ಕನ್ನಡಪ್ರಭ ವಾರ್ತೆ ಸಿರಿಗೆರೆ

ಅನ್ನದಾತ ರೈತರಿಗೆ ಅನ್ಯಾಯವಾದಾಗ ಬೆಳೆ ಪರಿಹಾರ ನೀಡಲು ಕೆಲವರು ರಾಜಕೀಯ ಕುತಂತ್ರ ನಡೆಸುವುದು ಸರಿಯಲ್ಲ ಎಂದು ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ತಿಳಿಸಿದರು.

ಭದ್ರಾವತಿಯಲ್ಲಿ ಇತ್ತೀಚೆಗೆ ನಡೆದ ತರಳಬಾಳು ಹುಣ್ಣಿಮೆ ಕಾರ್ಯಕರ್ತರಿಗೆ ಅಭಿನಂದಿಸಲು ಭಾನುವಾರ ಸದ್ಧರ್ಮ ನ್ಯಾಯಪೀಠದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಶ್ರೀಗಳು ಮಾತನಾಡಿದರು.

ಪ್ರಧಾನಮಂತ್ರಿ ಫಸಲು ಭೀಮಾ ಯೋಜನೆಯಲ್ಲಿ 7 ವರ್ಷದ ಸರಾಸರಿ ನಷ್ಟವನ್ನು ಲೆಕ್ಕಹಾಕಿ ಪರಿಹಾರ ನೀಡಲಾಗುತ್ತಿದೆ. ಬರಪರಿಹಾರ ನೀಡುವಾಗ ರೈತರ ಆಯಾಯ ವರ್ಷದ ನಷ್ಟಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ನಷ್ಟ ಅನುಭವಿಸಿದ ರೈತರಿಗೆ ಮಾತ್ರವೇ ವಿಮೆಯ ಮೊತ್ತ ಸಿಗುವಂತಾಗಬೇಕು ಎಂದರು.

ಮಳೆ ಬರುವುದು ಪ್ರಾಕೃತಿಕ ಪರಿಸ್ಥಿತಿಯನ್ನು ಅವಲಂಭಿಸಿದೆ. ಅದಕ್ಕೆ ಯಾವ ಊರು, ಕೇರಿ ಗೊತ್ತಿಲ್ಲ. ಒಂದೆಡೆ ಮಳೆ ಬರುತ್ತದೆ, ಮತ್ತೊಂದೆಡೆ ಬರುವುದಿಲ್ಲ. ಅದನ್ನು ಗಣನೆಗೆ ತೆಗೆದುಕೊಂಡು ಪರಿಹಾರ ಒದಗಿಸಬೇಕು ಎಂದರು.


ಕೈಗಾರಿಕಾ ಕಾರಿಡಾರ್‌ಗಳನ್ನು ನಿರ್ಮಿಸಲು, ಕೈಗಾರಿಕಾ ವಲಯ ರೂಪಿಸಲು ರೈತರ ಫಲವತ್ತಾದ ಭೂಮಿಗಳನ್ನು ವಶಪಡಿಸಿಕೊಳ್ಳುವ ಕ್ರಮ ಸರಿಯಾದುದಲ್ಲ. ಖಾಸಗಿ ಉದ್ಯಮಗಳಿಗೆ ರೈತರ ಜಮೀನುಗಳನ್ನು ವಶಪಡಿಸಿಕೊಳ್ಳುವ ಕ್ರಮವನ್ನು ಸರ್ಕಾರ ನಿಲ್ಲಿಸಬೇಕು. ಉದ್ದಿಮೆಗಳಿಗೆ ವಶಪಡಿಸಿಕೊಳ್ಳುವ ಜಮೀನಿನ ಮಾಲೀಕತ್ವ ರೈತನಲ್ಲಿಯೇ ಉಳಿಯಬೇಕು ಎಂದರು.

ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಕೇಳಿ ತಂದೆ-ತಾಯಿಗಳ ಮೇಲೆ ಪ್ರಕರಣ ಹಾಕುವ ಮಹಿಳೆಯರ ಮನೋಭಾವ ನಿಲ್ಲಬೇಕು. ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿಸಿ, ಸಾಲಸೋಲ ಮಾಡಿ ಮದುವೆ ಮಾಡಿಸಿರುವ ತಂದೆ-ತಾಯಿಗಳಿಗೆ ಗೌರವ ನೀಡಬೇಕು. ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳಬಾರದು. ತವರು ಮನೆಯ ಗೌರವ ಉಳಿಸುವುದೇ ನಿಜವಾದ ಧರ್ಮ. ಎಲ್ಲರೂ ಕುಟುಂಬ ಮೌಲ್ಯಗಳನ್ನು ಕುರಿತುಕೊಳ್ಳಿ ಎಂದರು.

ಕೇಂದ್ರ ಕೃಷಿ ಸಚಿವ ಶಿವರಾಜ್ ಚೌಹಾಣ್ ಅವರನ್ನು ಭೇಟಿ ಮಾಡಲು ದೆಹಲಿಗೆ ತೆರಳುವ ಯೋಜನೆ ಇದೆ ಎಂದು ತಿಳಿಸಿದರು. ಭದ್ರ ಮೇಲ್ದಂಡೆ ಯೋಜನೆ ಶೀಘ್ರ ಜಾರಿಗೆ ಬರಬೇಕು. ಸಿರಿಗೆರೆ ಸರ್ಕಲ್‌ನಲ್ಲಿ ರೈಲ್ವೆ ನಿಲ್ದಾಣ ನಿರ್ಮಾಣವಾಗಬೇಕು ಎಂಬುದು ನಮ್ಮ ಅಭಿಲಾಷೆ. ಈ ವಿಷಯವಾಗಿ ಸೋಮಣ್ಣ ಅವರೊಂದಿಗೆ ಚರ್ಚಿಸಲಾಗಿದೆ ಎಂದರು. ಜೊತೆಗೆ ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಪುನಃ ಆರಂಭಿಸಬೇಕೆಂಬ ಅಗತ್ಯವಿದೆ ಎಂದು ಹೇಳಿದರು.

ಗರ್ಭಕೋಶದ ಕ್ಯಾನ್ಸರ್ ಹಾಗೂ ಸ್ತನ ಕ್ಯಾನ್ಸರ್ ತಡೆಗಟ್ಟುವ ಲಸಿಕೆಗಳನ್ನು ಸಂಸ್ಥೆಯ ಶಾಲೆಗಳಲ್ಲಿ ಓದುತ್ತಿರುವ 14 ವರ್ಷದ ಹೆಣ್ಣುಮಕ್ಕಳಿಗೆ ನೀಡುವ ಉದ್ದೇಶವನ್ನು ಸಂಸ್ಥೆಯು ಹೊಂದಿತ್ತು. ಅದಕ್ಕಾಗಿ 2 ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು. ಆದರೆ ಇಡೀ ದೇಶದಾದ್ಯಂತ ಇರುವ ಎಲ್ಲ ಹೆಣ್ಣುಮಕ್ಕಳಿಗೆ ಪ್ರಧಾನಿ ಮೋದಿಯವರು ಈ ಲಸಿಕೆ ನೀಡಲು ಮುಂದಾಗಿರುವುದು ನಮಗೆ ಹೆಮ್ಮೆ ತಂದಿದೆ ಎಂದರು.

ತರಳಬಾಳು ಹುಣ್ಣಿಮೆ ಯಶಸ್ವಿಯಾಗಲು ಮಠದ ಭಕ್ತರು, ಕಾರ್ಯಕರ್ತರು ಸಂಸ್ಥೆಯ ನೌಕರರು ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಅವರ ಸೇವೆ ಸ್ತುತ್ಯಾರ್ಹ ಎಂದರು. ಆಡಳಿತಾಧಿಕಾರಿ ಡಾ.ಎಚ್.‌ವಿ.ವಾಮದೇವಪ್ಪ ಮಾತನಾಡಿ ಸಂಸ್ಥೆಯ ಶಿಕ್ಷಕರು ಶ್ರದ್ಧೆಯಿಂದ ದುಡಿದದ್ದರ ಪರಿಣಾಮ ಮಹೋತ್ಸವ ವಿಜೃಂಬಣೆಯಿಂದ ನಡೆಯಿತು ಎಂದರು.

ಕಾರ್ಯನಿರ್ವಹಣಾಧಿಕಾರಿ ವೀರಣ್ಣ ಎಸ್. ಜತ್ತಿ ಮಾತನಾಡಿ, ದೈಹಿಕ ಶಿಕ್ಷಣ ಶಿಕ್ಷಕರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತೋರಿದ ಸೃಜನಾತ್ಮಕತೆ ಮತ್ತು ಸಂಶೋಧನಾ ಮನೋಭಾವ ಶ್ಲಾಘನೀಯವಾಗಿದೆ. ಸರ್ವಧರ್ಮಗಳ ಚಿಹ್ನೆಗಳ ಹೆಸರುಗಳನ್ನು ಪ್ರದರ್ಶಿಸುವ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಭದ್ರಾವತಿ ತರಳಬಾಳು ಹುಣ್ಣಿಮೆಯ ಯಶಸ್ಸಿಗೆ ಶ್ರಮಿಸಿದ ಶ್ರೀಮಠದ ಎಲ್ಲಾ ನೌಕರರಿಗೆ ನೆನಪಿನ ಕಾಣಿಕೆಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್. ಮರುಳಸಿದ್ದಯ್ಯ, ಕಚೇರಿಯ ಮುರುಗೇಂದ್ರಯ್ಯ, ಶ್ರೀಸಂಸ್ಥೆಯ ಶಾಲಾ-ಕಾಲೇಜುಗಳ ಸಿಬ್ಬಂದಿ, ತರಳಬಾಳು ಹುಣ್ಣಿಮೆ ಸಮಿತಿ ಸದಸ್ಯರು ಸೇರಿದಂತೆ ಅನೇಕರು ಭಾಗವಹಿಸಿದ್ದರು.