ಯಾವ ಧರ್ಮಿಯರೂ ಮಾದಿಗರನ್ನು ನಮ್ಮವರೆಂದು ಅಪ್ಪಿಕೊಳ್ಳುತ್ತಿಲ್ಲ: ಸಚಿವ ಆರ್.ಬಿ. ತಿಮ್ಮಾಪುರ

| Published : May 07 2025, 12:45 AM IST

ಯಾವ ಧರ್ಮಿಯರೂ ಮಾದಿಗರನ್ನು ನಮ್ಮವರೆಂದು ಅಪ್ಪಿಕೊಳ್ಳುತ್ತಿಲ್ಲ: ಸಚಿವ ಆರ್.ಬಿ. ತಿಮ್ಮಾಪುರ
Share this Article
  • FB
  • TW
  • Linkdin
  • Email

ಸಾರಾಂಶ

ನಾಯಿ ನರಿಗಳು ಎಲ್ಲಿ ಬೇಕಾದರೂ ಪ್ರವೇಶಿಸಬಹುದು. ಆದರೆ ಬಸವ, ಗಾಂಧಿ, ಅಂಬೇಡ್ಕರ ಗುರುತಿಸಿದ ಮಾದಿಗರ ಪ್ರವೇಶಕ್ಕೆ ಮಾತ್ರ ನಿಷೇಧವಿದೆ. ಇದೊಂದು ಮನುಷ್ಯ ಸಂಸ್ಕೃತಿಯ ವಿಪರ್ಯಾಸವೆಂದರೂ ತಪ್ಪಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ತಿಳಿಸಿದರು.

ಬ್ಯಾಡಗಿ: ಶ್ರೇಣಿಕೃತ ಜಾತಿ ವ್ಯವಸ್ಥೆಯಲ್ಲಿ ಯಾವ ಧರ್ಮದವರೂ ಮಾದಿಗರನ್ನು ತಮ್ಮವರೆಂದು ಮನಃಪೂರ್ವಕ ಪ್ರೀತಿಯಿಂದ ಅಪ್ಪಿಕೊಳ್ಳುತ್ತಿಲ್ಲ. ಅಂಬೇಡ್ಕರ್ ಬಳಿಕವೂ ನಮಗೆ ದಾರಿ ಸಿಗದೇ ನೊಂದು ಬೆಂದಿದ್ದೇವೆ. ಹೀಗಾಗಿ ಸಮಾಜ ಗೊಂದಲದಲ್ಲಿದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ವಿಷಾದಿಸಿದರು.

ಮಂಗಳವಾರ ತಾಲೂಕಿನ ಧಾರ್ಮಿಕ ಕ್ಷೇತ್ರ ಕದರಮಂಡಲಗಿಯಲ್ಲಿ ಚೌಡೇಶ್ವರಿದೇವಿ ಬೆಳ್ಳಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕರ್ಮ ಸಿದ್ಧಾಂತ ಹಾಗೂ ವರ್ಗ ಪದ್ಧತಿಯನ್ನು ಧಿಕ್ಕರಿಸಿದ ಬಸವೇಶ್ವರರು ಮೊದಲ ಬಾರಿಗೆ ನಮ್ಮನ್ನು ಅಪ್ಪಿಕೊಂಡರು. ಆದರೆ ಇತರೆ ಸಮಾಜದ ಮಕ್ಕಳನ್ನು ನಾವು ಮದುವೆಯಾದರೆ ತಾವು ಹಡೆದ ಮಕ್ಕಳನ್ನೇ ಕೊಲ್ಲುವ ಸಂಸ್ಕೃತಿ ರೂಢಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅಂತರ್ಜಾತಿ ವಿವಾಹ ಜಾರಿಗೆ ತರುವ ಮೂಲಕ ಸಮ ಸಮಾಜ ಕಟ್ಟಲು ಸರ್ಕಾರಕ್ಕೂ ಸಾಧ್ಯವಾಗದೇ ಹೋಯಿತು ಎಂದರು.

ನಾಯಿ ನರಿಗಳು ಎಲ್ಲಿ ಬೇಕಾದರೂ ಪ್ರವೇಶಿಸಬಹುದು. ಆದರೆ ಬಸವ, ಗಾಂಧಿ, ಅಂಬೇಡ್ಕರ ಗುರುತಿಸಿದ ಮಾದಿಗರ ಪ್ರವೇಶಕ್ಕೆ ಮಾತ್ರ ನಿಷೇಧವಿದೆ. ಇದೊಂದು ಮನುಷ್ಯ ಸಂಸ್ಕೃತಿಯ ವಿಪರ್ಯಾಸವೆಂದರೂ ತಪ್ಪಿಲ್ಲ. ತುಳಿತಕ್ಕೆ ಒಳಗಾಗಿದ್ದ ನಮ್ಮ ಸಮಾಜವನ್ನು ತಮ್ಮ ಇಚ್ಛೆಗೆ ತಕ್ಕಂತೆ ಬಳಸಿಕೊಂಡವರೇ ಇಂದಿಗೂ ನಮ್ಮನ್ನು ತುಳಿಯುತ್ತಿದ್ದಾರೆ. ಇನ್ನಾದರೂ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಾಗಿದ್ದು, ಮೊದಲು ಶಿಕ್ಷಣವಂತರಾಗಿ ಬದುಕನ್ನು ಕಟ್ಟಿಕೊಳ್ಳೋಣ ಎಂದು ಸಲಹೆ ನೀಡಿದರು.

ಅಸ್ಪೃಶ್ಯರು ಎಂಬ ಶಿರೋನಾಮೆ ಬದಲಿಸಿ ಹರಿಜನ ಎಂದು ಮರು ನಾಮಕರಣ ಮಾಡುವ ಮೂಲಕ ಸ್ವಾತಂತ್ರ್ಯಕ್ಕೂ ಮುನ್ನವೇ ನಮ್ಮನ್ನು ಗುರುತಿಸಿದವರು ಮಹಾತ್ಮ ಗಾಂಧಿ. ಅವರ ಬಳಿಕ ಸಾಮಾಜಿಕ ನ್ಯಾಯದಡಿ ಅಂಬೇಡ್ಕರ ಅವರು ಸಂವಿಧಾನಾತ್ಮಕ ಹಾಗೂ ಹಕ್ಕುಬದ್ಧ ಅವಕಾಶಗಳನ್ನು ಕಲ್ಪಿಸಲು ಮುಂದಾದರು. ಆದರೆ ರಾಜಕಾರಣದ ದಳ್ಳುರಿಗೆ 4 ಜಾತಿಗಳಿದ್ದ ಪರಿಶಿಷ್ಟ ಜಾತಿಯಲ್ಲಿ 118 ಜಾತಿಗಳನ್ನು ಸೇರಿಸುವ ಮೂಲಕ ನಮ್ಮನ್ನು ಮೇಲೆಳಲು ಬಿಡಲಿಲ್ಲ. ಬದಲಾಗಿ ಮೊದಲಿದ್ದ ಜಾಗಕ್ಕೆ ಕರೆದೊಯ್ಯುವ ಕೆಲಸವಾಗುತ್ತಿದೆ ಎಂದರು.

ಮಾದಿಗ ಸಮಾಜ ದೇಶದ ಮುಖ್ಯವಾಹಿನಿಗೆ ಬರಬೇಕಾದರೆ ಇನ್ನಿತರ ಎಲ್ಲ ಸಮಾಜದ ಜನರನ್ನು ಅಪ್ಪಿಕೊಳ್ಳುವ ಕೆಲಸ ಮಾಡಬೇಕು. ಊರ ಗೌಡ್ರು ಬೆಳೆದರೆ ಅದನ್ನು ಸಂಭ್ರಮಿಸದಂತಹ ಜಾತಿ ನಮ್ಮದು. ಆದರೆ ನಮ್ಮನ್ನು ಮುಂದಿಟ್ಟುಕೊಂಡು ಗುಂಡು ಹೊಡೆಯುವ ಕೆಲಸ ನಡೆಯುತ್ತಿದೆ. ತಾವೆಲ್ಲರೂ ಮೊದಲು ಕಾಂಪ್ರೊಮೈಸ್ ಅಟ್ರ್ಯಾಸಿಟಿ ಕೇಸಗಳಿಂದ ಹೊರ ಬರಬೇಕು ಎಂದರು.

ಒಳಮೀಸಲಾತಿ ಧೈರ್ಯ: ಆದರೆ ಇದೀಗ ಸಮಯ ಬಂದಿದೆ. ಒಳ ಮೀಸಲಾತಿ ಜಾರಿಗೊಳ್ಳುವುದು ಶತಸಿದ್ಧ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಸಮಾಜದವರು ಜಾತಿಗಣತಿ ವೇಳೆ ಮಾದಿಗ ಎಂದು ನಿರ್ಭಯವಾಗಿ ನೋಂದಣಿ ಮಾಡಿಸುವಂತೆ

ಹಾವೇರಿ ಹೊಸಮಠದ ಶಾಂತಲಿಂಗ ಶ್ರೀಗಳು ಸಾನ್ನಿಧ್ಯ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಹಾವೆಮುಲ್ ನಿರ್ದೇಶಕ ಪ್ರಕಾಶ ಬನ್ನಿಹಟ್ಟಿ, ಗ್ರಾಪಂ ಅಧ್ಯಕ್ಷೆ ಶಿವಗಂಗಮ್ಮ ಕಾಯಕದ, ಪುರಸಭೆ ಉಪಾಧ್ಯಕ್ಷ ಸುಭಾಸ್ ಮಾಳಗಿ, ಮಾಜಿ ಸದಸ್ಯ ದುರ್ಗೇಶ ಗೋಣೆಮ್ಮನವರ, ಅಬಕಾರಿ ಗುತ್ತಿಗೆದಾರ ಆರ್. ನಾಗರಾಜ, ಮುಖಂಡರಾದ ಡಿ.ಎಸ್. ಮಾಳಗಿ, ಸಂಜಯ ಗಾಂಧಿ, ಸುರೇಶ ಅಸಾದಿ, ನಾಗರಾಜ ಹಾವನೂರ, ಬಸವರಾಜ ಹೆಡಿಗ್ಗೊಂಡ, ಗವಿಸಿದ್ದಪ್ಪ ದ್ಯಾಮಣ್ಣನವರ, ಸೋಮಣ್ಣ ಮಾಳಗಿ, ದೇವಸ್ಥಾನ ಸಮಿತಿ ಅಧ್ಯಕ್ಷ ಕರಿಯಪ್ಪ ಬೆನ್ನೂರ ಸೇರಿದಂತೆ ಇತರರಿದ್ದರು.