ಗ್ಯಾಂಗ್‌ರೇಪ್‌ನಲ್ಲಿ ರಾಜಕಾರಣ ಸಲ್ಲದು: ಶಾಸಕ ಮಾನೆ

| Published : Feb 16 2024, 01:49 AM IST

ಸಾರಾಂಶ

ಅನೈತಿಕ ಚಟುವಟಿಕೆಗಳಲ್ಲಿ ನಿರತ ವಸತಿ ಗೃಹಗಳ ಮೇಲೆ ನಿಗಾ ವಹಿಸಬೇಕು. ಸಾಧ್ಯವಾದರೆ ಪರವಾನಗಿ ರದ್ದು ಪಡಿಸಬೇಕು. ಇಲ್ಲದಿದ್ದರೆ ಅನೈತಿಕ ಚಟುವಟಿಕೆಗಳು ನಡೆಯುತ್ತವೆ.

ಕನ್ನಡಪ್ರಭ ವಾರ್ತೆ ಹಾನಗಲ್ಲ

ಗ್ಯಾಂಗ್‌ ರೇಪ್‌ನಂತಹ ಸೂಕ್ಷ್ಮ ಸಂಗತಿಗಳಲ್ಲಿ ರಾಜಕಾರಣ ಎಳೆದು ತಂದ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಶ್ರೀನಿವಾಸ ಮಾನೆ ವಿಧಾನಸಭೆ ಅಧಿವೇಶನದಲ್ಲಿ ಎಳೆ ಎಳೆಯಾಗಿ ವಿಷಯ ಪ್ರಸ್ತಾಪಿಸಿ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರ ಪ್ರಶ್ನೆಗೆ ಉತ್ತರಿಸುವ ಮೂಲಕ ಇಡೀ ಸದನದ ಗಮನ ಸೆಳೆದರು.

ಅಬಕಾರಿ ಇಲಾಖೆಯ ಸಿಎಲ್-7 ಮದ್ಯದಂಗಡಿಗೆ ಪರವಾನಿಗೆ ಪಡೆಯಲು ಕೊಠಡಿ ನಿರ್ಮಿಸಬೇಕಿದೆ. ಕೆಲವರು ಕೊಠಡಿಗಳನ್ನು ನಿರ್ಮಿಸಿ ಅನೈತಿಕ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುತ್ತಾರೆ. ಹಾನಗಲ್‌ನಲ್ಲೂ ಇಂಥದೇ ಘಟನೆ ನಡೆದಿದೆ ಎಂದರು.

ಕಾನೂನಿನಲ್ಲಿಯೂ ಸಹ ಸಾಕಷ್ಟು ತೊಡಕುಗಳಿವೆ. ಇದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಅಧಿಕಾರಿಗಳು ಜಾರಿಕೊಳ್ಳುತ್ತಾರೆ. ಪರವಾನಗಿ ಮುಗಿದ ವಸತಿ ಗೃಹದಲ್ಲಿ ಯಾವುದೇ ವಿಳಾಸ ನೋಡದೇ, ದೃಢೀಕರಣ ಮಾಡದೇ ಜೋಡಿಗಳಿಗೆ ಕೊಠಡಿ ಬಾಡಿಗೆ ನೀಡುತ್ತಿರುವ ಹಿನ್ನೆಲೆ ಘಟನೆಯ ನಂತರ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ವಸತಿ ಗೃಹದ ಮಾಲಿಕ ಸಹ ಪೊಲೀಸರಿಗೆ ದೂರು ನೀಡುವ ಗೋಜಿಗೆ ಹೋಗಲಿಲ್ಲ. ಆ ಮಾಲೀಕನಿಗೆ ಜವಾಬ್ದಾರಿಯೂ ಇಲ್ಲ. ಇದೀಗ ವಸತಿ ಗೃಹ ಸೀಜ್ ಮಾಡಲಾಗಿದ್ದು, ಬಾರ್ ಇನ್ನೂ ಧಾರಾಳವಾಗಿ ನಡೆಯುತ್ತಿದೆ. ಕಠಿಣ ಕ್ರಮಗಳ ಮೂಲಕ ಕಾನೂನು ಬಿಗಿಗೊಳಿಸಿ ಪೊಲೀಸರಿಗೆ ಶಕ್ತಿ ತುಂಬುವ ಕೆಲಸ ಮಾಡದಿದ್ದರೆ ಇಂಥ ಕೃತ್ಯಗಳನ್ನು ಮಟ್ಟ ಹಾಕುವುದು ಅಸಾಧ್ಯ ಎಂದು ಶ್ರೀನಿವಾಸ ಮಾನೆ ಪ್ರತಿಪಾದಿಸಿದರು.

ಗಾಂಜಾ, ಮಟ್ಕಾ ದಂಧೆಗಳಿಗೆ ಕಡಿವಾಣ ಬೀಳಬೇಕಿದೆ. ಮಟ್ಕಾ ದಂಧೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಜಿಪಿಎಸ್ ಲೋಕೇಶನ್ ವಿಡಿಯೋ ಕಳುಹಿಸಿದರೂ ಕೂಡ ಪ್ರಯೋಜನವಾಗುತ್ತಿಲ್ಲ. ಇವುಗಳನ್ನೆಲ್ಲ ಹತ್ತಿಕ್ಕದಿದ್ದರೆ ಗ್ಯಾಂಗ್‌ರೇಪ್, ಹೊಡೆದಾಟ, ಅಪರಾಧ ಚಟುವಟಿಕೆ, ಪೊಲೀಸ್ ನೈತಿಕಗಿರಿ ತಡೆಯುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಮಾನೆ, ಅನೈತಿಕ ಚಟುವಟಿಕೆಗಳು ಹೆಚ್ಚುತ್ತಿವೆ. ಹಾನಗಲ್‌ನಂಥ ದೊಡ್ಡ ಕ್ಷೇತ್ರದಲ್ಲಿ ಅಗತ್ಯಕ್ಕೆ ತಕ್ಕಷ್ಟು ಪೊಲೀಸ್ ಠಾಣೆಗಳಿಲ್ಲ, ಸಿಬ್ಬಂದಿ ಇಲ್ಲ. ಹೀಗಾದರೆ ಕಾನೂನು ಸುವ್ಯವಸ್ಥೆ ಕಾಪಾಡುವುದಾದರೂ ಹೇಗೆ ಎಂದು ಪ್ರಶ್ನಿಸಿ, ಮೊದಲು ಈ ನಿಟ್ಟಿನಲ್ಲಿ ಗಮನ ನೀಡಬೇಕಿದೆ. ಅನೈತಿಕ ಚಟುವಟಿಕೆಗಳಲ್ಲಿ ನಿರತ ವಸತಿ ಗೃಹಗಳ ಮೇಲೆ ನಿಗಾ ವಹಿಸಬೇಕು. ಸಾಧ್ಯವಾದರೆ ಪರವಾನಗಿ ರದ್ದು ಪಡಿಸಬೇಕು. ಇಲ್ಲದಿದ್ದರೆ ಅನೈತಿಕ ಚಟುವಟಿಕೆಗಳು ನಡೆಯುತ್ತವೆ. ಅದನ್ನು ರಾಜಕಾರಣಕ್ಕೂ ಬಳಸಲಾಗುತ್ತದೆ ಎಂದು ಶ್ರೀನಿವಾಸ ಮಾನೆ ಎಚ್ಚರಿಸಿದರು.