ಸಾರಾಂಶ
ದೇಶದಲ್ಲಿ ಡಾ. ಬಿ.ಆರ್. ಅಂಬೇಡ್ಕರ ಸಂವಿಧಾನ ಇಲ್ಲದೇ ಏನು ನಡೆಯಲು ಸಾಧ್ಯವಿಲ್ಲ. ಸಮ ಸಮಾಜ ಭಾರತ ಮಾಡುವುದೇ ನಮ್ಮ ಪಕ್ಷದ ಗುರಿ. ಕಮ್ಯುನಿಸ್ಟರ ಶಕ್ತಿ ಕುಂದಲ್ಲ. ಈಗಿನ ರಾಜಕೀಯ ಸಂಪೂರ್ಣ ಮಲಿನವಾಗಿದೆ. ಶುದ್ಧಿಕರಣ ಮಾಡಲು ಸಿದ್ಧರಾಗಬೇಕಿದೆ.
ಹರಪನಹಳ್ಳಿ: ಜಾತಿ, ಧರ್ಮದ ಅಮಲಿನಲ್ಲಿ ರಾಜಕಾರಣ ಬೇಡ. ಯಾವಾಗಲು ಜಾತ್ಯತೀತ ಕ್ರಾಂತಿಯನ್ನು ನಡೆಸೋಣ ಎಂದು ಸಿಪಿಐ ರಾಜ್ಯ ಸಹಕಾರ್ಯದರ್ಶಿ ಅಮ್ಜದ್ ತಿಳಿಸಿದರು.
ಪಟ್ಟಣದ ಸರ್ಕಾರಿ ನೌಕರ ಭವನದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ 99ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೆಲ ಮತಾಂಧ ಶಕ್ತಿಗಳು ಪ್ರಜಾತಾಂತ್ರದ ಶಕ್ತಿಯನ್ನು ನಾಶ ಮಾಡಲು ಹೊರಟಿದ್ದು, ದೇಶವನ್ನು ಕೋಮುವಾದಿಗಳ ಕಪಿಮುಷ್ಠಿಗಳಿಂದ ತಪ್ಪಿಸಲು ಮುಂದಾಗಬೇಕು ಎಂದರು.ದೇಶದಲ್ಲಿ ಡಾ. ಬಿ.ಆರ್. ಅಂಬೇಡ್ಕರ ಸಂವಿಧಾನ ಇಲ್ಲದೇ ಏನು ನಡೆಯಲು ಸಾಧ್ಯವಿಲ್ಲ. ಸಮ ಸಮಾಜ ಭಾರತ ಮಾಡುವುದೇ ನಮ್ಮ ಪಕ್ಷದ ಗುರಿ. ಕಮ್ಯುನಿಸ್ಟರ ಶಕ್ತಿ ಕುಂದಲ್ಲ. ಈಗಿನ ರಾಜಕೀಯ ಸಂಪೂರ್ಣ ಮಲಿನವಾಗಿದೆ. ಶುದ್ಧಿಕರಣ ಮಾಡಲು ಸಿದ್ಧರಾಗಬೇಕಿದೆ ಎಂದರು.
ಸಿಪಿಐ ಪಕ್ಷದ ಜಿಲ್ಲಾ ಉಸ್ತುವಾರಿ ಎಚ್.ಎಂ. ಸಂತೋಷ ಮಾತನಾಡಿ, ದೇಶದ ಪ್ರಧಾನಿಯವರು ರೈತರ, ಕಾರ್ಮಿಕರ ಸಾಲವನ್ನು ಮನ್ನಾ ಮಾಡದೆ, ಬಂಡವಾಳಶಾಹಿಗಳ ಸಾಲಮನ್ನಾ ಮಾಡುತ್ತಾರೆ. ಇಂತಹ ಸರ್ಕಾರ ನಮಗೆ ಬೇಕಾ? ನಿರಂತರವಾಗಿ ಕಾರ್ಮಿಕರ, ರೈತರ, ವಿದ್ಯಾರ್ಥಿ, ಯುವಜನರ ಬಗ್ಗೆ ನಿರಂತರ ಹೋರಾಟ ಮಾಡುವುದು ಕಮ್ಯುನಿಸ್ಟ್ ಪಕ್ಷವಾಗಿದೆ ಎಂದರು.ಸಿಪಿಐ ಪಕ್ಷದ ತಾಲೂಕು ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಎಚ್. ವೀರಯ್ಯ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಮುಖಂಡರಾದ ಬಳಿಗನೂರು ಕೊಟ್ರೇಶ್, ಹಲಗಿನ ಸುರೇಶ, ರೇಣುಕಮ್ಮ, ಎಚ್. ದಂಡೆಮ್ಮ, ಬಿ. ಜಯಲಕ್ಷ್ಮಿ, ಅನಿಲ್‌ಕುಮಾರ್, ಬಸವರಾಜ, ಶಿವರಾಮ್, ದಾದಪೀರ್, ಸೇರಿದಂತೆ ಇತರರು ಇದ್ದರು.