ಬಂದ್‌ಗೆ ಸಿಗದ ಸ್ಪಂದನೆ; ಬಳ್ಳಾರಿಯಲ್ಲಿ ಎಂದಿನಂತೆ ಜನಜೀವನ

| Published : Mar 23 2025, 01:30 AM IST

ಬಂದ್‌ಗೆ ಸಿಗದ ಸ್ಪಂದನೆ; ಬಳ್ಳಾರಿಯಲ್ಲಿ ಎಂದಿನಂತೆ ಜನಜೀವನ
Share this Article
  • FB
  • TW
  • Linkdin
  • Email

ಸಾರಾಂಶ

ಮರಾಠಿಗರ ಪುಂಡಾಟಿಕೆ, ಕನ್ನಡ ವಿರೋಧಿ ನಿಲುವು ಖಂಡಿಸಿ ಕರೆ ನೀಡಲಾಗಿದ್ದ ಕರ್ನಾಟಕ ಬಂದ್‌ಗೆ ಬಳ್ಳಾರಿ ಜಿಲ್ಲೆಯಲ್ಲಿ ಸ್ಪಂದನೆ ಸಿಗಲಿಲ್ಲ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಮರಾಠಿಗರ ಪುಂಡಾಟಿಕೆ, ಕನ್ನಡ ವಿರೋಧಿ ನಿಲುವು ಖಂಡಿಸಿ ಕರೆ ನೀಡಲಾಗಿದ್ದ ಕರ್ನಾಟಕ ಬಂದ್‌ಗೆ ಬಳ್ಳಾರಿ ಜಿಲ್ಲೆಯಲ್ಲಿ ಸ್ಪಂದನೆ ಸಿಗಲಿಲ್ಲ.

ಶಾಲಾ-ಕಾಲೇಜುಗಳು ಕಾರ್ಯನಿರ್ವಹಿಸಿದವು. ಸಾರಿಗೆ ವ್ಯವಸ್ಥೆ, ಆಟೋ ಸಂಚಾರ ಎಂದಿನಂತೆ ಇತ್ತು. ನಾಲ್ಕನೇ ಶನಿವಾರವಾದ್ದರಿಂದ ಬ್ಯಾಂಕುಗಳಿಗೆ ರಜೆ ಘೋಷಿಸಲಾಗಿತ್ತು. ಸಿನಿಮಾ ಪ್ರದರ್ಶನವಿತ್ತು. ವ್ಯಾಪಾರ ವಹಿವಾಟು ಸಹಜವಾಗಿತ್ತು.

ಕರ್ನಾಟಕ ಬಂದ್ ಹಿನ್ನೆಲೆ ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದಲ್ಲಿ ಬೈಕ್ ರ್‍ಯಾಲಿ ನಡೆಸಿ ಬಂದ್‌ ಬೆಂಬಲಿಸುವಂತೆ ಮನವಿ ಮಾಡಿಕೊಂಡರೂ ಜನ ಸ್ಪಂದಿಸಲಿಲ್ಲ.

ಕರ್ನಾಟಕ ಬಂದ್ ಅಂಗವಾಗಿ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಜಿ.ರಾಜಶೇಖರ್ (ರಾಜಣ್ಣ) ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಜರುಗಿತು. ಇಲ್ಲಿನ ಗಡಗಿಚನ್ನಪ್ಪ ವೃತ್ತದಲ್ಲಿ ಜಮಾಯಿಸಿದ ಸಂಘಟನೆಯ ಸದಸ್ಯರು, ಬೆಳಗಾವಿಯಲ್ಲಿ ಪದೇ ಪದೇ ಕನ್ನಡಿಗರನ್ನು ಕೆಣಕುತ್ತಿರುವ ಎಂಇಎಸ್ ಪುಂಡರಿಗೆ ಸರಿಯಾದ ಪಾಠ ಕಲಿಸಬೇಕು ಎಂದು ಘೋಷಣೆ ಕೂಗಿದರಲ್ಲದೆ, ಎಂಇಎಸ್ ಬ್ಯಾನರ್‌ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ರಾಜಶೇಖರ್ (ರಾಜಣ್ಣ), ಮಹಾರಾಷ್ಟ್ರದ ಗಡಿಭಾಗವಾದ ಬೆಳಗಾವಿಯಲ್ಲಿ ಕನ್ನಡ ವಿರೋಧಿ ಶಕ್ತಿಗಳು ದುಷ್ಟತನ ಮೆರೆಯುತ್ತಿವೆ. ಬೆಳಗಾವಿ ಕರ್ನಾಟಕಕ್ಕೆ ಸೇರಿದ ಪ್ರದೇಶ ಎಂಬ ಕನಿಷ್ಟ ಅರಿವೂ ಇಲ್ಲದ ಎಂಇಎಸ್ ನಾಯಕರು ಸೊಕ್ಕಿನ ಹೇಳಿಕೆಗಳನ್ನುನೀಡುತ್ತಿದ್ದಾರೆ. ಎಂಇಎಸ್ ಸೊಕ್ಕಿನ ಮಾತುಗಳು ಹಾಗೂ ಕನ್ನಡ ವಿರೋಧಿ ನೀತಿಗಳಿಗೆ ಕನ್ನಡಿಗರು ಸರಿಯಾದ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು. ಗಡಗಿಚನ್ನಪ್ಪ ವೃತ್ತದಲ್ಲಿ ಕೆಲ ಹೊತ್ತು ಪ್ರತಿಭಟನೆ ನಡೆಸಿ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ತೆರಳಿದ ಪ್ರತಿಭಟನಾಕಾರರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಬಳ್ಳಾರಿ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲೂ ಕರ್ನಾಟಕ ಬಂದ್‌ಗೆ ಜನರ ಸ್ಪಂದನೆ ಸಿಕ್ಕಿಲ್ಲ. ಎಲ್ಲ ಕಡೆಗಳಲ್ಲೂ ವ್ಯಾಪಾರ ವಹಿವಾಟು, ಜನ ಸಂಚಾರ, ವಾಹನಗಳ ಓಡಾಟ ಎಂದಿನಂತೆ ಇತ್ತು.