ಕ್ರಷರ್‌, ಎಂ.ಸ್ಯಾಂಡ್‌ ಘಟಕ ಆರಂಭ ಬೇಡ

| Published : Oct 25 2024, 01:03 AM IST / Updated: Oct 25 2024, 01:04 AM IST

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಅಗತಗೌಡನಹಳ್ಳಿ ಬಳಿ ಕ್ರಷರ್‌ ಅರಂಭ ತಡೆ ಹಿಡಿಯಬೇಕು ಎಂದು ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಅಗತಗೌಡನಹಳ್ಳಿ ಸ.ನಂ.೫೬/೨ ರಲ್ಲಿ ಕ್ರಷರ್‌ ಹಾಗೂ ಎಂ.ಸ್ಯಾಂಡ್‌ ಘಟಕ ಆರಂಭಕ್ಕೆ ಅಗತಗೌಡನಹಳ್ಳಿ ಗ್ರಾಮಸ್ಥರು ವಿರೋಧಿಸಿ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗೆ ಕ್ರಷರ್‌, ಎಂ.ಸ್ಯಾಂಡ್‌ ಘಟಕ ಆರಂಭಿಸದಂತೆ ತಡೆ ಹಿಡಿಯಬೇಕು ಎಂದು ಪ್ರತ್ಯೇಕ ಮನವಿ ಸಲ್ಲಿಸಿದ್ದಾರೆ.ದೂರಿನ ಸಾರಾಂಶ: ಗ್ರಾಮದ ಎ.ಮಧುಸೂದನ್‌ ಹಾಗೂ ಎ.ಶಿಲ್ಪ ಇವರು ಕ್ರಷರ್‌, ಎಂ.ಸ್ಯಾಂಡ್‌ ಘಟಕ ಆರಂಭಕ್ಕೆ ಸಿದ್ಧತೆ ನಡೆಸಿದ್ದು, ಕ್ರಷರ್‌ ಹಾಗೂ ಎಂ.ಸ್ಯಾಂಡ್‌ ಘಟಕದ ಸುತ್ತಲೂ ಫಲವತ್ತಾದ ಕೃಷಿ ಭೂಮಿಗಳಿವೆ. ಕೃಷಿ ನಂಬಿ ಜೀವನ ಸಾಗಿಸುವ ರೈತರು ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರಾಗಿದ್ದಾರೆ. ಕೊಳವೆಬಾವಿ ಹಾಗೂ ಮಳೆಯಾಶ್ರಿತ ಬೇಸಾಯ ಮಾಡುತ್ತಿದ್ದಾರೆ. ಕ್ರಷರ್‌ ಹಾಗೂ ಎಂ.ಸ್ಯಾಂಡ್‌ ಘಟಕದಿಂದ ನೂರು ಮೀಟ್‌ರ್ ಅಂತರದಲ್ಲಿ ಸರ್ಕಾರಿ ಪ್ರೌಢಶಾಲೆ, ಬಿಸಿಎಂ ಹಾಸ್ಟೆಲ್‌, ಮೂನ್ನೂರು ಮೀಟರ್‌ ಅಂತರದಲ್ಲಿ ಗ್ರಾಮವಿದೆ. ಕ್ರಷರ್‌ ಆರಂಭಿಸಿದರೆ ಸದ್ದು, ಧೂಳು ಬರುತ್ತದೆ ಜತೆಗೆ ಬೆಳೆ ನಾಶವಾಗುತ್ತದೆ. ಜಾನುವಾರುಗಳ ಮೇವಿಗೂ ತೊಂದರೆಯಾಗುತ್ತದೆ. ಗ್ರಾಮದಲ್ಲಿ ಹೈನುಗಾರಿಕೆ ನಂಬಿ ಜೀವನ ನಡೆಸುವ ರೈತರು ಇದ್ದಾರೆ. ಕ್ರಷರ್‌ ಸದ್ದಿಗೆ ಶಾಲೆ ಮಕ್ಕಳು ಪಾಠ, ಪ್ರವಚನಕ್ಕೆ ಅಡ್ಡಿಯಾಗಲಿದೆ.

ಗ್ರಾಮದಲ್ಲಿ ವೃದ್ಧರು, ಮಕ್ಕಳಿಗೆ ಕ್ರಷರ್‌ ಸದ್ದಿನಿಂದ ನಿದ್ರಾಭಂಗವಾಗುತ್ತದೆ. ಆದ ಕಾರಣ ಕ್ರಷರ್‌ ಆರಂಭಿಸಬಾರದು ಎಂದು ಗ್ರಾಮಸ್ಥರು, ಪ್ರೌಢ ಶಾಲೆ ಹಾಗೂ ಕ್ರಷರ್‌ ಘಟಕದ ಸುತ್ತ ಮುತ್ತಲಿನ ರೈತರು ಈಗಾಗಲೇ ಸಂಬಂಧಪಟ್ಟ ಇಲಾಖೆಗಳಿಗೆ ದೂರು ಸಲ್ಲಿಸಿದ್ದಾರೆ.

ಗ್ರಾಪಂ ವಿರೋಧ: 2023ರ ಮೇ 31ರಂದು ಅಗತಗೌಡನಹಳ್ಳಿ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಕ್ರಸರ್‌ ಲೈಸನ್ಸ್‌ ಹಾಗೂ ಅನುಮತಿ ನೀಡಬಾರದು ಎಂದು ನಡಾವಳಿ ಕೂಡ ಆಗಿದೆ. ಕ್ರಷರ್‌ ಸದ್ದು ಹಾಗೂ ಧೂಳಿಗೆ ಶಾಲೆ ಹಾಗೂ ಹಾಸ್ಟೆಲ್‌ನ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಗ್ರಾಪಂ ನಿರ್ಣಯ ಮಾಡಿದೆ. ಗ್ರಾಮಸ್ಥರ, ರೈತರ ವಿರೋಧದ ನಡುವೆಯೂ ಕ್ರಷರ್‌ ಆರಂಭಕ್ಕೆ ಕ್ರಷರ್‌ ಮಾಲೀಕರು ತಯಾರಿ ನಡೆಸುತ್ತಿದ್ದಾರೆ. ಕ್ರಷರ್‌ ಆರಂಭಕ್ಕೆ ನೀಡಿರುವ ಲೈಸನ್ಸ್‌ ರದ್ದು ಪಡಿಸಿ, ರೈತರು, ವಿದ್ಯಾರ್ಥಿಗಳ ಮೇಲಾಗುವ ದುಷ್ಪಪರಿಣಾಮಗಳ ಮನಗಂಡು ಕ್ರಷರ್‌ ಆರಂಭ ತಡೆಯಬೇಕು ಎಂದು ಗ್ರಾಮಸ್ಥರು ದೂರು ಸಲ್ಲಿಸಿದ್ದಾರೆ.

ಗ್ರಾಪಂ ಸದಸ್ಯರಾದ ರಾಜೇಶ್‌, ಕಾವ್ಯ, ತಾಪಂ ಮಾಜಿ ಸದಸ್ಯೆ ಮಹೇಶ್ವರಿ ರಾಜೇಶ್‌, ಮಣಿಯಮ್ಮ, ಗುರುಮಲ್ಲಪ್ಪ, ಶಿವಪ್ಪ, ಬಲ್ಳಯ್ಯ, ಸಿದ್ದಪ್ಪ ಸೇರಿದಂತೆ ನೂರಾರು ಮಂದಿ ಸಹಿ ಮಾಡಿದ್ದಾರೆ.