ಸಾರಾಂಶ
ಕೆ.ಎಂ. ಮಂಜುನಾಥ್
ಬಳ್ಳಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಗಣಿಜಿಲ್ಲೆ ಬಳ್ಳಾರಿ ನಿರೀಕ್ಷಿತ ಪ್ರಮುಖ ಯೋಜನೆಗಳಿಗೆ ಆದ್ಯತೆ ಸಿಕ್ಕಿಲ್ಲ!ಕಳೆದ ವರ್ಷ ಬಜೆಟ್‌ನಲ್ಲಿ ಪ್ರಸ್ತಾಪ ಹಾಗೂ ಅನುದಾನ ನೀಡಿಕೆಯ ನಿರೀಕ್ಷೆ ಹುಸಿಯಾದ ಬೆನ್ನಲ್ಲೇ ಈ ಬಾರಿಯೂ ಸಿಎಂ ಸಿದ್ದರಾಮಯ್ಯ ಅವರು ಜಿಲ್ಲೆಯನ್ನು ಕಡೆಗಣಿಸಿದ್ದಾರೆ ಎಂಬ ಟೀಕೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ. ಆದರೆ, ಜಿಲ್ಲೆಯ ವಿವಿಧ ಸ್ತರದ ಪ್ರಗತಿ ನೆಲೆಯಲ್ಲಿ ಕೆಲವೊಂದು ಹೊಸ ಯೋಜನೆಗಳನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಿರುವುದು ಒಂದಷ್ಟು ನಿರಾಳ ಮೂಡಿಸಿದೆ.
ನಾನಾ ಯೋಜನೆಗಳ ಪ್ರಸ್ತಾಪ: ಬಳ್ಳಾರಿಗೆ ಸಂಬಂಧಿಸಿದಂತೆ ಐದಾರು ವಿವಿಧ ಯೋಜನೆಗಳ ಪ್ರಸ್ತಾಪ ಮಾಡಲಾಗಿದೆಯಾದರೂ ಕೃಷಿ, ತೋಟಗಾರಿಕೆ, ಜೀನ್ಸ್ ಉದ್ಯಮ, ಕೈಗಾರಿಕೆ ಪ್ರಗತಿ, ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ, ಗ್ರಾಮೀಣ ಹಾಗೂ ಬಳ್ಳಾರಿ ನಗರಾಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಮುಖ ಯೋಜನೆಗಳ ಅನುಷ್ಠಾನದ ಬಗ್ಗೆ ಚಕಾರ ಎತ್ತಿಲ್ಲ.ಗಮನಾರ್ಹ ಸಂಗತಿ ಎಂದರೆ ಬಜೆಟ್‌ನಲ್ಲಿ ಪ್ರಸ್ತಾಪವಾಗಿರುವ ಕೆಲವು ಯೋಜನೆಗೆ ಬಳ್ಳಾರಿ ಜಿಲ್ಲಾ ಖನಿಜನಿಧಿಯನ್ನು ಬಳಸಿಕೊಳ್ಳಲಾಗುವುದು ಎಂದು ಸಿಎಂ ಹೇಳಿದ್ದಾರೆಯೇ ವಿನಃ, ಸರ್ಕಾರದ ಬಜೆಟ್‌ನಿಂದ ಬಳ್ಳಾರಿ ಜಿಲ್ಲೆಗೆ ಕೊಟ್ಟಿದ್ದು ಎಷ್ಟು ಎಂಬುದನ್ನು ಸ್ಪಷ್ಟಪಡಿಸಿಲ್ಲ.
ನಿರೀಕ್ಷೆಗಳೇನಿದ್ದವು?: ನನೆಗುದಿಗೆ ಬಿದ್ದಿರುವ ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಅಗತ್ಯ ಅನುದಾನ ಈ ಬಜೆಟ್‌ನಲ್ಲಿ ದೊರೆತು, ಶೀಘ್ರ ಕಾಮಗಾರಿ ಪೂರ್ಣಗೊಳಿಸುವುದು. ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ. ಪ್ರತಿವರ್ಷ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಒಣಮೆಣಸಿನಕಾಯಿ ಬೆಳೆಯುತ್ತಿದ್ದು, ಜಿಲ್ಲೆಯ ರೈತರ ಅನುಕೂಲಕ್ಕಾಗಿ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆ, ಸ್ಥಳೀಯ ಉದ್ಯೋಗ ಸೃಷ್ಟಿ ಹಾಗೂ ಜೀನ್ಸೋದ್ಯಮ ಪ್ರಗತಿಗೆ ಅಪರೆಲ್ ಪಾರ್ಕ್‌ಗೆ ಅನುದಾನ ಘೋಷಣೆ, ಬಳ್ಳಾರಿ ಜಿಲ್ಲೆಯಲ್ಲಿ ವಿಪುಲ ಅವಕಾಶವಿರುವ ಪ್ರವಾಸೋದ್ಯಮ ಪ್ರಗತಿಗೆ ಒತ್ತು, ಘೋಷಿತ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಸ್ಥಾಪನೆಗೆ ಅನುದಾನ ನೀಡಿಕೆ, ಬಳ್ಳಾರಿ ನಗರ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆ ಹಾಗೂ ತಾಲೂಕು ಕೇಂದ್ರಗಳಿಗೆ ಮೂಲ ಸೌಕರ್ಯ ಹೆಚ್ಚಳದ ನಿರೀಕ್ಷೆಗಳಿದ್ದವು. ಆದರೆ, ನಿರೀಕ್ಷಿತ ಯೋಜನೆಗಳಿಗೆ ಯಾವುದೇ ಅನುದಾನ ನೀಡಿ, ಅನುಷ್ಠಾನಗೊಳಿಸುವ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸದ ಮುಖ್ಯಮಂತ್ರಿಗಳು, ಕೆಲವೊಂದು ಹೊಸ ಯೋಜನೆಗಳನ್ನು ಪ್ರಸ್ತಾಪಿಸಿ, ಜಿಲ್ಲೆಯನ್ನು ಸಮಾಧಾನಪಡಿಸಲೆತ್ನಿಸಿದ್ದಾರೆ.ಬಜೆಟ್‌ನಲ್ಲಿ ಬಳ್ಳಾರಿ ಸಿಕ್ಕಿದ್ದು: ಬಳ್ಳಾರಿ ಕ್ರೀಡಾ ವಸತಿನಿಲಯ ಉನ್ನತೀಕರಣ ಹಾಗೂ ಕ್ರೀಡಾ ಸೌಕರ್ಯಗಳ ಹೆಚ್ಚಳಕ್ಕೆ ಖನಿಜನಿಧಿಯಿಂದ ₹10 ಕೋಟಿ ನೀಡುವುದಾಗಿ ಸಿಎಂ ತಿಳಿಸಿದ್ದಾರೆ. ಇದರಿಂದ ಕ್ರೀಡಾಪಟುಗಳಿಗೆ ಮೂಲ ಸೌಕರ್ಯದಲ್ಲಿ ಹೆಚ್ಚಳ ಹಾಗೂ ಕ್ರೀಡೋತ್ಸಾಹಕ್ಕೆ ಉತ್ತೇಜನ ಸಿಕ್ಕಂತಾಗಿದೆ. ಬಳ್ಳಾರಿಯಲ್ಲಿ ಅಸಂಘಟಿತ ಜೀನ್ಸ್ ಉದ್ದಿಮೆಗಳನ್ನು ಸಂಘಟಿಸಿ, ವಿಶ್ವದರ್ಜೆಗೆ ಉನ್ನತೀಕರಿಸಲು ಮೂಲ ಸೌಕರ್ಯಗಳನ್ನು ಒಳಗೊಂಡಂತೆ ಜೀನ್ಸ್ ಅಪರೆಲ್ ಪಾರ್ಕ್ ಹಾಗೂ ಸಾಮಾನ್ಯ ಸೌಲಭ್ಯ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಬಜೆಟ್‌ನ ತಿಳಿಸಲಾಗಿದೆ.
ಆದರೆ, ಅಪರೆಲ್ ಪಾರ್ಕ್ ಗೆ ಬಿಡುಗಡೆ ಮಾಡುತ್ತಿರುವ ಅನುದಾನ ಎಷ್ಟು? ಎಂಬುದನ್ನು ಖಚಿತಪಡಿಸಲಾಗಿಲ್ಲ. ಬಹುಕೌಶಲ್ಯಾಭಿವೃದ್ಧಿ ಕೇಂದ್ರ: ಜಿಲ್ಲಾ ಖನಿಜನಿಧಿಯಿಂದ ₹50 ಕೋಟಿ ವೆಚ್ಚದಲ್ಲಿ ಬಹುಕೌಶಲ್ಯಾಭಿವೃದ್ಧಿ ಕೇಂದ್ರಗಳ(ಜಿಟಿಟಿಸಿ) ಸ್ಥಾಪನೆ, ಎದೆಹಾಲು ಬ್ಯಾಂಕ್(ಹ್ಯೂಮನ್ ಮಿಲ್ಕ್ ಬ್ಯಾಂಕ್) ಸ್ಥಾಪನೆ, ಬಳ್ಳಾರಿ ಎಪಿಎಂಸಿಯಲ್ಲಿ ₹10 ಕೋಟಿ ವೆಚ್ಚದಲ್ಲಿ ಶೀತಲಗೃಹಗಳ ನಿರ್ಮಾಣ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಜೈವಿಕ ಸಂಕುಚಿತ ನೈಸರ್ಗಿಕ ಅನಿಲದ ಸ್ಥಾವರ (ಬಯೋ ಸಿಎನ್‌ಜಿ ಪ್ಲಾಂಟ್ )ಸ್ಥಾಪಿಸುವ ಕುರಿತು ಪ್ರಸ್ತಾಪಿಸಲಾಗಿದೆ. ಬಳ್ಳಾರಿ ನಗರ ಸಮೀಪ ಸಮಗ್ರ ಸೌಲಭ್ಯಯುತ ಪಟ್ಟಣ(ಇಂಟಿಗ್ರೇಟೆಡ್ ಟೌನ್‌ಶಿಫ್) ಅಭಿವೃದ್ಧಿಪಡಿಸಲಾಗುವುದು ಹಾಗೂ ಸಂಡೂರಿನಲ್ಲಿ ಸ್ಕಿಲ್ ಅಕಾಡೆಮಿ ಸ್ಥಾಪನೆ ಮಾಡಲಾಗುವುದು ಎಂದು ಸಿಎಂ ಹೇಳಿದ್ದಾರೆ. ಟೌನ್‌ಶಿಪ್ ನಿರ್ಮಾಣ ಹಾಗೂ ಸ್ಕಿಲ್ ಅಕಾಡೆಮಿ ಸ್ಥಾಪನೆಯಿಂದ ಹೆಚ್ಚು ಪ್ರಯೋಜನೆ ಸಾಧ್ಯತೆಯಿದೆ. ರಾಹುಲ್‌ಗಾಂಧಿ ಘೋಷಣೆ ₹5 ಸಾವಿರ ಕೋಟಿ ಎಲ್ಲಿ?ಚುನಾವಣೆ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಳ್ಳಾರಿ ಭೇಟಿ ಸಂದರ್ಭದಲ್ಲಿ ನೀಡಿದ ಜೀನ್ಸ್ ಅಪರೆಲ್ ಪಾರ್ಕ್‌ಗೆ ₹5 ಸಾವಿರ ಕೋಟಿ ನೀಡುವ ವಾಗ್ದಾನ ಈ ಬಜೆಟ್‌ನಲ್ಲೂ ಹುಸಿಯಾಗಿದೆ. ಕಳೆದ ಬಾರಿಯೇ ಬಜೆಟ್‌ನಲ್ಲಿ ಘೋಷಣೆ ಮಾಡುವ ನಿರೀಕ್ಷೆಯಿತ್ತು. ಅದಾಗಲಿಲ್ಲ. ಮುಂದಿನ ಬಜೆಟ್‌ನಲ್ಲಿ ಖಂಡಿತ ಘೋಷಣೆಯಾಗಲಿದೆ ಎಂದು ಜಿಲ್ಲೆಯ ಕಾಂಗ್ರೆಸ್ ನಾಯಕರು ಹೇಳಿದ್ದರು. ಆದರೆ, ಈ ಬಾರಿಯ ಬಜೆಟ್‌ನಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಪರೆಲ್ ಪಾರ್ಕ್ ಅಭಿವೃದ್ಧಿ ಪಡಿಸುವ ಕುರಿತು ಪ್ರಸ್ತಾಪಿಸಿದ್ದಾರೆಯೇ ವಿನಾ, ಹಣಕಾಸು ನೀಡುವ ಕುರಿತು ಸ್ಪಷ್ಟವಾಗಿ ತಿಳಿಸಲಿಲ್ಲ. ಸರ್ಕಾರ ವಿವಿಧ ಯೋಜನೆಗಳಿಗೆ ಜಿಲ್ಲಾ ಖನಿಜದ ಕಡೆ ಕಣ್ಣಾಯಿಸಿರುವ ಸರ್ಕಾರ, ಅಪರೆಲ್ ಪಾರ್ಕ್ ನಿರ್ಮಾಣಕ್ಕೆ ಸ್ಥಳೀಯ ಖನಿಜನಿಧಿಯ ಹಣ ಬಳಕೆಗೆ ಮುಂದಾದರೂ ಅಚ್ಚರಿಯಿಲ್ಲ.