ಬಿ.ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ಮಳೆ ಇಲ್ಲ, ಬೆಳೆ ಇಲ್ಲ, ಒಣಗಿದ ಬೆಳೆ ಕೆಡಿಸಿ ಕುರಿ ತರುಬಿಸಿದ್ದೇವೆ. ಈ ಬಾರಿ ಪಂಚಮಿ ಹಬ್ಬ ಮಾಡೋದು ಕಷ್ಟ ಐತಿ, ಏನು ಮಾಡೋದ್ರಿ...

ಇದು ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತಹ ರೈತರು ಬೇಸರದಿಂದ ಗೊಣಗುತ್ತಿರುವ ಮಾತು.

ಡಾ.ನಂಜುಂಡಪ್ಪನವರ ವರದಿ ಅನ್ವಯ ರಾಜ್ಯದ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಹರಪನಹಳ್ಳಿ ಪ್ರಮುಖವಾಗಿದೆ. ತುಂಗಭದ್ರಾ ನದಿ ಭಾಗದಲ್ಲಿ ಹಾಗೂ ಹಿರೇಮೇಗಳಗೇರಿ ಭಾಗದಲ್ಲಿ ಸ್ವಲ್ಪ ನೀರಾವರಿ ಜಮೀನು ಬಿಟ್ಟರೆ ಶೇ.90ರಷ್ಟು ಮಳೆ ಆಶ್ರಿತ ಒಣಭೂಮಿಯೇ ಇರುವುದು.

ಇಂತಹ ತಾಲೂಕಲ್ಲಿ 86,309 ಹೆಕ್ಟೇರ್‌ ಬಿತ್ತನೆ ಗುರಿ ಇದ್ದರೆ ಮಳೆ ಬಾರದ ಕಾರಣ ಈವರೆಗೂ 34,864 ಹೆಕ್ಟೇರ್‌ ಅಂದರೆ ಶೇ.40ರಷ್ಟು ಮಾತ್ರ ಬಿತ್ತನೆಯಾಗಿದೆ. ಅದರಲ್ಲೂ ಮೆಕ್ಕೆಜೋಳದ ಕಣಜವಾಗಿರುವ ತಾಲೂಕಿನಲ್ಲಿ 71,131 ಹೆಕ್ಟೇರ್‌ ಮೆಕ್ಕೆಜೋಳ ಬಿತ್ತನೆ ಇದ್ದರೆ, ಈವರೆಗೂ 32,215 ಹೆಕ್ಟೇರ್‌ ಮಾತ್ರ ಮೆಕ್ಕೆಜೋಳ ಬಿತ್ತನೆಯಾಗಿದೆ.


ಬಿತ್ತಿರುವ ಬೆಳೆಗಳು ಸಹ ಒಣಗುತ್ತಿವೆ. ಇನ್ನು ಕೆಲವು ಈವರೆಗೂ ಎಷ್ಟು ಎತ್ತರವಾಗಬೇಕೋ ಅಷ್ಟು ಎತ್ತರವಾಗಿಲ್ಲ. ಕೊಳವೆಬಾವಿಗಳ ನೀರು ಸಾಕಷ್ಟು ಆಳಕ್ಕೆ ಹೋಗಿವೆ. ಕೆಲವೊಂದು ಬೋರುಗಳು ಬತ್ತಿವೆ. ಅನೇಕ ಕಡೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ. 25 ಗ್ರಾಮಗಳಲ್ಲಿ 33 ಖಾಸಗಿ ಕೊಳವೆ ಬಾವಿಗಳಿಂದ ಬಾಡಿಗೆ ಆಧಾರದಲ್ಲಿ ನೀರು ಪಡೆದು ಗ್ರಾಮಸ್ಥರಿಗೆ ಕುಡಿಯಲು ನೀರು ಸರಬರಾಜು ಮಾಡಲಾಗುತ್ತಿದೆ.

ಮಳೆ ಕೊರತೆ:

ಜನವರಿಯಿಂದ ಈವರೆಗೂ 294.9 ಮಿ.ಮೀ. ಮಳೆ ಬರಬೇಕಾಗಿತ್ತು. ಆದರೆ ಕೇವಲ 164.7 ಮಿ.ಮೀ. ಮಳೆಯಾಗಿದೆ. ಬಂದಿರುವ ಮಳೆಯೂ ಸಮಯಕ್ಕೆ ಸರಿಯಾಗಿ ಆಗಿಲ್ಲ. ಮಳೆ ಕೊರತೆ ತೀವ್ರವಾಗಿ ಕಾಡುತ್ತಿದೆ.

ಬರ ಕುರಿತು ಚಿಗಟೇರಿ ಗ್ರಾಮದಲ್ಲಿ ರೈತ ಸುರೇಶ ಬಾರ್ಕಿ ಅವರನ್ನು ಕನ್ನಡಪ್ರಭ ಮಾತನಾಡಿಸಿದಾಗ, ನನಗಿರುವ 12 ಎಕರೆ ಜಮೀನಿನಲ್ಲಿ 2 ಎಕರೆ ಸೂರ್ಯಕಾಂತಿ, 2 ಎಕರೆ ಮೆಕ್ಕೆಜೋಳ ಒಟ್ಟು 4 ಎಕರೆ ಬಿತ್ತಿದ್ದೆ. ಇನ್ನು 8 ಎಕರೆ ಬಿತ್ತನೆ ಮಾಡಿಲ್ಲ. ಬಿತ್ತಿರುವ 4 ಎಕರೆ ಬೆಳೆ ಸ್ವಲ್ಪ ಮಟ್ಟಿಗೆ ಬೆಳೆದು ಒಣಗಿತು. ನಾಲ್ಕು ಎಕರೆಯಲ್ಲಿ ಕುರಿ ಮೇಯಲು ಬಿಟ್ಟಿದ್ದೇನೆ, ಪೂರ್ತಿ ಮೇಯ್ದ ಮೇಲೆ ಹರಗಬೇಕು. ಬೀಜ ಗೊಬ್ಬರ ಖರೀದಿ, ಆಳು ಬಿತ್ತನೆ ಸೇರಿ ಅಂದಾಜು ₹40 ಸಾವಿರ ನಷ್ಟ ಆಗಿದೆ. ಇನ್ನು ಮೇಲಾದರೂ ಮಳೆಯಾದರೆ ರಾಗಿ ಇತರೆ ಬಿತ್ತಬೇಕು. ಗೊಬ್ಬರ, ಬೀಜ ಖರೀದಿಗೆ ದುಡ್ಡಿಲ್ಲ. ನಿತ್ಯ ಜೀವನ ಕಷ್ಟ ಆಗಿದೆ. ನಾಗರ ಪಂಚಮಿ ಹಬ್ಬ ಮಾಡೋದು ಹೆಂಗ ಎಂದು ಚಿಂತಿಯಾಗಿದೆ ಎಂದು ಅಳಲು ತೋಡಿಕೊಂಡರು.ಇನ್ನು ಕೂಲಹಳ್ಳಿ ಪೂಜಾರ ಕೊಟ್ರೇಶ ಎಂಬ ರೈತ 10 ಎಕರೆ ಮೆಕ್ಕೆಜೋಳ ಬಿತ್ತಿದ್ದಾನೆ. ಮಳೆ ಇಲ್ಲದೇ ಬೆಳೆ ಒಣಗುತ್ತಿದೆ. ಈತನನ್ನು ಮಾತನಾಡಿಸಿದಾಗ, ಏನ್ ಹೇಳಬೇಕ್ರಿ, ನಾನು ಬಿತ್ತಿ 2 ತಿಂಗಳಾಗಿದೆ. 5 -6 ಅಡಿ ಇರಬೇಕಾದ ಮೆಕ್ಕೆಜೋಳದ ಬೆಳೆ ಇನ್ನು ಒಂದೂವರೆ ಅಡಿ ಎತ್ತರ ಅಷ್ಟೇ ಬೆಳೆದಿದೆ. ಇನ್ನು ಮಳೆ ಬಂದರೂ ಬೆಳೆಯಲ್ಲ. ಎಲ್ಲ ಬೆಳೆ ಕಿತ್ತು ಹಾಕಬೇಕು ಅಂದುಕೊಂಡಿದ್ದೇನೆ. ಬೀಜ, ಗೊಬ್ಬರ ಖರ್ಚು ತೂಗಿಸುವುದು ಕಷ್ಟವಾಗಿದೆ. ಸರ್ಕಾರ ಎಷ್ಟು ಪರಿಹಾರ ಕೊಡುತ್ತೋ, ಅವರು ಕೊಡೋದು ಎದಕ್ಕೆ ಆಗತೈತಿ, ಏನು ಮಾಡೋದ್ರಿ ಎನ್ನುವುದು ರೈತನ ಗೋಳು.ಎರಡೆತ್ತಿನಹಳ್ಳಿ ಟಿ.ಮಂಜುನಾಥ ಎಂಬ ರೈತ ಪ್ರತಿಕ್ರಿಯಿಸಿ, 8 ಎಕರೆ ಮೆಕ್ಕೆಜೋಳ ಬಿತ್ತಿದ್ದೇನೆ. ಇಷ್ಟೊತ್ತಿಗೆ ಸೂಲಂಗಿ ಕೀಳುವ ಹಂತದಲ್ಲಿ ಇರಬೇಕಿತ್ತು. ಬೆಳೆ ಎತ್ತರ ಬೆಳೆದಿಲ್ಲ. ಇನ್ಮೇಲೆ ಮಳೆ ಬಂದರೂ ಕಾಲು ಭಾಗ ಬರಬಹುದು. ನಮ್ಮ ಇನ್ನೊಂದು ಹೊಲದಲ್ಲಿ ಹಾಗಲಕಾಯಿ ಹಾಕಿದ್ದೇವೆ. ಅಲ್ಲಿಯ ಬೋರು ಬತ್ತಿದೆ. ಮುಂಬರುವ ನಾಗರ ಪಂಚಮಿ ಹಬ್ಬ ಮಾಡೋದು ಕಷ್ಟ ಆಗೈತಿ. ರೈತರ ಗೋಳು ಈ ಬಾರಿ ಹೇಳತೀರದು ಎಂದು ಅಳಲು ತೋಡಿಕೊಂಡರು. ಇದೇ ಪರಿಸ್ಥಿತಿ ತಾಲೂಕಿನ ಬಹುತೇಕ ರೈತರ ಸ್ಥಿತಿಯಾಗಿದೆ.

ತಾಂಡ ಜನರು ಕಾಫಿ ಸೀಮೆಯತ್ತ:

ಬರ ಈ ರೀತಿ ತಾಂಡವವಾಡುತ್ತಿದ್ದರೆ, ದುಡಿಯಲು ಬಹಳಷ್ಟು ತಾಂಡಗಳಲ್ಲಿ ಜನರು ಕಾಫಿ ಸೀಮೆ ಕಡೆ ಗುಳೆ ಹೋಗಿದ್ದಾರೆ. ಶಿವಪುರ ತಾಂಡ, ಗಿರಿಯಾಪುರ ತಾಂಡ, ಚೆನ್ನಹಳ್ಳಿ ತಾಂಡ, ಶಾಂತಿನಗರ, ಕಂಡಿಕೇರಿ ತಾಂಡ, ಹಾರಕನಾಳು ತಾಂಡ, ನಾಗತಿಕಟ್ಟಿ ತಾಂಡಗಳು ಸೇರಿದಂತೆ ಅನೇಕ ತಾಂಡಗಳಲ್ಲಿ ಗುಳೇ ಹೋಗಿದ್ದಾರೆ.

ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಆಗಮಿಸಿ ಬರ ವೀಕ್ಷಿಸಿ ಹೋಗಿದ್ದಾರೆ. ಬರ ಸಮೀಕ್ಷೆ ಇನ್ನೂ ಆರಂಭಗೊಂಡಿಲ್ಲ. ಇನ್ನು ಕೆಲವೇ ದಿನಗಳಲ್ಲಿ ನಾಗರ ಪಂಚಮಿ ಬರುತ್ತಿದೆ. ಕೈಯಲ್ಲಿ ಕಾಸಿಲ್ಲ. ಮಕ್ಕಳಿಗೆ ಹೊಸ ಬಟ್ಟೆ ತರುವುದು, ಉಂಡಿ ಕಟ್ಟಲು ದಿನಸಿ ಸಾಮಾನು ತರುವ ಚಿಂತೆಯಲ್ಲಿ ರೈತರಿದ್ದಾರೆ.

ವಿಬಿಜಿ ರಾಮ್‌ ಜಿ ಯೋಜನೆಯಲ್ಲಿ ದುಡಿಯುವ ಕೈಗಳಿಗೆ ಕೂಲಿ ಕೆಲಸ ಕೊಡುವ ಕಾರ್ಯ ಇನ್ನೂ ಆಗಬೇಕಿದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೂಡಲೇ ಬರ ಅಧ್ಯಯನ ತಂಡ ಕಳಿಸಿ ವರದಿ ತರಿಸಿಕೊಂಡು ಸೂಕ್ತ ಪರಿಹಾರ ನೀಡಿ ರೈತರ ಕಣ್ಣೊರೆಸುವ ಕೆಲಸಕ್ಕೆ ಮುಂದಾದರೆ ಮಾತ್ರ ರೈತ ದೇಶದ ಬೆನ್ನೆಲುಬು ಎಂದು ಹೇಳಬಹುದು.

ಮಳೆ ಇಲ್ಲದೇ ಬರ ಆವರಿಸಿದೆ. ಜಿಲ್ಲಾಧಿಕಾರಿ ಆಗಮಿಸಿ ವೀಕ್ಷಿಸಿದ್ದಾರೆ. ನಮ್ಮ ವತಿಯಿಂದ ಶೀಘ್ರ ವಿಬಿಜಿ ರಾಮ್‌ ಜಿ ಅಡಿ ಕೂಲಿಕಾರರಿಗೆ 125 ದಿನ ಕೂಲಿ ಕೆಲಸ ಕೊಡುತ್ತೇವೆ. ಈ ನಿಟ್ಟಿನಲ್ಲಿ ಪ್ರಕ್ರಿಯೆ ನಡೆದಿದೆ ಎನ್ನುತ್ತಾರೆ ಹರಪನಹಳ್ಳಿ ತಾಪಂ ಇಒ ವೈ.ಎಚ್. ಚಂದ್ರಶೇಖರ.