ಮಾರ್ಚ್‌ನಲ್ಲಿ ಮಳೆಯಾಗದೇ ಬಿಸಿಲ ಆತಂಕ!

| Published : Apr 02 2024, 02:15 AM IST / Updated: Apr 02 2024, 07:27 AM IST

ಸಾರಾಂಶ

ತೀವ್ರ ಬಿಸಲಿನಿಂದಾಗಿ ಕಾದ ಕಾವಲಿಯಂತಾಗುತ್ತಿದೆ ಬೆಂಗಳೂರು ಮಹಾನಗರದಲ್ಲಿ ಭಾನುವಾರ 36.6 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ.

 ಬೆಂಗಳೂರು :   ತೀವ್ರ ಬಿಸಲಿನಿಂದಾಗಿ ದಿನದಿಂದ ದಿನಕ್ಕೆ ಬೆಂಗಳೂರು ಕಾದ ಕಾವಲಿಯಂತಾಗುತ್ತಿದ್ದು, ಭಾನುವಾರ 36.6 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಇದು ಕಳೆದ 10 ವರ್ಷಗಳಲ್ಲಿ ಮಾರ್ಚ್‌ ತಿಂಗಳಲ್ಲಿ ದಾಖಲಾದ ಮೂರನೇ ಅತೀ ಹೆಚ್ಚಿನ ಉಷ್ಣಾಂಶವಾಗಿದೆ.

ಮಳೆ ಕೊರತೆ ಕಾರಣದಿಂದಾಗಿ ಸದ್ಯ ಎಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಅದರ ನಡುವೆಯೇ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲ ಝಳ ಹೆಚ್ಚಾಗಿ, ಜನರು ಬಿಸಿಲ ಬೇಗೆಗೆ ತತ್ತರಿಸುತ್ತಿದ್ದಾರೆ. ಅಲ್ಲದೆ, ಮಾರ್ಚ್‌ ತಿಂಗಳಲ್ಲಿ ಮಳೆಯ ಮುನ್ಸೂಚನೆಯಿದ್ದರೂ ಒಂದೇ ಒಂದು ಹನಿ ಮಳೆಯಾಗದ ಕಾರಣ ಬಿಸಿಲಿನ ಕಾವು ಮತ್ತಷ್ಟು ತೀವ್ರವಾಗಿದೆ. ಹವಾಮಾನ ಇಲಾಖೆ ದಾಖಲೆಯಂತೆ ಕಳೆದ 10 ವರ್ಷಗಳಲ್ಲಿ ಮಾರ್ಚ್‌ ತಿಂಗಳಲ್ಲಿ ದಾಖಲಾದ ಉಷ್ಣಾಂಶದ ಪೈಕಿ ಮಾ. 31ರಂದು ದಾಖಲಾಗಿರುವ 36.6 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಮೂರನೇ ಅತೀ ಹೆಚ್ಚಿನ ಉಷ್ಣಾಂಶವಾಗಿದೆ.

14.7 ಮಿಮೀ ಮಳೆಯ ನಿರೀಕ್ಷೆಯಿತ್ತು: ಹವಾಮಾನ ಇಲಾಖೆಯ ಮಾಹಿತಿಯಂತೆಯೇ ಮಾರ್ಚ್‌ ತಿಂಗಳ ಮಧ್ಯಭಾಗದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆಯಾಗುವ ನಿರೀಕ್ಷೆಯಿತ್ತು. ಆದರೆ, ಬೆಳಗಾವಿ, ಕೊಡಗು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಮಾತ್ರ ಮಳೆಯಾಗಿದ್ದು, ಉಳಿದೆಡೆ ಮಳೆ ಬೀಳಲಿಲ್ಲ. ಬೆಂಗಳೂರಿನಲ್ಲಿಯೇ ಮಾರ್ಚ್‌ ತಿಂಗಳಲ್ಲಿ 14.7 ಮಿಮೀನಷ್ಟು ಮಳೆಯಾಗಲಿದೆ ಎಂಬ ವರದಿಯಿತ್ತು. ಆದರೆ, ಒಂದು ಹನಿಯೂ ಮಳೆಯಾಗದೆ ಮಾರ್ಚ್‌ ತಿಂಗಳು ಕಳೆದು ಹೋಗಿದೆ.

ಮಾರ್ಚ್ ತಿಂಗಳಲ್ಲಿ ಮಳೆಯಾಗದೇ ಇರುವುದು ಇದೇ ಮೊದಲು ಎಂದು ಹೇಳಲಾಗಿದೆ. 1981ರಲ್ಲಿ ಮಾರ್ಚ್‌ ತಿಂಗಳಲ್ಲೇ 101.2 ಮಿಮೀ ಮಳೆಯಾಗಿತ್ತು. ಅದೇ 2008ರಲ್ಲಿ ಎಚ್‌ಎಎಲ್ ವ್ಯಾಪ್ತಿಯಲ್ಲಿಯೇ 219.9 ಮಿಮೀ ಮಳೆ ಸುರಿದಿತ್ತು. ಅದರೆ, 2024ರ ಮಾರ್ಚ್‌ ತಿಂಗಳು ಮಳೆಯಿಲ್ಲದೆ ಶುಷ್ಕ ವಾತಾವರಣದಲ್ಲಿ ಪೂರ್ಣಗೊಂಡಿದೆ. ಬೆಂಗಳೂರು ಮಾತ್ರವಲ್ಲದೆ ದಕ್ಷಿಣ ಒಳನಾಡಿನ ವ್ಯಾಪ್ತಿಯ ಯಾವುದೇ ಜಿಲ್ಲೆಯಲ್ಲೂ ಮಳೆ ಸುರಿದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಗ್ಗಿದ ಬಿಸಿಲ ಪ್ರಮಾಣ

ಬೆಂಗಳೂರಿನಲ್ಲಿ ಮಾರ್ಚ್‌ ತಿಂಗಳಲ್ಲಿ ಸುಡು ಬಿಸಿಲಿದ್ದರೂ ಏಪ್ರಿಲ್‌ನಲ್ಲಿ ಅದರ ಪ್ರಮಾಣ ಕಡಿಮೆಯಾಗುವ ನಿರೀಕ್ಷೆಯಿದೆ. ಮಾ. 31ರಂದು 36.6 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದ್ದರೆ, ಏ. 1ರಂದು ಅದರ ಪ್ರಮಾಣ ತಗ್ಗಿತ್ತು. ಏ. 1ರ ಸೋಮವಾರ 35.1 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದ್ದು, ಒಂದೇ ದಿನದಲ್ಲಿ 1.5 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಕಡಿಮೆಯಾಗಿದೆ. ಮುಂದಿನ ಎರಡು ವಾರಗಳ ಕಾಲ ಬಿಸಿಲಿನ ಪ್ರಮಾಣ 35 ಮತ್ತು 36 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.