ಇಡೀ ಪಟ್ಟಣಕ್ಕೆ ಒಂದೇ ಲೈನ್‌ನಲ್ಲಿ ವಿದ್ಯುತ್ ಸಂಪರ್ಕವಿದ್ದು ಇದನ್ನು ವಿಭಜಿಸಲು ಇರುವ ಬೇಡಿಕೆ ಇನ್ನೂ ಈಡೇರಿಲ್ಲ, ತಾಲೂಕಿಗೆ 170 ಲೈನ್‌ಮನ್ ಬೇಕು, ಇರುವವರು ಕೇವಲ 63, ಎಬಿಎಲ್ ಕೇಬಲ್ ಅಳವಡಿಸಲಾಗಿದ್ದರೂ ಪ್ರಯೋಜನವಾಗಿಲ್ಲ, ಮೂರು ಹೊಸ ಗ್ರಿಡ್ ಟೆಂಡರ್ ಹಂತದಲ್ಲಿವೆ, ಇದು ಹಾನಗಲ್ಲ ತಾಲೂಕಿನ ವಿದ್ಯುತ್ ವ್ಯವಸ್ಥೆಯ ಸಮಸ್ಯೆಯ ಮೂಲವಾಗಿದೆ.

ಮಾರುತಿ ಶಿಡ್ಲಾಪೂರಕನ್ನಡಪ್ರಭ ವಾರ್ತೆ, ಹಾನಗಲ್ಲ

ಇಡೀ ಪಟ್ಟಣಕ್ಕೆ ಒಂದೇ ಲೈನ್‌ನಲ್ಲಿ ವಿದ್ಯುತ್ ಸಂಪರ್ಕವಿದ್ದು ಇದನ್ನು ವಿಭಜಿಸಲು ಇರುವ ಬೇಡಿಕೆ ಇನ್ನೂ ಈಡೇರಿಲ್ಲ, ತಾಲೂಕಿಗೆ 170 ಲೈನ್‌ಮನ್ ಬೇಕು, ಇರುವವರು ಕೇವಲ 63, ಎಬಿಎಲ್ ಕೇಬಲ್ ಅಳವಡಿಸಲಾಗಿದ್ದರೂ ಪ್ರಯೋಜನವಾಗಿಲ್ಲ, ಮೂರು ಹೊಸ ಗ್ರಿಡ್ ಟೆಂಡರ್ ಹಂತದಲ್ಲಿವೆ, ಇದು ಹಾನಗಲ್ಲ ತಾಲೂಕಿನ ವಿದ್ಯುತ್ ವ್ಯವಸ್ಥೆಯ ಸಮಸ್ಯೆಯ ಮೂಲವಾಗಿದೆ.ರಾಜ್ಯದಲ್ಲಿಯೇ ಅತಿ ದೊಡ್ಡ ತಾಲೂಕಾದ ಹಾನಗಲ್ಲ ತಾಲೂಕಿನಲ್ಲಿ 13 ಸಾವಿರಕ್ಕೂ ಹೆಚ್ಚು ಕೊಳವೆ ಬಾವಿಗಳು ಇದೇ ವಿದ್ಯುತ್ತನ್ನು ಅವಲಂಬಿಸಿವೆ. ಇವುಗಳಲ್ಲಿ 7 ಸಾವಿರ ಅಧಿಕೃತ ಕೊಳವೆ ಬಾವಿಗಳಾದರೆ, 6 ಸಾವಿರದಷ್ಟು ಅನಧಿಕೃತ ಕೊಳವೆಬಾವಿಗಳಿವೆ. ನವೆಂಬರ್-ಡಿಸೆಂಬರ್‌ನಿಂದಲೇ ಶಿಫ್ಟನಲ್ಲಿ ವಿದ್ಯುತ್ ಪೂರೈಕೆ ಪ್ರತಿದಿನ 7 ಗಂಟೆಗಳಿಗೆ ನಿಗದಿಯಾಗುತ್ತದೆ. 110 ಕೆವಿ ವಿದ್ಯುತ್ ಸಾಮರ್ಥ್ಯದ 3 ಗ್ರಿಡ್‌ಗಳು ಹಾನಗಲ್ಲ, ತಿಳವಳ್ಳಿ, ಬಾಳಂಬೀಡ ಗ್ರಾಮಗಳಲ್ಲಿವೆ. 33 ಕೆವಿ ಸಾಮರ್ಥ್ಯದ 8 ಗ್ರಿಡ್‌ಗಳು ಹಾನಗಲ್ಲ, ಬೆಳಗಾಲಪೇಟೆ, ಬೊಮ್ಮನಹಳ್ಳಿ, ಶೇಷಗಿರಿ, ಲಕ್ಷ್ಮಿಪುರ, ಅಕ್ಕಿಆಲೂರು, ಆಡೂರು, ಕರಗುದರಿ ಗ್ರಾಮಗಳಲ್ಲಿವೆ. ಆದರೂ ಇವುಗಳಿಂದ ತಾಲೂಕಿನ ಅಗತ್ಯಕ್ಕೆ ಬೇಕಾಗುವ ವಿದ್ಯುತ್ ಪೂರೈಕೆ ಅಸಾಧ್ಯ ಎಂಬ ಕಾರಣಕ್ಕೆ ಇನ್ನೂ 3 ವಿದ್ಯುತ್ ಗ್ರಿಡ್‌ಗಳು ಟೆಂಡರ್ ಹಂತದಲ್ಲಿ ಸ್ಥಾಪನೆಗೆ ಅಣಿಯಾಗುತ್ತಿವೆ. ಬೊಮ್ಮನಹಳ್ಳಿ ಹಾಗೂ ಬೆಳಗಾಲಪೇಟೆಯಲ್ಲಿ 33 ಕೆವಿ ಹಾಗೂ ಗೊಂದಿಯಲ್ಲಿ 110 ಕೆವಿ ಗ್ರಿಡ್ ಸ್ಥಾಪನೆ ಮಂಜೂರಿ ಹಂತದಲ್ಲಿವೆ.ತಾಲೂಕಿನಲ್ಲಿ ಮನೆಗಳಿಗೆ 65 ಸಾವಿರ ವಿದ್ಯುತ್ ಸಂಪರ್ಕಗಳಿದ್ದು, ಇದರಲ್ಲಿ 63 ಸಾವಿರ ಮನೆಗಳ ವಿದ್ಯುತ್ ಸಂಪರ್ಕಗಳು ಗೃಹಲಕ್ಷ್ಮಿ ಯೋಜನೆಯಲ್ಲಿವೆ. 6500 ವಾಣಿಜ್ಯ ಕಾರಣಕ್ಕೆ ವಿದ್ಯುತ್ ಸಂಪರ್ಕವನ್ನು ಹೊಂದಿದ್ದು ಪ್ರತಿ ತಿಂಗಳು 2 ಕೋಟಿ ರು. ವಿದ್ಯುತ್ ಬಿಲ್ ಸಂಗ್ರಹವಾಗುತ್ತಿದೆ.ಇದೆಲ್ಲದರ ನಿರ್ವಹಣೆಗೆ ಬೇಕಾಗುವ ಲೈನ್‌ಮನ್‌ಗಳ ಸಂಖ್ಯೆ 170. ಆದರೆ ಹಾನಗಲ್ಲ ತಾಲೂಕಿನಲ್ಲಿ ಇರುವ ಲೈನಮನ್‌ಗಳ ಸಂಖ್ಯೆ ಮಾತ್ರ ಕೇವಲ 65 ಎಂಬುದು ವಿದ್ಯುತ್ ನಿರ್ವಹಣೆಗೆ ಎಷ್ಟರಮಟ್ಟಿಗೆ ಅನಾನುಕೂಲವಾಗಿದೆ ಎಂಬುದರ ನೋಟವಾಗಿದೆ. ಹಾನಗಲ್ಲ ಪಟ್ಟಣದಲ್ಲಿ ಕೆಲ ವರ್ಷಗಳ ಹಿಂದೆ ಏರಿಯಲ್ ಬಂಚ್ಡ್ ಕೇಬಲ್‌ಗಳನ್ನು ಅಳವಡಿಸಲಾಗಿದೆ. ಆದರೆ ಅವುಗಳ ನಿರ್ವಹಣೆ ಸಾಧ್ಯವಾಗದೆ, ಅವುಗಳಿಂದ ಸರಿಯಾಗಿ ವಿದ್ಯುತ್ ಹರಿಸಲು ಸಾಧ್ಯವಾಗದೆ, ಮತ್ತೇ ಅದೇ ಹಳೆಯ ತಂತಿಗಳ ಮೇಲೆಯೇ ವಿದ್ಯುತ್ ಹರಿಸುವ ಅನಿವಾರ್ಯತೆ ಆರಂಭವಾಗಿದೆ. ಇದಕ್ಕಾಗಿ ವ್ಯಯಿಸಿದ ಹಣ ವ್ಯರ್ಥವಾಗಿದೆ.ಪಟ್ಟಣದಲ್ಲಿ ಕಾಲ ಕಾಲಕ್ಕೆ ಆಗುವ ವಿದ್ಯುತ್ ಕಡಿತ ಸರಿಪಡಿಸಲು ಪಟ್ಟಣದಲ್ಲಿಯೇ ವಿದ್ಯುತ್ ವಿಭಜಕಗಳನ್ನು ಅಳವಡಿಸಬೇಕಾಗಿದೆ. ಆದರೆ ಅದಕ್ಕಾಗಿ ವಿದ್ಯುತ್ ಕಂಬಗಳನ್ನು ನಿಲ್ಲಿಸಲು ಸರಿಯಾದ ಜಾಗೆಯ ಕೊರತೆ ಇದೆ ಎನ್ನಲಾಗಿದೆ. ಕಂಬಗಳನ್ನು ನೆಡಲು ಸಾರ್ವಜನಿಕರು ತಕರಾರು ಮಾಡುವಷ್ಟು ಇಕ್ಕಟ್ಟಾದ ರಸ್ತೆಗಳಿವೆ. ಇದರಿಂದ ಹಾನಗಲ್ಲ ಪಟ್ಟಣದಲ್ಲಿ ಎಲ್ಲಿಯೇ ವಿದ್ಯುತ್ ವ್ಯತ್ಯಯವಾದರೂ ಇಡೀ ಪಟ್ಟಣದ ವಿದ್ಯುತ್ ಸಂಪರ್ಕವನ್ನು ತಡೆದು ರಿಪೇರಿ ಕೆಲಸಗಳನ್ನು ಮಾಡಬೇಕಾಗುತ್ತದೆ. ಇದರಿಂದಾಗಿ ಪ್ರತಿನಿತ್ಯ ಪಟ್ಟಣದಲ್ಲಿ ಹತ್ತು ಹಲವು ಬಾರಿ ವಿದ್ಯುತ್ ವ್ಯತ್ಯಯ ಅನುಭವಿಸುವ ಅನಿವಾರ್ಯತೆ ಸಾರ್ವಜನಿಕರಿಗೆ ಭಾರೀ ಆತಂಕವನ್ನು ಒಡ್ಡಿದೆ.ಹಲವು ದಶಕಗಳ ಹಿಂದೆಯೇ ಅಳವಡಿಸಿದ ವಿದ್ಯುತ್ ತಂತಿ ಹಾಗೂ ವಿವಿಧ ವಿದ್ಯುತ್ ವಿತರಣಾ ಸಾಮಗ್ರಿಗಳನ್ನು ಬದಲಾಯಿಸಬೇಕಾದ ಹಂತದಲ್ಲಿವೆ. ಅದರ ಅಗತ್ಯವೂ ಇದೆ. ಇಡೀ ಪಟ್ಟಣದ ವಿದ್ಯುತ್ ವ್ಯವಸ್ಥೆಯನ್ನೇ ಒಂದು ಬಾರಿ ಮರು ಹೊಂದಾಣಿಕೆ ಮಾಡದಿದ್ದರೆ ಪಟ್ಟಣದ ವಿದ್ಯುತ್ ಸಮಸ್ಯೆಗೆ ಪರಿಹಾರವೇ ಇಲ್ಲ ಎನ್ನಲಾಗಿದೆ.ಸದ್ಯಕ್ಕೆ ಲೋಡ್ ಶೆಡ್ಡಿಂಗ್ ಸಮಸ್ಯೆಯಂತೂ ಇಲ್ಲ. ಫೆಬ್ರವರಿ ತಿಂಗಳ ಹೊತ್ತಿಗೆ ಸಹಜವಾಗಿಯೇ ಲೋಡ ಶೆಡ್ಡಿಂಗ್ ಹಾಗೂ ವಿದ್ಯುತ್ ನೀಡುವ ಸಮಯದ ಕಡಿತ ಅನಿವಾರ್ಯ ಎಂಬ ಸುದ್ದಿ ಹರಿದಾಡುತ್ತಿದೆ. ಈಗ ಟೆಂಡರ್ ಹಂತದಲ್ಲಿರುವ 3 ಗ್ರಿಡ್‌ಗಳು ಬೇಗ ಕಾಮಗಾರಿ ಆರಂಭವಾಗಿ ಕಾರ್ಯಾರಂಭ ಮಾಡಿದರೆ ವಿದ್ಯುತ್ ಪೂರೈಕೆ ಸಮಸ್ಯೆ ಬಹುತೇಕ ಪರಿಹಾರವಾಗುವ ಎಲ್ಲ ಸಾಧ್ಯತೆಗಳಿವೆ ಎನ್ನಲಾಗಿದೆ.ಹಾನಗಲ್ಲ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಲು ಎಲ್ಲ ರೀತಿಯ ಕರ್ತವ್ಯಗಳನ್ನು ಇಲಾಖೆ ನಿರ್ವಹಿಸಿದೆ. ಇನ್ನೂ 3 ವಿದ್ಯುತ್ ಗ್ರಿಡ್‌ಗಳು ಮಂಜೂರಿಯಾಗಿ ಕಾಮಗಾರಿ ಪೂರ್ಣವಾದರೆ ಹಾನಗಲ್ಲ ತಾಲೂಕಿನಲ್ಲಿ ವಿದ್ಯುತ್ ಹರಿಸುವ ಸಮಸ್ಯೆ ಪರಿಹಾರವಾಗಲಿದೆ. ಪಟ್ಟಣಕ್ಕೆ ಹರಿಯುವ ವಿದ್ಯುತ್ ವ್ಯವಸ್ಥೆಯನ್ನು ಶೀಘ್ರ ಎರಡು ಭಾಗ ಮಾಡುವ ಕಾಮಗಾರಿ ಪ್ರಗತಿಯಲ್ಲಿದ್ದು, ಪಟ್ಟಣದಲ್ಲಿ ವಿದ್ಯುತ್ ಕಟ್ ಸಮಸ್ಯೆ ಬಹುತೇಕ ಪರಿಹಾರವಾಗಲಿದೆ ಎಂದು ಹಾನಗಲ್ಲ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿ.ಎಸ್. ಮರಿಗೌಡರ ಹೇಳಿದರು.