ಫಲಾನುಭವಿ ಆಯ್ಕೆಯಲ್ಲಿ ವಸೂಲಿಗೆ ಅವಕಾಶ ನೀಡಿಲ್ಲ: ಶಾಸಕ ಕೃಷ್ಣನಾಯ್ಕ

| Published : Jun 27 2024, 01:07 AM IST

ಫಲಾನುಭವಿ ಆಯ್ಕೆಯಲ್ಲಿ ವಸೂಲಿಗೆ ಅವಕಾಶ ನೀಡಿಲ್ಲ: ಶಾಸಕ ಕೃಷ್ಣನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಅಂಗವಿಕಲರಿಗೆ ತ್ರಿಚಕ್ರ ಬೈಕ್‌ ನೀಡಲು ಈ ಹಿಂದೆ ಒಬ್ಬ ಫಲಾನುಭವಿಯಿಂದ ₹10 ರಿಂದ ₹15 ಸಾವಿರ ವಸೂಲಿ ಮಾಡುತ್ತಿರುವ ಕುರಿತು ದೂರು ಕೇಳಿ ಬಂದಿತ್ತು.

ಹೂವಿನಹಡಗಲಿ: ಸುವಿಧಾ ಯೋಜನೆಯಡಿ ಸರ್ಕಾರ ನೀಡುವ ತ್ರಿಚಕ್ರ ಬೈಕ್‌ ವಿತರಣೆಗೆ ಫಲಾನುಭವಿಗಳ ಆಯ್ಕೆ ವಿಚಾರವಾಗಿ ಈ ಹಿಂದೆ ನಡೆಯುತ್ತಿದ್ದ ವಸೂಲಿ ದಂಧೆಗೆ ಕಡಿವಾಣ ಹಾಕಿ, ಅರ್ಹ ಫಲಾನುಭವಿಗಳ ಆಯ್ಕೆ ಮಾಡಲಾಗಿದೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಇಲ್ಲಿನ ಸಿಡಿಪಿಒ ಕಚೇರಿ ಆವರಣದಲ್ಲಿ ತಾಲೂಕಿನ 37 ಅಂಗವಿಕಲರಿಗೆ ತ್ರಿಚಕ್ರ ಬೈಕ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಅಂಗವಿಕಲರಿಗೆ ತ್ರಿಚಕ್ರ ಬೈಕ್‌ ನೀಡಲು ಈ ಹಿಂದೆ ಒಬ್ಬ ಫಲಾನುಭವಿಯಿಂದ ₹10 ರಿಂದ ₹15 ಸಾವಿರ ವಸೂಲಿ ಮಾಡುತ್ತಿರುವ ಕುರಿತು ದೂರು ಕೇಳಿ ಬಂದಿತ್ತು. ಆದರೆ ಈ ಬಾರಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲಾಗಿದೆ ಎಂದರು.

ಶಾಸಕರ ಅನುದಾನದಲ್ಲಿ ₹30 ಲಕ್ಷ ಅಂಗವಿಕಲರ ಅಭಿವೃದ್ಧಿಗಾಗಿ ಹಣ ಮೀಸಲಿಡಲಾಗಿದೆ. ಇದರಲ್ಲಿ ಓಡಾಡಲು ಆಗದೇ ಮನೆಯಲ್ಲಿ ಹಾಸಿಗೆಯಲ್ಲೇ ಇರುವಂತಹ ಅಂಗವಿಕಲರಿಗೆ ವಿಶೇಷ ವೀಲ್‌ ಚೇರ್‌ ಮತ್ತು ತ್ರಿಚಕ್ರ ಬೈಕ್‌ಗಳನ್ನು ನೀಡುವಂತಹ ವ್ಯವಸ್ಥೆ ಮಾಡುತ್ತೇನೆಂದು ಭರವಸೆ ನೀಡಿದರು.

ತಾಲೂಕಿನ ಗ್ರಾಪಂ, ಪುರಸಭೆಯಲ್ಲಿ ಅಂಗವಿಕಲರ ಕಲ್ಯಾಣಕ್ಕಾಗಿ ಮೀಸಲಿರುವ ಶೇ.5 ಹಣ ಕೊಳೆಯುತ್ತಿದೆ. ಇದನ್ನು ಸಮುದಾಯ ಅಭಿವೃದ್ಧಿಗಾಗಿ ಬಳಕೆ ಮಾಡುತ್ತಿದ್ದಾರೆ. ಅದರ ಬದಲಿಗೆ ಅಂಗವಿಕಲರ ಆರೋಗ್ಯಕ್ಕಾಗಿ ಮತ್ತು ಅವರ ವೈಯಕ್ತಿಕ ಅಭಿವೃದ್ಧಿಗಾಗಿ ಹಣವನ್ನು ಬಳಕೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆಂದು ಹೇಳಿದರು.

ಮುಂಬರುವ ಅಧಿವೇಶನದಲ್ಲಿ ಅಂಗವಿಕಲರ, ಕಲ್ಯಾಣ ಮತ್ತು ನಿವೇಶನ ಹಾಗೂ ಮನೆಗಳ ವಿಚಾರವಾಗಿ ಚರ್ಚಿಸುತ್ತೇನೆ. ಜತೆಗೆ ತಾವು ಸ್ವಾವಲಂಬಿ ಜೀವನ ಸಾಗಿಸಲು ಉತ್ತಮ ಯೋಜನೆಗಳನ್ನು ರೂಪಿಸುತ್ತೇನೆಂದು ಹೇಳಿದರು.

ಈ ಸಂದರ್ಭದಲ್ಲಿ ತಾಪಂ ಇಒ ಉಮೇಶ, ಸಿಡಿಪಿಒ ರಾಮನಗೌಡ, ತಾಲೂಕ ಅಂಗವಿಕಲರ ಸಂಘದ ಅಧ್ಯಕ್ಷ ಎಸ್‌.ಚಂದ್ರಪ್ಪ, ಎಂಆರ್‌ಬ್ಲ್ಯೂ ಮಂಜುನಾಥ ಉಪಸ್ಥಿತರಿದ್ದರು.