ಸಾರಾಂಶ
ನನಗೆ ರೈತರ ಹಿತ ಮುಖ್ಯ ಮುಂಬರುವ ದಿನಗಳಲ್ಲಿ ಬಿದರೆ ಕೆಂಬಾಳು ಮಾದಗೌಡನಹಳ್ಳಿ ಸೇರಿದಂತೆ ಎಲ್ಲಾ ಕೆರೆಗಳನ್ನು ತುಂಬಿಸಲು ಆದ್ಯತೆ ನೀಡುವುದಾಗಿ ತಿಳಿಸಿದರು. ಈ ಏತ ನೀರಾವರಿ ಯೋಜನೆ ಸಂಪೂರ್ಣ ಪೈಪ್ಲೈನ್ ಮೂಲಕ ನೀರು ಹರಿಸಲಾಗುತ್ತಿದ್ದು ಬಲ ಮತ್ತು ಎಡಭಾಗದ ಕೆರೆಗಳಿಗೆ ಅನುಗುಣವಾಗಿ ಸ್ವಲ್ಪವೂ ನೀರು ಪೋಲಾಗದೆ ಕೆರೆಗಳಿಗೆ ನೀರು ಹರಿಸಲಾಗುತ್ತಿದ್ದು ಈ ಯೋಜನೆ ನೂರಕ್ಕೆ ನೂರರಷ್ಟು ಸಂಪೂರ್ಣ ಯಶಸ್ವಿಯಾಗಿದೆ ಎಂದರು.
ಕನ್ನಡಪ್ರಭ ವಾರ್ತೆ ಬಾಗೂರು
ಸುಮಾರು 35 ಕೋಟಿ ರು. ವೆಚ್ಚದ ರೈತರ ಬಹು ನಿರೀಕ್ಷಿತ ಕಲ್ಲೇ ಸೋಮನಹಳ್ಳಿ ಏತ ನೀರಾವರಿ ಯೋಜನೆಯಿಂದ ಎಂ ಶಿವರ ಗ್ರಾಮದ ಕೆರೆಯನ್ನು ಸಂಪೂರ್ಣವಾಗಿ ತುಂಬಿಸಲಾಗಿದೆ ಎಂದು ಶಾಸಕ ಸಿ ಎನ್ ಬಾಲಕೃಷ್ಣ ಹೇಳಿದರು.ಹೋಬಳಿಯ ಎಂ ಶಿವರ ಗ್ರಾಮದ ಕೆರೆ ಸಂಪೂರ್ಣವಾಗಿ ತುಂಬಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಏರ್ಪಡಿಸಿದ್ದ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದರು. ಈ ಯೋಜನೆಯಿಂದ ತಗಡೂರು ಎಂ ಶಿವರ ಕೆಂಬಾಳು ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಸುಮಾರು 18ಕ್ಕೂ ಹೆಚ್ಚು ಕೆರೆಗಳು ಬರುತ್ತವೆ. ಯೋಜನೆಗೆ 2019ರಲ್ಲಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಗಳಾಗಿದ್ದ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಮನವಿ ಮೇರೆಗೆ ಈ ಯೋಜನೆಗೆ ಸುಮಾರು 35 ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದರು. ಕಳೆದ ವರ್ಷದ ಬೇಸಿಗೆಯಲ್ಲಿ ತಾಂತ್ರಿಕವಾಗಿ ಚಾಲನೆ ನೀಡಲಾಗಿತ್ತು. ಈ ವರ್ಷದ ಪೂರ್ವ ಹಂಗಾಮಿನಲ್ಲಿ ನವಿಲೆ ಬಳಿ ಇರುವ ಜಾಕ್‌ವೆಲ್‌ನಲ್ಲಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಈ ಏತ ನೀರಾವರಿ ಯೋಜನೆಯಲ್ಲಿ ಪ್ರಥಮವಾಗಿ ಎಂ ಶಿವರ ಕೆರೆ ಸಂಪೂರ್ಣವಾಗಿ ತುಂಬಿ ಕೋಡಿ ಬಿದ್ದಿದೆ, ಈ ಭಾಗದ ರೈತರ ದಶಕಗಳ ಕನಸು ನನಸಾಗಿದೆ ಎಂದರು.ಈ ಯೋಜನೆ ಪೂರ್ಣಗೊಳಿಸುವಷ್ಟರಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದ್ದೇನೆ. ನನಗೆ ರೈತರ ಹಿತ ಮುಖ್ಯ ಮುಂಬರುವ ದಿನಗಳಲ್ಲಿ ಬಿದರೆ ಕೆಂಬಾಳು ಮಾದಗೌಡನಹಳ್ಳಿ ಸೇರಿದಂತೆ ಎಲ್ಲಾ ಕೆರೆಗಳನ್ನು ತುಂಬಿಸಲು ಆದ್ಯತೆ ನೀಡುವುದಾಗಿ ತಿಳಿಸಿದರು. ಈ ಏತ ನೀರಾವರಿ ಯೋಜನೆ ಸಂಪೂರ್ಣ ಪೈಪ್ಲೈನ್ ಮೂಲಕ ನೀರು ಹರಿಸಲಾಗುತ್ತಿದ್ದು ಬಲ ಮತ್ತು ಎಡಭಾಗದ ಕೆರೆಗಳಿಗೆ ಅನುಗುಣವಾಗಿ ಸ್ವಲ್ಪವೂ ನೀರು ಪೋಲಾಗದೆ ಕೆರೆಗಳಿಗೆ ನೀರು ಹರಿಸಲಾಗುತ್ತಿದ್ದು ಈ ಯೋಜನೆ ನೂರಕ್ಕೆ ನೂರರಷ್ಟು ಸಂಪೂರ್ಣ ಯಶಸ್ವಿಯಾಗಿದೆ ಎಂದರು.ಹೇಮಾವತಿ ಡ್ಯಾಮ್ ಸಂಪೂರ್ಣ ತುಂಬಿರುವುದರಿಂದ ಜನವರಿ ಅಂತ್ಯದವರೆಗೂ ನಾಲೆಗಳಿಗೆ ನೀರು ಹರಿಸುವುದರಿಂದ ತಾಲೂಕಿನ ಬಹುತೇಕ ಎಲ್ಲಾ ಏತ ನೀರಾವರಿ ಯೋಜನೆಗಳಿಂದ ಎಲ್ಲಾ ಕೆರೆಗಳನ್ನು ತುಂಬಿಸಬಹುದಾಗಿದೆ ಎಂದರು. ದಿಡಗ ಕೆರೆ ತುಂಬಿಸುವ ಯೋಜನೆಗೆ ಹಣ ನೀಡಿರುವ ಕಾಂಗ್ರೆಸ್ ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಶಾಸಕರು, ತಮ್ಮ ಹಾಗೂ ತಾಲೂಕಿನ ಅನೇಕ ನಾಯಕರ ಒತ್ತಾಯದ ಮೇರೆಗೆ ದಿಡಗ ಭಾಗದ ಕೆರೆಗಳನ್ನು ತುಂಬಿಸುವ ಯೋಜನೆಗೆ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನುದಾನ ನೀಡಿದ್ದಾರೆ. ತಾಲೂಕಿನ ಹಾಗೂ ದಿಡಗ ಭಾಗದ ರೈತರ ಪರವಾಗಿ ಧನ್ಯವಾದ ಅರ್ಪಿಸಿದರು ಹಾಗೂ ನೀರಾವರಿ ಯೋಜನೆ ವಿಚಾರದಲ್ಲಿ ಎಂದಿಗೂ ನಾನು ರಾಜಕೀಯ ಮಾಡಿಲ್ಲ ನಮಗೆ ರೈತರ ಹಿತ ಎಂದರು.ಜೆಡಿಎಸ್ ಹಿರಿಯ ಮುಖಂಡ ಮರಿದೇವೇಗೌಡ ಮಾತನಾಡಿ ಎಂ ಶಿವರ ಕೆರೆ ಕಳೆದ 30 ವರ್ಷಗಳಲ್ಲಿ 2 ರಿಂದ 3 ಬಾರಿ ಮಾತ್ರ ಮಳೆಯಿಂದ ತುಂಬಿತ್ತು. ಆದರೆ ಶಾಸಕರ ಪರಿಶ್ರಮದಿಂದ ಇನ್ನು ಪ್ರತಿ ವರ್ಷವೂ ತುಂಬಿ ಕೋಡಿ ಬೀಳದೆ ಎಂದರು.ಬಾಗಿನ ಅರ್ಪಣೆ ಕಾರ್ಯಕ್ರಮದ ಗ್ರಾಮದೇವತೆ ಲಕ್ಷ್ಮೀದೇವಿ ಅಮ್ಮ( ಶಿವರದಮ್ಮ) ಹಾಗೂ ದೂತರಾಯ ಕೆಂಚರಾಯ ದೇವರ ಉತ್ಸವದೊಂದಿಗೆ ಹಾಗೂ ಶ್ರೀ ಶಂಭುಲಿಂಗೇಶ್ವರ ಹಾಗೂ ಅಮೃತಲಿಂಗೇಶ್ವರ ದೇವರುಗಳಿಗೆ ಶಾಸಕ ಸಿ ಎನ್ ಬಾಲಕೃಷ್ಣ, ಪತ್ನಿ ಕುಸುಮಾ ಬಾಲಕೃಷ್ಣ ದಂಪತಿ ಗ್ರಾಮದ ಕೋಡಿ ಬಳಿ ವಿಶೇಷ ಪೂಜೆ ಸಲ್ಲಿಸಿ ಗಂಗೆ ಪೂಜೆ ನೆರವೇರಿಸಿ ಗ್ರಾಮಸ್ಥರೊಂದಿಗೆ ಸೇರಿ ಕೆರೆಗೆ ಬಾಗಿನ ಅರ್ಪಿಸಿದರು.ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ರಾಯಪ್ಪ, ಮಾಜಿ ಜಿಪಂ ಸದಸ್ಯೆ ಕುಸುಮ ಬಾಲಕೃಷ್ಣ, ಟಿಎಪಿಎಂಎಸ್ ಅಧ್ಯಕ್ಷ ಮರಗೂರು ಅನಿಲ್, ಉದ್ಯಮಿ ಭುವನಹಳ್ಳಿ ಯೋಗೇಶ್, ಗ್ರಾಮ ಪಂಚಾಯತಿ ಅಧ್ಯಕ್ಷೆ ನಯನ ಮಧು, ಕುಂಬಾರಹಳ್ಳಿ ರಮೇಶ್, ಓಬಳಾಪುರ ಬಸವರಾಜು, ವಿ ಎನ್ ಮಂಜುನಾಥ್, ವಿಎಸ್ಎಸ್ ಮಾಜಿ ಅಧ್ಯಕ್ಷ ಪುರುಷೋತ್ತಮ್, ಮುಖಂಡರಾದ ನಂಜೇಶ್ ಗೌಡ್ರು, ರಾಜು, ನವೀನ್, ಬಾಬು, ಗುಡಿ ಗೌಡ್ರುಗಳಾದ ಚೆಲುವೇಗೌಡ, ಕುಮಾರ್, ಲಕ್ಷ್ಮಿ ಬೂದೇಶ್, ಶ್ರೀನಿವಾಸ್, ಸಂಪತ್ ಕುಮಾರ್, ಗೋವಿನಕೆರೆ ರಾಮು, ಕಿಟ್ಟಿ, ಜಯರಾಮ್, ಸೇರಿದಂತೆ ಎಂ ಶಿವರ ಗ್ರಾಮ ಸೇರಿದಂತೆ ಯೋಜನೆ ವ್ಯಾಪ್ತಿಯ ಗ್ರಾಮಗಳ ಗ್ರಾಮಸ್ಥರು ಪ್ರಮುಖರು ಹಾಜರಿದ್ದರು.