅನ್ಯ ಕೆಲಸದ ನಿಮಿತ್ತ ಅಂದೂ ಚರ್ಚೆ ನಡೆಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ನನ್ನೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೆ ಕರೆ ಮಾಡಿ ಅ. 18ರಂದು ಮಧ್ಯಾಹ್ನ 12.30ಕ್ಕೆ ಸಮಯ ನಿಗದಿಗೊಳಿಸಿರುವುದು ಖಚಿತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಂದಿನ ಚರ್ಚೆಯಲ್ಲಿ ಮುಖ್ಯಮಂತ್ರಿಗಳ ಸ್ಪಂದನೆ ನೋಡಿಕೊಂಡು ನಮ್ಮ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಹೇಳಿದರು.

ನಂಬಿಕೆಯಿದೆ:

ಅ. 18ರಂದು ಸಮಾಜದ ಎಲ್ಲ ಮಾಜಿ, ಹಾಲಿ ಶಾಸಕರು- ಸಚಿವರು, ಗಣ್ಯರು ಆಗಮಿಸಲಿದ್ದಾರೆ. ಸದಾ ಸಮಾಜದ ಏಳಿಗೆ ಮತ್ತು ಜನರ ಕಲ್ಯಾಣವನ್ನು ಬಯಸುವ ಸಿದ್ದರಾಮಯ್ಯ ಅವರು, ನಮ್ಮ ಬೇಡಿಕೆ ಮನ್ನಿಸಿ, ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಘೋಷಣೆ ಮಾಡುತ್ತಾರೆ ಎಂಬ ನಂಬಿಕೆಯಿದೆ ಎಂದು ಶ್ರೀಗಳು ಹೇಳಿದರು.

ಈಶ್ವರಪ್ಪ ದಿಟ್ಟಹೆಜ್ಜೆ:

ರಾಯಣ್ಣ, ಚೆನ್ನಮ್ಮ ಬ್ರಿಗೇಡ್ ಕುರಿತ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಯಾರೇ ಒಳ್ಳೆಯ ಕೆಲಸ ಮಾಡಿದರೂ ಅವರಿಗೆ ಬೆಂಬಲ ನೀಡುತ್ತೇವೆ. ಈ ನಿಟ್ಟಿನಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಅವರ ಹೋರಾಟ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನಾಂದಿಯಾಗಲಿ ಮತ್ತು ನಾಡಿನಲ್ಲಿ ಶಾಂತಿ ನೆಲೆಸುವಂತಾಗಲಿ ಎಂದರು.

ಸುದ್ದಿಗೋಷ್ಠಿಯಲ್ಲಿ ವಕೀಲರಾದ ಶಂಕರಗೌಡ್ರ ನಾಗನಗೌಡ್ರ, ಗುರು ಕೆಲಗೇರಿ, ನಾಗರಾಜ ಗಂಜಿಗಟ್ಟಿ, ಶ್ರೀಕಾಂತ ಗುಳೇದ, ಬಾಪೂಗೌಡ ಸಾಬಳದ, ಶಶಿಧರ ಕೋಟಗಿ, ಅನಿತಾ ಪಾಟೀಲ, ರತ್ನ ದಾನಮ್ಮನವರ, ವೈ.ಯು. ಮುದಿಗೌಡರ ಸೇರಿದಂತೆ ಹಲವರಿದ್ದರು.