ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಭಾನುವಾರ ಎಸ್‌ಸಿ ಎಸ್‌ಟಿ ಕುಂದುಕೊರತೆ ಸಭೆ ನೆರವೇರಿತು.
ಮಂಗಳೂರು: ಗ್ರಾಹಕರನ್ನು ವಂಚಿಸುವ ಮೈಕ್ರೋ ಫೈನಾನ್ಸ್ ಮಾದರಿಯ ಸ್ಕೀಂಗಳಿಗೆ ಮಂಗಳೂರಲ್ಲಿ ಅವಕಾಶ ನೀಡುವುದಿಲ್ಲ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಮಿಥುನ್ ಹೇಳಿದ್ದಾರೆ. ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಭಾನುವಾರ ಎಸ್‌ಸಿ ಎಸ್‌ಟಿ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
ನಗರದಲ್ಲಿ ಜ್ಯುವೆಲ್ಲರಿಯೊಂದರಲ್ಲಿ ಲಕ್ಕಿಡಿಪ್ ಮಾದರಿಯಲ್ಲಿ ಗ್ರಾಹಕರಿಂದ ಹಣ ಸಂಗ್ರಹಿಸಿ ಬಳಿಕ ವಂಚನೆ ನಡೆಸಲಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದಾಗ ಅವರು ಗ್ರಾಹಕ ವೇದಿಕೆಗೆ ದೂರು ನೀಡುವಂತೆ ಸೂಚಿಸಿದ್ದಾರೆ. ದಲಿತ ವ್ಯಕ್ತಿಯೊಬ್ಬರು 97 ಸಾವಿರ ರು.ಗಳಷ್ಟು ಮೊತ್ತ ಪಾವತಿ ವಂಚನೆಗೆ ಒಳಗಾಗಿದ್ದಾರೆ ಎಂದು ದಲಿತ ಮುಖಂಡರೊಬ್ಬರು ಅವಹಾಲು ಹೇಳಿದರು. ಇದಕ್ಕೆ ಉತ್ತರಿಸಿದ ಡಿಸಿಪಿ ಮಿಥುನ್, ಮೈಕ್ರೋಫೈನಾನ್ಸ್ ಮಾದರಿಯಲ್ಲಿ ಇಂತಹ ಸ್ಕೀಂಗಳಿಗೆ ಅವಕಾಶ ನೀಡುವುದಿಲ್ಲ. ಹೊಸದಾಗಿ ಸ್ಥಾಪಿಸುವ ಅಂಗಡಿ ಮಳಿಗೆಗಳು ಇಂತಹ ಮೈಕ್ರೋಫೈನಾನ್ಸ್ ಸ್ಕೀಂ ಆರಂಭಿಸಿದ್ದರೆ ಮಾಹಿತಿ ನೀಡಬಹುದು. ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಮೈಕ್ರೋಫೈನಾನ್ಸ್ ಸ್ಕೀಂ ಮಾಡಿ ಗ್ರಾಹಕರನ್ನು ವಂಚಿಸಲು ಅವಕಾಶ ನೀಡುವುದಿಲ್ಲ ಎಂದರು. ಕಿರುಕುಳ ವಿರುದ್ಧ ದೂರು ನೀಡಿ:ಕಚೇರಿಗಳಲ್ಲಿ ಮಹಿಳಾ ದೌರ್ಜನ್ಯ ಅಥವಾ ಕಿರುಳದಂತಹ ಘಟನೆ ಸಂಭವಿಸಿದರೆ ಅದನ್ನು ರಾಜಿಯಲ್ಲಿ ಮುಕ್ತಾಯಗೊಳಿಸುವ ಬದಲು ಕಚೇರಿಯ ಆಂತರಿಕ ದೌರ್ಜನ್ಯ ತಡೆ ಸಮಿತಿಗೆ ದೂರು ನೀಡಬೇಕು. ಅಲ್ಲಿ ನ್ಯಾಯ ಸಿಗದಿದ್ದರೆ ಪೊಲೀಸ್ ಠಾಣೆಗೆ ದೂರು ನೀಡಬಹುದು ಎಂದು ಡಿಸಿಪಿ ಮಿಥುನ್ ಹೇಳಿದರು. ನಗರ ಪಾಲಿಕೆಯಲ್ಲಿ ಸಿಬ್ಬಂದಿಯೊಬ್ಬರು ಪೌರ ಕಾರ್ಮಿಕ ಮಹಿಳೆಗೆ ಕಿರುಕುಳ ನೀಡಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸದೆ ನಿರ್ಲಕ್ಷ್ಯ ತೋರಲಾಗಿದೆ ಎಂಬ ದಲಿತ ಮುಖಂಡರ ಆರೋಪಕ್ಕೆ ಡಿಸಿಪಿ ಈ ಪ್ರತಿಕ್ರಿಯೆ ನೀಡಿದರು. ಈ ಹಿಂದೆ ಪೌರ ಸಿಬ್ಬಂದಿ ಇದೇ ರೀತಿ ಮಹಿಳೆಯರಿಗೆ ಕಿರುಕುಳ ನೀಡಿದಾಗ ಅದನ್ನು ರಾಜಿ ಸಂಧಾನದಲ್ಲಿ ಮುಕ್ತಾಯಗೊಳಿಸಿದ್ದು, ಆತ ಮತ್ತೆ ತನ್ನ ಚಾಳಿ ಮುಂದುವರಿಸಿದ ಬಗ್ಗೆ ದಲಿತ ಮುಖಂಡರು ಸಭೆಯಲ್ಲಿ ಮಾಹಿತಿ ನೀಡಿದರು.
ವೆಚ್ಚ ಪಾವತಿ ಪ್ರಸ್ತಾಪ:ಕ್ರಿಮಿನಲ್ ಪ್ರಕರಣಗಳಲ್ಲಿ ಸಾಕ್ಷ್ಯ ಹೇಳಲು ಬರುವವರಿಗೆ ಬಂದುಹೋಗುವ ವೆಚ್ಚವನ್ನು ನೀಡುವ ಬಗ್ಗೆ ಇತ್ತೀಚೆಗೆ ಸಮಾಜ ಕಲ್ಯಾಣ ಇಲಾಖೆ ನಡೆಸಿದ ರಾಜ್ಯ ಮಟ್ಟದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ನಕಲಿ ಸರ್ಟಿಫಿಕೆಟ್ ಪಡೆದು ಉದ್ಯೋಗ ವಂಚನೆ ನಡೆಸಿದ ಬಗ್ಗೆ ಇಲ್ಲಿ ಶೂನ್ಯ ಪ್ರಕರಣ ಇದೆ ಎಂದು ಡಿಸಿಪಿ ಮಿಥುನ್ ಮಾಹಿತಿ ನೀಡಿದರು. ಪ್ರತಿ ಮೂರು ತಿಂಗಳಿಗೊಮ್ಮೆ ಎಸ್‌ಸಿ ಎಸ್‌ಟಿ ಕುಂದುಕೊರತೆ ಸಭೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯಬೇಕು. ಈ ಸಭೆಯಲ್ಲಿ ಆಗ್ರಹಿಸುವ ನಿರ್ಣಯ ಕೈಗೊಳ್ಳಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದರು. ಈ ಬಗ್ಗೆ ಲಿಖಿತ ಮನವಿ ನೀಡುವಂತೆ ಡಿಸಿಪಿ ಮಿಥುನ್ ಹೇಳಿದರು. ಸಂಚಾರಿ ಡಿಸಿಪಿ ರವಿಶಂಕರ್, ಡಿಸಿಆರ್‌ಎ ಎಸ್ಪಿ ಸೈಮನ್ ಇದ್ದರು.
ಡಿಸಿಆರ್‌ಇ ಬಲವರ್ಧನೆಗೆ ಕ್ರಮಮಂಗಳೂರಿನಲ್ಲಿ ಇರುವ ಡಿಸಿಆರ್‌ಇ(ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ)ನಲ್ಲಿ ಇನ್‌ಸ್ಪೆಕ್ಟರ್ ಸಹಿತ ಸಿಬ್ಬಂದಿಗಳ ಕೊರತೆ ಇದೆ. ಈ ವಿಚಾರ ಸರ್ಕಾರದ ಗಮನಕ್ಕೆ ಬಂದಿದ್ದು, ಡಿಸಿಆರ್‌ಇ ಬಲವರ್ಧನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಮಿಥುನ್ ಹೇಳಿದರು.