ಕೊಪ್ಪಳ, ವಿಜಯಪುರ, ರಾಯಚೂರು ಅಣು ಸ್ಥಾವರಕ್ಕೆ ಸಂಪುಟ ರೆಡ್‌ಸಿಗ್ನಲ್‌

| Published : Jul 18 2025, 12:45 AM IST

ಕೊಪ್ಪಳ, ವಿಜಯಪುರ, ರಾಯಚೂರು ಅಣು ಸ್ಥಾವರಕ್ಕೆ ಸಂಪುಟ ರೆಡ್‌ಸಿಗ್ನಲ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಕೇಂದ್ರದ ಎನ್‌ಟಿಪಿಸಿ(ನ್ಯಾಷನಲ್‌ ಥರ್ಮಲ್‌ ಪವರ್ ಕಾರ್ಪೊರೇಷನ್‌) ಸಂಸ್ಥೆ ಸಂಭಾವ್ಯ ಸ್ಥಳಗಳಾಗಿ ಗುರುತಿಸಿದ್ದ ಕೊಪ್ಪಳ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಪ್ರಾಥಮಿಕ ಅಧ್ಯಯನ ಮುಂದುವರೆಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮತಿ ನಿರಾಕರಿಸಲಾಗಿದೆ.

- ಪ್ರಾಥಮಿಕ ಅಧ್ಯಯನ ಮುಂದುವರಿಸಲು ಅನುಮತಿ ನಕಾರ- ರಾಜ್ಯಾದ್ಯಂತ ಪರಿಶೀಲಿಸಿ, ಪರ್‍ಯಾಯ ಸ್ಥಳ ತಿಳಿಸಲು ಸೂಚನೆ

===

- ಉತ್ತರ ಕನ್ನಡ ಜಿಲ್ಲೆಯ ಕೈಗಾದಲ್ಲಿ ಈಗಾಗಲೇ ಪರಮಾಣು ವಿದ್ಯುತ್‌ ಸ್ಥಾವರ ಕಾರ್ಯಾಚರಿಸುತ್ತಿದ- ಮತ್ತೊಂದು ಸ್ಥಾವರ ಸ್ಥಾಪಿಸಲು ಕೇಂದ್ರ ನಿರ್ಧಾರ. ವಿಜಯಪುರ, ಕೊಪ್ಪಳ, ರಾಯಚೂರಲ್ಲಿ ಪರಿಗಣನೆ- ಅಣು ಸ್ಥಾವರಕ್ಕೆ 1200 ಎಕರೆ ಜಾಗ ಬೇಕು. ಸ್ಥಾವರ ಸ್ಥಳ ಜನವಸತಿಯಿಂದ 3 ಕಿ.ಮೀ. ದೂರ ಇರಬೇಕು- ಸಂಭಾವ್ಯ ಸ್ಥಳ ಎಂದು ಪರಿಗಣಿಸಿ ಈ ಮೂರು ಕಡೆ ಪ್ರಾಥಮಿಕ ಅಧ್ಯಯನ ನಡೆಸಿದ್ದ ಎನ್‌ಟಿಪಿಸಿ- ಜನರಿಂದ ತೀವ್ರ ವಿರೋಧ ಹಿನ್ನೆಲೆ. ಸಂಪುಟದಲ್ಲಿ ಪ್ರಾಥಮಿಕ ಅಧ್ಯಯನ ಮುಂದುವರಿಕೆಗೆ ಬ್ರೇಕ್‌

--ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಕೇಂದ್ರದ ಎನ್‌ಟಿಪಿಸಿ(ನ್ಯಾಷನಲ್‌ ಥರ್ಮಲ್‌ ಪವರ್ ಕಾರ್ಪೊರೇಷನ್‌) ಸಂಸ್ಥೆ ಸಂಭಾವ್ಯ ಸ್ಥಳಗಳಾಗಿ ಗುರುತಿಸಿದ್ದ ಕೊಪ್ಪಳ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಪ್ರಾಥಮಿಕ ಅಧ್ಯಯನ ಮುಂದುವರೆಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮತಿ ನಿರಾಕರಿಸಲಾಗಿದೆ.

ಅಲ್ಲದೆ, ಇಡೀ ರಾಜ್ಯವನ್ನು ಒಂದು ಘಟಕವಾಗಿ ಪರಿಗಣಿಸಿ ರಾಜ್ಯಾದ್ಯಂತ ಪರಿಶೀಲನೆ ನಡೆಸಿ ಪರ್ಯಾಯ ಸ್ಥಳ ಗುರುತಿಸಬೇಕು. ಆ ವರದಿ ಆಧಾರದ ಮೇಲೆ ಪರಮಾಣು ವಿದ್ಯುತ್‌ ಸ್ಥಾವರಕ್ಕೆ ಎಲ್ಲಿ ಪ್ರಾಥಮಿಕ ಅಧ್ಯಯನ ನಡೆಸಿ ಮುಂದುವರೆಯಬಹುದು ಎಂಬ ಬಗ್ಗೆ ರಾಜ್ಯ ಸರ್ಕಾರ ತಿಳಿಸುತ್ತದೆ ಎಂದು ಎನ್‌ಟಿಪಿಸಿಗೆ ಹೇಳಲು ತೀರ್ಮಾನಿಸಲಾಗಿದೆ.

ತನ್ಮೂಲಕ ಕೊಪ್ಪಳ, ವಿಜಯಪುರ ಹಾಗೂ ರಾಯಚೂರು ಜನತೆಗೆ ತಾತ್ಕಾಲಿಕ ರಿಲೀಫ್ ದೊರೆತಿದ್ದು, ಮುಂದಿನ ದಿನಗಳಲ್ಲಿ ಯಾವ ಜಿಲ್ಲೆ ಪರಮಾಣು ವಿದ್ಯುತ್‌ ಸ್ಥಾವರಕ್ಕೆ ಆಯ್ಕೆಯಾಗಲಿದೆ ಎಂಬ ಬಗ್ಗೆ ಕುತೂಹಲ ಮೂಡಿದೆ.

ಮತ್ತೊಂದು ಅಣು ಘಟಕ:

ಕೈಗಾ ಬಳಿಕ ರಾಜ್ಯದಲ್ಲಿ ಮತ್ತೊಂದು ಪರಮಾಣು ವಿದ್ಯುತ್‌ ಸ್ಥಾವರ ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅದರಂತೆ ಎನ್‌ಟಿಪಿಸಿಯು ವಿಜಯಪುರ, ಕೊಪ್ಪಳ, ರಾಯಚೂರು ಜಿಲ್ಲೆಗಳನ್ನು ಸಂಭಾವ್ಯ ಸ್ಥಳಗಳಾಗಿ ಪರಿಗಣಿಸಿ ಪ್ರಾಥಮಿಕ ಅಧ್ಯಯನ ನಡೆಸಿತ್ತು.

ಈ ಪರಮಾಣು ವಿದ್ಯುತ್‌ ಸ್ಥಾವರಕ್ಕೆ 1,200 ಎಕರೆ ಜಾಗ ಬೇಕಿದ್ದು, ಅದು ಜನವಸತಿಯಿಂದ ಕನಿಷ್ಠ 3 ಕಿ.ಮೀ. ದೂರದಲ್ಲಿರಬೇಕು ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಬೇರೆ ಬೇರೆ ತಾಲೂಕುಗಳಲ್ಲಿ ಈಗಾಗಲೇ ಭೂಮಿ ಪರಿಶೀಲನೆ ನಡೆಸಲಾಗಿತ್ತು. ಕೊಪ್ಪಳದ ಅರಸನಕೆರೆಯ ಕರಡಿಗುಡ್ಡದ ಬಳಿ 615 ಎಕರೆ ಗುರುತಿಸಲಾಗಿತ್ತು. ಆದರೆ ಆ ಭಾಗದ ಜನರಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ಸಚಿವರ ವಿರೋಧ:

ಕಳೆದ ಸಚಿವ ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದಾಗಲೇ ಶಿವರಾಜ್‌ ತಂಗಡಗಿ, ಬೋಸರಾಜು, ಎಂ.ಬಿ.ಪಾಟೀಲ್‌ ಸೇರಿ ವಿವಿಧ ಸಚಿವರು ವಿರೋಧ ವ್ಯಕ್ತಪಡಿಸಿದ್ದರು. ಈಗಾಗಲೇ ಕೊಪ್ಪಳದಲ್ಲಿ ಬಲ್ದೋಟಾ ಕಾರ್ಖಾನೆ ವಿವಾದ ನಡೆಯುತ್ತಿದೆ. ಈ ಹಂತದಲ್ಲಿ ಕೊಪ್ಪಳದಲ್ಲಿ ಪರಮಾಣು ವಿದ್ಯುತ್‌ ಸ್ಥಾವರ ಸ್ಥಾಪನೆಗೆ ಅನುಮತಿ ನೀಡಿದರೆ ತೀವ್ರ ವಿರೋಧ ಎದುರಿಸಬೇಕಾಗುತ್ತದೆ. ಹೀಗಾಗಿ ಇಡೀ ರಾಜ್ಯವನ್ನು ಮತ್ತೊಂದು ಬಾರಿ ಪರಿಶೀಲಿಸಿ ಸಂಭಾವ್ಯ ಸ್ಥಳಗಳನ್ನು ಗುರುತಿಸುವಂತೆ ಸೂಚಿಸಲು ಸಲಹೆ ನೀಡಲಾಯಿತು ಎಂದು ಮೂಲಗಳು ತಿಳಿಸಿವೆ.

===

ಎನ್‌ಟಿಪಿಸಿಯು ಕೊಪ್ಪಳ, ವಿಜಯಪುರ, ರಾಯಚೂರು ಜಿಲ್ಲೆಗಳಲ್ಲಿನ ಪ್ರಾಥಮಿಕ ಅಧ್ಯಯನ ನಡೆಸಲು ಅನುಮತಿ ಕೋರಿತ್ತು. ಆದರೆ ಮೂರೂ ಜಿಲ್ಲೆಗಳಲ್ಲೂ ಅನುಮತಿಗೆ ನಿರಾಕರಿಸಿದ್ದು, ರಾಜ್ಯಾದ್ಯಂತ ಪರಿಶೀಲಿಸಿ ಬಳಿಕ ಸಂಭಾವ್ಯ ಸ್ಥಳಗಳನ್ನು ಆಯ್ಕೆ ಮಾಡಲು ಸೂಚಿಸಲಾಗುವುದು.

-ಎಚ್.ಕೆ. ಪಾಟೀಲ್‌, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು