ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಜಕೀಯ ಅಜೆಂಡಾ, ದ್ವೇಷಕ್ಕೆ ಅವಕಾಶ ಬೇಡ: ದಿನೇಶ್‌ ಗುಂಡೂರಾವ್‌

| Published : Jul 11 2025, 01:47 AM IST

ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಜಕೀಯ ಅಜೆಂಡಾ, ದ್ವೇಷಕ್ಕೆ ಅವಕಾಶ ಬೇಡ: ದಿನೇಶ್‌ ಗುಂಡೂರಾವ್‌
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರಿನ ಜಿಲ್ಲಾ ಪಂಚಾಯ್ತಿ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ಏರ್ಪಟ್ಟ ಸೌಹಾರ್ದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರುದ.ಕ. ಜಿಲ್ಲೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ಹಿಂದೆ ಯಾವುದೇ ರಾಜಕೀಯ ಅಜೆಂಡಾ ಇರಬಾರದು. ಮಾತ್ರವಲ್ಲ ಅದು ದ್ವೇಷಕ್ಕೆ ದಾರಿ ಮಾಡಿಕೊಡಬಾರದು. ಪೊಲೀಸರು ಕ್ರಮ ಕೈಗೊಳ್ಳಲು ಅವಕಾಶ ನೀಡದಂತೆ ಕಾರ್ಯಕ್ರಮಗಳನ್ನು ವ್ಯವಸ್ಥಿತ ಹಾಗೂ ಅಚ್ಚುಕಟ್ಟಾಗಿ ಸಂಘಟಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಆಶಯ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನ ಜಿಲ್ಲಾ ಪಂಚಾಯ್ತಿ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ಏರ್ಪಟ್ಟ ಸೌಹಾರ್ದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದ.ಕ. ಜಿಲ್ಲೆಯಲ್ಲಿ ಹತ್ತಾರು ವರ್ಷಗಳಿಂದ ಅಹಿತಕರ ಘಟನೆಗಳು ನಡೆದುಕೊಂಡು ಬರುತ್ತಿವೆ. ಇದು ದೇಶವ್ಯಾಪಿ ಪ್ರಚಾರಗೊಂಡು ದ.ಕ. ಜಿಲ್ಲೆಗೆ ಕಪ್ಪು ಚುಕ್ಕೆಯಾಗುವಂತೆ ಮಾಡಿದೆ. ಶಾಂತಿ ಕದಡುವುದನ್ನು ಶೇ.95 ಮಂದಿ ಬಯಸುವುದಿಲ್ಲ. ಸರ್ಕಾರ ಹಾಗೂ ಪೊಲೀಸ್‌ ಇಲಾಖೆ ಯಾರ ಪರವೂ ಇಲ್ಲದೆ ತಟಸ್ಥ ಧೋರಣೆ ಅನುಸರಿಸುತ್ತದೆ. ಎಲ್ಲರನ್ನೂ ಸಮಾನವಾಗಿ ನೋಡುವ ಕೆಲಸ ಮಾಡುತ್ತದೆ. ಇನ್ನು ಮುಂದೆ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಪ್ರಜಾಪ್ರಭುತ್ವ ಮಾದರಿಯಲ್ಲಿ ಜಾತಿ, ಧರ್ಮಗಳನ್ನು ಜೋಡಿಸುವ, ಸೌಹಾರ್ದತೆ ಬೆಸೆಯುವ ಕೆಲಸ ನಿರಂತರ ನಡೆಯಬೇಕು ಎಂದರು.

ಪ್ರತಿಯೊಬ್ಬರು ಜವಾಬ್ದಾರಿ ನಿರ್ವಹಿಸಿ:

ಸ್ಪೀಕರ್‌ ಯು.ಟಿ.ಖಾದರ್‌ ಮಾತನಾಡಿ, ಭವಿಷ್ಯದ ಮಂಗಳೂರಿನ ಯುವಜನತೆಗೆ ಸಮಾನತೆ, ಸೋದರತೆ, ಸೌಹಾರ್ದತೆ ಬೇಕಾಗಿದೆ. ಭಿನ್ನಾಭಿಪ್ರಾಯವನ್ನು ಬದಿಗೊತ್ತಿ ಒಗ್ಗಟ್ಟಿನ ಸಾಮರಸ್ಯವನ್ನು ಸಾರಬೇಕು. ಯಾವುದೇ ನೋವನ್ನು ಗುಣಪಡಿಸಲು ಆಯುಧವೇ ಔಷಧ ಆಗಬಾರದು ಎಂದರು ಹೇಳಿದರು.

ಹಿಂದೂ ದೂಷಣೆ ನಿಲ್ಲಿಸಿ:

ಸಂಸದ ಕ್ಯಾ.ಬ್ರಿಜೇಶ್‌ ಚೌಟ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯನ್ನು ಹಿಂದುತ್ವದ ಪ್ರಯೋಗ ಶಾಲೆ ಎನ್ನುತ್ತಾ ಹಿಂದೂ ಸಮಾಜವನ್ನು ದೂಷಿಸುವುದನ್ನು ಮೊದಲು ನಿಲ್ಲಿಸಬೇಕು. ಈ ಜಿಲ್ಲೆಗೆ ತನ್ನದೇ ಆದ ಇತಿಹಾಸ ಇದೆ. ರಾಜಕಾರಣಕ್ಕೋಸ್ಕರ ಜಿಲ್ಲೆಯನ್ನು ಬಲಿಕೊಡಬಾರದು ಎಂದರು.

ಜಿಲ್ಲೆಯ ಜನತೆಯಲ್ಲಿ ಕೋಮುಭಾವನೆ ಸೃಷ್ಟಿಸುವುದು ನಿಲ್ಲಬೇಕು. ಅಹಿತಕರ ಘಟನೆಗಳಾದಾಗ ಮೊದಲು ಜಿಲ್ಲೆಯ ಜನಪ್ರತಿನಿಧಿಗಳ ಸಭೆ ಆಗಬೇಕು. ಕೇವಲ ಎರಡು ಪರ್ಸೆಂಟ್‌ ಜನರಿಂದ ಸೌಹಾರ್ದತೆಗೆ ಧಕ್ಕೆಯಾಗುತ್ತಿದ್ದು, ಮೊದಲು ಇದಕ್ಕೆ ಕಡಿವಾಣ ಬೀಳಲಿ ಎಂದವರು ಆಗ್ರಹಿಸಿದರು.ಅಹಿತಕರ ಘಟನೆಗೆ ಮೂಲ ಕಾರಣ ಪತ್ತೆಮಾಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವ ಕಾರಣಕ್ಕಾಗಿ ಅಹಿತಕರ ಘಟನೆಗಳು ನಡೆಯುತ್ತಿವೆ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಮೂಲ ಸರಿಯಾದಾಗ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಸಾಧ್ಯವಾಗಲಿದೆ. ಸರ್ಕಾರ ಈ ಕಾರ್ಯಕ್ಕೆ ಮುಂದಾಗಬೇಕು ಎಂದು ಜಿಲ್ಲೆಯ ಶಾಸಕರಾದ ಹರೀಶ್‌ ಪೂಂಜಾ, ವೇದವ್ಯಾಸ ಕಾಮತ್‌ ಮತ್ತು ಡಾ. ಭರತ್‌ ಶೆಟ್ಟಿ ಅವರು ಗೃಹಸಚಿವರನ್ನು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮರಳು ಹಾಗೂ ಡ್ರಗ್ಸ್‌ ಮಾಫಿಯಾಗೆ ಕಡಿವಾಣ, ಗೋ ಹತ್ಯೆ, ಅಕ್ರಮ ಗೋ ಸಾಗಾಟ ಪ್ರಕರಣಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮವಾದಾಗ ಜಿಲ್ಲೆ ಅಹಿತಕರ ಘಟನೆಗಳಿಂದ ಮುಕ್ತವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.ಶಾಸಕ ಹರೀಶ್‌ ಪೂಂಜಾ ಮಾತನಾಡಿ, ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಟ, ಗೋ ಹತ್ಯೆಗಳು ನಡೆದಾಗ ಮತ್ತು ಲವ್‌ ಜಿಹಾದ್‌ ನಡೆಸಿದಾಗ ಸಂಘರ್ಷಗಳಾಗಿವೆ. ಮೊದಲು ಇದಕ್ಕೆ ಕಡಿವಾಣ ಬೀಳಬೇಕು ಎಂದರು.ಸೌಹಾರ್ದತೆಯ ಪಾಠ ಮೊದಲು ಮನೆಯಿಂದ ಆರಂಭವಾಗಬೇಕು. ಶಾಲಾ ಕಾಲೇಜುಗಳಲ್ಲಿಯೂ ಈ ಬಗ್ಗೆ ತಿಳಿ ಹೇಳಬೇಕು. ಮದರಸ, ಮಂದಿರ, ಚರ್ಚ್‌ಗಳಲ್ಲಿಯೂ ಸೌಹಾರ್ದತೆಯ ಪಾಠವನ್ನು ಮಕ್ಕಳಿಗೆ ಕಲಿಸಿಕೊಡಬೇಕು. ಆಗ ಮಾತ್ರ ಮಕ್ಕಳು ಉತ್ತಮ ಸಂಸ್ಕಾರದೊಂದಿಗೆ ಬೆಳೆಯಲು ಸಾಧ್ಯ ಎಂದರು.ಗೋ ವಧಾಗೃಹಗಳು ನಿಲ್ಲಲಿ: ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಧಾರ್ಮಿಕ ನಂಬಿಕೆಗಳಿಗೆ ಘಾಸಿಯಾಗುವುದನ್ನು ಸಹಿಸಲಾಗದು. ಗೋ ಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದರೂ ಕಡಿವಾಣ ಬೀಳುತ್ತಿಲ್ಲ. ಮಂಗಳೂರಿನಲ್ಲಿ ಗೋ ವಧಾಗೃಹಗಳನ್ನು ನಿಷೇಧಿಸಿದ್ದರೂ ವಧಾ ಕೇಂದ್ರಗಳು ಹೆಚ್ಚಾಗಿವೆ. ಇದರ ವಿರುದ್ಧ ಕ್ರಮ ಕೈಗೊಳ್ಳುವವರಾರು? ಇದಕ್ಕೆ ಕಡಿವಾಣ ಬೀಳದಿರುವುದರಿಂದಲೇ ಅಹಿತಕರ ಘಟನೆಗಳಿಗೆ ಕಾರಣವಾಗುತ್ತಿದೆ ಎಂದರು.ಶಾಸಕ ಡಾ. ಭರತ್‌ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಡ್ರಗ್ಸ್‌, ಅಕ್ರಮ ಮರಳು ದಂಧೆ ಸೇರಿದಂತೆ ಅನೇಕ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಮೊದಲು ಪೊಲೀಸರು ಇದಕ್ಕೆ ಕಡಿವಾಣ ಹಾಕಬೇಕು. ಪೊಲೀಸರು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡರೆ ಅಹಿತಕರ ಘಟನೆಗಳಿಗೆ ಅವಕಾಶವೇ ಇರುವುದಿಲ್ಲ ಎಂದರು.

ಜಿಲ್ಲಾಧಿಕಾರಿ ದರ್ಶನ್‌, ಜಿ.ಪಂ. ಸಿಇಒ ನರ್ವದೆ ವಿನಾಯಕ್‌ ಕಾರ್ಬಾರಿ, ಪಶ್ಚಿಮ ವಲಯ ಐಜಿಪಿ ಅಮಿತ್‌ ಸಿಂಗ್‌, ಪೊಲೀಸ್‌ ಕಮಿಷನರ್‌ ಸುಧೀರ್‌ ರೆಡ್ಡಿ, ಜಿಲ್ಲಾ ಎಸ್ಪಿ ಡಾ.ಅರುಣ್‌ ಕುಮಾರ್‌ ಇದ್ದರು.

ಧಾರ್ಮಿಕ ಆಚರಣೆಗಳಿಗೆ ಗಡುವು: ಪರಿಶೀಲನೆ ಭರವಸೆ

ಧಾರ್ಮಿಕ ಉತ್ಸವಗಳನ್ನು ರಾತ್ರಿ 11.30ರ ಬಳಿಕ ಮುಂದುವರಿಸಬಾರದು ಎಂದು ಪೊಲೀಸ್‌ ಇಲಾಖೆ ಸುತ್ತೋಲೆ ಹೊರಡಿಸಿದ ಬಗ್ಗೆ ಚರ್ಚಿಸಲಾಗುವುದು. ಇದುವರೆಗೆ ಇಲ್ಲದ ಈ ಕ್ರಮ ಈಗ ಯಾಕೆ ಬಂದಿದೆ ಎಂಬ ಬಗ್ಗೆ ಆಲೋಚನೆ ಮಾಡಬೇಕು. ಯಾವುದೇ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸುವ ಇರಾದೆ ಸರ್ಕಾರಕ್ಕೆ ಇಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಗೃಹ ಸಚಿವ ಡಾ.ಪರಮೇಶ್ವರ ಭರವಸೆ ನೀಡಿದರು.