ಮೋದಿಯಂಥ ನಾಯಕ ಬೇರ್‍ಯಾವ ಪಕ್ಷದಲ್ಲೂ ಇಲ್ಲ: ಸಂಸದ ಬಿ.ವೈ.ರಾಘವೇಂದ್ರ

| Published : Apr 13 2024, 01:02 AM IST

ಮೋದಿಯಂಥ ನಾಯಕ ಬೇರ್‍ಯಾವ ಪಕ್ಷದಲ್ಲೂ ಇಲ್ಲ: ಸಂಸದ ಬಿ.ವೈ.ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದ ಶ್ರೀಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಪೀಠದ ಶಿವಮೊಗ್ಗ ಶಾಖಾ ಮಠದ ಪೀಠಾಧಿಪತಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರನ್ನು ಮಠದಲ್ಲಿ ಶುಕ್ರವಾರ ಭೇಟಿ ಮಾಡಿದ ಬಿ.ವೈ.ರಾಘವೇಂದ್ರ ಶ್ರೀಗಳ ಆಶೀರ್ವಾದ ಪಡೆದುಕೊಂಡರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ / ಹೊಳೆಹೊನ್ನೂರು

ಪ್ರಧಾನಮಂತ್ರಿ ರಾಜ್ಯಕ್ಕೆ ಎಷ್ಟು ಬಾರಿ ಭೇಟಿ ಕೊಡ್ತಾರೋ ಅಷ್ಟು ನಮ್ಮ ಕಾರ್ಯಕರ್ತರಿಗೆ ವಿಶ್ವಾಸ ಮೂಡಿಸುವ ಪ್ರಯತ್ನ ಆಗುತ್ತದೆ. ಚುನಾವಣಾ ಸಮಯದಲ್ಲಿ ಇಷ್ಟೊಂದು ಸಮಯ ಕೊಡುವ ಪ್ರಧಾನಮಂತ್ರಿಯನ್ನು ನಾವು ಬೇರೆ ಯಾರನ್ನೂ ನೋಡಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಶಿವಮೊಗ್ಗದಲ್ಲಿ ಶುಕ್ರವಾರ ಆದಿಚುಂಚನಗಿರಿ ಮಠಕ್ಕೆ ಶುಕ್ರವಾರ ಭೇಟಿ ಕಾಲಭೈರವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಅಂತಹ ಯೋಗ ಬೇರೆ ಪಕ್ಷದವರಿಗೆ‌ ಇಲ್ಲ. ಆ ಯೋಗ ನಮ್ಮ ಪಕ್ಷದವರಿಗೆ ಮಾತ್ರ ಇರೋದು. ಯಾರ ನಾಯಕತ್ವ ಬಿಂಬಿಸುತ್ತೇವೋ ಅದು ಓಟು ಆಗಿ ಪರಿವರ್ತನೆ ಆಗ್ತದೆ. ಬೇರೆ ಯಾವ ಪಕ್ಷದಲ್ಲೂ ಅಂತಹ ನಾಯಕನನ್ನು ನೋಡಲು ಸಾಧ್ಯವಿಲ್ಲ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಸರ್ಕಾರ ಎಲ್ಲಾ ವಿಚಾರ ಹೇಳಿಕೊಂಡು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಕಷ್ಟದ ಪರಿಸ್ಥಿತಿ ನಿರ್ವಹಣೆ ಮಾಡುವ ಅವಕಾಶ ಇಲ್ಲದಿದ್ದ ಮೇಲೆ ಏಕೆ ಆ ಸ್ಥಾನದಲ್ಲಿ ಕೂರುತ್ತೀರಾ? ನೆರೆ ಹಾವಳಿ ಸಂದರ್ಭದಲ್ಲಿ ಯಡಿಯೂರಪ್ಪ ಐದು ಲಕ್ಷ ಪರಿಹಾರ ಕೊಟ್ಟರು. ಮೋದಿ‌ ಕೊಟ್ಟ ಕೃಷಿ ಸಮ್ಮಾನ್ ಯೋಜನೆಗೆ ಯಡಿಯೂರಪ್ಪ ಸಹ 4 ಸಾವಿರ ರು. ಸೇರಿಸಿ ಕೊಟ್ಟರು.

ಇವರು ಕೊಡೋದು ಬೇಡ, ಕಿತ್ತು ಕೊಳ್ಳುವ ಕೆಲಸ ಮಾಡಿದರು. ಕೇಂದ್ರ ಸರ್ಕಾರ ಬರ ಪರಿಹಾರ ಕೊಡಲಿಲ್ಲ ಸರಿ. ನೀವು ಕೊಡುವ ಹಣ ಏಕೆ ಕೊಡಲಿಲ್ಲ. ಹೈನುಗಾರಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರೈತರಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ. ನಿಮ್ಮ ಕೈಲಾಗದಿದ್ದಕ್ಕೆ ಎಲ್ಲವನ್ನು ಪ್ರಧಾನಮಂತ್ರಿ ಕಡೆ ಕೈತೋರಿಸೋದು ತಪ್ಪು ಎಂದು ಚಾಟಿ ಬೀಸಿದರು.

ರಾಜ್ಯದಲ್ಲಿ ಬರಗಾಲ ತೀವ್ರವಾಗಿದೆ. ಕುಡಿಯುವ ನೀರಿಗೂ ತತ್ವಾರ ಇದೆ. ರಾಜ್ಯ ಸರ್ಕಾರ ಕೇಂದ್ರದಿಂದ ಬರಪರಿಹಾರ ಬಂದಿಲ್ಲ ಎಂದು ಹೇಳುತ್ತಿದೆಯೇ ವಿನಾ ತನ್ನ ಜವಾಬ್ದಾರಿಯನ್ನು ಪೂರೈಸುತ್ತಿಲ್ಲ. ಕೈಲಾಗದವರು ಮೈ ಪರಚಿಕೊಂಡರು ಎಂದು ಸಿದ್ದರಾಮಯ್ಯ ಸರ್ಕಾರ ಬರೀ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ ಎಂದು ಆರೋಪಿಸಿದರು.

ಶಿವಮೊಗ್ಗದ ಆದಿಚುಂಚನಗಿರಿ ಮಠದಲ್ಲಿ ಕಾಲಬೈರವ ಸ್ವಾಮಿ ಹಾಗೂ ಪ್ರಸನ್ನನಾಥ ಸ್ವಾಮೀಜಿ ಆಶೀರ್ವಾದ ಪಡೆದಿದ್ದೇನೆ. ಚುನಾವಣೆಯ ಸಂದರ್ಭದಲ್ಲಿ ನೈತಿಕ ಶಕ್ತಿ ಕೊಡಲಿ ಎಂದು ದೇವರಲ್ಲಿ ಕೇಳಿಕೊಂಡಿದ್ದೇನೆ. ಆದಷ್ಟು ಬೇಗ ಮಳೆಯಾಗಲಿ, ರೈತರ ಜೀವನದಲ್ಲಿ ನೆಮ್ಮದಿ ಸಿಗಲಿ ಎಂದು ದೇವರಲ್ಲಿ ಕೇಳಿಕೊಂಡಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ, ಡಾ.ಧನಂಜಯ ಸರ್ಜಿ, ಎನ್.ಜೆ.ರಾಜಶೇಖರ್, ಜಗದೀಶ್ ಮತ್ತಿತರರಿದ್ದರು.‘ಕೈ’ ಗ್ಯಾರಂಟಿಗೆ ಬೆಲೆ ಇಲ್ಲ

ಕ್ಷೇತ್ರದಲ್ಲಿ ಪ್ರವಾಸ ಮಾಡಿದಂತಹ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಿಗೆ ಬೆಲೆ ಇಲ್ಲ ಎಂಬುದು ಗೊತ್ತಾಯಿತು. ನಮ್ಮ ಸಭೆಗಳಲ್ಲಿ ಮಹಿಳೆಯರು ಗಣನೀಯ ಪ್ರಮಾಣದಲ್ಲಿ ಸೇರುತ್ತಿರುವುದೇ ಇದಕ್ಕೆ ಸಾಕ್ಷಿ. ನಮ್ಮ ಹಣ ಕಿತ್ತುಕೊಂಡು ಗ್ಯಾರಂಟಿ ಹೆಸರಲ್ಲಿ ರಾಜಕಾರಣ ಮಾಡಲಾಗುತ್ತದೆ. ಸಭೆಗಳಲ್ಲಿ ಮಹಿಳೆ ಯರೇ ಈ ಬಗ್ಗೆ ಹೇಳುತ್ತಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಗ್ಯಾರಂಟಿಗಳ ಆಟ ನಡೆಯುವುದಿಲ್ಲ ಎಂದು ಹೇಳಿದರು.

ಹಾವು ಚೇಳುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ

ಹೊಳೆಹೊನ್ನೂರು: ಕ್ಷೇತ್ರದಲ್ಲಿ ಹರಿದಾಡುತ್ತಿರುವ ಹಾವು ಚೇಳುಗಳ ಬಗ್ಗೆ ತಲೆಕಡೆಸಿಕೊಳ್ಳದೇ ಕಾರ್ಯಕರ್ತರು ಪಕ್ಷದ ಕಾರ್ಯದಲ್ಲಿ ಸಕ್ರಿಯರಾಗಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಪರೋಕ್ಷವಾಗಿ ಈಶ್ವರಪ್ಪರನ್ನು ಕುಟುಕಿದರು.

ಸಮೀಪದ ಆನವೇರಿಯಲ್ಲಿ ಶುಕ್ರವಾರ ಹಿರಿಮಾವುರದಮ್ಮ ದೇವಸ್ಥಾನದ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಸ್ನೇಹ ಸಮ್ಮಿಲನ ಸಮನ್ವಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಕ್ಷೇತ್ರದಲ್ಲಿ ಅಭಿವೃದ್ಧಿಯ ಪರ್ವವೇ ನಡೆದಿದೆ. ಇದು ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ. ತೀವ್ರ ಬರಗಾಲದ ಪರಿಸ್ಥಿತಿಯಲ್ಲಿ ಜನತೆಗೆ ಒಂದು ರೂಪಾಯಿಯ ಸಹಕಾರವನ್ನು ನೀಡದ ರಾಜ್ಯ ಸರ್ಕಾರದಿಂದ ಜನತೆ ಯಾವುದನ್ನು ನಿರೀಕ್ಷಿಸಲು ಸಾಧ್ಯ. 23 ಲಕ್ಷ ರೈತ ಕುಟುಂಬಕ್ಕೆ ಹಾಲಿನ ಪ್ರೋತ್ಸಾಹ ಧನ 660 ಕೋಟಿ ಬಿಡುಗಡೆ ಮಾಡಲು ಕಾಂಗ್ರೆಸ್ ಸರ್ಕಾರ ಮೀನಾಮೇಷ ಏಣಿಸುತ್ತಿದೆ ಎಂದು ಆರೋಪಿಸಿದರು.ಬಿ.ಎಸ್‌.ಯಡಿಯೂರಪ್ಪ ಅವರ ಮೇಲೆ ಮಾರಣಾಂತಿಕ ಹಲ್ಲೆಯಾದಾಗ ಮಾಜಿ ಪ್ರಧಾನಿ ದೇವಗೌಡ ಶಿವಮೊಗ್ಗಕ್ಕೆ ಬಂದು ಆರೋಗ್ಯ ವಿಚಾರಿಸಿಕೊಂಡು ಹೋಗಿದ್ದರು. ನಮ್ಮ ಕುಟುಂಬ ದೇವಗೌಡ ಕುಟುಂಬದೊಂದಿಗೆ ಅವಿನಾವ ಭಾವ ಸಂಬಂಧ ಹೊಂದಿದೆ. ಈ ಬಾರಿ ಜಿಲ್ಲೆಯಲ್ಲಿ ಜೆಡಿಎಸ್ ಮೈತ್ರಿಯಿಂದ ಈ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ. ಗ್ರಾಮೀಣ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ವಾತವರಣ ನಿರ್ಮಾಣವಾಗಿದೆ ಎಂದರು.

ಮಾಜಿ ಶಾಸಕ ಅಶೋಕ್ ನಾಯ್ಕ ಮಾತನಾಡಿ, ರಾಘವೇಂದ್ರರನ್ನು ಕೇಂದ್ರ ಮಂತ್ರಿಯಾಗುವುದನ್ನು ತಡೆಯಲು ಯಾವ ಶಕ್ತಿಗಳಿಂದಲೂ ಸಾಧ್ಯವಿಲ್ಲ. ಪ್ರತಿಯೊಂದು ಗ್ರಾಮದಲ್ಲೂ ಅದ್ಬುತ ಸ್ಪಂದನೆ ಸಿಗುತ್ತಿದೆ. ಎರಡು ಪಕ್ಷಗಳ ಕಾರ್ಯಕರ್ತರು ತಡ ಮಾಡದೆ ಗ್ರಾಮಗಳಲ್ಲಿ ಇನ್ನೂಳಿದ ಮತಗಳನ್ನು ಬಿಜೆಪಿಯತ್ತ ಸೆಳೆಯುವ ಪ್ರಯತ್ನ ಮಾಡಬೇಕಿದೆ ಎಂದರು.ಶಾಸಕಿ ಶಾರದ ಪೂರ್‍ಯಾನಾಯ್ಕ್, ಮಂಡಲ ಅಧ್ಯಕ್ಷ ಮಲ್ಲೇಶಪ್ಪ, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಬಿಜೆಪಿ ಯುವ ಅಧ್ಯಕ್ಷ ಕಿರಣ್‌ಗೌಡ, ವೈದ್ಯ ಡಾ.ಧನಂಜಯ್ ಸರ್ಜಿ, ಮಾಜಿ ಎಪಿಎಂಸಿ ಅಧ್ಯಕ್ಷ ಸತೀಶ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ವೀರಭದ್ರಪ್ಪ ಪೂಜಾರ್, ಸತೀಶ್ ಕೆ ಶೆಟ್ಟಿ, ಕಾಂತರಾಜ್, ಷಡಾಕ್ಷರಪ್ಪಗೌಡ, ಎಸ್.ಶ್ರೀನಿವಾಸ್, ಡಿ.ಮಂಜುನಾಥ್, ಸುಬ್ರಮಣ್ಣಿ, ರಾಜೇಶ್ ಪಾಟೀಲ್, ರಾದಾಕೃಷ್ಣ, ಶಂಕರಮೂರ್ತಿ, ಮಹಾದೇವಪ್ಪ, ರುದ್ರೇಶಪ್ಪ, ದಿನೇಶ್, ನಾಗೇಶ್ವರಾವ್, ಶಿವನಗೌಡ, ಜಗದೀಶ್ ಗೌಡ, ಬಸವರಾಜ್ ಇತರರಿದ್ದರು.