ಮಠದಲ್ಲಿ ಮತಯಾಚನೆ ಮಾಡಿಲ್ಲ; ಸುಳ್ಳು ಪ್ರಕರಣ ವಿರುದ್ಧ ಹೈಕೋರ್ಟ್‌ಗೆ

| Published : Apr 07 2024, 01:47 AM IST

ಸಾರಾಂಶ

ಬಿಜೆಪಿ ಅಧಿಕೃತ ಅಭ್ಯರ್ಥಿ ನಾನು. ನಮ್ಮ ಎನ್‌ಡಿಎ ನಾಯಕ ನರೇಂದ್ರ ಮೋದಿ ಅವರನ್ನು ನಾವು ಉಪಯೋಗಿಸಿಕೊಳ್ಳಬೇಕೇ ವಿನಃ ಬೇರೆಯವರು ಉಪಯೋಗಿಸಿಕೊಳ್ಳಲು ಬರಲ್ಲ ಸಂಸದ ರಾಘವೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಾನು ಚಿತ್ರದುರ್ಗದ ಮಠದಲ್ಲಿ ಮತಯಾಚನೆ ಮಾಡಿಲ್ಲ. ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಇದರ ವಿರುದ್ಧ ನಾನು ಹೈಕೋರ್ಟ್ ಮೆಟ್ಟಿಲೇರಿದ್ದೇನೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಚುನಾವಣೆ ಬರುತ್ತೆ ಹೋಗುತ್ತೆ. ನಾನು ದೇವರನ್ನು ಎಷ್ಟು ನಂಬುತ್ತೇನೋ ಅಷ್ಟೇ ಮಠಾಧೀಶರನ್ನೂ ನಂಬುತ್ತೇನೆ. ಇದು ನಮ್ಮ ಹಿಂದೂಗಳ ಪದ್ಧತಿ. ಚಿತ್ರದುರ್ಗದಲ್ಲಿ ಗುರುಗಳ ಮಠಕ್ಕೆ ಅವರ ಆಶೀರ್ವಾದ ಪಡೆಯಲು ಹೋಗಿದ್ದೆ. ಅಲ್ಲಿ ನಾವು ಯಾವುದೇ ಮತಯಾಚನೆ ಮಾಡಿಲ್ಲ. ಭಾಷಣ ಮಾಡಿ, ಯಾವುದೇ ರೀತಿ ದುರುಪಯೋಗಪಡಿಸಿಕೊಂಡಿಲ್ಲ. ಆದರೆ, ಯಾರೋ ದೂರು ಕೊಟ್ಟಿರುವ ಆಧಾರದ ಮೇಲೆ ನನ್ನ ವಿರುದ್ಧ ಪ್ರಕರಣ ದಾಖಲಾಗಿದೆ. ಇದರ ವಿರುದ್ಧ ನಾನು ಹೈಕೋರ್ಟ್ ಮೇಟ್ಟಿಲೇರಿದ್ದೇನೆ ಎಂದು ತಿಳಿಸಿದರು.ಈಶ್ವರಪ್ಪ ಮೋದಿ ಫೋಟೋ ಬಳಕೆಗೆ ಆಕ್ಷೇಪ:

ಈಶ್ವರಪ್ಪನವರು ಮೋದಿಯವರ ಫೋಟೋ ಬಳಕೆ ಮಾಡುತ್ತಿರುವುದಕ್ಕೆ ಆಕ್ಷೇಪವಿದೆ. ಮೋದಿಯವರ ಭಾವಚಿತ್ರ ಬಳಕೆ ಮಾಡಿಕೊಳ್ಳಲು ಎನ್‌ಡಿಎ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದೆ. ಕೋರ್ಟ್ ನಮ್ಮ ಪರವಾಗಿ ತೀರ್ಪು ನೀಡುತ್ತದೆ ಎಂದರು.

ನಾವು ಅಭಿವೃದ್ಧಿ ಮೇಲೆ ಮತಯಾಚಿಸುತ್ತೇವೆ. ಈಶ್ವರಪ್ಪ ಅವರು ಹಿಂದುತ್ವಕ್ಕೆ ಅನ್ಯಾಯವಾಗಿದೆ ಎಂದು ಹೇಳಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ, ಅದನ್ನು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಬಿಜೆಪಿ ಅಧಿಕೃತ ಅಭ್ಯರ್ಥಿ ನಾನು. ನಮ್ಮ ಎನ್‌ಡಿಎ ನಾಯಕ ನರೇಂದ್ರ ಮೋದಿ ಅವರನ್ನು ನಾವು ಉಪಯೋಗಿಸಿಕೊಳ್ಳಬೇಕೇ ವಿನಃ ಬೇರೆಯವರು ಉಪಯೋಗಿಸಿಕೊಳ್ಳಲು ಬರಲ್ಲ ಎಂದರು.ಸಾಯಿ ಪ್ರಸಾದ್ ದಾಖಲೆ ದುರುಪಯೋಗ:

ತೀರ್ಥಹಳ್ಳಿ ಸಾಯಿ ಪ್ರಸಾದ್ ಅವರನ್ನು ಎನ್‌ಐಎ ಅವರು ವಿಚಾರಣೆ ನಡೆಸಿ, ವಾಪಸ್ ಕಳುಹಿಸಿದ್ದಾರೆ. ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಹಲವು ಕಡೆ ವಿಚಾರಣೆ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಸಾಯಿ ಪ್ರಸಾದ್ ಹೆಸರು ಕೇಳಿ ಬಂದಿತ್ತು. ಮೊಬೈಲ್ ಶಾಪ್ ಒಂದರಲ್ಲಿ ಸಿಮ್ ಖರೀದಿ ಮಾಡುವಾಗ ನೀಡುವ ದಾಖಲೆ ಪಡೆದು ದುರುಪಯೋಗ ಪಡಿಸಲಾಗಿದೆ. ಅಲ್ಲದೇ ಇದೇ ರೀತಿ 10 ಜನರ ದಾಖಲೆ ಪಡೆದು ದುರುಪಯೋಗಪಡಿಸಿಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂತಹ ಘಟನೆ ನಡೆಯುತ್ತಿತ್ತು ಎಂದು ಕೇಳಿದ್ದೆವು. ಆದರೆ, ಈಗ ನಮ್ಮ ತೀರ್ಥಹಳ್ಳಿಯಲ್ಲಿ ಇಂತಹ ಘಟನೆ ನಡೆದಿರುವುದು ಗಾಬರಿಯಾಗುವಂತಹ ವಿಚಾರ. ಇಂತಹ ಘಟನೆ ನಡೆಯದಂತ ಬಿಗಿ ಕಾನೂನು ಕ್ರಮ ಜರುಗಿಸಬೇಕಿದೆ. ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ನಮ್ಮ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಪ್ರಚಾರಕ್ಕೆ ಚಾಲನೆ ನೀಡಿದಾಗಿನಿಂದ, ಕಾರ್ಯಕರ್ತರ ನೆರವಿನಿಂದ ಪ್ರಚಾರ ಚೆನ್ನಾಗಿ ನಡೆಯುತ್ತಿದೆ. ಇಂದು ಬಿಜೆಪಿ ಸಂಸ್ಥಾಪನಾ ದಿನಾಚರಣೆ ನಡೆಸಲಾಯಿತು. ನಾನು ಹೋದ ಹತ್ತು ಬೂತ್‌ಗಳಲ್ಲಿ ನಮ್ಮ ಕಾರ್ಯಕರ್ತರು ಕಿಂಚಿತ್ತೂ ಕದಲಿಲ್ಲ ಎಂದು ತಿಳಿಸಿದರು.

ವಿರೋಧ ಪಕ್ಷದವರಿಗೆ ಅಪಪ್ರಚಾರ ನಡೆಸುವುದೇ ಕೆಲಸವಾಗಿದೆ. ರಾಘಣ್ಣನಿಗೆ, ಚನ್ನಿಯಣ್ಣನಿಗೆ ಬೈಯುವುದೇ ಅವರ ಕೆಲಸ. ನಾನು ಕಳೆದ ನಾಲ್ಕು ಚುನಾವಣೆಯಿಂದಲೂ ಇದನ್ನು ಕೇಳಿಕೊಂಡು ಬಂದಿದ್ದೇನೆ. ನಾವು ಏನು ಮಾಡಿದ್ದೇವೆ, ಮುಂದೆ ಏನು ಮಾಡುತ್ತೇವೆ ಎಂದು ಹೇಳುತ್ತಿದ್ದೇವೆ. ನಮ್ಮ ಪಕ್ಷಕ್ಕೆ ನೀತಿ ನಿಯಮ ಇದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನು ಪಡೆದುಕೊಳ್ಳಲು ಆಗಿಲ್ಲ. ಈಗ ಕಾಂಗ್ರೆಸ್‌ಗೆ ಗಾಬರಿಯಾಗುತ್ತಿದೆ. ನಿನ್ನೆ ಒಂದು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಚುನಾವಣೆಯನ್ನು ನಾವು ಮಾಡಿದ ಕೆಲಸದ ಮೇಲೆಯೇ ನಡೆಸುತ್ತೇವೆ ಎಂದರು.