ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಶ್ರೀ ಆಂಜನೇಯಸ್ವಾಮಿ ಮತ್ತು ಶ್ರೀ ಈಶ್ವರ ದೇವಾಲಯಗಳ ಧಾರ್ಮಿಕ ಆಚರಣೆಗೆ ಬಳಕೆಯಲ್ಲಿರುವ ಗ್ರಾಮಠಾಣಾ ಜಾಗದಲ್ಲಿ ಇತರೆ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಅರಕಲಗೂಡು ತಾಲೂಕಿನ ಶಣವಿನಕುಪ್ಪೆ ಗ್ರಾಮದಲ್ಲಿ ಐತಿಹಾಸಿಕವಾದ ಶ್ರೀ ಆಂಜನೇಯಸ್ವಾಮಿ ಹಾಗೂ ಪುರಾತನವಾದ ಶಿವ ದೇವಾಲಯವಿದೆ. ಇವೆರಡು ದೇವಸ್ಥಾನಗಳನ್ನು ಹೊಸದಾಗಿ ನಿರ್ಮಿಸಿ ಜೀರ್ಣೋದ್ಧಾರ ಮಾಡಲಾಗಿದೆ. ಗ್ರಾಮಸ್ಥರ ಮನವಿ ಮೇರೆಗೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಶ್ರೀ ಈಶ್ವರ ದೇವಸ್ಥಾನದ ಅಂಚಿನವರೆಗೂ ಇರುವ ಜಾಗ ಗ್ರಾಮಕ್ಕೆ ಸೇರಿದ ಗ್ರಾಮಠಾಣಾ ಆಸ್ತಿಯಾಗಿದ್ದು, ಈ ಆಸ್ತಿಯಲ್ಲಿ ದೇವಸ್ಥಾನದ ಜಾತ್ರೆ, ಧಾರ್ಮಿಕ ಸಮಾರಂಭಗಳು, ಉತ್ಸವಗಳು ನಡೆದುಕೊಂಡು ಬರುತ್ತಿವೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರುವುದರಿಂದ ಅನ್ನದಾನ ಏರ್ಪಡಿಸುವುದಕ್ಕೆ ಮತ್ತು ಧಾರ್ಮಿಕ ಸಭೆ ಮತ್ತು ಸಮಾರಂಭಗಳಿಗೆ ಉಳಿದಿರುವ ಗ್ರಾಮದ ಏಕೈಕ ಬಹುಮುಖ್ಯ ಭಾಗವಾಗಿರುತ್ತದೆ. ಈ ದೇವಸ್ಥಾನದ ಜಾತ್ರೆ, ಧಾರ್ಮಿಕ ಸಮಾರಂಭಗಳು, ಉತ್ಸವಗಳು ಹಾಗೂ ಇತರೆ ಸಮಾರಂಭಗಳಿಗೆ ಈ ಜಾಗವನ್ನು ಹೊರತುಪಡಿಸಿ ಯೋಗ್ಯವಾದ ದೇವಸ್ಥಾನಗಳಿಗೆ ಹೊಂದಿಕೊಂಡಂತೆ ಬೇರೆ ಯಾವುದೇ ಜಾಗವಿರುವುದಿಲ್ಲ. ಈ ಜಾಗದಲ್ಲಿ ಕಟ್ಟಡ ಕಟ್ಟಲು ಅನುಮತಿ ನೀಡಲು ಮುಂದಾಗಿರುವ ವಿಚಾರ ತಿಳಿದುಬಂದಿದ್ದು, ಜಾಗದಲ್ಲಿ ಕಟ್ಟಡ ಕಟ್ಟಲು ಅನುಮತಿ ನೀಡಿದರೆ ಅನ್ಯ ಚಟುವಟಿಕೆಗಳು ದೇವಾಸ್ಥಾನದ ಸರಹದ್ದಿನಲ್ಲಿ ನಡೆಯುವ ಸಂಭವವಿದೆ. ಇದರಿಂದ ದೇವಸ್ಥಾನದ ದೇವರ ಕಾರ್ಯಗಳಿಗೆ ಹಾಗೂ ಸಾರ್ವಜನಿಕ ಕಾರ್ಯಗಳಿಗೆ ತೊಂದರೆಯಾಗುವ ಸಂಭವವಿರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಅರ್ಜಿಯಲ್ಲಿ ತಿಳಿಸಿರುವ ದೇವಸ್ಥಾನದ ಜಾಗವನ್ನು ಯಾವುದೇ ರೀತಿಯಲ್ಲೂ ಸಹ ಯಾರೂ ವಶಪಡಿಸಿಕೊಂಡು ಕಟ್ಟಡ ನಿರ್ಮಿಸಲು ಅವಕಾಶ ಇರುವುದಿಲ್ಲ. ಶ್ರೀ ಆಂಜನೇಯಸ್ವಾಮಿ ಮತ್ತು ಶ್ರೀ ಈಶ್ವರ ದೇವಾಲಯಗಳ ನಡುವಿನ ಗ್ರಾಮದ ಆಸ್ತಿಯನ್ನು ಅಕ್ರಮವಾಗಿ ಇ-ಸ್ವತ್ತು ಮಾಡಿರುವ ಖಾತೆಯನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.ಆಂಜನೇಯಸ್ವಾಮಿ ಮತ್ತು ಈಶ್ವರ ದೇವಾಲಯಗಳ ನಡುವಿನ ಗ್ರಾಮದ ಆಸ್ತಿಯನ್ನು ಯಾವುದೇ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡದಂತೆ ಗ್ರಾಮಸ್ಥರಿಂದ ಮನವಿ ಮಾಡಿದ್ದರೂ ಸಹ ಇ-ಸ್ವತ್ತು ಮಾಡಿರುವುದು ದುರುದ್ದೇಶದಿಂದ ಕೂಡಿರುತ್ತದೆ. ಹಾಗಾಗಿ ಇ-ಸ್ವತ್ತನ್ನು ರದ್ದು ಮಾಡಿ ಗ್ರಾಮದ ಆಸ್ತಿಯನ್ನು ಉಳಿಸಿ, ಅಕ್ರಮವಾಗಿ ಮಾಡಿರುವ ಇ-ಸ್ವತ್ತನ್ನು ಮಹಿಳಾ ಹಾಲು ಉತ್ಪಾದಕರ ಸಂಘಕ್ಕೆ ಖಾತೆ ಮಾಡಿಕೊಟ್ಟಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕರವಸೂಲಿಗಾರರ ವಿರುದ್ಧ ಕಾನೂನು ಕ್ರಮ ಜರುಗಿಸಿ ಇ-ಸ್ವತ್ತನ್ನು ರದ್ದು ಮಾಡಬೇಕಾಗಿ ಕೋರಿಕೊಳ್ಳುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮದ ಸ್ವಾಮಿಗೌಡ, ಅಣ್ಣಪ್ಪ, ಇತರರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))