ಸಾರಾಂಶ
ಹೊನ್ನಾವರ: ಶರಾವತಿ ಕೊಳ್ಳದ ನಿತ್ಯಹರಿದ್ವರ್ಣ ಮಳೆಕಾಡಿನಲ್ಲಿ ಪಂಪ್ ಸ್ಟೋರೇಜ್ ಯೋಜನೆ ಅನುಷ್ಠಾನಗೊಳಿಸಬಾರದು.
ಸ್ಥಳೀಯ ಜನಜೀವನ, ಜೀವ ವೈವಿಧ್ಯ ಮತ್ತು ನದಿ ಪರಿಸರವನ್ನು ಕಾಪಾಡಲು ತಕ್ಷಣ ಕ್ರಮ ಕೈಗೊಳ್ಳಬೇಕು.ಸುಸ್ಥಿರ, ಪರಿಸರಸ್ನೇಹಿ ಪರ‍್ಯಾಯ ವಿದ್ಯುತ್ ಉತ್ಪಾದನಾ ಮಾರ್ಗಗಳನ್ನು ಅವಲಂಬಿಸಬೇಕು.
ತಾಲೂಕಿನ ಗೇರುಸೊಪ್ಪೆಯ ಶ್ರೀಕ್ಷೇತ್ರ ಬಂಗಾರಮಕ್ಕಿಯ ವೀರಾಂಜನೆಯ ಸಭಾಭವನದಲ್ಲಿ ಭಾನುವಾರ ನಡೆದ ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಅನುಷ್ಠಾನ ವಿರೋಧಿಸಿ ನಡೆದ ಸಾರ್ವಜನಿಕ ಸಭೆಯಲ್ಲಿ ತೆಗೆದುಕೊಂಡ ಅಂತಿಮ ನಿರ್ಣಯಗಳು ಇವು.ಬಂಗಾರಮಕ್ಕಿಯ ಧರ್ಮದರ್ಶಿ ಶ್ರೀ ಮಾರುತಿ ಗುರೂಜಿ ಮಾತನಾಡಿ, ಈ ಯೋಜನೆ ಅನುಷ್ಠಾನಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಒಂದೊಮ್ಮೆ ಯೋಜನೆ ಮಾಡುವುದಾದರೆ ನನ್ನನ್ನು ಮುಗಿಸಿ ಮುಂದಕ್ಕೆ ಹೋಗಿ, ಜೆಸಿಬಿಗೆ ಅಡ್ಡಲಾಗಿ ಮಲಗುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಉದ್ದೇಶ ವಿದ್ಯುತ್ ತಯಾರಿಸುವುದಷ್ಟೆ ಅಲ್ಲ. ಇದರ ಹಿಂದೆ ಒಂದು ಹುನ್ನಾರ ಇದೆ. ಇದರ ಹಿಂದೆ ಯಾವುದೋ ಕುತಂತ್ರ ಇದೆ. ದಕ್ಷಿಣ ಭಾರತ, ಅಖಿಲ ಭಾರತ ಸಂತರ ಸಹಕಾರದೊಂದಿಗೆ ನಾವು ಚಳವಳಿ ನಡೆಸುತ್ತೇವೆ. ಈ ಸಭೆಯ ಬಗ್ಗೆ ನಮಗೆ ಬೆದರಿಕೆ ಬಂದಿದೆ. ಆದರೆ ಇದಕ್ಕೆ ನಾವು ಹೆದರುವುದಿಲ್ಲ ಎಂದು ಹೇಳಿದರು.ಜಿಪಂ ಮಾಜಿ ಸದಸ್ಯ ಪಿ.ಎಸ್. ಭಟ್ ಉಪ್ಪೋಣಿ ಮಾತನಾಡಿ, ಈ ವಿಚಾರವಾಗಿ ಸದನದಲ್ಲಿ ಕೆ.ಜೆ. ಜಾರ್ಜ್ ಅವರು ಅವೈಜ್ಞಾನಿಕವಾದ ಉತ್ತರ ನೀಡಿದ್ದಾರೆ ಎಂದರು.
ಕೆಪಿಸಿಎಲ್‌ನ ಕಾರ್ಯನಿರ್ವಾಹಕ ಅಭಿಯಂತರ ವಿಜಯ್ ಅವರು ಯೋಜನೆ ಯೋಜನೆ ಕುರಿತು ಮಾಹಿತಿ ನೀಡಿದರು. ತಜ್ಞ ಅಖಿಲೇಶ್ ಚಿಪ್ಲಿ ಮಾತನಾಡಿ, ಇಲ್ಲಿನ ಜೀವವೈವಿಧ್ಯ ಬಗ್ಗೆ ಅಧ್ಯಯನ ಮಾಡದೇ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಇದು ದುಡ್ಡು ನುಂಗುವ ಯೋಜನೆ. ರೈತರಿಗೆ, ಪರಿಸರಕ್ಕೆ ತೊಂದರೆ ಕೊಡುವ ಕೆಲಸ ಇದು ಎಂದರು.
ಶರಾವತಿ ಪಂಪ್ ಸ್ಟೋರೇಜ್‌ನಿಂದ ಆಗುವ ಅನಾಹುತಗಳ ಬಗ್ಗೆ ಡಾ. ಗಿರೀಶ್ ಜನ್ನೆ, ಡಾ. ಎನ್.ಎಂ. ಗುರುಪ್ರಸಾದ್, ಡಾ. ಸವಿನಯ ಮಾಲ್ವೆ, ಡಾ. ಪ್ರಕಾಶ್ ಮೇಸ್ತ, ಡಾ. ಸಚೇತ್ ಹೆಗಡೆ, ಕಾರ್ತಿಕ್ ಸಾಲೇಹಿತ್ತಲ್, ಸಂದೀಪ್ ಹೆಗಡೆ, ಡಾ. ಟಿ.ವಿ. ರಾಮಚಂದ್ರ, ಪ್ರೊ. ಬಿ.ಎಂ. ಕುಮಾರಸ್ವಾಮಿ, ಎಂ.ಡಿ. ಸುಭಾಶ್ಚಂದ್ರನ್, ಡಾ. ಶ್ರೀಪತಿ, ಶಂಕರ್ ಶರ್ಮಾ, ಮಂಜುನಾಥ್ ನಾಯ್ಡು, ಕೇಶವ ಕೂರ್ಸೆ ವಿಷಯ ಮಂಡಿಸಿದರು.ಬಿಜೆಪಿ ತಾಲೂಕಾಧ್ಯಕ್ಷ ಮಂಜುನಾಥ ನಾಯ್ಕ, ಕಾಂಗ್ರೆಸ್ ಮುಖಂಡ ಗೋವಿಂದ ನಾಯ್ಕ, ಗ್ರಾಪಂ ಅಧ್ಯಕ್ಷೆ ಸುನೀತಾ ಹೆಗಡೆ, ಹೊನ್ನಾವರ ಉಳಿಸಿ ಸಂಘಟನೆ ಅಧ್ಯಕ್ಷ ಜಿ.ಎನ್. ಗೌಡ, ವೀರೇಶ್ ಉಪಸ್ಥಿತರಿದ್ದರು.
ತೃಪ್ತಿ ಮಂಜುನಾಥ ಪ್ರಾರ್ಥಿಸಿದರು. ಅಜಿತಕುಮಾರ್ ಹೆಗಡೆ ಸ್ವಾಗತಿಸಿದರು. ಕಿರಣದಾಸ್ ಮಹಾಲೆ ವಂದಿಸಿದರು. ಮಂಜಪ್ಪ ಸಹಕರಿಸಿದರು. ಶೈಲೇಶ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.ಬಾಕ್ಸ್...ಸಭೆಯ ನಿರ್ಣಯಗಳು:
ಶರಾವತಿ ಕೊಳ್ಳದ ಅಪೂರ್ವ ನಿತ್ಯಹರಿದ್ವರ್ಣ ಅರಣ್ಯ, ಜೀವವೈವಿಧ್ಯ, ಸ್ಥಳೀಯ ಜನಜೀವನ, ಆರ್ಥಿಕ ಹಾಗೂ ಪರಿಸರ ಶಾಶ್ವತವಾಗಿ ಹಾಳುಮಾಡುವಂತಹ ಅವೈಜ್ಞಾನಿಕ, ವಿನಾಶಕಾರಿ ಪಂಪ್ ಸ್ಟೋರೇಜ್ ಯೋಜನೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.೧. ಉತ್ತರ ಕನ್ನಡ ಜಿಲ್ಲೆಯ ಶರಾವತಿ ಕೊಳ್ಳದ ನೈಸರ್ಗಿಕ ಸಂಪತ್ತು ಶಾಶ್ವತವಾಗಿ ಕಾಪಾಡುವುದು ಸರ್ಕಾರದ ಹೊಣೆ.
೨. ಶರಾವತಿ ಕೊಳ್ಳಕ್ಕೆ ಮಾರಕವಾದ ಪಂಪ್ ಸ್ಟೋರೇಜ್ ಯೋಜನೆಯನ್ನು ಕೈಬಿಡಬೇಕು.೩. ಕೇವಲ ಪಶ್ಚಿಮ ಘಟ್ಟದಲ್ಲಿ ಮಾತ್ರವೇ ಕಾಣಸಿಗುವ ಅತ್ಯಪೂರ್ವ ಸಿಂಗಳೀಕ, ಕುಂಬಾರ ಕಪ್ಪೆ, ಮಿರಿಸ್ಟಿಕಾ ಸ್ವಾಂಪ್ ಅರಣ್ಯ ನಾಶ ಮಾಡುವ ಹಕ್ಕು ಸರ್ಕಾರಕ್ಕೆ ಇಲ್ಲ.
4. ಶರಾವತಿ ಕೊಳ್ಳದಲ್ಲಿ ಯಾವುದೇ ಹೊಸ ಯೋಜನೆ ಅನುಷ್ಠಾನ ಮಾಡಬಾರದು.