ಸಾರಾಂಶ
ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಕನ್ನಡಪ್ರಭ ವಾರ್ತೆ ಕೊಪ್ಪಳ
ತಾಲೂಕಿನ ಇರಕಲ್ ಗಡಾ ಹೋಬಳಿಯ ಅರಸಿನಕೇರಿ ಗ್ರಾಮದ ಬಳಿ ಅಣುವಿದ್ಯುತ್ ಸ್ಥಾವರ ಸ್ಥಾಪಿಸಲು ಮುಂದಾಗಿರುವುದನ್ನು ವಿರೋಧಿಸಿ, ವಿಪ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ಅವರ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ತಾಲೂಕಿನ ಅರಸನಕೇರಿ ಗ್ರಾಮ ವ್ಯಾಪ್ತಿಯಲ್ಲಿ ಅಣು ವಿದ್ಯುತ್ ಸ್ಥಾವರ ನಿರ್ಮಾಣ ಮಾಡಲು ನಾವು ಬಿಡುವುದಿಲ್ಲ. ಸರ್ವೆ ಮಾಡುವುದಕ್ಕೂ ನಾವು ಬಿಡುವುದಿಲ್ಲ. ಯಾವುದೇ ಕಾರಣಕ್ಕೂ ಈ ಭಾಗದಲ್ಲಿ ಅಣುಸ್ಥಾವರ ಬೇಡವೇ ಬೇಡ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಅಣು ವಿದ್ಯುತ್ ಸ್ಥಾವರ ಪ್ರಾರಂಭ ಮಾಡುವುದರಿಂದ ಅಲ್ಲಿ ವಾಸಿಸುವ ಕಾಡು ಪ್ರಾಣಿಗಳ ಜೀವಕ್ಕೆ ಕುತ್ತು ಬರುತ್ತದೆ. ಬಯಲು ಸೀಮೆಯಲ್ಲಿರುವ ಕೆಲವೇ ಕೆಲವು ಅರಣ್ಯ ಪ್ರದೇಶಗಳಲ್ಲೊಂದಾಗಿದೆ. ಅಷ್ಟೇ ಅಲ್ಲ, ಅಲ್ಲಿ ಈಗಾಗಲೇ ಕರಡಿ ಧಾಮ ಮಾಡಲು ತೀರ್ಮಾನ ಮಾಡಲಾಗಿದೆ. ಹೀಗಿರುವಾಗ ಅಲ್ಲಿ ಹೇಗೆ ಸ್ಥಾಪನೆ ಮಾಡಲಾಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.ಇದಕ್ಕಿಂತ ಮಿಗಿಲಾಗಿ ಈ ಭಾಗದಲ್ಲಿ ಸುಮಾರು ವರ್ಷಗಳಿಂದ ರೈತರು ಭೂಮಿಯನ್ನು ಉಳುಮೆ ಮಾಡಿಕೊಂಡಿದ್ದಾರೆ. ಅವರಿಗೂ ಇದುವರೆಗೂ ಹಕ್ಕು ನೀಡಿಲ್ಲ. ಅವರ ಬಳಿ ಉಳುಮೆ ಮಾಡುವ ದಾಖಲೆ ಇದೆ, ಪಹಣಿ ಇದೆಯಾದರೂ ಅವರಿಗೆ ಹಕ್ಕು ನೀಡದೆ ಸತಾಯಿಸಲಾಗುತ್ತದೆ. ಈಗ ಅವರನ್ನು ಒಕ್ಕಲೆಬ್ಬಿಸುವುದಾದರೂ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಆದ್ದರಿಂದ ನಾವು ಯಾವುದೇ ಕಾರಣಕ್ಕೂ ಅಣುವಿದ್ಯುತ್ ಸ್ಥಾವರ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಾವರ ನಿರ್ಮಾಣಕ್ಕಾಗಿ ೧೨೦೦ ಎಕರೆ ಜಮೀನು ಗುರುತಿಸಿದ್ದು, ಎಲ್ಲ ತಯಾರಿ ನಡೆದಿದೆ. ಈ ಸ್ಥಾವರ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು. ರೈತರ ಹಿತ ಕಾಯಬೇಕು ಎಂದು ಒತ್ತಾಯಿಸಿದರು.ಈ ವೇಳೆ ರೈತರಾದ ಈಶಪ್ಪ ಚವ್ಹಾಣ್, ಹನುಮಪ್ಪ ಮ್ಯಾದನೇರಿ, ದೇವಪ್ಪ, ಕರಿಯಪ್ಪ, ಬಾಳಪ್ಪ ಹನುಮಗೌಡ್ರ, ಹನುಮಂತಪ್ಪ ಪೂಜಾರ, ಮರಿಸ್ವಾಮಿ ಸೇರಿ ಇತರೆ ಮುಖಂಡರು ಪಾಲ್ಗೊಂಡಿದ್ದರು.