ಕುಕನೂರು: ತಾಲೂಕಿನ ಚಂಡೂರು ಗ್ರಾಮದಲ್ಲಿ ದಲಿತರ ಜಮೀನಿನಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಿದ್ದು, ದಲಿತರ ಭೂಮಿಯಲ್ಲಿ ಅಳವಡಿಕೆ ಕಾರ್ಯ ಮಾಡಬಾರದು ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ – ಅಂಬೇಡ್ಕರ್ ಧ್ವನಿ, ಚಂದ್ರಕಾಂತ ಎಸ್. ಕಾದ್ರೋಳ್ಳಿ ಬಣದವರು ತಹಸೀಲ್ದಾರ್‌ಗೆ ಮನವಿ ಮಾಡಿದ್ದಾರೆ.ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಪ್ರಮುಖರು, ತಾಲೂಕಿನ ಚಂಡೂರು ಗ್ರಾಮದ ದಲಿತ ರೈತರ ಭೂಮಿಯಲ್ಲಿ ಟೋರೆಂಟ್ ಸೋಲಾರ್ ಪವರ್ ಲಿಮಿಟೆಡ್ ಕಂಪನಿಯಿಂದ ಸೋಲಾರ್ ಪ್ಯಾನಲ್ ಅಳವಡಿಸಲಾಗುತ್ತಿದೆ. ಈ ಭೂಮಿ ದಲಿತ ವರ್ಗದವರಿಗೆ ಸೇರಿದ್ದಾಗಿದೆ. ನಿಜವಾದ ಭೂ ಮಾಲೀಕರ ಒಪ್ಪಿಗೆ ಪಡೆಯದೇ ಸೋಲಾರ್ ಅಳವಡಿಸಲಾಗುತ್ತಿದೆ. ಚಂಡೂರು ಗ್ರಾಮದ ದಲಿತ ರೈತರಾದ ಗೋವಿಂದಪ್ಪ ಹರಿಜನ ಅವರ ಪಿತ್ರಾರ್ಜಿತ ಆಸ್ತಿಯಾದ ಸರ್ವೆ ನಂ. 76ರಲ್ಲಿ 17 ಎಕರೆ 39 ಗುಂಟೆ ಭೂಮಿಯು 1954ರಿಂದ 1979ರ ವರೆಗೆ ಗೋವಿಂದಪ್ಪ ಅವರ ಹೆಸರಿನಲ್ಲಿ ದಾಖಲಾಗಿತ್ತು. 1979ರ ಆನಂತರ ಯಾವುದೇ ಕಾನೂನುಬದ್ಧ ಖರೀದಿ ಪ್ರಕ್ರಿಯೆ, ಮ್ಯೂಟೇಷನ್ ಅಥವಾ ವಾರಸುದಾರರ ಅನುಮತಿ ಇಲ್ಲದೆ ಕರಿಯಪ್ಪ ಜ್ಯೋತಿ ಎಂಬವರು ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಸಿಕೊಂಡಿರುವುದಾಗಿ ಆರೋಪಿಸಲಾಗಿದೆ.
ಈ ಭೂಮಿಯಲ್ಲಿ ಟೋರೆಂಟ್ ಸೋಲಾರ್ ಪವರ್ ಲಿಮಿಟೆಡ್ ಕಂಪನಿ ವತಿಯಿಂದ ಸೋಲಾರ್ ಪ್ಯಾನೆಲ್ ಅಳವಡಿಕೆ ಕಾಮಗಾರಿ ನಡೆಯುತ್ತಿರುವುದು ದಲಿತ ರೈತರ ಹಕ್ಕುಗಳ ಮೇಲಿನ ಸ್ಪಷ್ಟ ಅನ್ಯಾಯವಾಗಿದೆ. ಮೂಲ ಭೂ ಮಾಲೀಕರ ಅನುಮತಿ ಇಲ್ಲದೆ ನಡೆಯುತ್ತಿರುವ ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸಿ, ಭೂಮಿಯ ದಾಖಲೆಗಳ ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.ಸಂಬಂಧಿಸಿದ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಂಡು ದಲಿತ ರೈತರಿಗೆ ನ್ಯಾಯ ಒದಗಿಸದಿದ್ದಲ್ಲಿ, ಫೆ. 10ರಂದು ಚಂಡೂರು ಗ್ರಾಮದ ಸರ್ವೆ ನಂ. 76ರ ಭೂಮಿಯಲ್ಲಿ ಅನಿರ್ದಿಷ್ಟಾವಧಿ ಧರಣಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ -ಅಂಬೇಡ್ಕರ್ ಧ್ವನಿ, ಚಂದ್ರಕಾಂತ ಎಸ್. ಕಾದ್ರೋಳ್ಳಿ ಬಣದ ಜಿಲ್ಲಾ ಸಮಿತಿ ಅಧ್ಯಕ್ಷ ನಿಂಗಪ್ಪ ಜಿ.ಎಸ್. ಬೆಣಕಲ್, ಜಿಲ್ಲಾ ಪ್ರಧಾನ ಸಂಚಾಲಕ ಮೈಲಾಪ್ಪ ಮಾದಿನೂರು, ತಾಲೂಕಾಧ್ಯಕ್ಷ ಶ್ರೀಕಾಂತ ಹೊಸಮನಿ, ರೈತರಾದ ಈರಪ್ಪ ಹಿರೇಮನಿ, ಮಾರುತಿ ದೊಡ್ಡಮನಿ, ಹನುಮಪ್ಪ ಪರಸಪ್ಪ ಹಿರೇಮನಿ, ಶರಣಪ್ಪ ದುರಗಪ್ಪ ಹಿರೇಮನಿ, ಲಕ್ಷ್ಮಪ್ಪ ಮೈಲಪ್ಪ ಹಿರೇಮನಿ, ಫಕೀರಪ್ಪ ಹಾಲೋಲೆಪ್ಪ ಹಿರೇಮನಿ, ಹುಲಗಪ್ಪ ಹನುಮವ್ವ ಹಿರೇಮನಿ, ಯಲ್ಲಪ್ಪ ದುರಗಪ್ಪ ಹಿರೇಮನಿ, ಈರಪ್ಪ ಮೈಲಾಪ್ಪ ಹಿರೇಮನಿ, ಮಹೇಶ ಶಿವಪ್ಪ ಹಿರೇಮನಿ, ಈರಪ್ಪ ಸಾರೆಪ್ಪ ಹಿರೇಮನಿ, ಹನುಮಪ್ಪ ಸಾರೆಪ್ಪ ಹಿರೇಮನಿ, ಮಾರುತಿ ಸಾರೆಪ್ಪ ಹಿರೇಮನಿ ಇತರರಿದ್ದರು.