ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಚುನಾವಣೆ ಮುಗಿಯುವವರೆಗಷ್ಟೇ ರಾಜಕೀಯ. ಆನಂತರ ನಡೆಯುವ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.ನಗರದ ಕೆ.ವಿ ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘದ ವತಿಯಿಂದ ಬಿ.ಎಚ್.ಮಂಗೇಗೌಡ ಶಿಕ್ಷಣ ಪ್ರಶಸ್ತಿ, ನಂಜಮ್ಮ ಮೋಟೇಗೌಡ ಸಮಾಜ ಸೇವಾ ಪ್ರಶಸ್ತಿ ಹಾಗೂ ಕೆ.ಟಿ.ಶ್ರೀಕಂಠೇಗೌಡ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಕೆ.ವಿ.ಶಂಕರಗೌಡ, ಎಚ್.ಕೆ.ವೀರಣ್ಣಗೌಡ, ಜಿ.ಮಾದೇಗೌಡ, ಎಚ್.ಡಿ.ಚೌಡಯ್ಯನವರಂತಹ ಅನೇಕ ಮಂದಿ ಮುತ್ಸದ್ಧಿ ನಾಯಕರು ಅಭಿವೃದ್ಧಿಯ ಮಾರ್ಗದರ್ಶನ ಮಾಡಿಹೋಗಿದ್ದಾರೆ. ಅವರ ಹಾದಿಯನ್ನು ಅನುಸರಿಸುವುದರೊಂದಿಗೆ ಜಿಲ್ಲೆಗೆ ಅಭಿವೃದ್ಧಿಯಲ್ಲಿ ಹೊಸ ರೂಪವನ್ನು ನೀಡಬೇಕಿದೆ ಎಂದು ಹೇಳಿದರು.ಹಿರಿಯರು ರಾಜಕಾರಣಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದಲೇ ರೈತಸಭಾಂಗಣ ಆಧುನಿಕತೆಯ ಸ್ಪರ್ಶ ಕಂಡುಕೊಳ್ಳುವುದಕ್ಕೆ ಕಾರಣವಾಗಿದೆ. ೪.೨೮ ಕೋಟಿ ರು. ವೆಚ್ಚದಲ್ಲಿ ನವೀಕರಣಗೊಳ್ಳುತ್ತಿದೆ. ಅ.೨೨ರಂದು ಹೈದರಾಬಾದ್‌ನಿಂದ ಎನ್‌ಸಿಡಿಸಿ ಅಧಿಕಾರಿಗಳು ಬಂದು ಜಿಲ್ಲಾಧಿಕಾರಿಗೆ ಚೆಕ್ ವಿತರಿಸುತ್ತಿದ್ದಾರೆ. ರೈತಸಭಾಂಗಣದ ಪಕ್ಕದಲ್ಲೇ ಹಳೆಯ ಪ್ರವಾಸಿ ಮಂದಿರವಿದ್ದು, ಅದನ್ನೂ ಪುನಶ್ಚೇತನ ಮಾಡುವಂತೆ ಕೋರಲಾಗಿದೆ. ಹಣ ಸಾಲದಿದ್ದರೆ ಇನ್ನೂ ೭೦ ಲಕ್ಷ ರು. ಕೊಡುವ ಭರವಸೆಯನ್ನು ಕುಮಾರಸ್ವಾಮಿ ಅವರು ನೀಡಿದ್ದಾರೆ ಎಂದು ತಿಳಿಸಿದರು.
ಹಿರಿಯರ ಸಮ್ಮುಖದಲ್ಲೇ ಗುದ್ದಲಿಪೂಜೆ ನೆರವೇರಿಸಿದ್ದು, ಆದಷ್ಟು ಶೀಘ್ರದಲ್ಲೇ ಕಾಮಗಾರಿ ಮುಗಿಸಿ ರೈತಸಭಾಂಗಣಕ್ಕೆ ಮತ್ತೆ ಜೀವಂತಿಕೆ ತುಂಬಲಾಗುವುದು. ಅಭಿವೃದ್ಧಿ ವಿಚಾರವಾಗಿ ಯಾರೇ ಆಗಲಿ ಅವರಿಗೆ ನೇರವಾಗಿ ಹೇಳಿ. ನನಗೂ ಹೇಳಿ. ನಾವು ನಮ್ಮಿಂದಾದ ಒಳ್ಳೆಯ ಕೆಲಸಗಳನ್ನು ಮಾಡಿಕೊಡುತ್ತೇವೆ. ಅವರಿಂದಾಗುವ ಒಳ್ಳೆಯ ಕೆಲಸಗಳಿಗೂ ಬೆಂಬಲವಾಗಿ ನಿಲ್ಲುವ ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಪಾಂಡವಪುರದ ವಿದ್ಯಾ ಪ್ರಚಾರ ಸಂಘದ ಗೌರವ ಕಾರ್ಯದರ್ಶಿ ಕೆ.ವಿ ಬಸವರಾಜುಗೆ ಬಿ.ಎಚ್ ಮಂಗೇಗೌಡ ಶಿಕ್ಷಣ ಪ್ರಶಸ್ತಿ, ಸಮಾಜ ಸೇವಕ ಮಂಗಲ ಯೋಗೀಶ್‌ಗೆ ನಂಜಮ್ಮ ಮೋಟೆಗೌಡ ಸಮಾಜ ಸೇವಾ ಪ್ರಶಸ್ತಿ ಹಾಗೂ ಮೈಸೂರಿನ ಮಹಾರಾಣಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪಿ.ಸೋಮಣ್ಣಗೆ ಕೆ.ಟಿ.ಶ್ರೀಕಂಠೇಗೌಡ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ನಂಜಮ್ಮ ಮೋಟೆಗೌಡ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ.ಟಿ ಹನುಮಂತು, ಕರ್ನಾಟಕ ಸಂಘದ ಕಾರ್ಯದರ್ಶಿ ಲೋಕೇಶ್ ಚಂದಗಾಲು ಇತರರಿದ್ದರು.