ಮಂಡ್ಯದ ತಮಿಳು ಕಾಲೋನಿ ತೆರವಿಗೆ ಸಂಬಂಧಿಸಿದಂತೆ ರಾಜ್ಯ ಉಚ್ಛ ನ್ಯಾಯಾಲಯ ಎಲ್ಲೂ ಮಧ್ಯಂತರ ಆದೇಶ ನೀಡಿಲ್ಲ. ತಮಿಳು ಕಾಲೋನಿಯ ೨೫ ಮಂದಿ ಅರ್ಜಿದಾರರನ್ನು ತೆರವುಗೊಳಿಸದಂತೆ ಮಾತ್ರ ಆದೇಶದಲ್ಲಿ ತಿಳಿಸಿದೆ. ಈ ಮಧ್ಯಂತರ ಆದೇಶವನ್ನು ಇಡೀ ತಮಿಳು ಕಾಲೋನಿಗೆ ನೀಡಿರುವುದಾಗಿ ಬಿಂಬಿಸಿ ಹತ್ತು ವರ್ಷಗಳಿಂದ ವಂಚಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಮಿಳು ಕಾಲೋನಿ ತೆರವಿಗೆ ಸಂಬಂಧಿಸಿದಂತೆ ರಾಜ್ಯ ಉಚ್ಛ ನ್ಯಾಯಾಲಯ ಎಲ್ಲೂ ಮಧ್ಯಂತರ ಆದೇಶ ನೀಡಿಲ್ಲ. ತಮಿಳು ಕಾಲೋನಿಯ ೨೫ ಮಂದಿ ಅರ್ಜಿದಾರರನ್ನು ತೆರವುಗೊಳಿಸದಂತೆ ಮಾತ್ರ ಆದೇಶದಲ್ಲಿ ತಿಳಿಸಿದೆ. ಈ ಮಧ್ಯಂತರ ಆದೇಶವನ್ನು ಇಡೀ ತಮಿಳು ಕಾಲೋನಿಗೆ ನೀಡಿರುವುದಾಗಿ ಬಿಂಬಿಸಿ ಹತ್ತು ವರ್ಷಗಳಿಂದ ವಂಚಿಸಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಆರೋಪಿಸಿದರು.

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಜಾಗವನ್ನು ಅತಿಕ್ರಮಿಸಿರುವ ತಮಿಳು ಕಾಲೋನಿ ನಿವಾಸಿಗಳಲ್ಲಿ ಸುಶೀಲಾ ಸೇರಿದಂತೆ ೨೫ ಅರ್ಜಿದಾರರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪಿಐಎಲ್ ಸಲ್ಲಿಸಿದ್ದು, ನ್ಯಾಯಾಧೀಶರಾದ ಸೂರಜ್ ಗೋವಿಂದರಾಜು ಅವರು ವಿಚಾರಣೆ ನಡೆಸಿ ಮುಂದಿನ ವಿಚಾರಣೆ ದಿನಾಂಕದವರೆಗೆ ೨೫ ಮಂದಿ ಅರ್ಜಿದಾರರನ್ನು ಹೊರ ಹಾಕದಂತೆ ಪ್ರತಿವಾದಿಗಳಿಗೆ ನಿರ್ಬಂಧಿಸಿ ಮಧ್ಯಂತರ ಆದೇಶ ಮಾಡಿರುವುದಾಗಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ೨೫ ಮಂದಿ ಅರ್ಜಿದಾರರಲ್ಲಿ ಸುಶೀಲಾ ಸೇರಿದಂತೆ ೧೦ ಮಂದಿ ಮಾತ್ರ ತಮಿಳು ಕಾಲೋನಿಯಲ್ಲಿ ವಾಸವಾಗಿದ್ದಾರೆ. ಉಳಿದ ೧೫ ಮಂದಿ ಲೇಬರ್ ಕಾಲೋನಿಯಲ್ಲಿ ವಾಸವಾಗಿರುವುದರಿಂದ ೧೫ ಮಂದಿ ಅರ್ಜಿದಾರರ ವಿರುದ್ಧವೂ ನ್ಯಾಯಾಲಯಕ್ಕೆ ಮಾಹಿತಿ ನೀಡುವಂತೆ ಆಗ್ರಹಿಸಿದರು.

ಸುಶೀಲಾ ಸೇರಿದಂತೆ ೧೩ ಮಂದಿ ಮತ್ತೆ ನ್ಯಾಯಾಲಯದಲ್ಲಿ ರಿಟ್‌ಪಿಟಿಷನ್‌ಗಳನ್ನು ಇವರೇ ಸಲ್ಲಿಸಿದ್ದು, ಇದರಲ್ಲೂ ೧೧ ಮಂದಿ ಲೇಬರ್ ಕಾಲೋನಿ ನಿವಾಸಿಗಳಾಗಿದ್ದಾರೆ. ಇವರು ತಮಿಳುಕಾಲೋನಿ ನಿವಾಸಿಗಳಲ್ಲ. ಇದಲ್ಲದೇ, ತಂಗಂ ಸೇರಿದಂತೆ ೨೨೬ ಅರ್ಜಿದಾರರು ಪಿಐಎಲ್ ಸಲ್ಲಿಸಿದ್ದು, ಇವರ ರಿಟ್‌ಪಿಟೀಷನ್‌ಗೆ ಸಂಬಂಧಪಟ್ಟಂತೆ ನ್ಯಾಯಾಲಯದಿಂದ ಯಾವುದೇ ಆದೇಶ ಆಗಿರುವುದಿಲ್ಲ. ಅಲ್ಲದೇ, ಮುರುವಾಯಿ ಸೇರಿದಂತೆ ೧೭ ಜನ ಅರ್ಜಿದಾರರು ಸಹ ಪಿಐಎಲ್ ಸಲ್ಲಿಸಿದ್ದು, ೨೦೨೬ರ ಜ.೧೨ರಂದು ನ್ಯಾಯಾಲಯ ಪ್ರತಿವಾತಿಗಳಿಗೆ ತುರ್ತು ನೋಟಿಸ್ ಜಾರಿ ಮಾಡಿದೆ. ಈ ಪೈಕಿ ಮುರುವಾಯಿ ಸೇರಿದಂತೆ ೧೭ ಜನ ಅರ್ಜಿದಾರರು ನೆಹರುನಗರದ ೧೦ ರಿಂದ ೧೬ನೇ ಕ್ರಾಸ್‌ನಲ್ಲಿ ವಾಸವಾಗಿರುವ ವಿಳಾಸವನ್ನು ನೀಡಿದ್ದು, ಇವರು ತಮಿಳು ಕಾಲೋನಿ ನಿವಾಸಿಗಳಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶದಲ್ಲಿ ಸುಶೀಲಾ ಸೇರಿ ೨೫ ಜನರನ್ನು ತೆರವುಗೊಳಿಸದಂತೆ ಮಾತ್ರ ಆದೇಶ ನೀಡಿದೆಯೇ ಹೊರತು ಉಳಿದವರ ಬಗ್ಗೆ ಮಧ್ಯಂತರ ತೀರ್ಪು ನೀಡಿರುವುದಿಲ್ಲ. ಹೀಗಾಗಿ ಅವರನ್ನು ತಕ್ಷಣವೇ ತೆರವುಗೊಳಿಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದರು.

೪೦ ಮನೆಗಳ ವಿದ್ಯುತ್ ಕಟ್:

ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದ ೪೦ ಮನೆಗಳ ವಿದ್ಯುತ್ ಸಂಪರ್ಕವನ್ನು ಸೆಸ್ಕ್ ಜಾಗೃತ ದಳದ ಅಧಿಕಾರಿಗಳು ಕಡಿತಗೊಳಿಸಿದ್ದಾರೆ. ಮೂರು ಮಂದಿಯ ವಿರುದ್ದ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿಸಿದರು.

ಜಲಮಂಡಳಿಗೆ ದೂರು:

ತಮಿಳು ಕಾಲೋನಿಯಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ಮನೆಗಳಿದ್ದು, ಅಕ್ರಮವಾಗಿ ಕುಡಿಯುವ ನೀರಿನ ಸಂಪರ್ಕ ಪಡೆದಿದ್ದಾರೆ. ಈ ನಿವಾಸಿಗಳು ನಗರಸಭೆ ಅಥವಾ ಸಂಬಂಧಿಸಿದ ಪ್ರಾಧಿಕಾರಕ್ಕೆ ಯಾವುದೇ ಕಂದಾಯ, ನೀರಿನ ಕರ, ವಿದ್ಯುತ್ ಹಣವನ್ನು ಪಾವತಿ ಮಾಡದೆ ಎಲ್ಲವನ್ನೂ ಅಕ್ರಮವಾಗಿ ಪಡೆದುಕೊಂಡಿದ್ದಾರೆ. ಕಾಲೋನಿಗೆ ಸಂಪರ್ಕ ಕಲ್ಪಿಸಿರುವ ಕುಡಿಯುವ ನೀರಿನ ಸಂಪರ್ಕ ರದ್ದುಗೊಳಿಸುವಂತೆ ಆಗ್ರಹಿಸಿ ಜಲಮಂಡಳಿಗೆ ದೂರು ನೀಡಿರುವುದಾಗಿ ತಿಳಿಸಿದರು.

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಿರುಕುಳ:

ತಮಿಳು ಕಾಲೋನಿಗೆ ಹೊಂದಿಕೊಂಡಿರುವ ಸರ್ಕಾರಿ ಪ್ರೌಢಶಾಲೆ (ಕಲ್ಲುಕಟ್ಟ) ಹಾಗೂ ಮಹಿಳಾ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಕೆಲ ಕಿಡಿಕೇಡಿಗಳು ಕಿರುಕುಳ ನೀಡಿದ್ದಾರೆ. ಕಾಲೇಜು ಮತ್ತು ಶಾಲಾ ಆಸ್ತಿ ಪಾಸ್ತಿಗೆ ಹಾನಿಯುಂಟು ಮಾಡಿದ್ದಾರೆ. ಸಿಸಿಟಿವಿಗಳ ವೈರ್‌ಗಳನ್ನು ತುಂಡರಿಸಿದ್ದಾರೆ. ಅಷ್ಟೇ ಅಲ್ಲದೆ ಶೌಚಾಲಯಕ್ಕೆ ವಿದ್ಯಾರ್ಥಿಗಳು ಹೋದ ಸಂದರ್ಭದಲ್ಲಿ ಮೇಲಿನಿಂದ ನೆಗೆದುಬಂದು ಕಿರುಕುಳ ನೀಡುತ್ತಿದ್ದಾರೆ. ಶೌಚಾಲಯದ ನಲ್ಲಿ ಸಂಪರ್ಕವನ್ನು ಕಿತ್ತು ಹಾಕಿದ್ದಾರೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಪೊಲೀಸರಿಗೆ ಎಲ್ಲ ಪ್ರಾಂಶುಪಾಲರು ದೂರು ನೀಡಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮಿಳುಕಾಲೋನಿ ನಿವಾಸಿಗಳಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸೋಮವಾರದೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಚ್ಚರಿಕೆ ನೀಡಿದರು.

ಮುಖಂಡರಾದ ಕೊಮ್ಮೇರಹಳ್ಳಿ ಕೃಷ್ಣ, ಮಂಚೇಗೌಡ, ಕೆ.ಎಲ್.ಮಧುಸೂಧನ ಅವರು ಗೋಷ್ಠಿಯಲ್ಲಿದ್ದರು.