ಮಳೆಯಿಂದ ಯಾವುದೇ ತೊಂದರೆ ಇಲ್ಲ: ಜಿಲ್ಲಾಧಿಕಾರಿ

| Published : Jul 21 2024, 01:16 AM IST

ಸಾರಾಂಶ

ಬೆಳಗಾವಿ: ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ ಮಳೆ ಆಗುತ್ತಿದ್ದು, ಕಂದಾಯ, ಪೊಲೀಸ್, ಸಿಇಒ ಸೇರಿ ಎಲ್ಲರೂ ಸಭೆ ಮಾಡಿದ್ದೇವೆ. ಮಳೆಯಿಂದ ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ ಮಳೆ ಆಗುತ್ತಿದ್ದು, ಕಂದಾಯ, ಪೊಲೀಸ್, ಸಿಇಒ ಸೇರಿ ಎಲ್ಲರೂ ಸಭೆ ಮಾಡಿದ್ದೇವೆ. ಮಳೆಯಿಂದ ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 51 ಟಿಎಂಸಿ ಸಾಮರ್ಥ್ಯ ಹೊಂದಿರುವ ಘಟಪ್ರಭಾ ಜಲಾಶಯದಲ್ಲಿ ಸದ್ಯ 32 ಟಿಎಂಸಿ ನೀರು ಸಂಗ್ರವಾಗಿದೆ. ಕೃಷ್ಣಾ ನದಿಗೆ 65 ಸಾವಿರ ಕ್ಯುಸೆಕ್‌ ಒಳ ಹರಿವು ಇದೆ. ಹಾಗಾಗಿ ಯಾವುದೇ ತೊಂದರೆ ಇಲ್ಲ ಎಂದರು.

ಖಾನಾಪುರ ತಾಲೂಕಿನಲ್ಲಿ ವಾಡಿಕೆಗಿಂತ ಶೇ.37ರಷ್ಟು ಅಧಿಕ ಮಳೆ ಆಗಿದ್ದು, ತಾಲೂಕಿನಲ್ಲಿ 13 ಬ್ರಿಡ್ಜ್ ಗಳು ಮುಳುಗಿವೆ. ಶುಕ್ರವಾರ ಕಂದಾಯ, ಲೋಕೋಪಯೋಗಿ ಸಚಿವರು ಮಾತನಾಡಿದ್ದಾರೆ. ಅವರ ನಿರ್ದೇಶನದಂತೆ ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ. ಚೋರ್ಲಾ ಘಾಟ್ ಹತ್ತಿರ ಕುಸುಮಳ್ಳಿ ಬ್ರಿಡ್ಜ್ ಅಪಾಯಕಾರಿಯಾಗಿದೆ‌. ಶುಕ್ರವಾರದಿಂದ ಸಂಚಾರ ಮಾಡದಂತೆ ಆದೇಶಿಸಲಾಗಿದೆ. ಭಾರೀ ಗಾತ್ರದ ವಾಹನಗಳಿಗೆ ಸಂಚಾರ ನಿಷೇಧ ಹೇರಲಾಗಿದೆ ಎಂದರು. ಖಾನಾಪುರ ಮೂಲಕ ಪರ್ಯಾಯ ರಸ್ತೆ ಬಳಲಸಲು ಸೂಚಿಸಲಾಗಿದೆ. ಬಿದ್ದ ಮನೆಗಳಿಗೆ ಎನ್ ಡಿಆರ್ ಎಫ್ ನಿಯಮಾವಳಿಯಂತೆ ಪರಿಹಾರ ನೀಡಲಾಗುವುದು.

ಜಿಲ್ಲೆಯಲ್ಲಿ 421 ಕಾಳಜಿ ಕೇಂದ್ರ ಮಾಡಲು ಸಿದ್ಧತೆ ಮಾಡಲಾಗಿದೆ. ಹಿಂದಿನ ಪ್ರವಾಹದ ಅನುಭವ ಇದೆ. ಎಲ್ಲ ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾವುದು. ಬಳ್ಳಾರಿ ನಾಲಾ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಕುರಿತು ಮಾಹಿತಿ ಪಡೆಯುತ್ತೇನೆ ಎಂದು ಅವರು ಹೇಳಿದರು.