ಮುಂಡರಗಿ ತಾಲೂಕಿನ ಯಾವ ಶಾಲೆಯಲ್ಲೂ ನೂರಕ್ಕೆ ನೂರು ಫಲಿತಾಂಶವಿಲ್ಲ

| Published : May 18 2025, 01:44 AM IST

ಸಾರಾಂಶ

ಮುಂಡರಗಿ ತಾಲೂಕು ಮತ್ತು ಡಂಬಳ ಹೋಬಳಿಯ ಸರ್ಕಾರಿ, ಅನುದಾನಿತ ಪ್ರೌಢಶಾಲಾ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಶೇ.63.46ರಷ್ಟಾಗಿದ್ದು, ಜಿಲ್ಲೆಯಲ್ಲಿ ನಾಲ್ಕನೇ ಸ್ಥಾನಕ್ಕೆ ತಳಲ್ಪಟ್ಟಿದೆ. ಯಾವ ಶಾಲೆಯಲ್ಲೂ ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿಲ್ಲ.

ರಿಯಾಜಅಹ್ಮದ ದೊಡ್ಡಮನಿ

ಡಂಬಳ: ಮುಂಡರಗಿ ತಾಲೂಕು ಮತ್ತು ಡಂಬಳ ಹೋಬಳಿಯ ಸರ್ಕಾರಿ, ಅನುದಾನಿತ ಪ್ರೌಢಶಾಲಾ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಶೇ.63.46ರಷ್ಟಾಗಿದ್ದು, ಜಿಲ್ಲೆಯಲ್ಲಿ ನಾಲ್ಕನೇ ಸ್ಥಾನಕ್ಕೆ ತಳಲ್ಪಟ್ಟಿದೆ. ಯಾವ ಶಾಲೆಯಲ್ಲೂ ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿಲ್ಲ.

ಹೆಸರೂರು, ಹಾರೋಗೇರಿ, ನಾಗರಳ್ಳಿ, ಶಿವಾಜಿನಗರ, ಜಂತ್ಲಿಶಿರೂರ, ಡಂಬಳ, ಮುಂಡರಗಿ ಪ್ರೌಢಶಾಲೆಗಳು ಫಲಿತಾಂಶದಲ್ಲಿ ತೀವ್ರ ಕಳಪೆ ಸಾಧನೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿರುವುದು ತಾಲೂಕಿನ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.

ತಾಲೂಕಿನ ಪ್ರೌಢಶಾಲೆಗಳ ಪೈಕಿ ಯಾವ ಶಾಲೆಯೂ ನೂರರಷ್ಟು ಫಲಿತಾಂಶ ದಾಖಲಿಸದೇ ಇರುವುದು ಗಮನಾರ್ಹ ಸಂಗತಿ. ಆದರ್ಶ ವಿದ್ಯಾಲಯ ರಾಟಿ ಕೊರ್ಲಹಳ್ಳಿ ಶೇ 97.30, ಡಂಬಳ ಕಿತ್ತೂರ ರಾಣಿ ಚೆನ್ನಮ್ಮ ವಸತಿಶಾಲೆ ಶೇ.97.44, ಮುಂಡರಗಿ ಎಸ್.ಎಫ್.ಎಸ್ ಶೇ.92.19, ಹಿರೇವಡ್ಡಟ್ಟಿ ಮೊರಾರ್ಜಿ ದೇಸಾಯಿ ವಸತಿಶಾಲೆ ಶೇ91.49, ಮುಂಡರಗಿಯ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಶೇ. 91.43, ಜಿಎಚ್‍ಎಸ್‍ ಯಕ್ಲಾಸಪೂರ ಶೇ.83.33, ಜಿಎಚ್‍ಎಸ್‍ ಮುಂಡರಗಿ ಶೇ.81.08, ಜಿಎಚ್‍ಎಸ್‍ ಹಳ್ಳಿಕೇರಿ ಶೇ.80.49 ಪಡೆದಿದ್ದು ಈ ಏಳು ಶಾಲೆಗಳು ಎ ಗ್ರೇಡ್ ಪಡೆದುಕೊಂಡಿವೆ.

ಜಿಎಚ್‍ಎಸ್‍ ಮುರಡಿ ಶೇ 80.49, ಬಾಗೇವಾಡಿ ಪ್ರೌಢಶಾಲೆ ಶೇ.80.70, ಜೆಟಿವಿಪಿ ಬಾಲಕಿಯರ ಶಾಲೆ 79.59, ಕಲಕೇರಿಯ ಎಸ್‍ಜಿಎಸ್ ಪ್ರೌಢಶಾಲೆ ಶೇ 76.92, ಹಳ್ಳಿಕೇರಿಯ ಜಿಎಚ್‍ಎಸ್ ಶೇ77.78, ಜಿಎಚ್‍ಎಸ್‍ ಹಳ್ಳಿಗುಡಿ ಶೇ76.74, ಜಿಎಚ್‍ಎಸ್ ಬರದೂರ ಶೇ.73.74, ಜಿಎಚ್‍ಎಸ್ ಚಿಕ್ಕವಡ್ಡಟ್ಟಿ ಶೇ 72.73, ಜಿಎಚ್‍ಎಸ್‍ ಮೇವುಂಡಿ ಶೇ.71.88, ಬಸವೇಶ್ವರ ಪ್ರೌಢಶಾಲೆ ಶೇ. 66.67, ಜಿಎಚ್‍ಎಸ್‍ ಕದಾಂಪುರ ಶೇ 65.81, ಜೆಅ ಇಂಗ್ಲಿಷ್ ಮುಂಡರಗಿ ಶೇ.65.22, ವಿಜಿಎಲ್‍ ಮುಂಡರಗಿ ಶೇ.62.50ರಷ್ಟು ಪಡೆದಿದೆ.

ಶೇ.50-60ರ ಕಡಿಮೆ ಫಲಿತಾಂಶ ಹೊಂದಿರುವ ಜಿಯುಎಚ್‍ಎಸ್ ಮುಂಡರಗಿ ಶೇ. 60, ಜಿಎಚ್‍ಎಸ್‍ ಡೋಣಿ ಶೇ 57.95, ಜಿಎಚ್‍ಎಸ್‍ ಹೆಸರೂರು ಶೇ.57.89, ಮೌಲಾನ ಆಜಾದ ಮಾದರಿ ವಸತಿ ಶಾಲೆ ಮುಂಡರಗಿ 56.76, ಜಿಎಚ್‍ಎಸ್ ಹಾರೋಗೇರಿ ಶೇ 56.52, ಜಿಎಚ್‍ಎಸ್ ನಾಗರಳ್ಳಿ ಶೇ 53.13, ಜಿಎಚ್‍ಎಸ್‍ ಶಿವಾಜಿನಗರ ಶೇ 51.85, ಜಿಎಚ್‍ಎಸ್ ಜಂತ್ಲಿಶಿರೂರ ಶೇ.46.91, ಜಿಎಚ್‍ಎಸ್ ಶಿಂಗಟಾಲೂರ ಶೇ40.96, ಅನುದಾನಿತ ಶ್ರೀಹಾಲಶಿವಯೋಗಿಶ್ವರ ಪ್ರೌಢಶಾಲೆ ಪೇಠಾಆಲೂರ ಶೇ.58.33, ಎಂಎಸ್‍ ಪ್ರೌಢಶಾಲೆ ಮುಂಡರಗಿ ಶೇ 55.74, ಕೆಎಚ್‍ ಕುರಡಗಿ ಕೊರ್ಲಹಳ್ಳಿ ಶೇ.55.74, ಕೆಕೆ ನಂದಿಕೋಲ ಹಿರೇವಡ್ಡಟ್ಟಿ ಶೇ.46, ಜೆಟಿ ಕೊಟೆ ಮುಂಡರಗಿ ಶೇ 43.90, ಯೋಗಿವೇಮನ ಹಮ್ಮಿಗಿ ಶೇ.40, ಸ್ವಾಮಿ ವಿವೇಕಾನಂದ ಮುಂಡರಗಿ ಶೇ 36.92, ಜೆಟಿ ಪ್ರೌಢಶಾಲೆ ಡಂಬಳ ಶೇ 24.07, ಜೆಅ ಪ್ರೌಢಶಾಲೆ ಮುಂಡರಗಿ ಶೇ.22.95ರಷ್ಟು ಪಡೆದುಕೊಂಡಿವೆ.

ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಗುಣಾತ್ಮಕ ಶಿಕ್ಷಣ ನೀಡುವ ನೆಪದಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಲು ಸಕಲ ಸಿದ್ಧತೆ ನಡೆಸಿದ್ದೇವೆ, ಮಕ್ಕಳಿಗೆ ವಿಶೇಷ ತರಗತಿ ನಡೆಸಲಾಗುತ್ತಿದೆ ಎಂದು ಪ್ರೌಢಶಾಲೆ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ದೊಡ್ಡದಾಗಿ ಹೇಳಿಕೊಂಡಿದ್ದರು. ಇದರಿಂದ ಈ ಬಾರಿ ಉತ್ತಮ ಫಲಿತಾಂಶ ಬರಲಿದೆ ಎಂಬ ನಿರೀಕ್ಷೆ ಮುಂಡರಗಿ ಮತ್ತು ಡಂಬಳ ಹೋಬಳಿಯ ಜನರಲ್ಲಿ ಮೂಡಿತ್ತು. ಆದರೆ ಫಲಿತಾಂಶ ಮಾತ್ರ ಹೋದ ವರ್ಷಕ್ಕಿಂತಲೂ ಈ ವರ್ಷ ಕಳಪೆಮಟ್ಟಕ್ಕೆ ಕುಸಿದಿದೆ.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡದೆ ಇರುವ ಕಾರಣ ಫಲಿತಾಂಶ ಮಾತ್ರ ತೀವ್ರ ಕುಸಿತ ಕಂಡಿದೆ ಇದಕ್ಕೆ ಕಾರಣ ಯಾರು? ಎಂಬ ಪ್ರಶ್ನೆ ಉದ್ಭವಿಸಿದೆ.

ತಾಲೂಕಿನಲ್ಲಿ ಕೆಲ ಶಿಕ್ಷಕರಿಗೆ ಶಿಕ್ಷಣದ ಅರಿವೇ ಇಲ್ಲ. ಶಾಲೆಗೆ ಚಕ್ಕರ ಹೊಡೆದು ಕೆಲ ಶಿಕ್ಷಕರು ಬಡ್ಡಿ ವ್ಯವಹಾರ, ಕೃಷಿ ಕೆಲಸ, ರಿಯಲ್‍ಎಸ್ಟೇಟ್ ರಾಜಕೀಯ ಮಾಡುತ್ತಾ ತಿರುಗಾಡುತ್ತಾರೆ. ಅಂತಹ ಶಿಕ್ಷಕರಿಂದ ಫಲಿತಾಂಶ ಕುಸಿತ ಕಾರಣವಾಗಿದೆ ಎಂಬ ಆರೋಪ ಕೂಡಾ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಶಿಕ್ಷಕರನ್ನು ಸರಿದಾರಿಗೆ ತರುವ ಕೆಲಸವನ್ನು ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ನಡೆಸಬೇಕಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಈ ಬಾರಿ ಶೇ. 75ರಷ್ಟು ಫಲಿತಾಂಶ ಪಡೆಯುವ ಮತ್ತು ಈ ಬಾರಿ ಇನ್ನೂ ಉತ್ತಮ ಫಲಿತಾಂಶ ಪಡೆಯುವ ನಿರೀಕ್ಷೆ ಇತ್ತು. ಆದರೆ ಶೇ.63.46ರಷ್ಟು ಹೊಂದಿದ್ದು ಕೆಲ ಸರಕಾರಿ ಮತ್ತು ಖಾಸಗಿ ಪ್ರೌಢಶಾಲೆಗಳ ಫಲಿತಾಂಶ ಕುಸಿತದಿಂದ ಗದಗ ಜಿಲ್ಲೆಗೆ ನಾಲ್ಕನೆ ಸ್ಥಾನಕ್ಕೆ ಹೋಗಿರುವುದು ತೀವ್ರ ಬೇಸರ ಮೂಡಿಸಿದೆ ಎಂದು ಮುಂಡರಗಿ ಬಿಇಒ ಹನಮಂತಪ್ಪ ಪಡ್ನೆಶ ಹೇಳಿದರು.