ಪು4..ಲೀಡ್‌...ಮೂಲ ಕಾಂಗ್ರೆಸ್ಸಿಗೂ, ಈಗಿನ ಕಾಂಗ್ರೆಸ್‌ಗೂ ಸಂಬಂಧ ಇಲ್ಲ: ಶೆಟ್ಟರ್‌

| Published : Dec 25 2024, 12:46 AM IST

ಪು4..ಲೀಡ್‌...ಮೂಲ ಕಾಂಗ್ರೆಸ್ಸಿಗೂ, ಈಗಿನ ಕಾಂಗ್ರೆಸ್‌ಗೂ ಸಂಬಂಧ ಇಲ್ಲ: ಶೆಟ್ಟರ್‌
Share this Article
  • FB
  • TW
  • Linkdin
  • Email

ಸಾರಾಂಶ

ಮೂಲ ಕಾಂಗ್ರೆಸ್ ರಾಜಕೀಯ ಪಕ್ಷವಲ್ಲ. ಅದು ಸ್ವಾತಂತ್ರ್ಯ ಚಳವಳಿಗಾಗಿ ಹುಟ್ಟಿಕೊಂಡ ಸಂಸ್ಥೆ. ಮೂಲ ಕಾಂಗ್ರೆಸ್ಸಿಗೂ ಈಗಿನ ರಾಹುಲ್ ಗಾಂಧಿ ಕಾಂಗ್ರೆಸ್ ಎಂಬ ರಾಜಕೀಯ ಪಕ್ಷಕ್ಕೂ ಸಂಬಂಧವೇ ಇಲ್ಲ ಎಂದು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮೂಲ ಕಾಂಗ್ರೆಸ್ ರಾಜಕೀಯ ಪಕ್ಷವಲ್ಲ. ಅದು ಸ್ವಾತಂತ್ರ್ಯ ಚಳವಳಿಗಾಗಿ ಹುಟ್ಟಿಕೊಂಡ ಸಂಸ್ಥೆ. ಮೂಲ ಕಾಂಗ್ರೆಸ್ಸಿಗೂ ಈಗಿನ ರಾಹುಲ್ ಗಾಂಧಿ ಕಾಂಗ್ರೆಸ್ ಎಂಬ ರಾಜಕೀಯ ಪಕ್ಷಕ್ಕೂ ಸಂಬಂಧವೇ ಇಲ್ಲ ಎಂದು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ ಹೇಳಿದರು.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗ ಬೇರೆ ರಾಜಕೀಯ ಪಕ್ಷಗಳಿರದ ಕಾರಣ ಎಲ್ಲರೂ ಇದೇ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಹಿಂದಿನ ಕಾಂಗ್ರೆಸ್ ಹಾಗೂ ಗಾಂಧಿ ಹೆಸರನ್ನು ರಾಜಕಾರಣಿ ನೆಹರು ಕುಟುಂಬ ಹೈಜಾಕ್‌ ಮಾಡಿದೆ. ಮಹಾತ್ಮ ಗಾಂಧಿ ಕುಟುಂಬಕ್ಕೂ, ಈ ಗಾಂಧಿ ಕುಟುಂಬಕ್ಕೂ ರಕ್ತ ಸಂಬಂಧವೂ ಇಲ್ಲ ಎಂದವರು ಆರೋಪಿಸಿದರು.ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಮಾಡುತ್ತಿದ್ದೀರಿ. ಗಾಂಧಿ ವಿಚಾರಕ್ಕೆ ಇವರ್‍ಯಾರು ಹೊಂದಿಕೊಂಡಿಲ್ಲ. ಕಾಂಗ್ರೆಸ್ ಪಕ್ಷ ಅದೆಷ್ಟು ಬಾರಿ ಒಡೆದಿದೆ. ಸಂಸ್ಥಾ ಕಾಂಗ್ರೆಸ್, ಇಂದಿರಾ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ (ಟಿಎಂಸಿ), ನ್ಯಾಷನಲ್ ಕಾಂಗ್ರೆಸ್ (ಎನ್‌ಸಿಪಿ) ಹೀಗೆ ಹತ್ತಾರು ಪಕ್ಷಗಳಾಗಿದೆ. ಇವರದ್ದು ಯಾವ ಕಾಂಗ್ರೆಸ್? ಈ ಕಾಂಗ್ರೆಸ್ಸಿಗೂ ಗಾಂಧಿ ಕಾಂಗ್ರೆಸ್ಸಿಗೂ ಏನು ಸಂಬಂಧ? ಅರವಿಂದ ಕೇಜ್ರವಾಲ್ ಅಣ್ಣಾ ಹಜಾರೆ ಹೋರಾಟ ಹೈಜಾಕ್ ಮಾಡಿದರು. ಅದಕ್ಕಿಂತ ಮೊದಲೇ ನೆಹರು ಅವರು ಗಾಂಧಿ ಹೆಸರನ್ನು ಹೈಜಾಕ್ ಮಾಡಿ ಗಾಂಧಿ ಹೆಸರನ್ನು ತಮ್ಮ ಕುಟುಂಬದೊಳಗೆ ತಂದುಬಿಟ್ಟರು ಎಂದು ದೂರಿದರು.ಗಾಂಧಿ ತತ್ವಾದರ್ಶಗಳಿಗೆ ಕಾಂಗ್ರೆಸ್ ವಿರುದ್ಧವಾಗಿದೆ. ಗಾಂಧಿ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಿ ಎಂದಿದ್ದರು. ಆ ಮಾತಿಗೆ ವಿರುದ್ಧವಾಗಿ ಕಾಂಗ್ರೆಸ್ ಪಕ್ಷವಾಗಿ ಮುಂದುವರಿಯಿತು. ಗಾಂಧಿ ಅವರು ಗ್ರಾಮ ಸ್ವರಾಜ್ಯ, ಭ್ರಷ್ಟಾಚಾರ ವಿರೋಧಿಸಿದ್ದರು. ಈಗ ಭ್ರಷ್ಟಾಚಾರದ ಲೇಪ ಇರುವವರೆಲ್ಲರೂ ಗಾಂಧಿ ಹೆಸರಿನಲ್ಲಿ ರಾಜಕೀಯದ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಸಿ.ಟಿ. ರವಿ ಎಂದಿಗೂ ಕೆಟ್ಟ ಪದ ಬಳಸಿದವರಲ್ಲ: ಸಿ.ಟಿ. ರವಿ ಅವರು ಎಂದಿಗೂ ಕೆಟ್ಟ ಪದ ಬಳಸಿದವರಲ್ಲ. ಕಾರ್ಯಾಗಾರಗಳಲ್ಲಿ ಮಹಿಳೆಯರ ಬಗ್ಗೆ ಕೆಟ್ಟ ಪದ ಬಳಸುವುದನ್ನು ಸಮಾಜ ಒಪ್ಪುವುದಿಲ್ಲ. ಅಂತ ಶಬ್ದ ಬಳಸದಂತೆ ಮಾರ್ಗದರ್ಶನ ನೀಡಿದ್ದರು.ಅವರು ಆ ಪದ ಬಳಸಲು ಸಾಧ್ಯವಿಲ್ಲ. ಕೆಲ ವರ್ಷಗಳಿಂದ ರವಿ ಅ‍ವರನ್ನು ಹತ್ತಿರದಿಂದ ನೋಡಿದ್ದೇನೆ. ನನ್ನ ಹೇಳಿಕೆಯನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ ಎಂದು ರವಿ ಹೇಳಿದ ಬಳಿಕ ಸಭಾಪತಿ ರೂಲಿಂಗ್‌ ನೀಡಿದ್ದಾರೆ. ವಿಧಾನಸೌಧ ಒಳಗಡೆ ಸ್ಪೀಕರ್‌ ಇಸ್‌ ಸುಪ್ರೀಂ. ಇದು ಪೊಲೀಸ್ ವ್ಯಾಪ್ತಿಗೂ ಬರಲ್ಲ. ಸುಪ್ರೀಂ ಕೋರ್ಟ್ ಕೂಡ ಪ್ರಶ್ನಿಸಲು ಸಾಧ್ಯವಿಲ್ಲದಷ್ಟು ಸಭಾಪತಿಯವರಿಗೆ ಮಹತ್ವ ಇರುವಾಗ ಪೊಲೀಸರು ಏಕಾಏಕಿ ಹೇಗೆ ವಿಧಾನಸೌಧದೊಳಗೆ ನುಗ್ಗಿ ಕಾನೂನು ಕೈಗೆ ತೆಗೆದುಕೊಂಡರು ಎಂಬ ಪ್ರಶ್ನೆಗೆ ಗೃಹ ಸಚಿವರು ಉತ್ತರಿಸಬೇಕು ಎಂದರು.

ಅಮಾಯಕರಾದ, ಏನು ತಪ್ಪು ಮಾಡಿಲ್ಲದ ಸಿ.ಟಿ. ರವಿ ಅವರನ್ನು ಸದನದ ಒಳಗೆ ನಡೆದ ಪ್ರಕರಣದ ಮೇಲೆ ಹೇಗೆ ಪೊಲೀಸರು ಬಂಧಿಸಿದರು? ಹಾಗೆ ಒಂದು ವೇಳೆ ಬಂಧಿಸಿದರೂ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬೇಕಿತ್ತು. ಅದಕ್ಕೂ ಮೊದಲು ಮೆಡಿಕಲ್ ಎಕ್ಸಾಮಿನೇಷನ್ ಮಾಡಬೇಕಿತ್ತು. ಇದ್ಯಾವುದನ್ನು ಮಾಡದೆ ನೇರ ಜೈಲಿಗೆ ಹಾಕುವ ಕೆಲಸ ಮಾಡಿರುವುದು ಕಾಂಗ್ರೆಸ್‌ನ ದ್ವೇಷ ರಾಜಕಾರಣಕ್ಕೆ ಹಿಡಿದ ಕೈಗನ್ನಡಿಯಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.

ಈ ಹಿಂದೆ ಬೆಂಗಳೂರಿನ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದು ಕಾಂಗ್ರೆಸ್ ನವರಿಗೆ ನಜೀರ್ ಸಾಬ್‌ ಜಿಂದಾಬಾದ್ ಎಂದು ಕೇಳಿದೆ. ಆದರೆ, ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದು ಎಫ್‌ಎಸ್‌ಎಲ್‌ ವರದಿ ಕೂಡ ದೃಢಪಡಿಸಿದೆ. ಪಂಚಮಸಾಲಿ ಹೋರಾಟ ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಸಮರ್ಪಕ ಉತ್ತರ ಕೊಡಲು ಸಾಧ್ಯವಾಗದ ಕಾಂಗ್ರೆಸ್ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಇಂತಹ ಡ್ರಾಮಾಗೆ ಕೈಹಾಕಿದೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಶಾಸಕ ಅಭಯ ಪಾಟೀಲ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.