ಸಾರಾಂಶ
ಸಿಂಗಟಾಲೂರು ಏತ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿ ಸರ್ಕಾರ ಯೋಜನೆ ಅನುಷ್ಠಾನ ಮಾಡುತ್ತಿರುವ ಮಧ್ಯೆಯೇ ಸೋಲಾರ್, ವಿಂಡ್ ಪವರ್‌ಗೆ ಭೂಮಿ ನೀಡುವ ಪ್ರಕ್ರಿಯೆ ತಡೆಯುವಂತೆ ನೀರಾವರಿ ಇಲಾಖೆ ಸರ್ಕಾರದ ಮೊರೆ ಹೋಗಲು ತಯಾರಿ ನಡೆಸಿದೆ.
ಸೋಮರಡ್ಡಿ ಅಳವಂಡಿ
ಕೊಪ್ಪಳ: ಸಿಂಗಟಾಲೂರು ಏತ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿ ಸರ್ಕಾರ ನೂರಾರು ಕೋಟಿ ರುಪಾಯಿ ವೆಚ್ಚ ಮಾಡಿ, ಯೋಜನೆ ಅನುಷ್ಠಾನ ಮಾಡುತ್ತಿರುವ ಮಧ್ಯೆಯೇ ಸೋಲಾರ್, ವಿಂಡ್ ಪವರ್‌ಗೆ ಭೂಮಿ ನೀಡುವ ಪ್ರಕ್ರಿಯೆಯೂ ಅವ್ಯಾಹತವಾಗಿ ನಡೆದಿದೆ. ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ಜಿಲ್ಲಾಡಳಿತ ಕೈ ಚೆಲ್ಲಿದ್ದರಿಂದ ನೀರಾವರಿ ಇಲಾಖೆ ಈಗ ಸರ್ಕಾರದ ಮೊರೆ ಹೋಗಲು ತಯಾರಿ ನಡೆಸಿದೆ.ಹೌದು, ಸಿಂಗಟಾಲೂರು ಯೋಜನೆ ವ್ಯಾಪ್ತಿಯ ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಈಗಾಗಲೇ ನಾಲ್ಕು ಸಾವಿರ ಹೆಕ್ಟೇರ್ ಪ್ರದೇಶವನ್ನು ಸೌರಶಕ್ತಿ, ಪವನಶಕ್ತಿ ಘಟಕಗಳಿಗೆ ರೈತರು ನೀಡಿದ್ದಾರೆ. ಇದಕ್ಕೆ ಜಿಲ್ಲಾಡಳಿತವೂ ಅಸ್ತು ಎಂದಿದೆ. ಇನ್ನೂ ಭೂಮಿ ಹಸ್ತಾಂತರಿಸುವ ಪ್ರಕ್ರಿಯೆಯೂ ನಡೆದಿದೆ.
ಕೈ ಚೆಲ್ಲಿದ ಜಿಲ್ಲಾಡಳಿತ: ನೀರಾವರಿ ಯೋಜನಾ ವ್ಯಾಪ್ತಿಯಲ್ಲಿ ಸೋಲಾರ್ ಮತ್ತ ವಿಂಡ್ ಪವರ್‌ಗೆ ಭೂಮಿ ನೀಡುವುದನ್ನು ತಡೆಯುವಂತೆ ನೀರಾವರಿ ನಿಗಮ ಜಿಲ್ಲಾಡಳಿತಕ್ಕೆ ಪತ್ರ ಬರೆದಿತ್ತು. ಆದರೆ, ಈಗ ಜಿಲ್ಲಾಡಳಿತ ರೈತರೇ ಮುಂದೆ ಬಂದು ಸೋಲಾರ್, ವಿಂಡ್ ಪವರ್‌ಗೆ ಭೂಮಿ ನೀಡುವ ಒಪ್ಪಂದ ಮಾಡಿಕೊಳ್ಳುತ್ತಿರುವುದರಿಂದ ಭೂ ಪರಿವರ್ತನೆಯನ್ನು ತಡೆಯುವುದಕ್ಕೆ ನಮಗೆ ಅವಕಾಶ ಇಲ್ಲ. ಸಂವಿಧಾನದತ್ತವಾಗಿ ನೀಡಿರುವ ಆಸ್ತಿಯ ಹಕ್ಕನ್ನು ನಾವು ಮೊಟಕು ಮಾಡುವುದಕ್ಕೆ ಅವಕಾಶ ಇಲ್ಲ ಎಂದಿದೆ. ಅಷ್ಟಕ್ಕೂ ಸಿಂಗಟಾಲೂರು ಏತ ನೀರಾವರಿ ಯೋಜನಾ ವ್ಯಾಪ್ತಿಯ ನೋಟಿಫಿಕೇಶನ್ ಸಹ ಆಗದಿರುವುದರಿಂದ ತಡೆಯಲು ಸಾಧ್ಯವೇ ಇಲ್ಲ ಎಂದು ನೀರಾವರಿ ನಿಗಮಕ್ಕೆ ಜಿಲ್ಲಾಡಳಿತ ಸ್ಪಷ್ಟ ಉತ್ತರ ನೀಡಿದೆ.ಸರ್ಕಾರದ ಅಂಗಳಕ್ಕೆ: ಸಿಂಗಟಾಲೂರು ಏತ ನೀರಾವರಿ ಯೋಜನಾ ವ್ಯಾಪ್ತಿಯನ್ನು ಈಗಲೇ ನೋಟಿಫಿಕೇಶನ್ ಮಾಡಲು ಬರುವುದಿಲ್ಲ. ನೀರಾವರಿ ಮಾಡುವ ಕೆಲಸ ಪೂರ್ಣಗೊಂಡು, ರೈತರ ಭೂಮಿಗೆ ನೀರು ಹೋಗಲಾರಂಭಿಸಿದ ಮೇಲೆಯೇ ನೋಟಿಫಿಕೇಶನ್ ಮಾಡಲಾಗುತ್ತದೆ. ಆದ್ದರಿಂದ ಸರ್ಕಾರಕ್ಕೆ ಈ ಕುರಿತು ಪತ್ರ ಪಡೆದು, ಭೂ ಪರಿವರ್ತನೆ ಮಾಡದಂತೆ ಆದೇಶ ಮಾಡಿಸುವ ಪ್ರಯತ್ನ ನಡೆಯುತ್ತಿದೆ.
ಬೆಂಗಳೂರಿನಲ್ಲಿ ನಡೆದ ನೀರಾವರಿ ನಿಗಮದ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಸಿಂಗಟಾಲೂರು ಯೋಜನಾ ವ್ಯಾಪ್ತಿಯಲ್ಲಿ ಕಾಮಗಾರಿ ಕೈಕೊಳ್ಳಲು ₹578 ಕೋಟಿ ಮಂಜೂರಾತಿ ಕುರಿತು ಚರ್ಚೆ ಮಾಡುವ ವೇಳೆ ಈ ವಿಷಯ ಪ್ರಸ್ತಾಪವಾಗಿದೆ. ಆಗ ನೀರಾವರಿ ನಿಗಮದವರು ಕೂಡಲೇ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಿ, ಸರ್ಕಾರದಿಂದಲೇ ಈ ಕುರಿತು ಆದೇಶ ಮಾಡುವ ದಿಸೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಹೀಗಾಗಿ, ಸಿಂಗಟಾಲೂರು ಏತ ನೀರಾವರಿ ಯೋಜನೆ ವ್ಯಾಪ್ತಿಯ ಅಧಿಕಾರಿಗಳು ಈ ಕುರಿತು ಪ್ರಸ್ತಾವನೆ ಸಿದ್ಧ ಮಾಡುತ್ತಿದ್ದಾರೆ. ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟ ಮೇಲೆ, ಸರ್ಕಾರದಿಂದ ಏನು ಆದೇಶ ಬರುತ್ತದೆ ಎನ್ನುವುದೇ ಸದ್ಯದ ಕುತೂಹಲ.ಸಿಂಗಟಾಲೂರು ಯೋಜನಾ ವ್ಯಾಪ್ತಿಯಲ್ಲಿ ಸೋಲಾರ್ ಮತ್ತು ವಿಂಡ್ ಪವರ್‌ಗೆ ಭೂಮಿ ನೀಡುವುದನ್ನು ತಡೆಯಲು ಜಿಲ್ಲಾಡಳಿತದಿಂದ ಅಸಾಧ್ಯ ಎನ್ನುವ ಉತ್ತರ ಬಂದಿದೆ. ಹೀಗಾಗಿ, ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಸಿಂಗಟಾಲೂರು ಏತ ನೀರಾವರಿ ಯೋಜನೆ ಎಇ ರಾಘವೇಂದ್ರ ಜೋಷಿ ಹೇಳಿದರು.ಬಹುದೊಡ್ಡ ಸಮಸ್ಯೆಯಾಗಿದೆ. ರೈತರು ಇಷ್ಟು ದಿನ ತಾವೇ ಭೂಮಿ ನೀಡಿದ್ದಾರೆ. ಈಗ ಭೂಮಿ ನೀಡುವುದನ್ನು ತಡೆಯುವಂತೆ ಮನವಿ ಮಾಡುತ್ತಿದ್ದಾರೆ. ಸರ್ಕಾರದ ಹಂತದಲ್ಲಿ ಈ ಬಗ್ಗೆ ಚರ್ಚೆ ಮಾಡಿ, ತಡೆಯುವ ಪ್ರಯತ್ನ ಮಾಡಲಾಗುವುದು ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.